ಇ-ಲೋಕ-೭ (೨೫/೧/೨೦೦೭)

ಇ-ಲೋಕ-೭ (೨೫/೧/೨೦೦೭)

ಬರಹ

ಬಸ್‌ನಲ್ಲಿ ಮೀಟಿಂಗ್ ನಡೆಸಿ!
ಯಾವುದಾದರೂ ಸ್ಥಳ ಪರಿಶೀಲನೆ ನಡೆಸಿ,ನಂತರ ಸಭೆಗಳನ್ನು ನಡೆಸಲಿದೆಯೇ? ಸಭೆ ನಡೆಸಲು ಅನುವು ಮಾಡುವ ವ್ಯವಸ್ಥೆಯನ್ನು ಹೊಂದಿರುವ ಬಸ್‌ಗಳನ್ನು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೊಂದಿದೆ. ಇದರಲ್ಲಿ ಸಭೆ ನಡೆಸಲು ಅನುವು ಮಾಡುವ ಮೇಜು,ಸದಸ್ಯರಿಗೆ ಸುಖಾಸೀನಗಳು,ಸಭೆ ನಡೆಸಲು ಮುಖ್ಯಸ್ಥನಿಗೆ ಪ್ರತ್ಯೇಕ ಆಸನ, ಮೇಜವಾನಿಗೆ ಬೇಕಾಗುವ ಪೇಯಗಳನ್ನಿಡಲು ಫ್ರಿಜ್,ಸಭೆಯು ಚರ್ಚಿಸಲಿರುವ ಅಂಶಗಳನ್ನು ಪ್ರದರ್ಶಿಸಲು ಎಲ್‌ಸಿಡಿ ಪ್ರೊಜೆಕ್ಟರ್‍, ಟಿವಿ, ದೃಶ್ಯ-ಶ್ರಾವ್ಯ ವ್ಯವಸ್ಥೆ,ವಿದ್ಯುಜ್ಜನಕ ಇವೆಲ್ಲಾ ಸೌಲಭ್ಯಗಳನ್ನೂ ಹೊಂದಿದೆ. ಇದಕ್ಕೂ ಮೀರುವ ವ್ಯವಸ್ಥೆ ಇರುವ ವೊಲ್ವೋ ಬಸ್ ಕೂಡಾ ಲಭ್ಯವಂತೆ.

ಕ್ರಿಮಿನಲ್‌ಗಳಿಗೆ ದುಸ್ವಪ್ನವಾಗಲಿರುವ ಸೆಲ್‌ಫೋನ್
ಸದ್ಯ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುವವರಿಗೆ ಸೆಲ್‌ಫೋನ್ ವರದಾನವಾಗಿರುವುದು ತಿಳಿದ ವಿಷಯ.ಇಂದಿನ ಫೋನ್‌ಗಳು ಕ್ಯಾಮರಾ,ವಿಡಿಯೋ ವ್ಯವಸ್ಥೆಯನ್ನೂ ಹೊಂದಿ ಸರ್ವಸಜ್ಜಿತವಾಗಿರುತ್ತವೆ. ಸದ್ದಾಂಗೆ ಗಲ್ಲು ಶಿಕ್ಷೆ ಜಾರಿಯಾದ ಬಗೆ ಪ್ರಪಂಚದ ಗಮನಕ್ಕೆ ಬಂದುದು ಸೆಲ್‌ಫೋನ್ ಮೂಲಕ.ಈಗ ಅದನ್ನು ಕ್ರಿಮಿನಲ್‌ಗಳನ್ನು ಮಟ್ಟ ಹಾಕಲೂ ಬಳಸುವ ಯೋಚನೆ ನ್ಯೂಯಾರ್ಕ್ ನಗರದ ಮೇಯರ್‌ಗೆ ಬಂದಿದೆಯಂತೆ.ಕ್ರಿಮಿನಲ್‌ ಚಟುವಟಿಕೆಗಳು ನಡೆದಾಗ, ಅಲ್ಲಿದ್ದವರು ತಮ್ಮ ಸೆಲ್‌ಫೋನ್‌ ಕ್ಯಾಮರಾದಲ್ಲಿ ಅದನ್ನು ಸೆರೆ ಹಿಡಿದು, ಕೂಡಲೇ ವಿಶೇಷ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅದನ್ನು ಕಳುಹಿಸಿದರೆ, ಪೊಲೀಸರಿಗೆ ದೂರು ತಲುಪುವುದೇ ಅಲ್ಲದೆ, ನಡೆದದ್ದೇನು ಎನ್ನುವುದೂ ಗೊತ್ತಾಗುತ್ತದೆ. ನಮ್ಮಲ್ಲಿ ರೌಡಿಗಳು ಎಲ್ಲರ ಮುಂದೆ ಹಾಡುಹಗಲೇ ಕೊಲೆಪಾತಕಗಳನ್ನು ನಡೆಸಿ,ಸಾಕ್ಷಿ ಹೇಳುವವರಿಲ್ಲದೆ ತಪ್ಪಿಸಿಕೊಳ್ಳುತ್ತಾರೆ. ಸೆಲ್‌ಫೋನ್ ಮೂಲಕ ಸೆರೆಹಿಡಿದ ವಿಡಿಯೋ,ಚಿತ್ರ ಸಾಕ್ಷಿಯಾಗಿ ಸ್ವೀಕರಿಸಲು ನಮ್ಮ ನ್ಯಾಯಾಲಯಗಳು ಮನ ಮಾಡಿಯಾವೇ?

ಜಿರಳೆ,ಅಳಿಲು ಸ್ವರೂಪಿ ರೊಬೊಟ್‌ಗಳುA technician assembles the Dragon Eye, a four-pound UAV. ರಾಜ ಪರೀಕ್ಷಿತ ಸರ್ಪದಿಂದ ತನಗೆ ಮೃತ್ಯು ಬರದಂತೆ ಭಾರೀ ಬಂದೋಬಸ್ತು ಮಾಡಿಕೊಂಢಿದ್ದರೂ, ಸರ್ಪರಾಜ ತಕ್ಷಕ ಹುಳುವಿನ ರೂಪಧಾರಣೆ ಮಾಡಿ, ಹಣ್ಣೊಳಗೆ ಅವಿತು,ಪರೀಕ್ಷಿತನ ಬಳಿ ಸೇರಿ, ಕಚ್ಚಲು ಸಫಲವಾದ ಕತೆ ನಿಮಗೆ ಗೊತ್ತೇ ಇದೆ.ಈಗ ಇಂತ ಸೂಕ್ಷ್ಮ ರೂಪೀ ರೊಬೊಟ್‌ಗಳ ತಯಾರಿ ನಡೆದಿದೆ.ಇಸ್ರೇಲ್ ಅಂತೂ ಭಯೋತ್ಪಾದಕರ ಮೇಲೆ ದಾಳಿ ಮಾಡಲು ಕಣಜಹುಳುವಿನ ಗಾತ್ರದ ರೊಬೋಟ್‌ಗಳ ತಯಾರಿಗಿಳಿದಿದೆ.ಬ್ರಿಟನ್‌ ಬಳಿ ಆರಿಂಚು ಉದ್ದ ಹಕ್ಕಿಯಂತಹ ವಿಮಾನಗಳಿವೆ. ಅಫ್ಘಾನಿಸ್ತಾನದಲ್ಲಿ ಇವುಗಳನ್ನು ಬಳಸಿ ಕಿರುಸ್ಫೋಟಗಳನ್ನು ನಡೆಸಲಾಗುತ್ತಿದೆ.ಕಟ್ಟಡವೊಂದರ ವಿದ್ಯುತ್‌ ವ್ಯವಸ್ಥೆಯನ್ನು ಹಾಳುಗೆಡಹಲು, ಟ್ರಕ್‌ನ್ನು ಚಲಿಸಲಾಗದಂತೆ ಮಾಡಲು,ಅದರ ಚಕ್ರಕ್ಕೆ ರಂಧ್ರ ಕೊರಯುವ ಸೀಮಿತ ಉದ್ದೇಶಗಳಿಗೆ ಇವನ್ನು ಬಳಸುವುದು ಸಂಶೋಧಕರ ಆಲೋಚನೆ.
ಆದರೆ ಇವು ಭಯೋತ್ಪಾದಕರ ಕೈ ಸೇರಿದರೆ ಅನಾಹುತವಾಗದೇ ಎನ್ನುವ ಪ್ರಶ್ನೆಯೂ ಇದೆ. ಅವರು ಯಾವುದೋ ವ್ಯಕ್ತಿಯನ್ನು ಮುಗಿಸಲು, ಸಣ್ಣ ಆಸ್ಫೋಟ ಉಂಟು ಮಾಡಬಲ್ಲ ಮದ್ದನ್ನು ಹೊಂದಿದ ಜಿರಲೆಯಂತಹ ರೊಬೋಟ್ ವ್ಯಕ್ತಿಯ ಬಳಿಸಾರಿ,ಅವನ ಹೃದಯದಂತಹ ಜೀವನಾಡಿ ಅಂಗದ ಬಳಿ ಸ್ಫೋಟವುಂಟು ಮಾಡಿದರೆ, ಅತಿ ಸುರಕ್ಷಿತ ಭದ್ರತಾ ವ್ಯವಸ್ಥೆಯೂ ವಿಫಲವಾದೀತು.

ವಿಕಿಪೀಡಿಯಾ ತಿದ್ದಲು ಅನೈತಿಕ ಮಾರ್ಗ ಹಿಡಿದ ಮೈಕ್ರೋಸಾಫ್ಟ್
ವಿಕಿಪಿಡಿಯಾ ಎನ್ನುವುದು ಜನರ ಸಹಭಾಗಿತ್ವದಲ್ಲಿ ರಚನೆಯಾಗುತ್ತಿರುವ ವಿಶ್ವಕೋಶ. ಇದಕ್ಕೆ ಯಾರು ಬೇಕಾದರೂ ಲೇಖನ ಸೇರಿಸಬಹುದು.ಸಂಪಾದಕ ಮಂಡಳಿಯು ಬರಹಗಳನ್ನು ಪರಿಶೀಲಿಸಿ,ವಿಶ್ವಕೋಶದ ಅಧಿಕೃತ ಪ್ರತಿಗೆ ಸೂಕ್ತ ಅಂಶಗಳನ್ನು ಸೇರಿಸಿಕೊಳ್ಳುತ್ತಾರೆ. ಈ ವಿಶ್ವಕೋಶ ಸದಾ ನವೀಕೃತಗೊಳ್ಳುತ್ತಿರುವುದರಿಂದ ಯಾವತ್ತೂ ಸರಿಯಾದ ಮಾಹಿತಿಯನ್ನೊಳಗೊಂಡಿರುತ್ತದೆ.ಇದಕ್ಕೆ ಸ್ಥಾಪಿತ ಹಿತಾಸಕ್ತಿಗಳು ಸುಳ್ಳು ಮಾಹಿತಿ ಸೇರಿಸುವುದನ್ನು ತಡೆಯಲು ಸಂಪಾದಕರು ಹದ್ದುಗಣ್ಣು ಹೊಂದಿರುತ್ತಾರೆ.ಮುಕ್ತ ದಾಖಲನಾ ಮಾನಕದ ಮತ್ತು ಮೈಕ್ರೋಸಾಫ್ಟ್‌ನ ದಾಖಲನಾ ಶೈಲಿಯ ಬಗೆಗೆ ಇದರಲ್ಲಿ ಪ್ರಕಟವಾದ ಲೇಖನವೊಂದು ತಪ್ಪು ಮಾಹಿತಿಗಳನ್ನು ಹೊಂದಿದೆ ಎಂದು, ಮೈಕ್ರೋಸಾಫ್ಟ್ ಕಂಪೆನಿಯು ಬ್ಲಾಗ್‌ ಬರಹಗಾರನೋರ್ವನಿಗೆ ಇದನ್ನು ತಿದ್ದಲು ಹಣ ನೀಡಲು ಮುಂದೆ ಬಂದಿದೆ ಎಂದೀಗ ಕೇಳಿ ಬರುತ್ತಿದೆ. ಕಂಪೆನಿಯೂ ತಾನು ಹೀಗೆ ಮಾಡಿರುವುದು ಹೌದೆಂದು ಒಪ್ಪಿಕೊಂಡಿದೆ.ಈ ರೀತಿ ಮಾಡಿದ್ದು ನ್ಯಾಯ ಸಮ್ಮತವೇ ಎಂಬ ಚರ್ಚೆ ಇದೀಗ ಆರಂಭವಾಗಿದೆ.

ಕಿರು ಸಂದೇಶಗಳು ಸೇರಿ ಕಿರು ಕಾದಂಬರಿ
ಫಿನ್‌ಲ್ಯಾಂಡಿನಲ್ಲಿ ವಿಶಿಷ್ಟ ಎನ್ನಬಹುದಾದ ಕಿರುಕಾದಂಬರಿ ಪ್ರಕಟವಾಗಿದೆ. ಸುಮಾರು ಮುನ್ನೂರು ಪುಟಗಳ ಈ ಫಿನ್ನಿಶ್ ಕಿರು ಕಾದಂಬರಿಯಲ್ಲಿ ಐಟಿ ಕಂಪೆನಿಯ ಉದ್ಯೋಗಿಯೋರ್ವ ಕೆಲಸ ತ್ಯಜಿಸಿದ ಬಳಿಕ ಯುರೋಪ್ ಹಾಗೂ ಭಾರತ ಪ್ರವಾಸ ಹೊರಡುವ ಕತೆಯಿದೆ. ಈ ಪ್ರವಾಸದ ವೇಳೆ ಆತ ತನ್ನ ಮಿತ್ರರಿಗೆ ಕಳುಹಿಸಿದ ಎಸ್‌ಎಂಎಸ್‌ ಸಂದೇಶಗಳೇ ಕಾದಂಬರಿಯಾಗಿದೆ.ಸಾವಿರದಷ್ಟು ಕಿರುಸಂದೇಶಗಳು ಇದರಲ್ಲಿ ಅಡಕವಾಗಿವೆ. ಸಾಮಾನ್ಯವಾಗಿ ಕಿರುಸಂದೇಶಗಳಲ್ಲಿ ಕಾಣಿಸುವ ಹೃಸ್ವ ರೂಪದ ಪದಗುಚ್ಛಗಳು, ವ್ಯಾಕರ್ಣ-ಗೋಕರ್ಣವಾಗಿರುವುದು ಇದರಲ್ಲೂ ಎದ್ದು ಕಾಣಿಸುತ್ತದೆ.
*ಅಶೋಕ್‌ಕುಮಾರ್‍ ಎ