ಇ-ಲೋಕ-19 ಹೆಣ ಕೊಯ್ಯದೆ ಕಲಿಯುವ ವೈದ್ಯ ವಿದ್ಯಾರ್ಥಿಗಳು (21/4/2007)

ಇ-ಲೋಕ-19 ಹೆಣ ಕೊಯ್ಯದೆ ಕಲಿಯುವ ವೈದ್ಯ ವಿದ್ಯಾರ್ಥಿಗಳು (21/4/2007)

ಬರಹ

 ಮೈಬೊಂಬೆಹೆಣ ಕೊಯ್ಯುವುದು ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಯ ಮುಖ್ಯ ಭಾಗವೆನ್ನುವುದು ಎಲ್ಲರಿಗೂ ತಿಳಿದ ವಿಷಯ.ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬೇಕಾದ ಹೆಣವನ್ನು ಪಡೆಯಲು ಕಾಲೇಜುಗಳು ಹರಸಾಹಸ ಮಾಡಬೇಕಾಗುತ್ತದೆ. ನಿರ್ಗತಿಕರ, ದಿಕ್ಕಿಲ್ಲದವರ ಹೆಣಗಳಿಗಾಗಿ ಕಾಯಬೇಕಾಗುತ್ತದೆ. ತಮ್ಮ ಶರೀರವನ್ನು ಇಂತಹ ಕಲಿಕೆಗೆ ದಾನ ಮಾಡುವ ಪ್ರವೃತ್ತಿ ಈಗೀಗ ಕಾಣಬರುತ್ತಿದ್ದರೂ ಅದಿನ್ನೂ ಬೆಳೆಯಬೇಕಾಗಿದೆ.ಹೆಣಗಳೂ ಸಿಕ್ಕರೂ, ಅದಷ್ಟೇ ಕಲಿಕೆಗೆ ಸಾಕಾಗದು. ಉದಾಹರಣೆಗೆ ತುರ್ತು ಸಂದರ್ಭಗಳನ್ನು ಎದುರಿಸುವುದು ಹೇಗೆ ಎಂಬುದರ ತರಬೇತಿಗೆ ಹೆಣಗಳಷ್ಟೇ ಸಾಕಾಗವು. ಹಾಗೆಂದು ತುರ್ತು ಸ್ಥಿತಿಯಲ್ಲಿರುವ ರೋಗಿಗಳನ್ನು ವಿದ್ಯಾರ್ಥಿಗಳ ಅಭ್ಯಾಸಕ್ಕೆ ಕೊಡುವ ಹಾಗೂ ಇಲ್ಲವಲ್ಲ.ಇದೇ ಮಾತು ಪಶು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ. ರೆಸ್ಕ್ಯೂ ಕ್ರಿಟರ್ಸ್ ಬ್ರಾಂಡಿನ ಪ್ರಾಣಿಗಳ ಪ್ರತಿಕೃತಿಗಳು ಇದೀಗ ಅಮೆರಿಕಾದ ಹಲವು ಪಶುವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾಥಿಗಳ ತರಬೇತಿಗೆ ಬಳಕೆಯಾಗುತ್ತಿವೆ. ಕುದುರೆ,ನಾಯಿ,ಬೆಕ್ಕು ಹೀಗೆ ತರಹೇವಾರಿ ಪ್ರಾಣಿಗಳ ಪ್ರತಿಕೃತಿಗಳು ಇವರಲ್ಲಿ ಲಭ್ಯ. ಪ್ರಾಣಿಗಳ ಪ್ರತಿಕೃತಿಗಳನ್ನು ಪ್ಲಾಸ್ಟಿಕ್‍ವಸ್ತುವಿನಿಂದ ತಯಾರಿಸಲಾಗಿದ್ದು,ಇವುಗಳ ದೇಹಕ್ಕೆ ಕೃತಕ ರೋಮದ ಹೊದಿಕೆ ನೈಜ ಪ್ರಾಣಿಯ ಭ್ರಮೆ ಹುಟ್ಟಿಸುತ್ತವೆ. ಶ್ವಾಸನಾಳಗಳ ವ್ಯವಸ್ಥೆಯಿರುವ ಪ್ರತಿಕೃತಿಗಳೂ ಲಭ್ಯ.ಇಂತವುಗಳಲ್ಲಿ ಯಂತ್ರಗಳನ್ನು ಅಳವಡಿಸಿ, ಕೃತಕ ಶ್ವಾಸೋಚ್ಛಾರದ ವ್ಯವಸ್ಥೆಯನ್ನೂ ಕಲ್ಪಿಸಿ,ವಿದ್ಯಾರ್ಥಿಗಳಿಗೆ ನೈಜ ಅನುಭವ ನೀಡಬಹುದು. ಇನ್ನು ಕೆಲವು ಪ್ರತಿಕೃತಿಗಳಲ್ಲಿ ಅಣಕು ರಕ್ತ ಪರಿಚಲನೆಯ ವ್ಯವಸ್ಥೆಯೂ ಇದೆ.ಹೆಣ ಸಿಗಿಯುವ ತರಬೇತಿ ಮಾತ್ರಾ ಕೊಡುವುದರ ಬದಲು,ಚಿಕಿತ್ಸೆಗೆ ಅವುಗಳನ್ನು ಹೇಗೆ ಮಲಗಿಸಬೇಕು ಎಂಬುದನ್ನೂ ತಿಳಿದುಕೊಂಡು,ಅದೇ ರೀತಿ ದೇಹವನ್ನು ಇರಿಸಲೂ ತರಬೇತಿ ನೀಡಬಹುದು. ಪ್ರಾಣಿಗಳ ದೇಹದ ಭಾರದದಷ್ತೇ ಈ ಪ್ರತಿಕೃತಿಗಳ ದೇಹಭಾರವೂ ಇರುವಂತೆ ಇವನ್ನು ನಿರ್ಮಿಸುವ ಮೂಲಕ ಇದು ಸಾಧ್ಯವಾಗಿದೆ.ಜರ್ನಲ್ ಆಫ್ ಅಮೆರಿಕನ್ ವೆಟರಿನರಿ ಮೆಡಿಕಲ್ ಅಸೋಸಿಯೇಷನ್ ತನ್ನ ಅಧ್ಯಯನದ ಮೂಲಕ, ಪ್ರಾಣಿಗಳು ಬದಲು ಪ್ರತಿಕೃತಿಗಳ ಬಳಕೆ ವಿದ್ಯಾರ್ಥಿಗಳಿಗೆ ಯಾವ ಅಡ್ಡಿಯನ್ನೂ ಮಾಡಿಲ್ಲ.ಅವರ ಕಲಿಕೆಯ ಮಟ್ಟ ಬಾಧಿತವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದೆ.

http://froggy.lbl.gov.virtual/ ಅಂತರ್ಜಾಲ ತಾಣದಲ್ಲಿ ಕಪ್ಪೆಯನ್ನು ಕೊಯ್ಯುವುದನ್ನು ಅಭ್ಯಸಿಸಲು ಮಿಥ್ಯಾ ಕಪ್ಪೆಯನ್ನು ಲಭ್ಯವಾಗಿಸಲಾಗಿದೆ. ರಕ್ತದ ಹನಿಯೂ ಬರದೆ,ಕಪ್ಪೆಯನ್ನು ಬೇಕಷ್ಟು ಸಲ ಸಿಗಿಯಬಹುದು.ಪ್ರಾಣಿ ದಯಾ ಸಂಘಗಳಿಗೆ ಖುಷಿ ಕೊಡದೆ ಇರದು ಅಲ್ಲವೇ?

 

ಡೈನೋಸಾರ್‌ಗಿಂತ ಹಳೆಯ ಮರ ಹೇಗಿತ್ತು?tree
 ಭೂಮಿಯ ಮೇಲೆ ಇದುವರೆಗೆ ಪತ್ತೆಯಾದ ಅತ್ಯಂತ ಹಳೆಯ ಮರ ಮೂವತ್ತು ಅಡಿ ಎತ್ತರವಾಗಿತ್ತು,ಜರಿ ಗಿಡದ ಜಾತಿಯದ್ದು.ಪ್ರವಾಹದ ವೇಳೆ ನ್ಯೂಯಾರ್ಕಿನ ಸಮೀಪದ ಗಿಲ್ಬೋವಾದಲ್ಲಿ ಇದು ಪತ್ತೆಯಾಯಿತು. ಉತ್ಖತನದ ಬಳಿಕ ಮರದ ಶಿರೋಭಾಗ ಮತ್ತು ಕಾಂಡದ ಪಳೆಯುಳಿಕೆಗಳು ಪತ್ತೆಯಾಗಿ,ಇಡಿ ಮರ ಹೇಗಿತ್ತು,ಅದು ಯಾವ ಜಾತಿಯದ್ದು ಎನ್ನುವುದರ ಪೂರ್ಣ ಚಿತ್ರಣ ಸಂಶೋಧಕರಿಗೆ ಲಭಿಸಿತು.ಸುಮಾರು ನಾಲ್ಕುನೂರು ದಶಲಕ್ಷ ವರ್ಷ ಹಳೆಯ ಮರವಿದೆಂದು ನಂಬಲಾಗಿದೆ.ಈ ಮರ ಹೂ ಬಿಡುವ ಜಾತಿಯಲ್ಲದಲ್ಲವಂತೆ.
 

ಕೊಲೆಯಾದ ಪ್ರೊಫೆಸರ್ ಸಂಶೋಧಿಸಿದ್ದ ನಡಿಗೆಗೆ ಸಹಾಯಕ ಸಾಧನ
 ವರ್ಜೀನಿಯ ಟೆಕ್ ವಿಶ್ವವಿದ್ಯಾಲಯದಲ್ಲಿ ಕೊರಿಯಾದ ವಿಕ್ಷಿಪ್ತ ವಿದ್ಯಾರ್ಥಿಯ ಗುಂಡೇಟಿಗೆ ಬಲಿಯಾದ ವ್ಯಕ್ತಿಗಳಲ್ಲಿ ಕೆವಿನ್ ಗ್ರೆನಾಟಾ ಕೂಡಾ ಇದ್ದರು.ಸಂಶೋಧನಾ ಪ್ರವೃತ್ತಿಯ ಈತ ಇತ್ತೀಚೆಗೆ ಸ್ನಾಯುಸಂಬಂಧಿ ರೋಗದಿಂದ ಪೀಡಿತರಾಗಿ ನಡೆಯಲು ಸಾಧ್ಯವಾಗದ ರೋಗಿಗಳಿಗೆ ನಡೆಯಲು ಅನುವು ಮಾಡುವ ಸಾಧನವನ್ನು ತಯಾರಿಸಿದ್ದರು.
 

ಅಂತರ್ಜಾಲಪುಟದ ಜನಪ್ರಿಯತೆ ಅಳೆಯುವುದು ಹೇಗೆ?
 ಅಂತರ್ಜಾಲ ಪುಟಗಳು ಜನಪ್ರಿಯವಾದರೆ,ಅವುಗಲ್ಲಿ ಕಾಣಿಸಿಕೊಳ್ಳುವ ಜಾಹೀರಾತುಗಳು ಹೆಚ್ಚು ಜನರನ್ನು ತಲುಪುತ್ತವೆ. ಸಹಜವಾಗಿ ಜಾಹೀರಾತುದಾರರು ಹೆಚ್ಚು ಹಣ ತೆರಬೇಕಾಗುತ್ತದೆ. ಆದರೆ ಅಂತರ್ಜಾಲಪುಟದ ಜನಪ್ರಿಯತೆಯನ್ನು ಅಳೆಯುವ ಮಾನದಂಡ ಯಾವುದು? ಸಾಮಾನ್ಯವಾಗಿ ಎಷ್ಟು ಜನರು ಅಂತರ್ಜಾಲ ಪುಟ ವೀಕ್ಷಣೆ ಮಾಡುತ್ತಾರೆ ಎನ್ನುವುದು ಒಂದು ಮಾನದಂಡ.ಜಾಲಿಗ ಅಂತರ್ಜಾಲ ಪುಟವನ್ನು ಮೊದಲ ಬಾರಿ ವೀಕ್ಷಿಸಿದಾಗ, ಆತನನ್ನು ಮುಂದಿನ ಬಾರಿಯೂ ಗುರುತಿಸಲು ಅನುಕೂಲವಾಗುವಂತೆ ಕಂಪ್ಯೂಟರಿನಲ್ಲಿ ಕುಕಿ ಎಂಬ ಮಾಹಿತಿ ಕಡತವನ್ನು ಅಂತರ್ಜಾಲ ತಾಣಗಳ ಸರ್ವರ್ ಕಂಪ್ಯೂಟರುಗಳು ಇಡುವುದಿದೆ. ಕುಕಿಯೊಂದನ್ನು ಬಳಕೆದಾರನ ಕಂಪ್ಯೂಟರಿನಲ್ಲಿ ಬರೆಯಲಾಯಿತೆಂದರೆ,ಅದು ಹೊಸ ಬಳಕೆದಾರ ಸಿಕ್ಕಿದ ಸೂಚನೆ ಎಂದು ತಿಳಿಯಬಹುದು. ಆದರೆ ಇದರಲ್ಲಿ ಸಮಸ್ಯೆಯೂ ಇದೆ. ಕುಕಿಯನ್ನು ಕಂಪ್ಯೂಟರಿನಿಂದ ತೆಗೆದು ಹಾಕುವುದು ಸಾಧ್ಯ. ಆಗ ಮತ್ತೆ ಕುಕಿಯನ್ನು ಸ್ಥಾಪಿಸುವ ಪ್ರಮೇಯ ಬರುತ್ತದೆ.ಈತ ಹೊಸ ಬಳಕೆದಾರ ಎಂದು ಲೆಕ್ಕ ಹಾಕಿದರೆ ಅದು ತಪ್ಪು. ಇಂತಹ ಉತ್ಪ್ರೇಕ್ಷಿತ ಲೆಕ್ಕದ ಫಲವಾಗಿ ಹೆಚ್ಚಿನ ತಾಣಗಳು ನೀಡುವ ಲೆಕ್ಕ ನೈಜವಾದುದಾಗಿರದೆ, ಅತ್ಯಂತ ಉತ್ಪ್ರೇಕ್ಷಿತವಾಗಿರುವುದು ಕಂಡು ಬಂದಿದೆ. ಇದರ ಬದಲಾಗಿ ತಾಣದಲ್ಲಿ ಬಳಕೆದಾರನು ವ್ಯಯಿಸಿದ ಸಮಯದ ಮಾನಕವು ಹೆಚ್ಚು ಸೂಕ್ತವೆಂಬ ಅಭಿಪ್ರಾಯವೂ ಇದೆ.ಆದರೆ ಈ ಬಗೆಗೆ ಸಹಮತವಿನ್ನೂ ಮೂಡಿ ಬಂದಿಲ್ಲ. ಮೊದಲ ರೀತಿಯ ಲೆಕ್ಕದಲ್ಲಾದರೆ ಗೂಗಲ್ ಮೊದಲ ಸ್ಥಾನದಲ್ಲಿದ್ದರೆ, ಎರಡನೆಯ ರೀತಿಯ ಲೆಕ್ಕದಲ್ಲಿ ಇ-ಬೇ ಎನ್ನುವ ಹರಾಜು ತಾಣ ನಂಬರ್ ಒಂದು ಸ್ಥಾನ ಪಡೆದಿದೆ.
 

ವಿಕಿಪೀಡಿಯಾ ಈಗ ಸಿ.ಡಿ.ಯಲ್ಲಿ
 ವಿಕಿಪೀಡಿಯಾ ಎನ್ನುವುದು ಅಂತರ್ಜಾಲದಲ್ಲಿ ಲಭ್ಯವಿರುವ ಜನರ ಸಹಯೋಗದಿಂದ ರಚಿತವಾದ ವಿಶ್ವಕೋಶವೆನ್ನುವುದು ಅಂತರ್ಜಾಲ ಜಾಲಿಗರಿಗೆಲ್ಲಾ ಗೊತ್ತಿರುವ ವಿಷಯ. ಈಗ ವಿಕಿಪೀಡಿಯಾದ ಆಯ್ದ ಅತ್ಯುತ್ತಮ ಲೇಖನಗಳ ಸಿಡಿ ಮಾರುಕಟ್ಟೆಗೆ ಬರಲಿದೆ.ಪಾಲಿಶ್ ಭಾಷೆಯ ಆಯ್ದ ಎರಡೂಕಾಲು ಲಕ್ಷಕ್ಕೂ ಹೆಚ್ಚು ಲೇಖನಗಳ ಡಿವಿಡಿಯೂ ಸದ್ಯದಲ್ಲೇ ಲಭ್ಯವಾಗಲಿದೆ. ಇದುವರೆಗೆ ಆನ್‍ಲೈನ್‍ನಲ್ಲಿ ಮಾತ್ರಾ ವಿಶ್ವಕೋಶವನ್ನು ಓದುವ ಸೌಲಭ್ಯವು ಲಭ್ಯವಿತ್ತು.
*ಅಶೋಕ್‌ಕುಮಾರ್ ಎ