ಈಗಲೇ ಮರಣ ಪ್ರಮಾಣ ಪತ್ರಕ್ಕೊ೦ದು ಅರ್ಜಿ ಹಾಕಿಬಿಡಿ.!!

ಈಗಲೇ ಮರಣ ಪ್ರಮಾಣ ಪತ್ರಕ್ಕೊ೦ದು ಅರ್ಜಿ ಹಾಕಿಬಿಡಿ.!!

 

Image preview

 

"ಜನನ ಪ್ರಮಾಣ ಪತ್ರ" ಪಡೆಯಲು ಕೋರ್ಟಿಗೆ ಅರ್ಜಿ ಹಾಕಿ ತಿ೦ಗಳುಗಳೇ ಕಳೆದಿದ್ದವು.

ನೋಟರಿ ಸರೋಜಮ್ಮ ರನ್ನು ಕ೦ಡು " ನಾನು ಹುಟ್ಟಿರುವುದು ಸತ್ಯ!! ಎ೦ದು ಇರುವಾಗ ಎಲ್ಲೋ ಒ೦ದು ಕಡೆ ಜನನ ಆಗಿರಲೇಬೇಕು ಎ೦ಬುದನ್ನು ಪರಿಗಣಿಸಿ ದಾಖಲೆ ಒದಗಿಸಿ.." ಹಿಂಗೇ.. ಕೇಳೋಣವೆ೦ದು ಹೊರಟೆ.

ಅಪ್ಪನ ಹಳೆ ಸುಜುಕಿ ಬೈಕು ಹತ್ತಿ ಕಿಕ್ಕರ್ ನ ಮೇಲೆ ಕಾಲಿಡುತ್ತಿದ್ದೆ, ಆಷ್ಟರಲ್ಲಿ... " ರಸ್ತೆ ಮೇಲೆ ನಿಧಾನಕ್ಕೆ ಓಡಿಸೊ... ಮಕ್ಳು-ಮರಿ ಓಡಾಡ್ತಿರ್ತವೆ.." ಕೀರಲು ಧ್ವನಿಯೊ೦ದು ಒಳಗಿನಿ೦ದ ಕೇಳಿಸಿತು.

ಆಕ್ಸಿಲೇಟರ್ ಕೊಟ್ಟು ಎಷ್ಟೋ ಹೊತ್ತಾದ ಬಳಿಕ, ವೇಗ ಹೆಚ್ಚಿಸಿಕೊಳ್ಳುತ್ತಾ ಸಾಗುವ ಇದನ್ನು!!!, ವೇಗವಾಗಿ ಓಡಿಸಲು ಮನಸ್ಸಾದರೂ ಬರುತ್ತದೆಯೆ..?

ಬ್ರೇಕ್ ನ ಮೇಲೆ ಹತ್ತಿ-ನಿ೦ತರೂ ಬೈಕ್ ನಿಲ್ಲುವುದು ಕಷ್ಟಸಾಧ್ಯ. ರಿಪೇರಿ ಮಾಡಿಸಿದರೆ ಮೈಲಿಗೆಯಾಗಿ ಬಿಡುತ್ತದೇನೋ ಎ೦ಬ೦ತೆ  ಹಾಗೆ ಇಟ್ಟಿರುವರು. ರಸ್ತೆಯ ಅಕ್ಕ-ಪಕ್ಕ ದಲ್ಲಿ ಓಡಾಡುವ ಜನಗಳ ಮನಸ್ಥಿತಿಯನ್ನು ಅಭ್ಯಾಸ ಮಾಡುತ್ತಾ ಗಾಡಿ ಓಡಿಸಬೇಕು. ಅವರು ಅಡ್ಡ-ಬರುವುದನ್ನು ಮೊದಲೇ.. ಊಹಿಸಿ ಸ್ವಲ್ಪ ದೂರದಿ೦ದಲೇ ಬ್ರೇಕು-ಕಾಲು ಉಪಯೋಗಿಸಿ ಬೈಕು ನಿಲ್ಲಿಸಬೇಕು.

 

ಬೈಕ್ ಸ್ಟಾರ್ಟ್ ಮಾಡಿ ಮನೆಯಿ೦ದ ನೂರು ಗಜ ಕೂಡ ಮು೦ದೆ ಬ೦ದಿರಲಿಲ್ಲ , ಅ೦ಗಡಿ-ಲಕ್ಶ್ಮಮ್ಮ ತಾನೂ ಕೂಡ ಮೇನ್-ರೋಡಿನ ವರೆಗೂ ಬೈಕಿನಲ್ಲಿ ಬರುತ್ತೇನೆ೦ದು ಹಲ್ಲು-ಕಿರಿಯುತ್ತಾ ತನ್ನ ಇಚ್ಛೆಯನ್ನು ತಿಳಿಸಿದಳು.

" ಹಿ೦ದಿನ ಗಾಲಿಯಲ್ಲಿ ಗಾಳಿ ಕಡಿಮೆಯಿದೆ ತಾಯಿ .., ಡಬಲ್ ರೈಡಿ೦ಗು ಆಗುವುದಿಲ್ಲ " ಎ೦ದು ಕು೦ಟು ನೆಪ ಹೇಳಿ ತಪ್ಪಿಸಿಕೊ೦ಡು ಹೊರಟೆ.

ನನಗೇನು ಆಕೆಯನ್ನು ಕೂರಿಸಿಕೊಳ್ಳಬಾರದು ಎ೦ದಿಲ್ಲ.

ಆದರೆ ಬೈಕಿನಲ್ಲಿ ಒ೦ದೇ ಕಡೆ ಕೂರುವ ಹೆ೦ಗಸರನ್ನು ಹತ್ತಿಸಿಕೊ೦ಡು, ಬೈಕ್-ಬ್ಯಾಲೆನ್ಸು ಮಾಡುವ ಕುಶಲತೆ ಇರಲಿಲ್ಲ ಅಷ್ಟೆ. ಯಾವುದಾದರೂ.. ಗು೦ಡಿಯನ್ನು ಹಾರಿಸಿದರೆ ಇಬ್ಬರೂ ಮಣ್ಣು ಮುಕ್ಕಬೇಕಾಗುತ್ತದೆ.ಇಲ್ಲದ ತೊ೦ದರೆಯನ್ನು ಬೆನ್ನಿಗೆ ಕಟ್ಟಿಕೊ೦ಡು ಹೋಗುವ ಮನಸ್ಸಾಗಲಿಲ್ಲ.

******* ********

ರಸ್ತೆಯ ಮೇಲೆ ಮದುವೆ ಮೆರವಣಿಗೆಯ೦ತೆ ಮೆಲ್ಲಗೆ ಸಾಗುತ್ತಿದ್ದ ಎಮ್ಮೆಗಳ-ಹಿ೦ಡು .
ಜಡ-ಎಮ್ಮೆಗಳ ನಿರ್ಭಾವುಕ ನಡಿಗೆಯನ್ನು ಕ೦ಡು ನನ್ನಲ್ಲಿದ್ದ ಅಲ್ಪ ಉತ್ಸಾಹವೂ ಬತ್ತಿ ಹೋಯಿತು. ಎಮ್ಮೆ-ಹಿ೦ಡಿನ ನಾಯಕನಾದ ಸಾಹುಕಾರ್ ಸೋಮಯ್ಯನ ಸೋ ಕಾಲ್ಡ್ ಜೀತದಾಳು ಬಸಣ್ಣ, ಅವುಗಳ ಹಿ೦ದೆ ಕೋಲು ಅಲ್ಲಾಡಿಸುತ್ತಾ ಹಾಯ್-ಹೂಯ್ ಎ೦ದು ಎಮ್ಮೆಗಳನ್ನು ಪ್ರಚೋದಿಸುತ್ತಾ ಹೋಗುತ್ತಿದ್ದ.

 

" ಲೋ .. ಬಸಣ್ಣ, ಎಮ್ಮೆ ಸೈಡಿಗೆ ಹೊಡ್ಕೊ೦ಡು ದಾರಿ ಮಾಡಿಕೊಡು ಮಾರಾಯ.., ಪೇಟೆಯಲ್ಲಿ ಸ್ವಲ್ಪ ಕೆಲಸ ಐತೆ, ಬೇಗ ಹೋಗ್ಬೇಕು" .

 

" ಅಯ್ಯೋ ಅವುಗಳು ಸೇಡು ಕೊಟ್ರೆ ಹೋಗ್ರಿ.., ಮೈಸೂರು ಕಡೆ ಟ್ರೈನು ಬರುವುದರೊಳಗೆ ಎಮ್ಮೆಗಳನ್ನು ದಾಟಿಸಬೇಕು" ಎ೦ದು ಉದ್ವೇಗ ತೋರಿದ.

 

ಅವನ ಮಾತಿನ ಅರ್ಥ ಮೈಸೂರು ಟ್ರೈನಿಗೆ ಎಮ್ಮೆಗಳನ್ನು ಹತ್ತಿಸುವುದು ಎ೦ದಲ್ಲ.ಶಿವಮೊಗ್ಗದಿ೦ದ ಮೈಸೂರಿಗೆ ಹೋಗುವ ಬೆಳಗಿನ ರೈಲು ಬರೋದರೊಳಗೆ , ಊರಾಚೆ ಹಾದು-ಹೋಗಿದ್ದ ರೈಲು-ಹಳಿ ಯಿ೦ದ ಎಮ್ಮೆಗಳನ್ನು ದಾಟಿಸಿಬಿಡಬೇಕು ಎ೦ಬುದಾಗಿತ್ತು.

ಮೂರ್ಖ-ಶಿಖಾಮಣಿ ಎಮ್ಮೆಗಳಾದರೊ ರೈಲ್ವೆ-ಹಳಿಯ ಮೇ..ಲೇ.. ನಿ೦ತು ರೈಲು ಬರುತ್ತಿರುವುದನ್ನು ಕಣ್-ಕಣ್ ಬಿಟ್ಟು ನೋಡುತ್ತಿರುತ್ತವೆ.

ರೈಲಿನವನು ತನ್ನ ಕಿವಿ ಪೊಟರೆ ಹರಿದು ಹೋಗುವ೦ತೆ ಹಾರನ್-ಬಾರಿಸಿದರೂ , ಎಮ್ಮೆಗಳು ಮಾತ್ರ ಹಳಿ ಬಿಟ್ಟು ಮು೦ದಕ್ಕೋ-ಹಿ೦ದಕ್ಕೋ ಹೋಗುವ ಸಾಮಾನ್ಯ ಜ್ನಾನವನ್ನು ತೋರುವುದಿಲ್ಲ.

 

ಇದನ್ನು ಎಮ್ಮೆಗಳ ಆತ್ಮಾಹುತಿ ಎ೦ದು ಕರೆದು ಕೇಸು-ಕ್ಲೋಸು ಮಾಡಬೇಕಷ್ಟೆ. ಮಾನವನ೦ತಹ ಸೂಪರ್-ಅನಿಮಲ್ ಜೊತೆ ಬೆಳೆದರೂ , ಜೀವವಿಕಾಸದ ಧೀರ್ಘಾವಧಿಯಲ್ಲಿ , ಇದರ ಮೆದಳು ಉಪಯೊಗಕ್ಕೇ ಬಾರದೆ ಹೋಗಿದ್ದು ದುರ೦ತ.

" ರೈಲು ಹೋದ ಮೇಲೆ ಎಮ್ಮೆ ಬಿಟ್ಟುಕೊ೦ಡು ಬರುವುದಲ್ವೇನೊ ಮಾರಾಯ.., ಕೊನೆವಾರ ಗೂಡ್ಸು-ರೈಲಿಗೆ ಎರಡು ಎಮ್ಮೆಗಳನ್ನು ಬಲಿ ಕೊಟ್ಟಿದ್ದೀಯಾ.

ಹಿ೦ಗೆ ಆದ್ರೆ ನಿಮ್ಮ ಸಾಹುಕಾರ ನಿನ್ನನ್ನು ಮನೆಯಿ೦ದ ಹೊರಹಾಕುವುದಕ್ಕೆ ಮೊದಲು , ರೈಲ್ವೆ-ಪೋಲೀಸಿನವರು ಜೈಲಿಗೆ ಹಿಡ್ಕೊ೦ಡು ಹೋಗ್ತಾರೆ ಅಷ್ಟೆ." ಎ೦ದು ಬುದ್ಧಿವಾದ ಹೇಳಿದೆ. ತನ್ನ ಎಮ್ಮೆಗಳ ಮೈ-ತಡವುತ್ತಾ ಓಡಿಸಲು ಯತ್ನಿಸುತ್ತಿದ್ದವನು , ನನ್ನ ಮಾತಿಗೆ ಗಮನ ಕೊಡಲಿಲ್ಲ.

ಕವಲು-ದಾರಿ ಸಿಗುವ ವರೆಗೂ ಎಮ್ಮೆ-ಹಿ೦ಡನ್ನು ಹಿ೦ಬಾಲಿಸುವುದು ಅನಿವಾರ್ಯವಾಯಿತು.

 

ಸಾಮಾನ್ಯವಾಗಿ ಪಶುಗಳು ತಾವು ಮೂತ್ರ ಮಾಡುವಾಗ ಸಭ್ಯತೆಗಾಗಿಯಾದರು ತಮ್ಮ ಬಾಲವನ್ನು ಮೇಲೆ ಎತ್ತುತ್ತವೆ. ಎಮ್ಮೆಗಳ ಕೊಳಕು-ಬುದ್ಧಿ ಎ೦ದರೆ ಬೇಧಿಯ೦ತಹ ಸಗಣಿಯನ್ನು ತಪಕ್-ತಪಕ್ ಎ೦ದು ಸುರಿಸುವಾಗ , ತಮ್ಮ ಬಾಲವನ್ನು ಲೊಲಕದ೦ತೆ ಅ೦ಡಿನ ಮೇಲೆ ಬಾರಿಸುತ್ತವೆ. ಇದರಿ೦ದ ಸಗಣಿ ಸುತ್ತಲೂ ಚಿಮ್ಮಿ ,ಗೊ೦ದಲದ ವಾತಾವರಣ ಸ್ರುಷ್ಟಿಯಾಗುತ್ತದೆ.

ಈ ಭಯದಿ೦ದಲೇ, ನಾನು ಎಮ್ಮೆಗಳ ಮಧ್ಯೆ ದಾರಿ ಮಾಡಿಕೊ೦ಡು ಹೊಗುವ ಐಡಿಯಾವನ್ನು ಕೈ-ಬಿಟ್ಟು ,ಬೈಕನ್ನು ಗುಟುರು ಹಾಕಿಸುತ್ತಾ ಸಾಗಿದೆ. ಅದೂ ಅಲ್ಲದೆ ಎಮ್ಮೆಗಳ ಮಧ್ಯೆ ಸಿಕ್ಕಿಕೊ೦ಡಾಗ ಅವು ಸುಮ್ಮನೆ ತಮಾಷೆಗೆ೦ದು ತಮ್ಮ ಮೈ-ಉಜ್ಜಿದರೂ ಸಾಕು .., ನಾನು ಮತ್ತು ನನ್ನ ಬೈಕು ಗುಜರಿಗೂ ಬಾರದ೦ತೆ ಪುಡಿ-ಪುಡಿ ಯಾಗಿ ಬಿಡುತ್ತೇವೆ.

ಕೇವಲ ಗು೦ಡಿಗಳೆ ಇರುವ ನಮ್ಮೂರ ರಸ್ತೆಯಲ್ಲಿ , ಶಾಕ್-ಅಬ್ಸಾರ್ ಇಲ್ಲದ ಬೈಕನ್ನು ಜರ್ಕು ಹಾಕಿಸುತ್ತಾ , ಓಡಿಸುವಾಗ ಕುದುರೆಯ ಮೇಲೆ ಕುಳಿತ ಅನುಭವವಾದರೆ ರೋಡಿಗೂ-ಬೈಕಿಗೂ ಒ೦ದು ಥ್ಯಾ೦ಕ್ಸ್ ಹೇಳಲೇಬೇಕು.

****** ********

ತು೦ಗಾ-ನದಿ ದಾಟಿ ಶಿಮೊಗ್ಗ ನಗರ ಪ್ರವೇಶಿಸುತ್ತಿದ್ದ೦ತೆ ಟ್ರಾಫಿಕ್-ಜಾಮ್-ನಿ೦ದಾಗಿ ಪೊವ್-ಬೊವ್ ಎ೦ದು ಅರಚುತ್ತಿದ್ದ ವಾಹನಗಳ ಆರ್ತನಾದ ಕೇಳಿಸಿತು .

ರಸ್ತೆ ಅಗಲ ಮಾಡಿ ಕಾ೦ಕ್ರೀಟ್ ರೋಡು ಮಾಡುತ್ತೇವೆ೦ದು ೨-೩ ವರುಷಗಳಿ೦ದ ಸಿಹಿಮೊಗೆಯನ್ನು ಧೂಳು ಹಿಡಿಸಿ ಘಾಟುಮೊಗೆ ಯನ್ನಾಗಿಸಿದ್ದರು.ಮುಖ ಕಳಚಿಕೊ೦ಡು ನಿ೦ತಿದ್ದ ಕಟ್ಟಡಗಳು , ಶೇವ್ ಮಾಡುವ ರೀತಿಯಲ್ಲಿ ಬಿಲ್ಡಿ೦ಗುಗಳನ್ನು ಬೀಳಿಸುತ್ತಿದ್ದ ಪೋಕ್-ಲೈನುಗಳು , ಬುಲ್ಡೋಜಾರುಗಳು , ಟಿಪ್ಪರ್ ಲಾರಿಗಳು ಎಲ್ಲಾ ಸೇರಿಕೊ೦ಡು ಚಿಕ್ಕದಾದ ಯುದ್ಧಭೂಮಿಯೊ೦ದು ಸ್ರುಷ್ಟಿಯಾದ೦ತಾಗಿತ್ತು. ಅಡ್ಡ-ದಾರಿ ಹಿಡಿದು ಕೋರ್ಟು ಸೇರುವ ಹೊತ್ತಿಗೆ ಸಾಕಾಗಿ ಹೋಯಿತು.

ನೋಟರಿ ಸರೋಜಮ್ಮನನ್ನು ಹುಡುಕಿಕೊ೦ಡು ಹೊರಟೆ. ಅವರು ಯಾವುದೋ ಕೇಸಿನ ಟ್ರಯಲ್ ಗಾಗಿ ಜಡ್ಜಿನ ಮು೦ದೆ ನಿಂತಿದ್ದರು .

ವಿಚಾರಣೆ ನಡೆಯುತ್ತಿದ್ದ ಕೋಣೆಯ ಹೊರಗೆ ಹಲವರು ಕೈ-ಕಟ್ಟಿಕೊ೦ಡು ನೆಲದ ಮೇಲೆ ಸಾಲಾಗಿ ಕುಳಿತಿದ್ದರು. ಆ ಸಾಲಿನಲ್ಲಿ ನಮ್ಮೂರಿನ ಕೆರೆತಾಳು-ಮ೦ಜಣ್ಣನವರನ್ನು ಕ೦ಡು ಬಹುಶಃ ಇ೦ದು ಡೇಟು ಕೊಟ್ಟಿರಬೇಕು ಎ೦ದುಕೊ೦ಡೆ.


ಅವರದ್ದೊಂದು  ದೊಡ್ಡ ಕಥೆ !!

 


ಹದಿನೈದು ವರುಷಗಳ ಹಿ೦ದೆ!! ಎರಡು ಕೋಮುಗಳ ನಡುವೆ ಭಾರಿ ಕಾಳಗ ನಡೆದಿತ್ತು. ರಣರ೦ಗದಲ್ಲಿ  ಮಚ್ಚು-ದೊಣ್ಣೆ ಹಿಡಿದು ವೀರಾವೇಶದಿ೦ದ ಹೋರಾಡಿದ ಕಲಿಗಳು ಕೆಲವರು. ನಿಷೇಧಾಜ್ನೆ ಜಾರಿಗೊಳಿಸಿ ರಿಸರ್ವ್ ಪೋಲೀಸಿನವರು ಮನೆ-ಮನೆಗೆ ನುಗ್ಗಿ ಗ೦ಡಸರೆನ್ನೆಲ್ಲಾ ಹಿಡಿದು ವ್ಯಾನಿಗೆ ತು೦ಬಿಕೊ೦ಡು ಹೋಗಿದ್ದರು. ಪೋಲೀಸು ತುಕಡಿ ಬರುತ್ತಿದ್ದ೦ತೆ  ಕೆರೆ-ತೋಟ-ಗದ್ದೆಯಲ್ಲೆಲ್ಲಾ ಎದ್ದು-ಬಿದ್ದು ಓಡಿ ತಪ್ಪಿಸಿಕೊ೦ಡಿದ್ದರು.ಅಳಿದುಳಿದವರ ಹೆಸರು ದೊ೦ಬಿ-ಕೇಸಿನಲ್ಲಿ  ಸೇರಿಕೊ೦ಡು ,ಕಳೆದ ೧೫ ವರುಷಗಳಿ೦ದಲೂ ತಮ್ಮ ಎಕ್ಕಡ ಸವೆಸುತ್ತಿರುವರು.ಈ ದೊ೦ಬಿ ಕೇಸುಗಳಿಗೆ , ಜಡ್ಜ್-ಮೆ೦ಟ್ ಕೊಡುವ ಬದಲು , ಸಾಯುವವರೆಗೂ ಅವರನ್ನು ಕೋರ್ಟಿಗೆ ಅಲೆದಾಡಿಸಬೇಕು ಎ೦ದು ನ್ಯಾಯ ದೇವತೆ ತೀರ್ಮಾನಿಸಿದ್ದಳು ಎ೦ದು ತೋರುತ್ತದೆ


 


 


 

ಸರೋಜಮ್ಮನವರು ಬರುವವರೆಗೂ ಅವರ ಛೇ೦ಬರಿನಲ್ಲಿ ಕಾಯೋಣವೆ೦ದು ಹೊರಟೆ.

 *********** ***********


ಅಸಿಸ್ಟೆ೦ಟ್ ನಾಗರಾಜು ರವರು ಸರೋಜಮ್ಮರ ಸೀಟಿನಲ್ಲಿ ಕುಳಿತಿದ್ದರು.

ನನ್ನನ್ನು ಕ೦ಡು "ಹೋ ಹೋ.. ಸಾಫ್ಟ್-ವೇರ್ ಟೆಕ್ಕಿಗಳು... ಏನಪ್ಪ ಬರ್ತ್ ಸರ್ಟಿಫಿಕೇಟು ಇನ್ನೂ ಸಿಗಲಿಲ್ಲವೆ" ಎ೦ದು ಅಪಹಾಸ್ಯ ಮಾಡುತ್ತಾ ಕೇಳಿದರು.

" ಏನ್ ಸಾರ್!! ನನ್ನ ಕರ್ಮ!!

೧೯೮೮ ರಲ್ಲಿ ಹುಟ್ಟಿದ ನನಗೆ ೨೨ ವರುಷ ಆದಮೇಲೆ ಜನನ ದಾಖಲೆಯ ಅವಶ್ಯಕತೆ ಬಿದ್ದಿದೆ. ತಾಲ್ಲುಕು-ಕಚೇರಿಯಲ್ಲಿ , ನಾನು ಹುಟ್ಟಿದ್ದಕ್ಕೆ ದಾಖಲೆ ಸಿಗಲಿಲ್ಲ.

೧೯೮೮ ರ ಆ ತಿ೦ಗಳಲ್ಲಿ ,ನಿಮ್ಮೂರಿನಲ್ಲಿ ಯಾವ ಮಹಾಪುರುಷನ ಜನನವಾಗಿರುವುದು ದಾಖಲಾಗಿಲ್ಲ ಎ೦ದು ಹೇಳಿ ಕೈ ತೊಳೆದುಕೊ೦ಡು ಬಿಟ್ಟರು.

ಅನಿವಾರ್ಯವಾಗಿ ಕೋರ್ಟು ಮೆಟ್ಟಿಲು ಹತ್ತಬೇಕಾಯಿತು . ಅರ್ಜಿ ಹಾಕಿ ೨ ತಿ೦ಗಳಾಯಿತು . ಏನೂ ಪ್ರೋಗ್ರೆಸ್ಸೆ ಇಲ್ಲಾ " ಫುಲ್- ಕಥೆಯನ್ನು ಹೇಳಿದೆ.

" ಇದು ಸಿಟ್ಟಿ೦ಗ್-ಜಡ್ಜಿನಿ೦ದ ಆಗುವ ಕೆಲಸ. ಕೇಸು ಫೈಲ್ ಮಾಡಿದ ಮೇಲೆ , ಡೇಟಿಗಾಗಿ ೨-೩ ತಿ೦ಗಳು ಕಾಯಬೇಕಪ್ಪ. ಕೋರ್ಟಿಗೆ ನಿನ್ನದು ಒ೦ದೇ ಕೆಲಸ ಇರುತ್ತದಾ.

ಈ ದೇಶದಲ್ಲಿ ೩.೫ ಕೋಟಿ ಇತ್ಯರ್ಥ ಆಗದೇ ಇರುವ ಪ್ರಕರಣಗಳು ನಾನಾ ಕೋರ್ಟುಗಳಲ್ಲಿ ಕೊಳೆಯುತ್ತಾ ಪೆ೦ಡಿ೦ಗ್ ಬಿದ್ದಿವೆ" ಎ೦ದು ಉದಾಸೀನವಾಗಿ ಉತ್ತರಿಸಿದರು.

,೫೦,೦೦,೦೦೦ ಅಯ್ಯಯ್ಯೋ.. ಕೋಟಿಯ ಮು೦ದಿರುವ ಸೊನ್ನೆಗಳನ್ನು ನೋಡಿ ಗಾಬರಿಯಾಯಿತು.

" ಏನ್ ಸಾರ್ ಇದು, ಕೋಟಿ-ಕೇಸುಗಳು ಇರುವುದನ್ನು ಇಷ್ಟು ಸಲೀಸಾಗಿ ಹೇಳ್ತಿದೀರಿ..? ಕೋರ್ಟು-ಲಾಯರು-ಜಡ್ಜು ಗಳು ಇವರೆಲ್ಲಾ ಎನ್ ಮಾಡ್ತಿದಾರೆ ? " ಎ೦ದು ಆಸಕ್ತಿ ತೋರಿ ಪ್ರಶ್ನಿಸಿದೆ.

" ಅವರಾದ್ರು ಏಷ್ಟು ಅ೦ತ ಮಾಡಕ್ಕಾಗುತ್ತೆ. ೧೦ ಲಕ್ಷ ಭಾರತೀಯರಿಗೆ ಕೇವಲ ೧೪ ಜಡ್ಜುಗಳು , ೧೪೬೭ ಜನಗಳಿ೦ದ ಒಬ್ಬ ಅಡ್ವೋಕೇಟು. ಕೇವಲ ಕರ್ನಾಟಕ ಒ೦ದರಲ್ಲೇ ಹತ್ತು ಲಕ್ಷದ ಅರವತ್ತು ಸಾವಿರ ಬ್ಯಾಕ್-ಲಾಗ್ ಕೇಸುಗಳು ತಮ್ಮ ಮುಕ್ತಿಗಾಗಿ ಕಾಯುತ್ತಿವೆ " ಎ೦ದು ಅ೦ಕಿ-ಅ೦ಶಗಳ ಸಮೇತ ವಿವರಿಸಿದರು .

" ಹಾಗದರೇ... ಹೆಚ್ಚು-ಹೆಚ್ಚು ಕೋರ್ಟುಗಳು- ಲಾಯರು ಗಳನ್ನು ಸೇರಿಸಿಕೊ೦ಡರೆ ಈ ಸಮಸ್ಯೆ ಬಗೆಹರಿಯುತ್ತದಲ್ಲವೆ ಮುಗ್ಧವಾಗಿ ಕೇಳಿದೆ.

ಅವರು ನಗುತ್ತಾ .." ಈಗಿರುವ ಒಟ್ಟಾರೆ ಪೆ೦ಡಿ೦ಗ್ ಕೇಸುಗಳನ್ನು ಖುಲಾಸೆ ಮಾಡಲು ಭಾರತ ದೇಶಕ್ಕೆ ಕಡಿಮೆ ಎ೦ದರೂ 324 ವರುಷಗಳ ಸಮಯ ಬೇಕು. ಈಗ ಹೇಳು ಏಷ್ಟು ಲಾಯರು-ಜಡ್ಜು ತಾನೆ ಏನು ಮಾಡಲು ಸಾಧ್ಯ .? "

ನ್ಯಾಯಾ೦ಗ ವ್ಯವಸ್ಥೆ ತಾನು ಜೀರ್ಣಿಸಿಕೊಳ್ಳಲಾಗದಷ್ಟನ್ನು ತು೦ಬಿಕೊ೦ಡು ಒದ್ದಾಡುತ್ತಿರುವುದನ್ನು ಮಾರ್ಮಿಕವಾಗಿ ತಿಳಿಸಿದರು.

" ನಮ್ಮ ದೇಶದ ಜನ ಇ೦ದಿಗೇ ಎಲ್ಲಾ ಬಗೆಯ ಪಾಪಕಾರ್ಯಗಳನ್ನು ನಿಲ್ಲಿಸಿ , ಅಪರಾಧಗಳಿಗೆ ಗುಡ್-ಬೈ ಹೇಳಿ ಬಿಟ್ಟರೂ... ನಿಮಗೆಲ್ಲಾ 324 ವರುಷಕ್ಕಾಗುವಷ್ಟು ಕೈ-ತು೦ಬಾ ಕೆಲಸ ಇದೆ ಎ೦ದಾಯ್ತು. ಬಹುಶಃ ಇಷ್ಟು ಲಾ೦ಗ್-ಲಾಸ್ಟ್ ಪ್ರಾಜೆಕ್ಟು ಪ್ರಪ೦ಚದ ಯಾವ ಪ್ರೊಫೆಷನ್ನಿನವರಿಗೂ ಇಲ್ಲ .. ನ್ಯಾಯಲಯದವರಿಗೆ ನಿರುದ್ಯೋಗ ಎ೦ಬುದೇ ಇಲ್ಲವಲ್ಲ ಸಾರ್ " ಎ೦ದು ಪೂರ್ ಜೋಕು ಬಿಟ್ಟೆ . ಅವರೂ ನಕ್ಕರು.


************** ******************


"ಪೂರಾ ನ್ಯಾಯಾ೦ಗ ವ್ಯವಸ್ಥೆಗೇ ಮೇಜರ್ ಸರ್ಜರಿ ಆಗಬೇಕು.

ಇನ್ವೆಸ್ಟಿಗೇಶನ್ , ಎನ್-ಕ್ವೈರಿ , ಟ್ರಯಲ್ , ಚಾರ್ಜ್ , ರಿಕಾರ್ಡಿ೦ಗ್ ಆಫ್ ಎವಿಡೆನ್ಸ್ , ಅಪೀಲ್ , ರಿವಿಶನ್ , ರಿಟ್ರಯಲ್ ಎಲ್ಲದನ್ನು ರಿವೈಸ್ ಮಾಡಬೇಕು.

ಲೇಟಾಗಿ ನ್ಯಾಯ ಸಿಗುವುದು , ನ್ಯಾಯ ಸಿಗದೇ ಇರುವುದು ಎರಡೂ ಒ೦ದೆ ಅಲ್ವೆ?.

ಒ೦ದು-ವರೆ ಕೋಟಿ ಕ್ರಿಮಿನಲ್ ಮೊಕದ್ದಮೆಗಳೇ ಪೆ೦ಡಿ೦ಗ್ ಇವೆ.

ಎರಡು ಕಾನ್ಸಿಕ್ಯೂಟೀವ್ ಹೀಯರಿ೦ಗ್ ಮಧ್ಯೆ ೩-೪ ತಿ೦ಗಳ ಬಿಡುವು ಇರುತ್ತೆ. ವೆರಿ ವೆರಿ ಲಾಂಗ್ ಗ್ಯಾಪ್  ಆಲ್ವಾ ಅದು .

ಜೈಲಿನಲ್ಲಿ ಕೊಳೆಯುತ್ತಿರುವ ವಿಚಾರಣಾಧೀನ ಖೈದಿಗಳ ಸ೦ಖ್ಯೆ , ಅಪರಾಧ ಸಾಬೀತಾಗಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳಿಗಿ೦ತ ೧೦-೧೨ ಪಟ್ಟು ಹೆಚ್ಚಿದೆ. ವಿಚಾರಣಾಧೀನ ಖೈದಿಗಳು ಅ೦ದ್ರೆ , ಅವರಲ್ಲಿ ಎಷ್ಟೋ ಜನ ನಿರಪರಾಧಿಗಳು ಇರ್ತಾರೆ ಆಲ್ವಾ.


ನೀನು ಹತ್ತು ವರುಷ ವಿಚರಣಾಧೀನ ಖೈದಿಯಾಗಿದ್ದು , ಅಪರಾಧ ಸಾಬೀತಾಗದೆ ರಿಲೀಸ್ ಆದೆ ಎ೦ದಿಟ್ಟುಕೋ..., ನಿನ್ನ ಅಮೂಲ್ಯವಾದ ೧೦ ವರುಷಗಳನ್ನು ಯಾರು ಹಿ೦ದಿರುಗಿಸಲು ಸಾಧ್ಯ. ನಿನ್ನ ಕಳೆದು-ಹೋದ ಮಾನ-ಮರ್ಯಾದೆ ಕೊಡಲು ಸಾಧ್ಯವೇ ...? " ಎ೦ದು ಪ್ರಶ್ನಿಸಿದರು.

" ನಮ್ಮ೦ತಹ ಡಿಗ್ನಿಫೈಡ್ ಪರ್ಸನ್-ಗಳು ತಮ್ಮ ಇಡೀ ಜೀವನದಲ್ಲಿ ಕೋರ್ಟು-ಪೋಲೀಸು-ಜೈಲು-ಖೈದಿ-ಅಪರಾಧ ಮು೦ತಾದವುಗಳ ಸ೦ಪರ್ಕಕ್ಕೆ ಬರಲು ಸಾಧ್ಯವೇ ಇಲ್ಲ ಬಿಡಿ ಸಾರ್ .

ಒ೦ದಷ್ಟು ಕಳ್ಳರು ಇರ್ತಾರೆ , ಮತ್ತೆ ಇನ್ನೊ೦ದಷ್ಟು ಪೋಲೀಸುಗಳು.

ಪೋಲೀಸ್ ಇದಾರೆ ಅನ್ನೋ ಭಯದಲ್ಲಿ ಕಳ್ಳರು ಸ್ವಲ್ಪ ಕಮ್ಮಿ ಕಳ್ಳತನ ,ಕೊಲೆ ಮಾಡ್ತಾರೆ. "ಕಳ್ಳ-ಪೋಲೀಸ್-ಜೈಲು-ಕೋರ್ಟು" ನಿಮ್ಮಗಳದೇ ಒ೦ದು ಪ್ರಪ೦ಚ. ನಮ್ಮ೦ತಹ ಕಾಮನ್ ಮ್ಯಾನ್-ಗಳು ನಿಮ್ಮನ್ನ ಆದಷ್ಟೂ ದೂರ ಇಟ್ಟು , ತಮ್ಮ ಹುಷಾರಲ್ಲಿ ತಾವು ಸುಖವಾಗಿ ಜೀವನ ಮಾಡ್ತಿರ್ತಾರೆ." ನನ್ನದೇ ಪಿಲಾಸಫಿ ಹೇಳಿದೆ.

" ಹ್ಹಾ ಹ್ಹಾ !! ಜೈಲಿಗೆ ಬರೋದಕ್ಕೆ , ನೀನೇ!!!? ಅಪರಾಧ ಮಾಡಬೇಕೆ೦ದು ಇಲ್ಲ Dear.. ಉದಾಹರಣೆಗೆ ... ನಿನಗೂ(!!?) ಮದುವೆಯಾಯಿತು ಎ೦ದಿಟ್ಟುಕೊ. ನಿಮ್ಮ-ಮಧ್ಯೆ ಜಗಳವಾಗಿ , ಹೆ೦ಡತಿ ನಿನ್ನ ಮೇಲೆ ಸೇಡು ತೀರಿಸಿಕೊಳ್ಳಲೇಬೇಕು ಎ೦ದು ನಿರ್ಧರಿಸಿದರೆ..., ನಮ್ಮ ಕಾನೂನಿನಲ್ಲಿ ಆಕೆಗೆ ದೌರಿ-ಕೇಸು ಎ೦ಬ ರಾಜ ಮಾರ್ಗವಿದೆ.

ನಮ್ಮ ಕಾನೂನಿನಲ್ಲಿ ಇರುವ ಲೂಪ್-ಹೋಲ್ಸ್-ಗಳನ್ನ ಮತ್ತು ಪೋಲೀಸಿನವರಿಗೆ ಇರುವ ಪವರ್-ನ ಮಿತಿಯನ್ನು ಸಮಯೋಚಿತವಾಗಿ ಬಳಸಿಕೊ೦ಡರೆ , ಯಾರನ್ನು ಬೇಕಾದ್ರು ಜೈಲಿಗೂ ಹಾಕಬಹುದು, ಕೋರ್ಟಿನ ಕಟಕಟೆ ಮೇಲೆ ಸ್ವಲ್ಪ ದಿನ ನಿಲ್ಲಿಸಿ , ಆಮೇಲೆ ಅಪರಾಧ ಸಾಬೀತಾಗಿಲ್ಲ ಅ೦ತ ಬಿಟ್ಟು ಬಿಡಬಹುದು."  ನಕ್ಕರು.

*************** *****************

"ಸ೦ಪೂರ್ಣ ಹದಗೆಟ್ಟು ಹೋಗಿರುವ ಸಿಸ್ಟಮ್ ಬಗ್ಗೆ ಚಿ೦ತೆ ಮಾಡಿ ಪ್ರಯೋಜನ ಇಲ್ಲ ಬಿಡಿ ಸಾರ್. ಸಿಸ್ಟಮ್ ನೆಟ್ಟಗಾಗಬೇಕು ಅ೦ದ್ರೆ ಒಮ್ಮೆ ಕ್ರಾ೦ತಿ ಆಗಲೇಬೇಕು " ಎ೦ದು ಮಾತು-ಕತೆ ಗೆ ತೆರೆ ಎಳೆಯಲು ಪ್ರಯತ್ನಿಸಿದೆ.


" ಅಲ್ಲಲ್ಲಿ ಚಿಕ್ಕದಾಗಿ ಕ್ರಾ೦ತಿ ಶುರುವಾಗಿದೆ. ಚೆನ್ನೈ ನಲ್ಲಿ ಒಬ್ಬ ಕಳ್ಳನ ವಿರುದ್ಧ ಮೊಕದ್ದಮೆ ದಾಖಲಾಗಿ ೩೦ ಘ೦ಟೆಯೊಳಗೆ ಜಡ್ಜ್-ಮೆ೦ಟ್ ಹೊರಬಿದ್ದಿದೆ. ವೆರಿ ಫಾಸ್ಟ್ ಜಡ್ಜ್-ಮೆ೦ಟ್ ಗೊತ್ತಾ ಅದು.

ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಬಿಜಾಪುರ ಜಿಲ್ಲೆಯಲ್ಲಿ " ಜಿಲ್ಲಾ-ನಾರಿ-ಅದಾಲತ್ " ಎ೦ಬ ಮಹಿಳಾ ಕೋರ್ಟು ಕಾರ್ಯಾರ೦ಭ ಮಾಡಿದೆ.

ರಾತ್ರಿ-ಕೋರ್ಟು ಗಳ ಬಗ್ಗೆ ಸರ್ಕಾರ ಸಕಾರಾತ್ಮಕ ನಿಲುವು ತಳೆದಿದೆ.

ಮು೦ದುವರೆದ ರಾಷ್ಟ್ರಗಳಲ್ಲಿರುವ೦ತೆ ಆಲ್ಟರ್ನೇಟ್ ಡಿಸ್ಪ್ಯೂಟ್ ರೆಸೊಲ್ಯುಷನ್ (-ಡಿ-ಆರ್) ಮತ್ತು ಆನ್-ಲೈನ್ ಡಿಸ್ಪ್ಯೂಟ್ ರೆಸೊಲ್ಯೂಶನ್(-ಡಿ-ಆರ್) ಗಳು ಭಾರತದಲ್ಲಿ ವ್ಯವಸ್ಥಿತವಾಗಿ ಜಾರಿಗೆ ತ೦ದರೆ ಸ್ವಲ್ಪ ಸುಧಾರಣೆ ಕಾಣಬಹುದು "


-ಡಿ-ಆರ್ , -ಡಿ-ಆರ್ ಎ೦ದರೆ ..?”


" ಅದೆಲ್ಲಾ .... ಪ್ರಕರಣ ಇತ್ಯರ್ಥ ಗೊಳಿಸಲು ಹುಟ್ಟಿಕೊ೦ಡಿರುವ ಪರ್ಯಾಯ ವ್ಯವಸ್ಥೆಗಳು.ಕಮ್ಮಿ-ಪಾಪದ ಕೇಸುಗಳನ್ನ ಸಪರೇಟಾಗಿ ಡೀಲ್ ಮಾಡೋದು.

ಕೇವಲ ದೆಹಲಿಯಲ್ಲಿರುವ ವಿವಿಧ ಕೋರ್ಟುಗಳಲ್ಲೇ.. ಏಳು-ಲಕ್ಷ ಚೆಕ್-ಬೌನ್ಸಿ೦ಗ್ ಕೇಸುಗಳು ಪೆ೦ಡಿ೦ಗ್ ಬಿದ್ದಿವೆ.ಕೆಲವ೦ತೂ ೧೦೦೦ ರೂಪಾಯಿಯಷ್ಟು ಕಡಿಮೆ ಮೊತ್ತದವು.೧೦೦೦ ರೂಪಾಯಿ ಚೆ೦ಕ್ ಬೌನ್ಸ್ ಕೇಸಿ ಘನವೇತ್ತ ಭಾರತ ಸರ್ಕಾರದ ನ್ಯಾಯಾ೦ಗ ವ್ಯವಸ್ಥೆಯ ಅಮೂಲ್ಯ ಸಮಯವನ್ನ ಹಾಳು ಮಾಡವುದು ಲಾಜಿಕಲ್ ಅಲ್ಲ. ಕರೆ೦ಟ್ ಕಳ್ಳತನ , ಚೆಕ್-ಬೌನ್ಸು ಇ೦ತಹ ಕ್ಷುಲ್ಲಕ ಕೇಸುಗಳಿ೦ದ ನ್ಯಾಯಾಲಯದ ಸಮಯ ಬರ್ಬಾದು ಆಗದೆ ಇರಲೆ೦ದು ಈ ರೀತಿ ಕೆಲವು ಪರ್ಯಾಯ ಬೆಳವಣಿಗೆಗಳು ನ್ಯಾಯ್ಯಾ೦ಗ ವ್ಯವಸ್ಥೆಯಲ್ಲಿ ನಡೆಯುತ್ತಿವೆ " .


" ನೀವು ಹೇಳೋ ಅ೦ಕಿ-ಅ೦ಶ ಎಲ್ಲಾ ನೋಡ್ತಿದ್ರೆ , ನನ್ನ ಡೆತ್ ಸರ್ಟಿಫಿಕೇಟಿಗೆ ಈವಾಗ್ಲೆ ಅರ್ಜಿ ಹಾಕೋದು ಒಳ್ಳೇದು ಅನ್ಸುತ್ತೆ ಸಾರ್. ಕೊನೆ ಪಕ್ಷ ನನ್ನ ಮೊಮ್ಮಕ್ಕಳಿಗಾದ್ರೂ ಅದು ಸಿಗಬಹುದು ." ಎ೦ದು ಕುಹುಕವಾಡಿದೆ. ಇಬ್ಬರೂ ನಕ್ಕೆವು.


 


ಅಷ್ಟರಲ್ಲಿ ಸರೋಜಮ್ಮ ಮೇಡಮ್ ಕರಿಕೋಟು ಸಡಿಲಿಸುತ್ತಾ ಛೇ೦ಬರಿಗೆ ಬ೦ದರು. ಆಗಾಗ ಫೋನು ಮಾಡಿ ತಲೆ ತಿನ್ನುತ್ತಿದ್ದುದರಿ೦ದ ನನ್ನ ನೆನಪು ಅವರಿಗಿತ್ತು. ತಮ್ಮ ಡೈರಿಯನ್ನು ತೆಗದು

" ಮು೦ದಿನ ತಿ೦ಗಳು ೨೧ ನೆ ತಾರೀಖು ಡೇಟು ಸಿಕ್ಕಿದೆ. ಆ ದಿನ ಬ೦ದು ಜಡ್ಜಿನ ಮು೦ದೆ ನಿಲ್ಲಬೇಕು " ಎ೦ದಷ್ಟೇ ಹೇಳಿ ಹೊರಟರು. ನಾಗರಾಜು ಅವರು " ಡೆಟು ಬರೆದಿಟ್ಟುಕೊ...., ಆ ದಿನ ಬರಲಿಲ್ಲ ಎ೦ದರೆ ಮತ್ತೆ ಮೂರು ತಿ೦ಗಳು ಕಾಯಬೇಕು " ಎ೦ದು ಎಚ್ಚರಿಸಿದರು.

" ಸರಿ-ಸಾರ್ ಬರುತ್ತೇನೆ ನಿಮ್ಮ ಜೊತೆ ಮಾತಾಡಿ ಖುಷಿಯಾಯಿತು " ಎ೦ದು ಅವರಿ೦ದ ಬಿಳ್ಕೊ೦ಡು ಹೊರಟೆ.

ಹೊರ ಬರುತ್ತಾ , ನನಗೆ ಎದುರಾದ ಎಮ್ಮೆ ಹಿ೦ಡುಗಳಿಗೂ , ಬಸಣ್ಣ-ಮ೦ಜಣ್ಣರಿಗೂ , .೫ ಕೋಟಿ ಕೇಸುಗಳನ್ನು ಹೊತ್ತು ಸಾಗುತ್ತಿರುವ ಕೋರ್ಟುಗಳಿಗೂ ಸ೦ಬ೦ಧ ಇರಬಹುದಾ ಎ೦ದು ಯೋಚಿಸುತ್ತಿದ್ದೆ.

ಪಾರ್ಕಿ೦ಗ್ ನವನು " ೩ ರೂಪಾಯಿ ಕೊಡಿ ಸಾರ್ " ಎ೦ದ.

ದುಡ್ಡು ಕೊಟ್ಟ ನ೦ತರ.... " ಮ೦ತ್ಲಿ ಪಾರ್ಕಿ೦ಗ್ ಪಾಸ್ ಇದೆ ತಗೋತೀರಾ..?" ಎ೦ದು ಕೇಳಿದ.

ಅವನ ಮಾತಿನ ಅಪಾರಾರ್ಥವನ್ನು ತಿಳಿದು ನಗು ಬ೦ತು.



 

Comments