ಈಗ ನಿಜ ಹೇಳಲೆ…?
ಬದುಕು ಮತ್ತು ಬರಹ ಎಷ್ಟು ಹತ್ತಿರ ಮತ್ತು ಎಷ್ಟು ದೂರ ಎಂಬ ಎಳೆಯ ಹಿಂದೆ ಒಂದು ಹುಡುಕಾಟ. ಪ್ರತಿಯೊಂದು ಜೀವಿಗಳಲ್ಲೂ ಭಾವನೆಗಳ ಪ್ರವಾಹ ಸದಾ ಹರಿಯುತ್ತಿರುತ್ತದೆ. ಇನ್ನು ಮನುಷ್ಯರಲ್ಲಂತೂ ಗಂಡು ಹೆಣ್ಣಿನ ಬೇಧಗಳಿಲ್ಲದೆ ಭಾವನೆಗಳದೇ ಸಾಮ್ರಾಜ್ಯ. ಹಿಂದೆ ಅಕ್ಷರ ಜ್ಞಾನವಿಲ್ಲದ ಜನರು ಜಾನಪದ ಹಾಡು ಕಥೆಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು. ಅಕ್ಷರ ಲಿಪಿಯ ಸಂಶೋಧನೆಯೊಂದಿಗೆ ಓದು ಬರಹ ಸುಲಭವಾಯಿತು. ಭಾವನೆಗಳ ವ್ಯಕ್ತಪಡಿಸುವಿಕೆ ಕಥೆ, ಕವಿತೆ, ಕಾದಂಬರಿ ಇತ್ಯಾದಿ ಅನೇಕ ರೂಪಗಳಲ್ಲಿ ಹೊರ ಹೊಮ್ಮಲ್ಪಟ್ಟಿತು. ಸೃಷ್ಟಿಯ ಎಲ್ಲವೂ ಬರವಣಿಗೆಯ ವಸ್ತುವಾಯಿತು.
ಅನುಭವಗಳು, ಅನಿಸಿಕೆಗಳು, ವಾಸ್ತವಗಳು, ಆದರ್ಶಗಳು, ಕಲ್ಪನೆಗಳು ಎಲ್ಲವೂ ಬರಹರೂಪಕ್ಕಿಳಿಯಿತು ಮತ್ತು ಅದರಲ್ಲಿ ಅನುಸರಿಸಿದ್ದ, ಅನುಸರಿಸುತ್ತಿರುವ, ಅನುಸರಿಸಬೇಕಾದ ಎಲ್ಲಾ ಜೀವನ ವಿಧಾನಗಳು ಒಳಗೊಂಡಿರುತ್ತಿದ್ದವು. ಅದನ್ನು ಬರೆಯುತ್ತಿದ್ದವರು ತೀರಾ ಕಡಿಮೆ ಮತ್ತು ನುಡಿದಂತೆ ನಡೆಯುವ ಜನರೇ ಹೆಚ್ಚಿದ್ದರು. ಬದುಕು ಬರಹ ಸಾಮಾನ್ಯವಾಗಿ ಒಂದೇ ಆಗಿತ್ತು ಮತ್ತು ಬಹುತೇಕ ವಾಸ್ತವವು ಆಗಿದ್ದಿತು. ಆದರೆ ಆಧುನಿಕ ಶಿಕ್ಷಣ ಪದ್ಧತಿ ಪ್ರಾರಂಭವಾದ ಮೇಲೆ ಬದುಕು ಬರಹದ ಅಂತರ ಜಾಸ್ತಿಯಾಯಿತು. ಬದುಕಿದಂತೆ ಬರೆಯಬೇಕಿಲ್ಲ ಬರೆದಂತೆ ಬದುಕಬೇಕಿಲ್ಲ ಎಂಬ ಆತ್ಮವಂಚಕ ಮನಸ್ಸು ಬಹುತೇಕರಲ್ಲಿ ಮೂಡಿತು. ಬರಹಗಳ ದಂಧೆ ಶುರುವಾಯಿತು. ಅಕ್ಷರದ ಅಹಂಕಾರ ಹೆಚ್ಚಾಯಿತು.. ಹೊಟ್ಟೆ ಪಾಡನ್ನೂ ಮೀರಿ ಬರಹ ಆತ್ಮತೃಪ್ತಿಗೆ, ಕ್ರಾಂತಿಗೆ, ಬದಲಾವಣೆಗೆ ನಾಂದಿ ಹಾಡಿತು.
"ಖಡ್ಗಕ್ಕಿಂತ ಲೇಖನಿ ಹರಿತ " ಎಂಬಂತಾದರೂ, ಮುಂದೆ ಅಧಿಕಾರ, ಅಂತಸ್ತು, ಭಟ್ಟಂಗಿತನ, ದುಷ್ಟತನ, ಚಾಕಚಕ್ಯತೆಯಿಂದ ಸಮಾಜವನ್ನು ಒಡೆಯುವ ಸಾಧನವೂ ಆಯಿತು. ಇನ್ನು ಇತ್ತೀಚಿನ ಆಧುನಿಕ ಮಾಧ್ಯಮಗಳಂತೂ ಮನಸ್ಸಗಳನ್ನು ಒಡೆದು ಚೂರು ಚೂರು ಮಾಡಿ ಭಸ್ಮಾಸುರನಂತೆ ಜನರ ಭಾವನೆಗಳನ್ನೇ ನಿಯಂತ್ರಿಸುವ, ಪ್ರಚೋದಿಸುವ ಕೊನೆಗೆ ತಮ್ಮ ನಾಶಕ್ಕೆ ತಾವೇ ಕಾರಣವಾಗುವಂತೆ ಬೆಳೆದು ನಿಂತಿದೆ. ಬದುಕು ಮತ್ತು ಬರಹಗಳು ಬೇರೆ ಬೇರೆಯಾಗಿ ಬಹಳ ಕಾಲವಾಗಿದೆ. ಅದನ್ನು ಸಮರ್ಥಿಸಲೂ ವಿಕೃತ ವಿಚಾರಧಾರೆಳು ಸೃಷ್ಟಿಯಾಗಿವೆ. ಇದು ತೀರಾ ಅಪಾಯಕಾರಿ ಬೆಳವಣಿಗೆ. ಕೆಲವು ಉದಾಹರಣೆಗಳೊಂದಿಗೆ ಆತ್ಮಾವಲೋಕನ..
ಶಾಲೆಯಲ್ಲಿದ್ದಾಗ ಅಮ್ಮನ ಪ್ರೀತಿಯ ಬಗ್ಗೆ ಬರೆದೆ, ಅಲ್ಲಿ ನನಗೆ ಮೊದಲ ಬಹುಮಾನ ಕೊಡಲಾಯಿತು. ಕಾಲೇಜಿನಲ್ಲಿ ಯುವಶಕ್ತಿಯ ಬಗ್ಗೆ ಭಾಷಣ ಮಾಡಿದೆ, ಆಗ ನನ್ನನ್ನು ಗೌರವಿಸಲಾಯಿತು. ಮುಂದೆ ಪ್ರೀತಿ - ಪ್ರೇಮ ಕುರಿತು ಪತ್ರಿಕೆಗಳಲ್ಲಿ ವರ್ಣಿಸಿದೆ, ನನ್ನನ್ನು ಕವಿ ಎಂದು ಗುರುತಿಸಲಾಯಿತು. ಬಡತನ, ದಾರಿದ್ರ್ಯವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದೆ, ನಮ್ಮ ಜಿಲ್ಲಾ ಸಾಹಿತ್ಯ ಪ್ರಶಸ್ತಿ ನೀಡಲಾಯಿತು. ವ್ಯವಸ್ಥೆಯ ವಿರುದ್ಧ ಆಕ್ರೋಶದಿಂದ ಬರೆದೆ, ಸಮಾಜ ನನ್ನನ್ನು ದೊಡ್ಡ ಲೇಖಕನೆಂದು ಗುರುತಿಸಿತು. ದೇಶಭಕ್ತಿಯ ಬಗ್ಗೆ ಹೆಚ್ಚೆಚ್ಚು ಮಾತನಾಡತೊಡಗಿದೆ, ಸಾಹಿತಿ ಎಂದು ಭಾವಿಸಿ ಸರ್ಕಾರದಿಂದ ಪ್ರಶಸ್ತಿ ಘೋಷಿಸಲಾಯಿತು. ಮಾನವೀಯತೆಯ ಬಗ್ಗೆ ಇನ್ನಷ್ಟು, ಮತ್ತಷ್ಟು ಚರ್ಚಿಸತೊಡಗಿದೆ, ಸರ್ಕಾರ ಒಂದು ಅಕಾಡೆಮಿಗೆ ಅಧ್ಯಕ್ಷನನ್ನಾಗಿ ಮಾಡಿತು. ಭಾಷೆಯ ಬಗ್ಗೆ ಅಭಿಮಾನ ತೋರಿ ಹಾಡುಗಳನ್ನು ರಚಿಸಿದೆ, ಅನೇಕ ಸಂಘ ಸಂಸ್ಥೆಗಳಿಂದ ಹಣ, ಬಿರುದು, ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಆಕರ್ಷಕ ಕಥೆಗಳನ್ನು ಕಲ್ಪಿಸಿಕೊಂಡು ಸೃಷ್ಟಿಸತೊಡಗಿದೆ, ರಾಷ್ಟ್ರೀಯ ಮಟ್ಟದ ಬರಹಗಾರನೆಂದು ಬಿಂಬಿಸಲಾಯಿತು. ಬೃಹತ್ ಕಾದಂಬರಿಗಳನ್ನು ರಚಿಸತೊಡಗಿದೆ, ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಬದುಕಿನ ನಶ್ವರತೆಯ ಬಗ್ಗೆ ಪುಂಖಾನುಪುಂಖವಾಗಿ ಪ್ರವಚನ ನೀಡಿದೆ, ನನ್ನನ್ನು ವಿಧಾನ ಪರಿಷತ್/ರಾಜ್ಯಸಭೆಯ ಸದಸ್ಯನನ್ನಾಗಿ ಆಯ್ಕೆ ಮಾಡಲಾಯಿತು.
ವಾವ್, ಎಂತಹ ಅದೃಷ್ಟವಂತ ಎಂದು ಭಾವಿಸಿದಿರೇ..? ಆದರೆ ಈಗ ನಿಜ ಹೇಳಲೆ…? ಇದಕ್ಕಾಗಿ ನಾನು ಎಲ್ಲಾ ರೀತಿಯ ಲಾಬಿಗಳನ್ನ ಮಾಡಿದೆ, ನಾನು ಬರೆದ ಯಾವ ಸಮಸ್ಯೆಗಳಿಗೂ ಪರಿಹಾರವೇನು ಸಿಗಲಿಲ್ಲ, ವಾಸ್ತವವಾಗಿ ಮತ್ತಷ್ಟು ಹೆಚ್ಚಾಯಿತು. ಆದರೆ ನನ್ನ ಬದುಕು ಸಮೃದ್ಧವಾಯಿತು. ನನ್ನ ಜೀವನ ಸಮಸ್ಯೆಗಳಿಂದ ಮುಕ್ತವಾಯಿತು. ನಗರದಲ್ಲಿ ಒಂದು ಬೃಹತ್ ಬಂಗಲೆ ಕಟ್ಟಿಸಿದೆ. ಇಬ್ಬರು ಮಕ್ಕಳಿಗೂ ವಿದೇಶಗಳಲ್ಲಿ ನೆಲೆ ಕಲ್ಪಿಸಿದೆ. ವಿದೇಶಿ ಕಾರು, ಸರ್ಕಾರದ ಉಚಿತ ಸೇವೆಗಳು ದೊರೆತವು. ಕೇವಲ ನನ್ನ ಪೆನ್ನು, ಪೇಪರ್, ಬುದ್ಧಿ, ಚಾಕಚಕ್ಯತೆ ಇದನ್ನು ನೀಡಿತು. ಆದರೆ,
ಇದಕ್ಕಾಗಿ ಆತ್ಮಸಾಕ್ಷಿಯನ್ನು ಸಾವಿರಾರು ಬಾರಿ ಇರಿದಿದ್ದೇನೆ ಮತ್ತು ಪ್ರತಿ ಬರಹದಲ್ಲೂ ಕೊಲ್ಲುತ್ತಿದ್ದೇನೆ (ಈ ಬರಹ ಬಿಟ್ಟು) ನಾನೊಂದು ಜೀವಂತ ಶವ ಎಂದು ನನ್ನ ನೆರಳು ಸದಾ ನನ್ನನ್ನು ಕಾಡುತ್ತಿದೆ. ಹೊರಬರಲಾರದೆ ಪರಿತಪಿಸುತ್ತಿದ್ದೇನೆ. ಕೊನೆಯ ಅನುಭವದ ನನ್ನ ಸಲಹೆ ಎಂದರೆ, ಆತ್ಮಸಾಕ್ಷಿಗೆ ಮೋಸ ಮಾಡದಿರಿ. ಅದು ನಿಮ್ಮ ಮನದ ಕನ್ನಡಿ, ಉಳಿದದ್ದೆಲ್ಲಾ ಒಂದು ಭ್ರಮೆ. ಧನ್ಯವಾದಗಳು. ಬದುಕು ಮತ್ತು ಬರಹ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವ ಇಂದಿನ ಸಮಯದಲ್ಲಿ ಅತ್ಯಂತ ತಾಳ್ಮೆಯಿಂದ ನಾವೆಲ್ಲರೂ ಅದನ್ನು ಸಾಧ್ಯವಾದ ಮಟ್ಟಿಗೆ ಹತ್ತಿರ ತರಲು ಪ್ರಯತ್ನಿಸಬೇಕಿದೆ, ನಮ್ಮ ಬರಹ ನಮ್ಮ ಬದುಕನ್ನು ಪ್ರತಿಬಿಂಬಿಸುವುದು ಬಹಳ ಕಷ್ಟವಾದರು ಆದಷ್ಟು ಹತ್ತಿರ ಇರಬೇಕಿದೆ. ವಾಸ್ತವದಿಂದ ದೂರವಾದ ಯಾವ ಬರಹಗಳೂ ದೀರ್ಘಕಾಲ ಉಳಿಯುವುದಿಲ್ಲ ಮತ್ತು ಆತ್ಮವಂಚಕ ಮನಸ್ಸುಗಳು ಸಮಾಜ ಕಂಟಕವೇ. ಪ್ರೀತಿ, ಪ್ರೇಮ, ಕುಟುಂಬ, ದೇಶ, ಧರ್ಮ, ರಾಜಕೀಯ ಇತ್ಯಾದಿ ಯಾವ ವಿಷಯವೇ ಆಗಿರಲಿ ಬರಹ ಮತ್ತು ಬದುಕು ಹತ್ತಿರವಾಗಿರಲಿ. ರಮ್ಯತೆ, ಮನರಂಜನೆ , ಕಾಲ್ಪನಿಕತೆಗಳು ದಾರಿ ತಪ್ಪಿಸದಿರಲಿ. ಇದಕ್ಕಾಗಿ ನಾವೆಲ್ಲಾ ಪ್ರಯತ್ನಿಸೋಣ.
-ವಿವೇಕಾನಂದ. ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ