ಈಸೋಪನ ಎರಡು ನೀತಿಕತೆಗಳು.

ಈಸೋಪನ ಎರಡು ನೀತಿಕತೆಗಳು.

ಬರಹ

ಕತ್ತೆಯೂ ಅದರ ನೆರಳೂ


ಒಬ್ಬ ಪ್ರಯಾಣಿಕ ತನ್ನ ದೂರ ಪ್ರಯಾಣಕ್ಕಾಗಿ ಒಂದು ಕತ್ತೆಯನ್ನು ಬಾಡಿಗೆ ಪಡೆದ.  ಸುಡುಹಗಲು, ಸೂರ್ಯ ತನ್ನೆಲ್ಲ ಪ್ರತಾಪದಿಂದ ಉರಿಯುತ್ತಿದ್ದ. ಹಾದಿಹೋಕ ದಣಿವಾರಿಸಿಕೊಳ್ಳಲು ಸ್ವಲ್ಪಕಾಲ ಪ್ರಯಾಣ ನಿಲ್ಲಿಸಿ ಕತ್ತೆಯ ನೆರಳನ್ನು ಆಶ್ರಯಿಸಿದ. ಅವನಿಗೂ ಕತ್ತೆಯ ಒಡೆಯನಿಗೂ ಇದರಿಂದ ತಕರಾರು ಶುರುವಾಯಿತು. ಕತ್ತೆಯ ನೆರಳು ಒಬ್ಬನಿಗೆ ಮಾತ್ರ ಆಗುವಷ್ಟಿತ್ತು. ಕತ್ತೆಯ ಮಾಲೀಕ ಮತ್ತು ಬಾಡಿಗೆದಾರ ಇಬ್ಬರೂ ನೆರಳಿಗಾಗಿ ಕಿತ್ತಾಡತೊಡಗಿದರು. ಮಾಲೀಕನೆಂದ "ನಾನು ನಿನಗೆ ಕತ್ತೆಯನ್ನಷ್ಟೆ ಬಾಡಿಗೆ ಕೊಟ್ಟಿರುವೆ, ನೆರಳನ್ನಲ್ಲ!!!" ಇದಕ್ಕೆ ಬಾಡಿಗೆದಾರನೆಂದ "ಕತ್ತೆಯನ್ನು ಬಾಡಿಗೆಗೆ ಪಡೆದಾಗ ನೆರಳೂ ಬಾಡಿಗೆಗೆ ಸಿಕ್ಕಿದೆ" ಹೀಗೇ ಜಗಳ ಕೈಗೆ ಕೈ ಸೇರುವ ಹಂತಕ್ಕೆ ಹೋಯಿತು. ಇಬ್ಬರೂ ಜಗಳವಾಡುತ್ತಿದ್ದಾಗ ಕತ್ತೆ ಪರಾರಿಯಾಯಿತು.


ನೆರಳಿಗಾಗಿ ಕಿತ್ತಾಡುವಾಗ ಸತ್ತ್ವ ಕೈಬಿಟ್ಟುಹೋಗುತ್ತದೆ.


 


 *************************


 


ಕತ್ತೆಯೂ ಅದರ ಮಾಲೀಕರೂ.


ಗಿಡಮೂಲಿಕೆಗಳ ಮಾರಾಟಗಾರನ ಕತ್ತೆಯೊಂದು, ತನ್ನ ಮಾಲೀಕನ ಜೀತಕ್ಕೆ ಬೇಸತ್ತು ಜ್ಯೂಪಿಟರ್ ದೇವತೆಗೆ ಅಹವಾಲು ಸಲ್ಲಿಸಿತು " ಇವನು ನನ್ನಿಂದ ಸಾಯಬೀಳ ಕೆಲಸ ತೆಗೆದುಕೊಳ್ಳುತ್ತಾನೆ. ತಿನ್ನಲು ಸಾಕಷ್ಟು ಕೊಡುವುದಿಲ್ಲ. ಇವನಿಂದ ಬಿಡಿಸಿ ನನಗೆ ಮತ್ತೊಬ್ಬ ಮಾಲೀಕನನ್ನು ಹುಡುಕಿಕೊಡು." ತನ್ನ ಬೇಡಿಕೆಯಿಂದ ಕತ್ತೆಗೆ ಪಶ್ಚಾತ್ತಾಪವಾದೀತೆಂದು ಎಚ್ಚರಿಸಿ ದೇವರು ಅದನ್ನು ಒಬ್ಬ ಹೆಂಚು, ಇಟ್ಟಿಗೆ ತಯಾರಕನ ಕೈಕೆಳಗೆ ದುಡಿಯಹಚ್ಚಿದ. ಮೊದಲಿಗಿಂತ ಹೆಚ್ಚಿನ ಹೇರನ್ನು ಹೊರಬೇಕಾಗಿಬಂದ ಕತ್ತೆ ಬಹಳ ಬೇಗನೆ ಮತ್ತೆ ಮಾಲೀಕನನ್ನು ಬದಲಿಸಲು ಮೊರೆಯಿಟ್ಟಿತು. ಮತ್ತೊಮ್ಮೆ ಹಿಂದಿನಂತೆ ಎಚ್ಚರಿಸಿ ದೇವರು ಕತ್ತೆಯನ್ನು ಒಬ್ಬ ಚರ್ಮ ಹದಮಾಡುವವನ ಬಳಿಯಲ್ಲಿ ಬಿಟ್ಟ. ತೀರ ಕೆಟ್ಟ ಮಾಲೀಕನ ಕೈಸೇರಿದ ಕತ್ತೆ " ಮೊದಲ ಮಾಲೀಕನಿಂದ ಹೊಟ್ಟೆಗಿಲ್ಲದೆ ಸೊರಗುವುದೇ ಚೆನ್ನಿತ್ತು, ಅಥವಾ ಎರಡನೆಯವನಿಗಾಗಿ ದುಡಿಯುವುದೇ ಮಿಗಿಲಾಗಿತ್ತು. ಇವನೋ, ನಾನು ಸತ್ತರೂ ಬಿಡ. ನನ್ನ ಚರ್ಮ ಸುಲಿದು ಬಳಸಿಕೊಳ್ಳುತ್ತಾನೆ" ಎಂದೆಲ್ಲ ನರಳಿತು.


ತಾನಿರುವ ಕಡೆಯೇ ಕೊರಗುವವನಿಗೆ ಬೇರೊಬ್ಬ ಮಾಲೀಕನಿಂದ ಸುಖವಿಲ್ಲ.