ಈಸೋಪನ ಹನಿಗತೆಗಳು

ಈಸೋಪನ ಹನಿಗತೆಗಳು

ಕ್ರಿಸ್ತ ಪೂರ್ವ ೬೨೦ ರಿಂದ ೫೬೦ರ ಸಮಯದಲ್ಲಿ ಪ್ರಾಚೀನ ಗ್ರೀಸ್ ದೇಶದಲ್ಲಿ ಬದುಕಿದ್ದ ಓರ್ವ ಗುಲಾಮನೇ ಈಸೋಪ. ಈತನು ರಚಿಸಿದ ಅಸಂಖ್ಯಾತ ಕಥೆಗಳು ‘ಈಸೋಪನ ನೀತಿ ಕಥೆಗಳು' ಎಂದು ಪ್ರಸಿದ್ಧಿಯಾಗಿದೆ. ಭಾರತದಲ್ಲಿ ಪ್ರಚಲಿತದಲ್ಲಿರುವ ಬುದ್ಧನ ಜಾತಕ ಕಥೆಗಳು ಮತ್ತು ಪಂಚತಂತ್ರ ಕಥೆಗಳಿಗೆ ಈಸೋಪನ ಕತೆಗಳ ಜೊತೆ ಬಹಳಷ್ಟು ಸಾಮ್ಯತೆ ಕಂಡು ಬರುತ್ತದೆ. ಈ ಕಥೆಗಳು ನೀತಿಯುಕ್ತವಾಗಿದ್ದು, ಮಕ್ಕಳಷ್ಟೇ ಅಲ್ಲ ಹಿರಿಯರೂ ಓದಿ ಅರ್ಥೈಸಿ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾಗಿದೆ. ಅಂತಹ ಕೆಲವು ಕಥೆಗಳನ್ನು ಸಂಗ್ರಹಿಸಿ ಇಲ್ಲಿ ಹಂಚಿಕೊಳ್ಳಲಾಗಿದೆ. ಓದಿ…

ತೋಳ ಮತ್ತು ನರಿ

ಒಂದು ಕಾಡಿನಲ್ಲಿ ಒಂದು ಗುಂಪು ತೋಳಗಳು  ವಾಸವಾಗಿದ್ದವು. ಆ ತೋಳಗಳ ಗುಂಪಿನಲ್ಲಿ ಒಂದು ದೊಡ್ಡದಾದ ಮತ್ತು ಶಕ್ತಿಯುತವಾದ ತೋಳವೊಂದು ಜನಿಸಿತು. ಈ ತೋಳ ಶಕ್ತಿ, ಗಾತ್ರ ಮತ್ತು ಚಾಕಚಕ್ಯತೆಯಲ್ಲಿ ತನ್ನ ಜೊತೆಗಿನ ಎಲ್ಲ ತೋಳಗಳನ್ನೂ ಮೀರಿಸುತ್ತಿತ್ತು.

ಇದರಿಂದಾಗಿ ಆ ಗುಂಪಿನ ತೋಳಗಳೆಲ್ಲಾ ಸೇರಿ ಒಟ್ಟಾಗಿ ಯಾವ ವಿರೋಧವೂ ಇಲ್ಲದೆ ಈ ದೊಡ್ಡ ತೋಳಕ್ಕೆ ‘ಸಿಂಹ' ಎಂದು ಹೆಸರು ಕೊಡಲು ಒಪ್ಪಿದವು. ಈ ದೊಡ್ಡ ತೋಳಕ್ಕೆ ದೊಡ್ದ ದೇಹವೇನೂ ಇತ್ತಾದರೂ ಅದರ ಜ್ಞಾನ ದೊಡ್ಡದಾಗಿರಲಿಲ್ಲ. ತನ್ನ ಗುಂಪಿನ ತೋಳಗಳು ತನಗೆ ನೀಡಿದ ‘ಸಿಂಹ' ಎಂಬ ಬಿರುದನ್ನು ಗಂಭೀರವಾಗಿ ಪರಿಗಣಿಸಿತು. ಧಡಿಯ ತೋಳ, ತಾನು ಸಿಂಹದಷ್ಟು ಶಕ್ತಿವಂತನಾದ ಮೇಲೆ ಈ ದುರ್ಬಲ ತೋಳಗಳ ಗುಂಪಿನಲ್ಲಿ ಏಕೆ ಇರಬೇಕು ಎಂದು ಯೋಚಿಸಿದ ತೋಳ ತನ್ನ ತೋಳ ಜನಾಂಗವನ್ನೇ ಬಿಟ್ಟು ಸಿಂಹದ ಗುಂಪಿಗೆ ಹೋಗಿ ಸೇರಿಕೊಂಡಿತು.

ಇದನ್ನು ನೋಡಿದ ಒಂದು ಮುದಿ ನರಿ ‘ನಾನು ಇಂತಹ ನಗೆ ಪಾಟಲಿನ ಕೆಲಸವನ್ನು ಎಂದೂ ಮಾಡಲಾರೆ. ಒಣ ಹೆಮ್ಮೆ ಮತ್ತು ದುರಹಂಕಾರದಿಂದ ಎಂಥ ಮೂರ್ಖ ಕೆಲಸ ಮಾಡಿದ್ದೀಯಾ, ತೋಳಗಳ ಗುಂಪಿನಲ್ಲಿ ನಿಜವಾಗಿಯೂ ಸಿಂಹದಂತೆಯೇ ಕಾಣಿಸುತ್ತಿದ್ದೆ. ಆದರೆ ಸಿಂಹಗಳ ಗುಂಪಿನಲ್ಲಿ ನೀನು ಕೇವಲ ತೋಳ ಅಷ್ಟೇ.' ಎಂದು ಹೇಳಿತು.

ನೀತಿ: ತನಗಿಂತ ದುರ್ಬಲರ ಮಧ್ಯೆ ಒಬ್ಬ ಶಕ್ತಿವಂತನಾಗಬಲ್ಲನೇ ಹೊರತು ಪ್ರಬಲ ಮಧ್ಯೆ ಅಲ್ಲ.

***

ಹದ್ದುಗಳು ಮತ್ತು ಹಂಸಗಳು

ಬಹಳ ಹಿಂದೆ ಹದ್ದುಗಳು ಹಂಸಗಳಂತೆಯೇ ಹಾಡುವ ಸಾಮರ್ಥ್ಯವನ್ನು ಹೊಂದಿದ್ದವು. ಹೀಗಿರಬೇಕಾದರೆ ಒಮ್ಮೆ ಕುದುರೆಗಳು ಕೆನೆಯುವ ಸದ್ದು ಕೇಳಿ ಅದರಿಂದ ಬಹಳ ಆಕರ್ಷಿತವಾದುವು. ಹಾಗೆಯೇ ಹದ್ದುಗಳು ಕುದುರೆಗಳು ಕೆನೆಯುವುದನ್ನು ಅನುಸರಿಸಲು ಪ್ರಾರಂಭಿಸಿದವು. ಕೆನೆಯುವ ಪ್ರಯತ್ನದಲ್ಲಿ ಹದ್ದುಗಳು ಹಾಡುವುದು ಹೇಗೆಂಬುದನ್ನೇ ಮರೆತು ಬಿಟ್ಟವು.

ನೀತಿ: ಯಾವುದು ಕಾಲ್ಪನಿಕ ಲಾಭದ ಇಚ್ಛೆಯಿಂದ ನಾವು ನಮ್ಮಲ್ಲಿರುವ ಅದ್ಭುತವಾದದ್ದನ್ನು ಕಳೆದುಕೊಳ್ಳುತ್ತೇವೆ.

***

ತಾಯಿ ಮತ್ತು ತೋಳ

ಹಸಿವಿನಿಂದ ಕಂಗೆಟ್ಟ ತೋಳವೊಂದು ಬೆಳಗಿನ ಹೊತ್ತು ಆಹಾರಕ್ಕಾಗಿ ಅಲೆದಾಡುತ್ತಿತ್ತು. ಕಾಡಿನ ಅಂಚಿನಲ್ಲಿ ಕಟ್ಟಿದ್ದ ಗುಡಿಸಲಿನ ಬಾಗಿಲ ಬಳಿ ತೋಳ ನಡೆದುಕೊಂಡು ಹೋಗುವಾಗ ಒಬ್ಬ ತಾಯಿ ತನ್ನ ಮಗುವಿಗೆ ‘ಸುಮ್ಮನಿರು, ನೀನು ಅಳು ನಿಲ್ಲಿಸದಿದ್ದರೆ ನಿನ್ನನ್ನು ಕಿಟಕಿಯಿಂದ ಆಚೆಗೆ ಎಸೆದು ಬಿಡುವೆ. ಆಗ ತೋಳ ನಿನ್ನನ್ನು ತಿನ್ನುತ್ತದೆ' ಎಂದು ಹೇಳಿದಳು.

ಈ ಮಾತನ್ನು ಕೇಳಿಸಿಕೊಂಡ ತೋಳ ಮಗುವನ್ನು ತಿನ್ನುವ ಆಸೆಯಿಂದ ದಿನವಿಡೀ ಬಾಗಿಲ ಬಳಿ ಕಾಯುತ್ತಾ ಕುಳಿತುಕೊಂಡಿತು. ಸಂಜೆಯಲ್ಲಿ ಅದೇ ಹೆಂಗಸು ತನ್ನ ಮಗುವನ್ನು ಮುದ್ದಿಸುತ್ತಾ ‘ ನನ್ನ ಪುಟ್ಟ, ನೀನು ನನ್ನ ಮಾತು ಕೇಳಿ ಅಳು ನಿಲ್ಲಿಸಿ ಮಲಗಿದಿಯಲ್ಲಾ, ನಿನ್ನನ್ನು ತೋಳಕ್ಕೆ ಕೊಡುವುದಿಲ್ಲ. ಅದೇನಾದರೂ ಇಲ್ಲಿಗೆ ಬಂದರೆ ಅದನ್ನು ಕೋಲಿನಿಂದ ಹೊಡೆದು ಬಿಡುವೆ' ಎಂದು ಹೇಳಿದಳು. ಈ ಮಾತುಗಳನ್ನು ಕೇಳಿದ ತೋಳ ಹಸಿದು ಚಳಿಯಿಂದ ನಡುಗುತ್ತಾ ತನ್ನ ಮನೆಯ ಕಡೆಗೆ ಪೆಚ್ಚುಮೋರೆ ಹಾಕಿಕೊಂಡು ಹೊರಟಿತು. ಮನೆಯನ್ನು ತಲುಪಿದಾಗ ಈ ತೋಳದ ಹೆಂಡತಿ ಅದರ ಬೇಸರವನ್ನು ನೋಡಿಕೊಂಡು ‘ಏಕೆ ಎಲ್ಲೂ ಆಹಾರ ಸಿಗಲಿಲ್ಲವೇ?’ ಎಂದು ಕೇಳಿತು. ಅದಕ್ಕೆ ಉತ್ತರಿಸುತ್ತಾ ತೋಳ ಹೇಳಿತು ‘ ಹೌದು, ಒಂದು ಹೆಂಗಸಿನ ಮಾತು ನಂಬಿ ನನಗೆ ಈ ಗತಿ ಬಂತು' ಎಂದು ಹೇಳಿತು.

ನೀತಿ: ಬೇರೆಯವರ ಮಾತಿಗಿಂತ ಸ್ವಂತ ಕಾರ್ಯದ ಬಗ್ಗೆ ವಿಶ್ವಾಸ ಇರಬೇಕು.

***

ಕಾಗೆ ಮತ್ತು ಹಾವು

ಬಹಳ ಹಸಿವಾಗಿದ್ದ ಒಂದು ಕಾಗೆ ಹುತ್ತದ ಬಳಿ ಬಿಸಿಲು ಕಾಯಿಸುತ್ತಾ ಮಲಗಿದ್ದ ಹಾವೊಂದನ್ನು ನೋಡಿತು. ಹಾವನ್ನು ಕೊಂದು ತಿಂದು ಹಸಿವನ್ನು ನೀಗಿಸಿಕೊಳ್ಳುವ ಉದ್ದೇಶದಿಂದ ವೇಗವಾಗಿ ಆತುರದಿಂದ ಹಾವಿನತ್ತ ಧಾವಿಸಿತು. ಕೆಳಗೆ ಬಂದು ಆತುರದಿಂದ ಅದನ್ನು ಹಿಡಿಯಿತು. ಹಾವು ತನ್ನ ದೇಹವನ್ನು ಹೊರಳಿಸಿ ಪ್ರಾಣಾಂತಿಕ ಗಾಯವಾಗುವಂತೆ ಕಾಗೆಯನ್ನು ಕಚ್ಚಿತು. ಕಾಗೆ ಸಾವಿನ ನೋವಿನಿಂದ ಅರಚುತ್ತಾ ‘ಅಯ್ಯೋ ದುರಾದೃಷ್ಟವೇ ! ಯಾವುದು ನನ್ನ ಜೀವನವನ್ನು ತಣಿಸಿ ಸಂತೋಷವನ್ನು ಕೊಡುತ್ತದೆ ಎಂದು ಬಯಸಿದೆನೋ ಅದೇ ನನ್ನ ನಾಶಕ್ಕೆ ಕಾರಣವಾಯಿತಲ್ಲಾ ‘ ಎಂದು ಗೋಳಿಟ್ಟಿತು. 

ನೀತಿ: ಆತುರದ ತಪ್ಪು ನಿರ್ಣಯ ವಿನಾಶಕ್ಕೆ ದಾರಿಯಾಗುತ್ತದೆ.

***

(ಆಧಾರ)

ಚಿತ್ರ ಕೃಪೆ: ಇಂಟರ್ನೆಟ್ ತಾಣ