ಈ ಕುರಿಗಾರರು ‘ಕುರಿಗಳಲ್ಲ’! ಮೊಬೈಲ್ ಸಾಕ್ಷರರು!

ಈ ಕುರಿಗಾರರು ‘ಕುರಿಗಳಲ್ಲ’! ಮೊಬೈಲ್ ಸಾಕ್ಷರರು!

ಬರಹ

‘ಬ್ಯಾ..ಬ್ಯಾ..ಹೈಯ್..ಉಷ್...ಶೂ. ಹುರ್ರ್..ಡುರ್ರ್..ಚ್..ಕ್ಲಿಚ್..ಏ..ಶ್..!’

"ಸಾಂಗಾವೋ..ತುಮಿ ಸಾಂಗಾ..ಕಾಯಮಣೂನ ಸಾಂಗಾ..?"

ರಸ್ತೆ ಬದಿಗಿನ ಧೂಳುಮಯ, ಕಲ್ಲುಮಣ್ಣಿನ ಕಾಲು ದಾರಿ ಹಾಗು ಮುಳ್ಳು ಬೇಲಿಗಳ ಸಾಂಗತ್ಯದಲ್ಲಿ ತನ್ನ ನೂರಾರು ಕುರಿಗಳನ್ನು ಮೇಯಿಸುತ್ತ ಹೊರಟ ಯುವ ಕುರಿಗಾರ ಮಹಾಂತೇಶ ಕುರುಬಗಟ್ಟಿಯ ‘ಮೊಬೈಲ್ ನಲ್ಲಿಯ ಮಾತುಗಳಿವು!’

ಇತ್ತ ಮೊಬೈಲ್ ನಲ್ಲಿ ಮಾತು, ಅತ್ತ ಕಾಯಕ ನಿಷ್ಠೆ. ಲೋಕದ ಪರಿವೆಯೇ ಇಲ್ಲ ಈ ಶ್ರೀಸಾಮಾನ್ಯನಿಗೆ. ತಲೆಯ ಮೇಲೆ ಅಡ್ಡಲಾಗಿ ತೊಟ್ಟ ಬಿಸಿಲು ರಕ್ಷಕ ಗಾಂಧಿ ಟೊಪ್ಪಿಗೆ, ತೀರ ಮಾಸಿದ, ಬಣ್ಣದ ಗುರುತೇ ಸಿಗದ ಮೂರು ಬುಡ್ಡಿಯ ಅಂಗಿ, ಖಾಕಿ ಬಣ್ಣದ ಅರ್ಧ ಡೊಗಳಾ ಚೊಣ್ಣ. ಕುರಿಗಳಿಗೆ ಕಂಟಿಯ ಮೇವು ಕತ್ತರಿಸಲು ಹೆಗಲ ಮೇಲೆ ಕೊಡಲಿ, ಕಂಕುಳಲ್ಲಿ ವ್ಯಾನಿಟಿ ಬ್ಯಾಗ್ ತರಹದ ಚಂಚಿ, ಒಂದೇ ಕಿವಿಯಲ್ಲಿ ರಿಂಗ್; ಇನ್ನೊಂದು ಕಿವಿಯ ಮೇಲೆ ಮೊಬೈಲ್!

ಮೊಬೈಲ್ ಅರ್ಥಾತ್ ‘ಜಂಗಮವಾಣಿ’ ಸರ್ವಾಂತಯಾಮಿ (ಒಮ್ನಿ ಪ್ರೆಸೆಂಟ್) ಗಾಳಿಯಂತೆ ಎಲ್ಲ ಕಡೆಗೂ ವ್ಯಾಪಿಸಿದ್ದು, ನಮಗೆ ತಿಳಿದಿತ್ತು. ಆದರೆ ಸರ್ವಶಕ್ತ (ಒಮ್ನಿ ಪೋಟೆಂಟ್) ಆಗಿ ಶ್ರೀಸಾಮಾನ್ಯನ ಬದುಕಿನಲ್ಲಿಯೂ ಹಾಸುಹೊಕ್ಕಾಗಿರುವುದು, ಬಹುಶ: ಕಂಡು ಬಂದಿರಲಿಲ್ಲ. ಇದನ್ನು ಒಂದು ಧನಾತ್ಮಕ ಬೆಳವಣಿಗೆ ಎಂದು ಪರಿಭಾವಿಸಲು ಅಡ್ಡಿಇಲ್ಲ.

ಯಾವತ್ತೂ ಮತ್ತು ಎಂದಿನಿಂದಲೂ ತಮ್ಮ ಸಾವಿರಾರು ಕುರಿಗಳೊಂದಿಗೆ ಕಾಲು ಸಂಚಾರಿಗಳಾಗಿ ಅಲೆಮಾರಿ (ಮೊಬೈಲ್) ಜೀವನ ನಡೆಸುತ್ತಿರುವ ಕುರುಬರೂ ಸಹ ತಕ್ಕ ಮಟ್ಟಿಗೆ ತಂತ್ರಜ್ನಾನ ಅರಿತುಕೊಂಡು ಮೊಬೈಲ್ ಬಳಸಲು ಆರಂಭಿಸಿದ್ದಾರೆ. ಒಟ್ಟಾರೆ ಈ ಆಧುನಿಕ ಮಹಾಂತೇಷನನ್ನು ಹಿಂಬಾಲಿಸಿತ್ತ ನಾಲ್ಕಾರು ಕುಟುಂಬಗಳಿರುವ ಕುರುಬರ ದೊಡ್ಡಿಗೆ ಹೊಕ್ಕರೆ ಅಲ್ಲಿ ಎಲ್ಲರೂ ‘ಮೊಬೈಲ್’ ಸಾಕ್ಷರರೆ!

"ಹಿರ್ಯಾರ..ನಮಗ ಮೊಬಿಲ್ ನಿಂದ ಸಾಕಷ್ಟು ಫಾಯದೇ ಆಗೇತ್ರಿ..ಗಾಂವಠಾಣೆದಾಗ (ಊರಾಗ) ಆಚಿತ, ಉಚಿತ ಆದರ..ಪಾವಣ್ಯಾರ ಆಸರಕಿ, ಬ್ಯಾಸರಕಿ, ಅನುವು, ಆಪತ್ತಿಗೆ ಸದಾಕಾಲ ಸಂಚಾರದಲ್ಲಿರೋ ನಮಗ ಚಿಕ್ಕೋಡಿ ತಾಲ್ಲೂಕು ಆಡಿ ಗ್ರಾಮದ ವಿಠ್ಠಲ ಬೀರಪ್ಪ ಪಡವಾಳೆ ತನ್ನ ನಾಲ್ಕು ಬುಡ್ಡಿ ಅಂಗಿ (ಬನಿಯನ್) ಅವಿಭಾಜ್ಯ ಅಂಗವಾಗಿರುವ ಮೊಬೈಲ್ ತೋರಿಸಿ, ಎಲೆ-ಅಡಿಕೆ (ಕವಳ) ತಿಂದು ರಂಗೇರಿದ್ದ ತುಟಿಗಳಿಂದ ನಕ್ಕ.

ಅತ್ಯಂತ ಸಂಪ್ರದಾಯಬದ್ಧ ಹಾಗು ರೂಢಿಗತವಾದ ಅನುಭವ ಮತ್ತು ಅನುಭಾವದ ಹಿನ್ನೆಲೆಯಲ್ಲಿ ಬದುಕುವ ಕುರುಬರು ಆಧುನಿಕತೆಗೆ ಹಾಗು ಹೊಸತನಕ್ಕೆ ಸಹಜವಾಗಿ ತೆರೆದುಕೊಳ್ಳುವ ಜನರಲ್ಲ. ಆದರೆ ಇಲ್ಲಿ ಗತಿ, ವಿಗತಿ ಕೂಡಿಕೊಂಡು ಹೊಸ ಸಂಗತಿಗೆ ಕಾರಣವಾದ ಪ್ರಕ್ರಿಯೆಯನ್ನು ನಾವು ಕಾಣಬಹುದಾಗಿದೆ. ಹೇಗೆಂದರೆ ಇವರಿಂದ ಕುರಿ ಖರೀದಿಸುವ ಕಲಾಲರು ತಮ್ಮ ಅನುಕೂಲಕ್ಕಾಗಿ ಒತ್ತಾಯಪೂರ್ವಕವಾಗಿ ಮೊಬೈಲ್ ಕೊಡಿಸಿಕೊಟ್ಟಿದ್ದಾಗಿ ಹೇಳಲು ಅವರು ಹಿಂಜರಿಯಲಿಲ್ಲ.

ಮೂಲತಹ ಚಿಕ್ಕೋಡಿ ತಾಲೂಕಿನ ಆಡಿ, ಪಟ್ಟಣಕೋಡಿ, ಹೊನ್ನೂರಿ ಹಾಗು ಸದಲಗಾ ತಾಲೂಕಿನ ಮಿಣಕನಟ್ಟಿ, ಬಾಳಕ್ಕಿ, ಚಂದಡ್ಡಿ ಮೊದಲಾದ ಗ್ರಾಮದವರಾದ ಉಣ್ಣೆ ಕಂಕಣ ಹಾಲುಮತದ ಕುರಿಗಾರರು ಇವರು. ಮರಾಠಿ ಮಾಧ್ಯಮದಲ್ಲಿ ಗಂಡು ಮಕ್ಕಳು ೭ ರಿಂದ ೮ನೇಯ ತರಗತಿಯ ವರೆಗೆ, ಹೆಣ್ಣು ಮಕ್ಕಳು ೩ ರಿಂದ ೪ನೇಯ ತರಗತಿಯ ವರೆಗೆ ಮಾತ್ರ ಶಾಲೆ ಓದಿದವರು. ಅವಿಭಕ್ತ ಕುಟುಂಬ ಪದ್ಧತಿ ಪಾಲಿಸಿಕೊಂಡು ಬಂದವರು. ಝಂಡೆ ಕುರುಬ, ಢಂಗೆ ಕುರುಬ, ಬಿಳಿ ಉಣ್ಣೆ ಹತ್ತಿ ಕಂಕಣ ಕುರುಬ ಎಂದು ತಮ್ಮಲ್ಲೇ ಒಳ ಪಂಗಡ ಹೊಂದಿ, ಬೀರ ದೇವರು, ವಿಠ್ಠಲ ರುಕ್ಮಾಯಿ, ಮಹಾಲಿಂಗರಾಯ, ಮಾಯಮ್ಮ, ಬಾಳೊಮಾಮಾ ಮುಂತಾದ ದೇವರುಗಳನ್ನು ಶೃದ್ಧೆ, ಭಕ್ತಿಯಿಂದ ಆರಾಧಿಸುವವರು.

ಧೋತರ, ಮೂರು-ನಾಲ್ಕು ಬುಡ್ಡಿಗಳ ಅಂಗಿ, ಟೊಪಗಿ ಅಥವಾ ಪಟಗಾ, ಅಂಗವಸ್ತ್ರವಾಗಿ ಕಂಬಳಿ ಹೊದ್ದು ಸಾಂಪ್ರದಾಯಿಕ ದಿರಿಸಿನಲ್ಲಿದ್ದ ೭೦ರ ಆಸುಪಾಸಿನ ‘ದಡ್ಡಿ ಹಿರ್ಯಾ’ ಬೀರಪ್ಪ ಪಡುವಾಳೆ ಅವರನ್ನು ಮಾತನಾಡಿಸಿದಾಗ.."ನಾವು ಕಾಲು ಸಂಚಾರ ನಂಬಿದವರು. ಒಂದು ಠಿಕಾಣಿ ಅಂತ ಇಲ್ಲ. ಕುರಿಗೆ ಮೇವು, ಕುಡ್ಯಾಕ ನೀರು, ನಮಗ ಉಳಕೊಳ್ಳಾಕ ಬಯಲು ಸಿಕ್ಕಲ್ಲಿ ಝೋಪಡಿ ಹಾಕ್ತೇವಿ. ಇಂಥಾ ವೇಳ್ಯೆದಾಗ ಯಾವುದ ಮಾಹಿತಿ ಮುಜಕೂರ ಇದ್ರು ಸಿಗಾಣಿಲ್ರಿ. ಹಂಗಾಗಿ ಮಕ್ಲು ನನಗ ಈ ಮೊಬಿಲ್ ತಗದು ಕೊಟ್ಟಾರ.ಊರಾಗ ಹೋದಾಗ, ಸಮೀಪದ ಚಹಾದ ಅಂಗಡ್ಯಾಗ ಅಥವಾ ಪಾನ ಬೀಡ ಅಂಗಡ್ಯಾಗ, ಗುರುತು ಮಾಡಿಕೊಡ ವಾಚ್ ಮನ್ ಮನಿಯೊಳಗ ಮೊಬಿಲ್ ಚಾರ್ಜ್ ಮಾಡಕೋತೇವ್ರಿ. ಒಮ್ಮೆ ಮಾಡಿದ್ರ ೩ ದಿನಾ ಕೆಲಸಾ ಕೊಡತೈತಿ.."

ಒಂದು ಕ್ಷಣ ಟೆಸ್ಟ್ ಮಾಡೋಣ ಅಂತ ರಿಂಗ್ ಕೊಟ್ರೆ ಠೀವಿಯಿಂದ ಎತ್ತಿದ ಬೀರಪ್ಪ "ಸಾಂಗಾವೋ ಕಾಯ ಮಣತ್ಯಾತ್" ಎಂದು ಪ್ರಬುದ್ಧತೆ ಪ್ರದರ್ಶಿಸಿಯೇ ಬಿಟ್ಟರು. ಸದ್ಯ ನಮ್ಮ ಕುರುಬ ಬಾಂಧವರು ಮುಖ್ಯವಾಹಿನಿಗೆ ಯಾವುದೇ ಆಧುನಿಕತೆಯ ವ್ಯಸನಗಳಿಗೆ ಬಲಿಯಾಗದೇ ಅವಶ್ಯಕತೆ ಅನುಸಾರ ಜೋಡಣೆಯಾಗುತ್ತಿರುವುದು ಧನಾತ್ಮಕ ಬೆಳವಣಿಗೆಯೇ.