ಈ ಭೂಮಿಗೆ ಎಲ್ಲರೂ ವಲಸಿಗರೇ...

ಈ ಭೂಮಿಗೆ ಎಲ್ಲರೂ ವಲಸಿಗರೇ...

ಅಮೆರಿಕಾದ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ ಬೇರೆ ದೇಶದ ಜನರನ್ನು ಆಚೆಗೆ ಅಟ್ಟುತ್ತಿದ್ದಾರೆ. ಈ ಪ್ರಕ್ರಿಯೆಯ ಮೊದಲ ಹಂತವಾಗಿ ಭಾರತದ 104 ಜನರನ್ನು ಬಂಧಿಸಿ ಕೈಗೆ ಕೋಳ ತೊಡಿಸಿ ಅವರದೇ ಸೈನಿಕ ವಿಮಾನದಲ್ಲಿ  ಕರೆತಂದು ಭಾರತಕ್ಕೆ ಬಿಡಲಾಯಿತು. ಇದನ್ನು ನೋಡಿದಾಗ ಒಮ್ಮೆ ಕರುಳು ಚುರ್ ಎಂದಿತು. ನಿಜ, ಅಕ್ರಮ ಎಂಬ ಪದವೇ ಬಹುತೇಕ ಒಂದು ಅಪರಾಧ ಅಥವಾ ಮಾಡಬಾರದ ಕೆಲಸ ಅಥವಾ ಕಾನೂನಿನ ಉಲ್ಲಂಘನೆ ಅಥವಾ ಶಿಕ್ಷೆಗೆ ಗುರಿಯಾಗಬಹುದಾದ ತಪ್ಪು ಅಥವಾ ಸಕ್ರಮವಲ್ಲದ್ದು‌. ಅದರಲ್ಲಿ ಎರಡು ಮಾತಿಲ್ಲ. ಆದರೆ ಅಕ್ರಮ ವಲಸೆಗಳಿಗೆ ನಾನಾ ಕಾರಣಗಳಿವೆ ಮತ್ತು ನಾನಾ ಉದ್ದೇಶಗಳಿವೆ,  ವಿವಿಧ ಮುಖಗಳೂ ಇದೆ. ಅದನ್ನು ಬಹು ಆಯಾಮದಲ್ಲಿ ನೋಡಬೇಕಾಗುತ್ತದೆ. 

ಬಹುತೇಕ ಎಲ್ಲಾ ಜೀವರಾಶಿಗಳು ಸೃಷ್ಟಿಯ ಮೂಲದಿಂದಲೂ ತಮಗೆ ಅನುಕೂಲಕರವಾದ ವಾತಾವರಣಕ್ಕೆ ಹೊಂದಿಕೊಳ್ಳುತ್ತಾ ವಲಸೆಗಳನ್ನು ನಿರಂತರವಾಗಿ ಮಾಡುತ್ತಿವೆ. ಮನುಷ್ಯ ಮಾತ್ರ ಅಲ್ಲ ಪ್ರಾಣಿ-ಪಕ್ಷಿಗಳು ಸಹ ವಲಸೆಯನ್ನು ಮಾಡುತ್ತಿರುತ್ತವೆ. ಆ ಪ್ರಕ್ರಿಯೆಯಲ್ಲಿ ಘರ್ಷಣೆಗಳು ಸಹ ನಿರಂತರವಾಗಿ ನಡೆಯುತ್ತದೆ. ಮೂಲತಃ ಮನುಷ್ಯನ ನಾಗರಿಕತೆಗಳು ನದಿ ತೀರಗಳಲ್ಲಿ ಬೆಳವಣಿಗೆ ಹೊಂದಿವೆ. ಮುಂದೆ ಜನಸಂಖ್ಯೆ ಹೆಚ್ಚಳ, ಅವಶ್ಯಕತೆ, ಅನಿವಾರ್ಯತೆ, ಪ್ರಾಕೃತಿಕ ವಿಕೋಪ, ಮಹತ್ವಾಕಾಂಕ್ಷೆ, ದುರಾಸೆ, ತಪ್ಪು ನಿರ್ಧಾರಗಳ ಕಾರಣದಿಂದ ಅದು ಬೆಳೆಯುತ್ತಾ, ಹಳ್ಳಿ, ಗ್ರಾಮ, ಪಟ್ಟಣ, ನಗರ, ಮೆಟ್ರೋಪಾಲಿಟನ್ ಸಿಟಿಗಳಾಗಿ ಅಭಿವೃದ್ಧಿ ಹೊಂದಿದವು. ನದಿ ಸಮುದ್ರ ಬೆಟ್ಟ ಗುಡ್ಡ ಕಾಡು ಮೇಡು ಮರುಭೂಮಿ ಬಯಲು ಪ್ರದೇಶ ಎಲ್ಲವನ್ನೂ ದಾಟಿ ಎಲ್ಲೆಂದರಲ್ಲಿ ವಾಸಿಸಲು ಸ್ಥಳಾವಕಾಶ ಸೃಷ್ಟಿಸಿಕೊಂಡ. ಭವಿಷ್ಯದಲ್ಲಿ ಚಂದ್ರನಲ್ಲಿಯೂ ವಾಸಿಸುವ ಯೋಜನೆ ರೂಪಿಸುತ್ತಿರುವ ಮಾಹಿತಿ ಇದೆ.

ಈ ಭೂಮಿ ಯಾರ ವೈಯಕ್ತಿಕ ಆಸ್ತಿಯೂ ಅಲ್ಲ. ಮೂಲತಃ ಯಾರಿಗೂ ಸೇರಿದ್ದಲ್ಲ. ಆದರೆ ಸಾಕಷ್ಟು ಹೋರಾಟ, ಹಾರಾಟ, ರಕ್ತಪಾತದ ನಂತರ ದೇಶಗಳಾಗಿ ವಿಭಜನೆ ಹೊಂದಿ ಒಂದು ರೂಪಕ್ಕೆ ಬಂದಿದೆ. ಕೃಷಿ, ಕೃಷಿ ಆಧಾರಿತ ಪಶುಸಂಗೋಪನೆ ಮುಂತಾದ ಕೆಲಸಗಳಲ್ಲಿ, ಕಡಿಮೆ ಬೇಡಿಕೆ ಮತ್ತು ಅವಶ್ಯಕತೆಗೆ ಅನುಗುಣವಾಗಿ ಜೀವನ ಕ್ರಮ ಸಾಮಾನ್ಯ ಹಳ್ಳಿಯ ಜೀವನಶೈಲಿಯಾಗಿತ್ತು. ನಂತರದಲ್ಲಿ ಜನಸಂಖ್ಯೆ ಸ್ಪೋಟ, ಕೃಷಿ ರಂಗದ ಸವಾಲುಗಳು, ನಗರಗಳ ಬೆಳವಣಿಗೆ ಮತ್ತು ಆಕರ್ಷಣೆ, ಶೈಕ್ಷಣಿಕ ಕ್ರಾಂತಿ ಎಲ್ಲವೂ ಸೇರಿ ಒಂದು ಇಡೀ ಜನಾಂಗ ನಗರಗಳತ್ತ ಮುಖ ಮಾಡಿತು.

ಈ ನಾಗರಿಕ ಮನುಷ್ಯ  ಭೂಮಿಯನ್ನು ಸದ್ಯಕ್ಕೆ ಏಳು ಖಂಡಗಳಾಗಿ, 200 ಕ್ಕೂ ಹೆಚ್ಚು ದೇಶಗಳಾಗಿ, ಇನ್ನೆಷ್ಟೋ ರಾಜ್ಯಗಳಾಗಿ, ಮತ್ತೆಷ್ಟೋ ಜಿಲ್ಲೆ, ಗ್ರಾಮಗಳಾಗಿ ಕೊನೆಗೆ 800 ಕೋಟಿ ಜನಸಂಖ್ಯೆಯವರೆಗೂ ಬೆಳೆಸಿದ್ದಾನೆ. ನಾಗರಿಕತೆಯ ಬೆಳವಣಿಗೆಯಲ್ಲಿ ಮುಕ್ತವಾಗಿದ್ದ ಮನುಷ್ಯ ನಂತರದಲ್ಲಿ ಅನೇಕ ಕೋಟೆಗಳೊಳಗೆ ಬಂದಿಯಾಗಿದ್ದಾನೆ. ಆತನ ಆಸೆ ಆಕಾಂಕ್ಷೆಗಳು ಮಿತಿಮೀರಿವೆ. ಇಂತಹ ಸಂದರ್ಭದಲ್ಲಿ ಈ ವಲಸೆ ಎಂಬುದು ಆಧುನಿಕ ಕಾಲದಲ್ಲಿ ಒಂದು ಸಮಸ್ಯೆಯಾಗಿ ಪರಿಣಮಿಸಿದೆ. ಈ ವಲಸೆಗೆ ಕೇವಲ ಹೊಟ್ಟೆಪಾಡಿನ ಅನಿವಾರ್ಯತೆ ಮಾತ್ರವಲ್ಲ ಯುದ್ಧ, ಪ್ರಾಕೃತಿಕ ವಿಕೋಪ, ಭಯೋತ್ಪಾದನೆ, ದುರಾಸೆ, ಸಾಧಿಸುವ ಛಲ, ಅಸಹಾಯಕತೆ, ಅವಕಾಶ ವಂಚನೆ ಹೀಗೆ ನಾನಾ ಕಾರಣಗಳಿಂದ ವಲಸೆ  ನಡೆಯುತ್ತದೆ. ಅದು ವೀಸಾ ಎಂಬ ಪ್ರಕ್ರಿಯೆ ಮೂಲಕ ನಡೆದರೆ ಅದು ಅಧಿಕೃತವಾಗಿರುತ್ತದೆ. ಅದು ಸಾಧ್ಯವಿಲ್ಲ, ಅಸಾಧ್ಯ ಅಥವಾ ನಮಗೆ ಕೈಗೆಟಕುವುದಿಲ್ಲ ಎನಿಸಿದಾಗ ಈ ಅಕ್ರಮ ವಲಸೆಗಳು ನಡೆಯುತ್ತದೆ. ಅದಕ್ಕೆ ಬೃಹತ್ ವಂಚನೆಯ ಅನಧಿಕೃತ ಜಾಲಗಳೇ ಇದೆ. 

ವಲಸೆಗಳಿಂದ ಅನೇಕ ಸಮಸ್ಯೆಗಳು ವಲಸೆ ಹೋಗಿರುವವರಿಗೂ ಮತ್ತು ಅವರು ನೆಲೆಸಿರುವ ದೇಶಗಳಿಗೂ ಸೃಷ್ಟಿಯಾಗುತ್ತದೆ. ಒಂದು ದೇಶ ತನ್ನ ಜನಸಂಖ್ಯೆಗೆ ಅನುಗುಣವಾಗಿ ಯೋಜನೆಗಳನ್ನು ರೂಪಿಸುತ್ತಿರುತ್ತದೆ. ಆಗ ಲೆಕ್ಕಕ್ಕೇ ಸಿಗದ ಈ ಅಕ್ರಮ ವಲಸೆಗಾರರಿಂದ ಸಮಸ್ಯೆಗಳು ಹೆಚ್ಚಾಗುತ್ತದೆ. ಅದನ್ನು ಹೇಗೋ ನಿಭಾಯಿಸಬಹುದು. ಆದರೆ ಅತಿ ಮುಖ್ಯವಾಗಿ ನಿರುದ್ಯೋಗ ಮತ್ತು ಅಪರಾಧಗಳು ಹೆಚ್ಚಾಗುತ್ತವೆ ಎಂದು ಎಲ್ಲಾ ದೇಶಗಳು ಭಾವಿಸುತ್ತವೆ. ಇತ್ತೀಚಿನ ದಿನಗಳಲ್ಲಿ ವಲಸಿಗರು  ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಮತ್ತು ಮೂಲನಿವಾಸಿಗಳ ಉದ್ಯೋಗಗಳನ್ನು ಕಸಿಯುತ್ತಿರುವುದರಿಂದ ಅಮೆರಿಕಾದ ಈಗಿನ ಅಧ್ಯಕ್ಷರು ಅಮೆರಿಕ ಮೊದಲು ಎಂಬ ನೀತಿಯ ಅನ್ವಯ ಅತ್ಯಂತ ಕಠಿಣ ಕ್ರಮ ಕೈಗೊಂಡಿದ್ದಾರೆ. ಭಾರತದಲ್ಲಿ ಕೂಡ ಅಕ್ರಮ ವಲಸಿಗರನ್ನು ಹೊರಹಾಕಲು ಸಾಕಷ್ಟು ಒತ್ತಡ ಇದೆ. ಇದು ಒಂದು ರೀತಿಯ ವಾಸ್ತವಿಕ ದೃಷ್ಟಿಕೋನ.

ಹಾಗೆಯೇ ಅಕ್ರಮ ವಲಸಿಗರು ಮನುಷ್ಯ ಜೀವಿಗಳು. ಅಪರಾಧಗಳನ್ನು ಹೊರತುಪಡಿಸಿ ಹೊಟ್ಟೆಪಾಡಿಗಾಗಿ, ಸಾಧನೆಗಾಗಿ, ಉತ್ತಮ ಬದುಕಿಗಾಗಿ ಅಥವಾ ಪ್ರಾಣ ರಕ್ಷಣೆಗಾಗಿ ತಾವಿರುವ ಸ್ಥಳದಿಂದ ಇನ್ನೊಂದು ರಕ್ಷಣಾತ್ಮಕ ಸ್ಥಳಕ್ಕೆ ವಲಸೆ ಹೋಗುವುದು ದೊಡ್ಡ ತಪ್ಪೇನು ಅಲ್ಲ. ಅವರನ್ನು ಮಾನವಿಯ ದೃಷ್ಟಿಯಿಂದ ನೋಡಬೇಕಾಗಿದೆ. ಒಂದು ವೇಳೆ ಅವರು ಆ ದೇಶದಲ್ಲಿ ಅಪರಾಧಗಳನ್ನು ಮಾಡಿದಲ್ಲಿ ಅದಕ್ಕೆ ಕಠಿಣ ಶಿಕ್ಷೆ ವಿಧಿಸುವುದನ್ನು ಒಪ್ಪಬಹುದು. ಆದರೆ ಉದ್ಯೋಗಕ್ಕಾಗಿಯೋ, ಬೇರೆ ಉದ್ದೇಶದಿಂದಲೋ ಬಂದಾಗ ಅವರ ಬಗ್ಗೆ ಒಂದಷ್ಟು ಮಾನವೀಯ ಕಾಳಜಿ ತೋರಿಸಬೇಕಾಗಿರುವುದು ಎಲ್ಲರ ಕರ್ತವ್ಯ. 

ಹಿಂದಿನಿಂದಲೂ ಎಲ್ಲಾ ದೇಶಗಳಲ್ಲೂ ಸಹ ವಲಸಿಗರನ್ನು ಅನಿವಾರ್ಯವಾಗಿ ಸೇರಿಸಿಕೊಂಡು ಅವರಿಗೆ ಹೊಸ ಬದುಕು ನಿರ್ಮಿಸಿಕೊಳ್ಳಲು ಅವಕಾಶ ಕೊಟ್ಟಿದೆ. ಅದರಲ್ಲೂ ಅಮೆರಿಕಾದಂತಹ ದೇಶ ಅಕ್ರಮ ವಲಸಿಗರನ್ನು ಈ ರೀತಿ ಅತ್ಯಂತ ಕಠಿಣವಾಗಿ ಹೊರಹಾಕುವ ಅವಶ್ಯಕತೆ ಇರಲಿಲ್ಲ. ಇನ್ನೊಂದಿಷ್ಟು ಸೌಜನ್ಯ ಸಹಿತವಾಗಿ ಅಪರಾಧಿ ಅಲ್ಲದವರನ್ನು ಅವರವರ ದೇಶಕ್ಕೆ ಕಳಿಸಿ ಕೊಡುವ ವ್ಯವಸ್ಥೆ ಮಾಡಬಹುದಿತ್ತು. ಒಂದು ಶ್ರೀಮಂತ ದೇಶ, ವಿಶ್ವದಲ್ಲಿ ಸ್ವಾತಂತ್ರ್ಯ ದೇವತೆಯ ಬೃಹತ್ ಪ್ರತಿಮೆಯನ್ನು ಹೊಂದಿರುವ ಅಮೆರಿಕಾದ ಇಷ್ಟೊಂದು ಸಣ್ಣತನದ ಪ್ರದರ್ಶನ ಆ ದೇಶದ ಘನತೆಗೆ ಕುಂದುಂಟಾಗುತ್ತದೆ. ಸಾಮಾನ್ಯ ಜನರ ತಪ್ಪುಗಳಿಗೆ ವಿಶ್ವದ ದೊಡ್ಡಣ್ಣನ ಇಷ್ಟು ಕಠಿಣ ಶಿಕ್ಷೆ ವಿಧಿಸಿರುವುದು ನೋವುಂಟು ಮಾಡಿದೆ.

ಕಷ್ಟ ಕಾಲದಲ್ಲಿ ಮನುಷ್ಯನ ನಿಜ ರೂಪ ಬಯಲಾಗುತ್ತದೆ. ಈ ಬದಲಾವಣೆ ಮಾನವೀಯ ಅಂತಃಕರಣವನ್ನು ಹೊಮ್ಮಿಸಬೇಕೆ ಹೊರತು ರಾಕ್ಷಸ ಗುಣವನ್ನಲ್ಲ. ಅಕ್ರಮ ವಲಸೆ ತಪ್ಪು. ದಯವಿಟ್ಟು ಸಕ್ರಮ ಬದುಕು ನಮ್ಮದಾಗಲಿ. ಗಂಜಿ ಕುಡಿದಾದರೂ ನಮ್ಮ ಸ್ವಾಭಿಮಾನ ಕಾಪಾಡಿಕೊಳ್ಳೋಣ.  ಹಾಗೆಯೇ ಅನಿವಾರ್ಯವಾದ ಮನುಷ್ಯನ ಸಣ್ಣ ತಪ್ಪುಗಳಿಗೆ ದುರಹಂಕಾರದ ಅಮಾನವೀಯ ಶಿಕ್ಷೆ ನೀಡುತ್ತಿರುವ ಅಮೆರಿಕದ ನೀತಿಯನ್ನು ಆತ್ಮಸಾಕ್ಷಿಗೆ ಅನುಗುಣವಾಗಿ ಖಂಡಿಸೋಣ. ಅಂತಿಮವಾಗಿ ಈ ಜಗತ್ತಿನಲ್ಲಿ ಮಾನವಿಯತೆ ಮತ್ತು ಜೀವಪರ ನಿಲುವುಗಳು ಸದಾ ಜಾರಿಯಲ್ಲಿರಲಿ ಎಂದು ಆಶಿಸುತ್ತಾ...

-ವಿವೇಕಾನಂದ. ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ