ಈ ಸುಂದರ ಬದುಕಿಗೆ- ನೀ ಕೊಟ್ಟಿದ್ದೇ ಸಾಕೆನಗೆ...

ಈ ಸುಂದರ ಬದುಕಿಗೆ- ನೀ ಕೊಟ್ಟಿದ್ದೇ ಸಾಕೆನಗೆ...

ಕವನ

ಈ ಸುಂದರ ಭುವಿಯ ಮೇಲೆ ಬದುಕೆಂದು ಈ ಜೀವಕೆ ತಂದುಬಿಟ್ಟೆ,

ತಾಯಿಯ ಎದೆ ಹಾಲು ಕುಡಿದ ನೀನು ಒಳ್ಳೆಯ ಮನುಜನಾಗಿ ಬಾಳೆಂದು ಹರಸಿದೆ...

ಬದುಕಿನ ಪಯಣದಲ್ಲಿ

ಬದುಕೆಂದು ಮುಂದೆ ನಡೆದು ಸಾಗಲು ಕಾಲುಗಳನ್ನು ಕೊಟ್ಟೆ,

ಅವುಗಳನ್ನು ಬಲು ಇಷ್ಟಪಟ್ಟೆ,

ನೋಡಲು ಕಣ್ಣುಗಳನ್ನು ಕೊಟ್ಟೆ,

ಕೇಳಿಸಿಕೊಳ್ಳಲು ಕಿವಿಗಳನ್ನು ಕೊಟ್ಟೆ,

ರುಚಿಯ ಅರಿಯಲು ನಾಲಿಗೆಯನಿಟ್ಟೆ,

ದೇಹವ ರಕ್ಷಿಸಲು ಚರ್ಮದ ಹೊದಿಕೆಯನಿಟ್ಟೆ,

ಹೃದಯ ಬಡಿತ ಸರಾಗವಾಗಿಸಲು 

ಮೂಗನು ಇಟ್ಟೆ...

ಮಾತನಾಡಲು ಬಾಯಿಯನ್ನು ಕೊಟ್ಟೆ,

ಸುಂದರ ಯೋಚನೆ,ಕ್ರಿಯಾತ್ಮಕ ಚಿಂತನೆಗಳಿಗೆ ಮಿದುಳನ್ನು ಕೊಟ್ಟೆ,

ಭಾವನೆಗಳನ್ನು ಬಚ್ಚಿಡಲು ಮನಸು ಕೊಟ್ಟೆ,

ಶ್ರೀಮಂತಿಕೆಗೆ ಪ್ರೀತಿಸುವ ಪುಟ್ಟ ಹೃದಯವನ್ನು ಮುಡಿಪಾಗಿಇಟ್ಟೆ...

 

ಭಗವಂತ ಏನಿದು ನಿನ್ನ ಸೃಷ್ಟಿಯ ಲೀಲೆ,

ಈ ಸುಂದರ ಭುವಿಯಲ್ಲಿ ನನಗೂ ಕೊಟ್ಟಿರುವೆ ನೆಲೆ,

ನಿನ್ನ ಋಣವ ಹೇಗೇ ತೀರಿಸಲೇ...?

 

ದೇಹದ ದಾಹವ ತೀರಿಸಲು ನೀರು,

ಹೊಟ್ಟೆಯ ಹಸಿವ ನೀಗಿಸಲು ಅನ್ನ-ಆಹಾರ,

ಉಡಲು ಉಡುಪು,

ಸದೃಢ ದೇಹಕ್ಕೆ ಆರೋಗ್ಯ ಭಾಗ್ಯವ ಕೊಟ್ಟು ಏನೀ ಹೊಳಪು ನೀಡಿದೆ ಈ ಪುಟ್ಟ ಜೀವಕೆ...

 

ದುಡಿಯಲು ಕೈ-ಕಾಲುಗಳನ್ನಿಡಿದೆ,

ನನ್ನ ಕೈಗಳೇ ನನ್ನ ಬೆನ್ನುತಟ್ಟಿ ಶಹಬ್ಬಾಷ್! ಮುಂದೆ ನಡಿ ಎಂದವು,

ಆ ಕೈಗಳೇ ದುಡಿದು ನನ್ನ ಬಾಯಿಗೆ ಅನ್ನವ ತಿನಿಸುತ್ತಿವೆ,

ಮಿತಿಮೀರಿದ ಆಸೆಗಳಿವೆ,

ಕನಸುಗಳ ಸಾಗರೋಪಾದಿಯಲ್ಲಿವೆ,

ಬದುಕಿನಲ್ಲಿ ಗುರಿಯಿದ್ದರೂ ಬದುಕುವುದೇ ಗುರಿಯಾಗಿದೆ...

ನೀ ಎಲ್ಲವ ಕೊಟ್ಟಿರುವೆ,

ಈ ಜೀವಕೆ ಕೊಟ್ಟಿದ್ದೆ ಸಾಕೆನಗೆ,

ನಿನಗೆಲ್ಲವೂ ಗೊತ್ತಿದೆ ನಮಗೇನುಬೇಕೆಂದು,

ಎಲ್ಲವನು ಕೊಟ್ಟಿರುವೆ ಈ ಭುವಿಯಲ್ಲಿ ನೆಮ್ಮದಿಯಾಗಿ ಬದುಕೆಂದು,

ಕೊಟ್ಟಿದ್ದು ಸಾಕಾಗದೇ ಕಂಡಿದ್ದೆಲ್ಲಾ ಬೇಕೆಂದು ನಾ ಹೊರಟಿರುವೆ, 

ಆದರೆ ಕೆಲವೊಂದು ಸಂದರ್ಭ, ಕೆಲವರ ಪರಿಸ್ಥಿತಿ, 

ಕಣ್ಮುಂದೆ ಕಾಣುವ ತೀರಾ ಘೋರ ಘಟನೆಗಳು, 

ಕಿವಿಯಿಂದ ಕೇಳುವ ಸನ್ನಿವೇಶಗಳು, 

ಪ್ರಕೃತಿ ವಿಕೋಪಗಳು, 

ಆಘಾತಕಾರಿ ಸಂಗತಿಗಳು ಎಲ್ಲವನ್ನು ನೋಡಿದಾಗ 

ಕೆಲವೊಮ್ಮೆ ಅನಿಸುವುದು ಅಬ್ಬಾ!

ದೇವರೇ ಏನೂ ಬೇಡಪ್ಪಾ, 

ನೀ ಕೊಟ್ಟಿದ್ದೇ ಸಾಕು ಎಂದೆನಿಸುವುದಂತು ಬಲು ಸತ್ಯ.

ಹಾಗೇ ಇನ್ನೊಂದು ರೀತಿಯಾಗಿ ನೋಡಿದರೆ 

ಎಲ್ಲರಿಗೂ ಬೇಕಾದದ್ದನ್ನು ಕೊಡುವೆ 

ನನಗೆ ಮಾತ್ರ ನಾ ಬೇಕು ಎಂದು ಬಯಸಿದ್ದು ಕೊಡಲಾರೆ 

ಯಾಕೆ ಹೀಗೆ ಮಾಡುತ್ತಿರುವೆ ಎಂದೆನಿಸುವುದು ಎಲ್ಲರಲ್ಲೂ ಸಹಜ...

 

ನಿಮ್ಮ ಕರ್ತವ್ಯ ನೀವು ಮಾಡಿ, 

ಯಾವಾಗ ಏನು ನೀಡಬೇಕೆಂಬುದೆನಗೆ ಗೊತ್ತು ಎಂದು ಭಗವಂತ ಹೇಳಿರುವನು.

ನಾವು ಎನು ತಿಪ್ಪರಲಾಗ ಹಾಕಿದರೂ ಸಹ,

ಯಾವ ಸ್ಥಾನ,ಅಧಿಕಾರದಲ್ಲಿದ್ದರೂ, ಎಂತಹ ಹಠವಾದಿಯಾದರೂ  

ವಿಧಿಯ ಆಟದ ಮುಂದೆ ನಮ್ಮ ಬದುಕು-ಈ ಜೀವ ನೀರ ಮೇಲಣ ಗುಳ್ಳೆಯಂತೆ,

ಈ ಸುಂದರ ಬದುಕಿಗೆ, 

ನೀ ಕೊಟ್ಟಿದ್ದೇ ಸಾಕೆನಗೆ...

-ಶಾಂತಾರಾಮ ಶಿರಸಿ.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್