ಉಗುರು ಸುತ್ತಲಿನ ಕಪ್ಪು ಕಲೆಯ ನಿವಾರಣೆ ಹೇಗೆ?

ಉಗುರು ಸುತ್ತಲಿನ ಕಪ್ಪು ಕಲೆಯ ನಿವಾರಣೆ ಹೇಗೆ?

ಸುಂದರವಾಗಿರುವ ಕೈಬೆರಳುಗಳ ಜೊತೆಗೆ ಸುಂದರ, ಸ್ವಚ್ಛವಾದ ಉಗುರುಗಳೂ ಇರಬೇಕು ಎನ್ನುವುದು ಎಲ್ಲರ ಮಹದಾಸೆ. ಕೆಲವರಿಗೆ ಉಗುರಿಗೆ ಬಣ್ಣ ಹಚ್ಚುವುದು, ಉಗುರನ್ನು ಚೆನ್ನಾಗಿ ಪಾಲಿಶ್ ಮಾಡುವುದು, ಉಗುರನ್ನು ಕತ್ತರಿಸದೇ ಹಾಗೆ ಬಿಡುವುದು ಇಷ್ಟವಾಗಿರುತ್ತದೆ. ಕೆಲವೊಮ್ಮೆ ಉಗುರಿನ ಸುತ್ತಲಿನ ಚರ್ಮವು ಕಪ್ಪು ಬಣ್ಣಕ್ಕೆ ತಿರುಗಿ ನೋಡಲು ಅಸಹ್ಯವಾಗಿ ಬಿಡುತ್ತದೆ. ಸುಂದರ ಕೈ ಮತ್ತು ಉಗುರುಗಳನ್ನು ಹೊಂದುವ ನಿಮ್ಮ ಆಸೆಗೆ ತಣ್ಣೀರು ಎರಚಿ ಬಿಡುತ್ತದೆ ಈ ಕಪ್ಪು ಬಣ್ಣ. ಇದಕ್ಕೆ ಪರಿಹಾರ ಹುಡುಕುವ ಮೊದಲು ಆ ಉಗುರಿನ ಸುತ್ತಲಿನ ಕಪ್ಪುಬಣ್ಣಕ್ಕೆ ಕಾರಣವೇನೆಂದು ನೋಡುವ. ಈ ಕಾರಣಗಳು ತೀವ್ರ ಪ್ರಮಾಣದ ಆರೋಗ್ಯದ ಸಮಸ್ಯೆಯಿಂದ ಆಗಿದ್ದರೆ ಅದಕ್ಕೆ ನೀವು ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲವಾದಲ್ಲಿ ಮನೆಮದ್ದು ಮುಖಾಂತರವೇ ಗುಣಪಡಿಸಬಹುದು.

ನಿಮ್ಮ ಉಗುರುಗಳ ಸುತ್ತ ಕಪ್ಪು ಹೊರಪೊರೆಗಳ ಹಿಂದಿನ ಕಾರಣವನ್ನು ಗುರುತಿಸ ಹೊರಟರೆ ಈ ವಾತಾವರಣ ದೊಡ್ಡ ಪಾತ್ರ ವಹಿಸುತ್ತದೆ. ಅತೀ ಶೀತ ಅಥವಾ ವಿಪರೀತ ಬಿಸಿಲಿನಂತಹ ಪರಿಸರ ಸಂಬಂಧಿ ಅಂಶಗಳು ಈ ಕಪ್ಪು ಬಣ್ಣಕ್ಕೆ ಕಾರಣವಾಗಬಲ್ಲವು. ಹಾನಿಕಾರಕ ಸೂರ್ಯನ ಕಿರಣಗಳು (ಅಲ್ಟ್ರಾವೈಲೆಟ್) ನಿಮ್ಮ ಚರ್ಮಕ್ಕೆ ಬಣ್ಣ ಕೊಡುವ ಮೆಲನಿನ್ ಎಂಬ ಅಂಶದ ಉತ್ಪಾದನೆಯನ್ನು ಹೆಚ್ಚಿಸಬಹುದು. ಸೋಪಿನಿಂದ ಕೈಗಳನ್ನು ಅತಿಯಾಗಿ ತೊಳೆಯುವುದರಿಂದ ನಿಮ್ಮ ಚರ್ಮದಲ್ಲಿರುವ ತೇವಾಂಶವು ಹೆಚ್ಚಾಗಿ ನಿಮ್ಮ ಉಗುರುಗಳ ಸುತ್ತಲಿನ ಬಣ್ಣ ಕಪ್ಪಾಗಬಹುದು. 

ದೇಹದಲ್ಲಿನ ನಿರ್ಜಲೀಕರಣದ ಸಮಸ್ಯೆಯು ಈ ಕಪ್ಪು ಪೊರೆಗೆ ಮತ್ತೊಂದು ಕಾರಣವಾಗಿದೆ. ಇದರ ಜೊತೆಗೆ ಗಂಭೀರ ಸಮಸ್ಯೆಗಳಾದ ಹೃದ್ರೋಗ, ಮೂತ್ರಪಿಂಡಗಳ ಸಮಸ್ಯೆ, ಚರ್ಮದ ಕ್ಯಾನ್ಸರ್, ಶಿಲೀಂದ್ರಗಳ ಸೋಂಕು ಮುಂತಾದವುಗಳಿಂದಲೂ ಚರ್ಮದ ಬಣ್ಣ ಕಪ್ಪು ಆಗಬಹುದು. ಈ ಗಂಭೀರ ಸಮಸ್ಯೆಗಳಿದ್ದಾಗ ಮಾತ್ರ ನೀವು ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಅತ್ಯಂತ ಅಗತ್ಯ. 

ಕೆಲವು ಮನೆಮದ್ದುಗಳು: ಟೊಮ್ಯಾಟೋ ಹೋಳುಗಳನ್ನು ಬಳಸಿಕೊಂಡು ಈ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ನಿವಾರಣೆ ಮಾಡಬಹುದು. ಟೊಮ್ಯಾಟೋ ಹೋಳುಗಳನ್ನು ಕಪ್ಪಾದ ಉಗುರಿನ ಸುತ್ತಲಿನ ಭಾಗಕ್ಕೆ ಚೆನ್ನಾಗಿ ಉಜ್ಜಿ. ಸ್ವಲ್ಪ ಸಮಯ ಹಾಗೇ ಬಿಡಿ. ಇದನ್ನು ನೀವು ರಾತ್ರಿ ಮಲಗುವ ಮೊದಲು ಮಾಡಿದರೆ ರಾತ್ರಿಯಿಡೀ ಹಾಗೆಯೇ ಬಿಟ್ಟು ಬೆಳಿಗ್ಗೆ ಕೈ ತೊಳೆದುಕೊಳ್ಳಬಹುದು.

* ಹಾಲಿನ ಕೆನೆಯನ್ನು ಬಳಸಿ ಸ್ಕ್ರಬ್ ತರಹ ಉಪಯೋಗಿಸಿ ಈ ಕಲೆಯನ್ನು ನಿವಾರಿಸಿಕೊಳ್ಳಬಹುದು. ಹಾಲಿನ ಕೆನೆಗೆ ಸ್ವಲ್ಪ ಓಟ್ಸ್, ನಿಂಬೆರಸ ಮತ್ತು ಜೇನು ತುಪ್ಪವನ್ನು ಬೆರೆಸಿ ಸ್ಕ್ರಬ್ ನಂತಹ ಒಂದು ಮಿಶ್ರಣ ತಯಾರಿಸಿ. ಈ ಮಿಶ್ರಣವನ್ನು ಕಪ್ಪಾದ ಉಗುರಿನ ಸುತ್ತಲಿನ ಚರ್ಮಕ್ಕೆ ಹಚ್ಚಿ. ಹಾಲಿನ ಕೆನೆಯಲ್ಲಿರುವ ಅತ್ಯುತ್ತಮ ಪೋಷಕಾಂಶಗಳು ಮತ್ತು ಓಟ್ಸ್ ನ ಅಂಶಗಳು ಸತ್ತ ಕೋಶಗಳನ್ನು ನಿವಾರಿಸುತ್ತದೆ ಮತ್ತು ಜೇನು ತುಪ್ಪದಲ್ಲಿ ಕಪ್ಪು ಚರ್ಮವನ್ನು ಬಿಳಿ ಮಾಡುವ ಗುಣವಿದೆ. ಇದರಿಂದ ನಿಮ್ಮ ಕೈಬೆರಳುಗಳ ಬಣ್ಣ ತಿಳಿಯಾಗುತ್ತದೆ.

* ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಎರಡು ಸಮಾನ ಭಾಗಗಳಾಗಿ ಕತ್ತರಿಸಿ. ನಿಂಬೆ ಹಣ್ಣಿನ ಒಂದು ಅರ್ಧ ಭಾಗಕ್ಕೆ ಸ್ವಲ್ಪ ಸಕ್ಕರೆ ಹಾಕಿ ಅದನ್ನು ನಿಮ್ಮ ಉಗುರಿನ ಸುತ್ತಲಿನ ಚರ್ಮಕ್ಕೆ ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಉಜ್ಜಿರಿ. ನಿಂಬೆ ಹಣ್ಣಿನಲ್ಲಿ ಚರ್ಮವನ್ನು ಶುದ್ಧೀಕರಿಸುವ ಮತ್ತು ಹೊಳೆಯುವಂತೆ ಮಾಡುವ ಗುಣವಿದೆ. ಇದರ ಜೊತೆ ಬೆರೆತ ಸಕ್ಕರೆಯಲ್ಲಿ ಚರ್ಮವನ್ನು ಮೊಯಿಸ್ಚರೈಸಿಂಗ್ ಮಾಡುವ ಗುಣವಿದೆ.

* ತಾಜಾ ಅಲೋವೆರಾ (ಲೋಳೆಸರ) ಲೋಳೆ ಅಥವಾ ಅಲೋವೆರಾ ಜೆಲ್ ತೆಗೆದುಕೊಂಡು ಪ್ರತೀ ದಿನ ನಿಮ್ಮ ಉಗುರಿನ ಸುತ್ತಲಿನ ಕಪ್ಪು ಚರ್ಮಕ್ಕೆ ಹಚ್ಚುತ್ತಾ ಬನ್ನಿ. ಅಲೋವೆರಾದಲ್ಲಿ ಉತ್ಕರ್ಷಣಾ ಗುಣವಿರುವುದರಿಂದ ಇದು ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ನಿಯಮಿತ ಬಳಕೆಯಿಂದ ಚರ್ಮದ ಕಾಂತಿ ಅಧಿಕಗೊಳ್ಳುತ್ತದೆ. ಚರ್ಮವು ಮೃದುವಾಗುತ್ತದೆ. ಪ್ರತೀ ದಿನ ಅಲೊವೆರಾ ಬಳಕೆಯಿಂದ ಚರ್ಮದ ಕಪ್ಪು ಬಣ್ಣ ಕಡಿಮೆಯಾಗುತ್ತದೆ. ಕೆಲವರಿಗೆ ಅಲೋವೆರಾ ಸಸ್ಯದ ಅಲರ್ಜಿ ಇರುತ್ತದೆ. ಅಂತವರು ಮಾತ್ರ ಇದನ್ನು ಬಳಸಬೇಡಿ.

* ಆಲೂಗಡ್ಡೆಯನ್ನು ಕ್ಲೆನ್ಸಿಂಗ್ ಏಜೆಂಟ್ ಎಂದು ಕರೆಯುತ್ತಾರೆ. ಇದು ಕಪ್ಪು ಕಲೆಯನ್ನು ತೆಗೆಯಲು ಅಥವಾ ತಿಳಿಗೊಳಿಸಲು ಬಹಳ ಉಪಕಾರಿ. ಆಲೂಗಡ್ಡೆಯ (ಬಟಾಟೆ) ರಸವನ್ನು ತೆಗೆದುಕೊಂಡು ಆ ರಸವನ್ನು ಹತ್ತಿಯ ಸಹಾಯದಿಂದ ಬೆರಳಿನ ಸುತ್ತಲಿನ ಕಪ್ಪು ಬಣ್ಣಕ್ಕೆ ಹಚ್ಚಿ. ಇದನ್ನು ೧೫-೨೦ ನಿಮಿಷ ಹಾಗೇ ಬಿಟ್ಟು ನಂತರ ನೀರಿನಲ್ಲಿ ತೊಳೆಯಿರಿ. ಈ ವಿಧಾನವನ್ನು ನಿಯಮಿತವಾಗಿ ಮಾಡುತ್ತಾ ಬಂದರೆ ನಿಮ್ಮ ಉಗುರಿನ ಸುತ್ತ ಇರುವ ಚರ್ಮದ ಕಪ್ಪು ಬಣ್ಣವು ನಿವಾರಣೆಯಾಗುತ್ತದೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ