ಉಗ್ರವಾದ - ಇದೊಂದು ಹಳೇ ಉದ್ಯೋಗ

ಉಗ್ರವಾದ - ಇದೊಂದು ಹಳೇ ಉದ್ಯೋಗ

ಬರಹ

ಈ ಉಗ್ರವಾದ ಎಂಬೋದು ಇಂದು ನಿನ್ನೆಯದಲ್ಲ. ಹಿಂದಿನಿಂದಲೂ ಇದು ಇದ್ದೇ ಇದೆ. ಮನುಷ್ಯ ಇದರ ನೆರಳಲ್ಲಿ ಹಿಂದೆಯೂ ಬದುಕುತ್ತಿದ್ದ, ಈಗಲೂ ಬದುಕುತ್ತಿದ್ದಾನೆ. ನಮ್ಮ ಹಿಂದಿನ ಪುರಾಣ ಪ್ರಕರಣಗಳನ್ನೇ ನೋಡಿದರೆ ಇದು ಸುಲಭ ವೇದ್ಯ.

ಮೊದಲಿಗೆ ವಿಷ್ಣುಪುರಾಣದ ದಶಾವತಾರದಲ್ಲಿ ಬರುವ ಎಂಟು ಮುಖ್ಯ ಉಗ್ರವಾದಿ ಗುಂಪು (ಆಧುನಿಕ ಹೆಸರು) ಹೇಗಿರುತ್ತೋ ನೋಡೋಣ ಹಿರಣ್ಯಕಶಿಪು – ಹಿರಣ್ಯಾಕ್ಷ (ಹಿರಣ್ಯ ನವವಿರ್ಮಾಣ ಸೇನಾ ), ರಾವಣ – ಕುಂಭಕರ್ಣ (ಲಂಕಾ ಶಾಪ ವಿಮೋಚನಾ ಸೇನಾ), ದುರ್ಯೋಧನ – ದುಃಶ್ಯಾಸನ (ಕುರು ಮೂಮೆಂಟ್ ಆಫ್ ಆರ್ಯಾವರ್ತ), ಬಲಿ (ತ್ರಿಲೋಕ ವಿಜಯ ಸೇನೆ). ಈ ಗುಂಪುಗಳೆಲ್ಲವೂ ವಿಶೇಷ ಶಕ್ತಿರೂಪಗಳಾಗಿದ್ದು ಮೂಲವಾಗಿ ಆಡಳಿತ ವರ ಪ್ರಸಾದಿತ ಶಿಶುಗಳೇ ಆಗಿದ್ದವು. ಇವುಗಳಲ್ಲಿನ ದೇವರ ಹಸ್ತಕ್ಷೇಪಗಳು, ಅದರಿಂದಾದ ಅಡ್ಡಿಗಳು ಇಂದಿನ ಭಿಂದ್ರನ್ ವಾಲೆ, ಪ್ರಭಾಕರನ್ ಥರದವರನ್ನು ಬೆಳೆಸಿ ಕೊನೆಗೆ ಅವುಗಳಿಂದಲೇ ಕಂಗೆಟ್ಟ ಕಾಂಗ್ರೆಸ್ನ ನೆನಪು ತರುತ್ತವೆ. ಹಿರಣ್ಯಕಶಿಪುವೇ ತಗೊಳಿ, ಆ ಬ್ರಹ್ಮನ ವರಗಳ ಕಾರಣದಿಂದ ಆತನ ನಿವಾರಿಸಲು ಎಂಥಾ ಪೀಕಲಾಟಕ್ಕಿಟ್ಟುಕೊಂಡಿತು ವಿಷ್ಣುಗೆ. ಬಲಿಯಂತೂ ವಿಷ್ಣುವನ್ನೇ ಒಬ್ಬ ಕುಳ್ಳ ವಾಮನನನ್ನಾಗಿಸಿ ನಗೆಪಾಟಲು ಮಾಡಿಬಿಟ್ಟ.

ಹೀಗೆಯೇ ಶಿವಪುರಾಣದಲ್ಲಿ ತಾರಾಕ್ಷ-ಕಮಲಾಕ್ಷ-ವಿದ್ಯುನ್ಮಾಲಿ (ತ್ರಿಪುರಾ ಲಿಬರೇಶನ್ ಆರ್ಮಿ), ಸುರಪದ್ಮ-ಸಿಂಹಮುಖ-ತಾರಾಕ್ಷ (ಮಕ್ಕಳ್ ಡ್ರೀಮ್ ಟೀಮ್ ಫಾರ್ ಅಸುರ ಫ್ರೀಡಮ್) ಎಂಬ ಗುಂಪುಗಳೂ ವಿಜೃಂಭಿಸಿಕೊಂಡಿದ್ದವು. ಇವುಗಳ ವ್ಯುತ್ಪತ್ತಿಗೂ ನಮ್ಮ ದೇವರುಗಳ ಹುಂಬತನವೇ ಕಾರಣವಾಗಿತ್ತು. ಹೇಳದೇ ಕೇಳದೇ ಎಂಥಾ ಕೇಡಿಗರಿಗೂ ವರ ಕೊಡುವ ನಮ್ಮ ತ್ರಿಮೂರ್ತಿಗಳನ್ನು ನಾವಿನ್ನೂ ಪೂಜಿಸುತ್ತಿರುವುದೇ ಒಂದು ಸೋಜಿಗ ಅಲ್ವೇ.

ಇವರೆಲ್ಲರ ಉಗ್ರವಾದದ ಕಾರಣವು ಸಾಮಾನ್ಯವಾಗಿ ಆರ್ಥಿಕ / ಸಾಮಾಜಿಕ ಅಸಮಾನತೆ, ಭೂಮಿ - ಹೆಣ್ಣು– ಜಲವಿವಾದ, ಅಸೂಯೆ, ಅಧಿಕಪ್ರಸಂಗ, ಇತ್ಯಾದಿಗಳೂ ಆಗಿದ್ದವು. ಇವರ ವಿವಾದ ಸಾಮಾನ್ಯವಾಗಿ ಸ್ವರ್ಗ, ಭೂಮಿ, ಪಾತಾಳಗಳಾಗಿದ್ದು ಅಪರೂಪಕ್ಕೆ ಕೈಲಾಸ, ಕ್ಷೀರಸಾಗರ, ಬ್ರಹ್ಮ ಲೋಕಕ್ಕೂ ಲಗ್ಗೆ ಹಾಕಿದ್ದುಂಟು. ಏನು ಮಾಡುವುದು, ಪಾಪಿ ಪೇಟ್ ಕಾ ಸವಾಲ್ !

ಇವರೆಲ್ಲರನ್ನೂ ಕಪಿಸೇನಾ, ವಿಶ್ವಕ್ ಸೇನಾ, ಇತ್ಯಾದಿ ಸೈನ್ಯಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿವೆ. ಈ ಕಾಳಗಗಳಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ನಾನಾ ಸಮಯದಲ್ಲಿ ಸಕಾಲಿಕ ಹೆಲ್ಪ್ ಲೈನ್ ಗಳಾಗಿ ಸಹಾಯ ಮಾಡಿದ್ದಾರೆ. ಇವರ ಕಾರ್ಯಾಚರಣೆ ಯಾವ ಎನ್.ಎಸ್. ಜಿ ಗೂ ಕಮ್ಮಿ ಇರಲಿಲ್ಲ. ನರಸಿಂಹ, ವರಾಹನ ಮುಖವಾಡ ಹಾಕಿ ಗುಟ್ಟಾಗಿ ಕೆಲಸ ಮಾಡಿ ಬಂದ ವಿಷ್ಣುವಂತೂ ಭಲೇ ಚತುರ ಎಂಬುದು ವಿದಿತವಾಗಿದೆ. ಶಿವನಿಗೆ ತಲೆ ಸ್ವಲ್ಪ ಕಮ್ಮಿ ಆದ್ದರಿಂದ ಆತ ತನ್ನ ಶಕ್ತಿ ಪರರಿಗೆ ಧಾರೆ ಇತ್ತು ತಾನು ಉಪವಾಸ ಕೂರುವ ಸನ್ನಿವೇಶಗಳೇ ಅಧಿಕವಾಗಿವೆ. ಬ್ರಹ್ಮನೂ ಸ್ವಲ್ಪ ಹಾಗೆಯೇ, ತನ್ನ ವರ ಕೊಟ್ಟು ಪರರಿಂದ ಗೆಲ್ಲಿಸುವ ಚತುರನಿವನು. ನಾರದನು ಯಾವುದೇ ಸಿ. ಎನ್. ಎನ್ ಗೆ ಕಮ್ಮಿ ಇಲ್ಲದಂತೆ ಕೆಲಸ ಮಾಡಿದ ಮಾಧ್ಯಮ ಪಿತನೇ ಆಗಿದ್ದಾನೆ.

ದಶಾವತಾರ ಕಾಲದಲ್ಲಿ ಆಡಳಿತ ನಡೆಸಿದ ರಾಜರುಗಳು : ಪರಶುರಾಮರಾಜ್, ರಾಮರಾಜ್, ಕಪಿರಾಜ್, ಧರ್ಮರಾಜ್, ಕೃಷ್ಣರಾಜ್, ನರಸಿಂಹರಾಜ್, ವಾಮನರಾಜ್. ಶಿವಪುರಾಣದಲ್ಲಿ ಮುಖ್ಯವಾಗಿ ಶಿವರಾಜ್, ಗಣರಾಜ್, ಕುಮಾರರಾಜ್. ಇವರೆಲ್ಲರ ವೈಯಕ್ತಿಕ ದೌರ್ಬಲ್ಯಗಳೂ ಹಲವು ಅನಾಹುತ ಮಾಡಿದ್ದವು. ತನ್ನ ಹೆಂಡ್ತಿಯನ್ನೇ ಪಣವಾಗಿಟ್ಟ ಧರ್ಮರಾಜನ ಜೂಜಿನ ದೌರ್ಬಲ್ಯ ಯಾರು ಮರೆವರು ? ಇದರ ಉಪಯೋಗ ಮಾಡಿದ ದುರ್ಯೋಧನನ ತಪ್ಪೇನು ? ಪರಶುರಾಮ ಒಬ್ಬ ಕೋಪಿಷ್ಟನಾಗಿ ಜೀವನದಲ್ಲಿ ಏನೂ ಸುಖ ಪಡಲೇ ಇಲ್ಲ. ಸಂಸಾರ ಸುಖವೇ ತೊರೆದ ಈತನ ಉದ್ವೇಗದ ಬಲಿಯಾಗಿ ಹಲವು ದುಷ್ಟರು ಸತ್ತರು. ಅವನಿಗೊಂದು ಮದುವೆ ಮಾಡುವಷ್ಟು ಕಾಮನ್ ಸೆನ್ಸ್ ಆ ಕಾರ್ತವೀರ್ಯಾದಿಗಳಿಗೆ ಇಲ್ಲದ್ದು ಅವರ ಜೀವಾನೇ ತೆಗೆದು ಬಿಟ್ಟಿತು. ಮೋಹಿನಿ ಆಗಿ ಮೆರೆದ ವಿಷ್ಣುಗೂ ಈ ಹುಂಬ ಕ್ಷತ್ರಿಯರಿಗೂ ಇರುವ ವ್ಯತ್ಯಾಸ ಇದೇ. ಇಂಥಾ ಸುಲಭೋಪಾಯವೇ ವಿಷ್ಣುವಿನ ಗೆಲುವಿನ ಒಳಗುಟ್ಟು. ಹೇಗೋ, ಒಟ್ಟಾರೆ ಜನಕ್ಕೆ ಲಾಭ ಆಯ್ತು ಬಿಡಿ.

ಇವರ ಕದನ ಬಹುತೇಕವಾಗಿ ಗುಂಪು ಕಾಳಗ. ಉಳಿದವು ಗೆರಿಲ್ಲಾ / ಮಲ್ಲ ಕಾಳಗ, ವಾಕ್ ಸಮರ, ಇತ್ಯಾದಿಗಳು ಆಗಿದ್ದವು. ಸಮರೋಪಕರಣಗಳು, ಹಳೇ ದೊಣ್ಣೆ, ಕೊಡಲಿ, ಹಗ್ಗ, ಶಿಲೆಕಲ್ಲಿನಿಂದ ಹಿಡಿದು ಹೊಸಾ ಬಿಲ್ಲು, ಹ್ಯಾಮರ್, ಜಾವಲಿನ್ ವರೆಗೆ ಆಗಿದ್ದವು. ಇದರೊಂದಿಗೆ ಒತ್ತೆಯಾಳು ಬೆದರಿಕೆ ಸಮಸ್ಯೆಗಳೂ ಇದ್ದವೆನ್ನುವುದಕ್ಕೆ ಭೂದೇವಿ ಅಪಹರಣ, ಸೀತಾಪಹರಣವೇ ಸಾಕ್ಷಿ. ಇದರಲ್ಲಿ ಕಪಿಗಳ ಗೆರಿಲ್ಲಾ ಯುದ್ಧವಂತೂ ಇಂದಿನ ಎಲ್.ಟಿ.ಟಿ.ಇ ಯಿಂದ ಮಕ್ಕಳ ದಿನನಿತ್ಯ ಆಟಗಳಿಗೂ ಮಾದರಿಯಾಗಿವೆ. ಒತ್ತೆಯಾಳು ಬೆದರಿಕೆ ಒಡ್ಡುವುದು ಇಂದೂ ಮುಂದುವರೆದಿದೆ.

ಇವುಗಳಲ್ಲೆಲ್ಲಾ ಬಹುತೇಕ ದೇವ ವಿಜಯಗಳೇ ಆದರೂ ಉಗ್ರವಾದಿ ನಾಯಕರೂ ಮರಣೋತ್ತರವಾಗಿ ವಿಶೇಷ ಸ್ಥಾನಕ್ಕೇರಿದ್ದು ಬಿರುದುಗಳನ್ನೂ ಪಡೆದಿದ್ದರು - ಬಲಿಗೆ ಇಂದ್ರ ಪದವಿ, ಹಿರಣ್ಯಾದಿಗಳಿಗೆ ಜಯ-ವಿಜಯ ಮುಂತಾಗಿ. ಇವರು ಅನೇಕರಿಂದ ಈಗಲೂ ಪೂಜಿಸಲ್ಪಡುತ್ತಿದ್ದಾರೆ. ಅವರ ಹೆಸರುಗಳನ್ನೂ ಇಡಲಾಗುತ್ತಿದೆ. ರಾವಣನ ಹೆಸರಿಟ್ಟುಕೊಂಡ ಲಂಕೇಶ್, ಅವರ ಮಗನ ಹೆಸರನ್ನೇ ಇಟ್ಟ ಇಂದ್ರಜಿತ್ ಇಂದು ಯಶಸ್ವೀ ಪತ್ರಕರ್ತ, ಉದ್ಯಮಿಗಳೆನಿಸಿದ್ದಾರೆ.

ಇವೆಲ್ಲಾ ನೋಡಿದರೆ ಒಂದೆನಿಸುತ್ತದೆ – ಉಗ್ರವಾದ ಅನಾದಿ ಕಾಲದಿಂದಲೂ ಸಮಸ್ಯೆಯಾಗಿ ಇದ್ದು, ಕಾಲಕಾಲದಲ್ಲಿ ರೂಪಾಂತರಗೊಂಡು ಮತ್ತೆ ಮತ್ತೆ ಬರುತ್ತಿವೆ. ಸಮಸ್ಯೆ ಪರಿಹಾರಕ್ಕಾಗಿ ಅದೇ ತ್ರಿಮೂರ್ತಿಗಳಂತೆಯೇ ಹಲವು ರೂಪಾಂತರಗಳು ಕೆಲಸ ಮಾಡುತ್ತಲೇ ಇವೆ. ರಾವಣನಂತಹ ಸದ್ದಾಂ, ಹಿರಣ್ಯನಂಥಾ ಒಸಾಮಾ ಬಿನ್ ದೊಡ್ಡ ಮಾನದ ಉಗ್ರರಾದರೆ, ಪ್ರಭಾಕರನ್ – ವೀರಪ್ಪನ್ ಮುಂತಾದವರು ತಾರಾಕ್ಷ, ಕಮಲಾಕ್ಷೋಪಾದಿಯಲ್ಲಿ ಬರುತ್ತಾರೆ. ಇವರ ಹತ್ತಿಕ್ಕುತ್ತಿರುವ ಅಮೆರಿಕಾದಿ ದೇಶಗಳು ನಿಜ ವೈಕುಂಠ ಕೈಲಾಸಗಳೇ ಇದ್ದೀತು. ಬುಷ್, ಸಿಂಗಾದಿಗಳು ದೇವ ಪುರುಷರೇ ಇದ್ದಾರು. ಏನನ್ನುತ್ತೀರ.

ಕತೆಗಳಲ್ಲೇನಾರೂ / ಪಾತ್ರಗಳಲ್ಲೇನಾದರೂ ತಪ್ಪುಗಳಿದ್ದರೆ, ಪಾತ್ರಗಳು ಕಳೆದು ಹೋಗಿದ್ದರೆ ಮನ್ನಿಸಿರಿ, ತಿಳಿಸಿರಿ ಎಲ್ಲಾ ಸಂಪದ ವಿದ್ವಾಂಸ ವಿದುಷಿಯರೇ.