ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ

ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ

ಇದು ಉಡುಪಿ ಜಿಲ್ಲೆಯಲ್ಲಿದೆ. ಕಾಪುವಿಗೆ ಸರಿಸುಮಾರು ಐದು ಕಿ.ಮೀ. ದಕ್ಷಿಣಕ್ಕೆ ಇರುವ ಉಚ್ಚಿಲ ಗ್ರಾಮದ ಗ್ರಾಮ ದೇವಸ್ಥಾನ ಇದು. ಈ ದೇವಸ್ಥಾನದ ಪೌರಾಣಿಕ ಹಿನ್ನಲೆ ಈ ತರ ಇದೆ.

ಹಿಂದೆ ಅಸುರನಾದ "ಖರ" (ಈತ ರಾವಣನ ತಮ್ಮ ಖರ-ದೂಷಣರಲ್ಲಿ ಮೊದಲನೆಯವ)ನಿಗೆ ಸ್ವರ್ಗದ ಅಧಿಕಾರ ಹಿಡಿಯಬೇಕೆಂಬ ಆಸೆಯಾಯಿತಂತೆ. ಅದಕ್ಕೆ ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗ ನಾರದರು ಬಂದು, ಆ ದೇವಾದಿ ದೇವ ಈಶ್ವರನನ್ನು ಕೇಳು ನಿನಗೆ ಸ್ವರ್ಗದ ಅಧಿಕಾರ ಸಿಗುಂತೆ ಮಾಡಿಯಾನು ಎಂದು ಹೇಳಿದರಂತೆ. ಅದಕ್ಕಾಗಿ ಶಿವನನ್ನು ಕೇಳುವ ಸಲುವಾಗಿ ಈ ಖರಾಸುರ ತಪಸ್ಸು ಮಾಡುವ ಬದಲಾಗಿ ತನ್ನ ಬಾಹುಬಲದ ಅಹಂಕಾರದಿಂದ. ನೇರ ಕೈಲಾಸಕ್ಕೆ ನಡೆದು ಹೋದನಂತೆ. ಅಲ್ಲಿ ಕೈಲಾಸದ ದ್ವಾರದಲ್ಲಿ ಶಿವನ ವಾಹನ ನಂದಿ ಇವನನ್ನು ತಡೆದು ಶಿವನನ್ನು ಭೇಟಿ ಮಾಡುವ ರೀತಿ ಇದಲ್ಲ ಹೋಗು ತಪಸ್ಸು ಮಾಡಿ ಒಲಿಸಿಕೋ ಎಂದನಂತೆ ಅದಕ್ಕೆ ಕೋಪಗೊಂಡ ಖರಾಸುರ ನಂದಿಯೊಡನೆ ಯುದ್ಧಕ್ಕೆ ನಿಲ್ಲುತಾನೆ. ಘೋರ ಯುದ್ಧ ನಡೆದು ಖರಾಸುರ ನಂದಿಯೊಡನೆ ಸೋತು ಬಿಡುತ್ತಾನೆ. ಯುದ್ಧದಲ್ಲಿ ಸೋತ ಗಾಯಗೊಂಡ ನಂತರ ಖರಾಸುರ ಶಿವನ ತಪಸ್ಸು ಮಾಡತೊಡಗುತ್ತಾನೆ. ಆಗ ಅವನ ಭಕ್ತಿಗೆ ಶಿವ ಒಲಿದು ಬಂದೊಡನೆ ಖರಾಸುರ ಶಿವನೊಡನೆ ನಂದಿಯ ಬಗ್ಗೆ ದೂರುತಾನೆ. ಹೇ ದೇವ ನಿನ್ನನ್ನು ನೋಡಲೆಂದು ಬಂದಾಗ ನಿನ್ನ ವಾಹನನಾದ ನನ್ನನ್ನು ಗಾಯಗೊಳಿಸಿದ ಎಂದು. ಇದನ್ನು ಕೇಳಿದೊಡನೆ ಕೋಪಗೊಂಡ ಶಿವನು " ಭೂಮಿಯಲ್ಲಿ ಒಂದು ಬಸವನಾಗಿ ಹುಟ್ಟು " ಎಂದು ನಂದಿಗೆ ಶಪಿಸುತ್ತಾನೆ. ಆಗ ನಂದಿ ಈ ಶಾಪಕ್ಕೆ ವಿಮೋವನೆ ಏನು ಎಂದು ಕೇಳಿದಾಗ ಶಿವ ಹೇಳುತ್ತಾನೆ ಈ ಖರಾಸುರನಿಗೆ ಎಷ್ಟು ಗಾಯಗಳಾಗಿದೆಯೋ, ಎಷ್ಟು ನೋವಾಗಿದೆಯೋ ಅಷ್ಟೇ ನೋವು ನಿನಗಾಗಿ ನನ್ನ ಸನ್ನಿಧಾನದಲ್ಲಿ ಬಂದು ಅತ್ತು ಪ್ರಾರ್ಥಿಸಿದಾಗ ನಿನಗೆ ಶಾಪ ವಿಮೋಚನೆ ಆಗುತ್ತದೆ ಎಂದು ಹರಸುತ್ತಾನೆ.

ಇತ್ತ ಶಿವ ಮತ್ತೆ ಖರಾಸುರ ಬಳಿ ಕೇಳುತ್ತಾನೆ, ನಿನಗೇನು ಬೇಕು ಎಂದು ಅವಾಗ ಈ ಖರಾಸುರ ಮಹಾದೇವನಲ್ಲಿ ಹೇಳುತ್ತಾನೆ. ದೇವ ನನಗೆ ಸ್ವರ್ಗದ ಅಧಿಪತ್ಯ ಬೇಕು ಎಂದು. ಆಗ ಶಿವ ನಸು ನಕ್ಕು ನುಡಿಯುತ್ತಾನೆ. 'ಖಂಡಿತಾ ನಿನಗೆ ಸ್ವರ್ಗದ ಅಧಿಕಾರ ಸಿಗುತ್ತದೆ ಆದರೆ ನೀನು ಪಾತಾಳದಿಂದ ನಿನ್ನ ಕೈಯಲ್ಲಿ ಎಷ್ಟಾಗುತ್ತೋ ಅಷ್ಟು ಲಿಂಗಗಳನ್ನು ನಿನ್ನ ಊರಾದ ಲಂಕೆಯಲ್ಲಿ ಪ್ರತಿಷ್ಠಾಪಿಸಬೇಕು. ಆವಾಗ ಮಾತ್ರ ನಿನಗೆ ದೇವಲೋಕದ ಅಧಿಕಾರ ಸಿಕ್ಕೀತು'. ಆಗ ಗಹ ಗಹಿಸಿ ನಕ್ಕ ಖರಾಸುರ ಅಷ್ಟೇನಾ, ಎಂದು ನೇರವಾಗಿ ಪಾತಾಳಲೋಕಕ್ಕೆ ಹೋಗುತ್ತಾನೆ. ಅಲ್ಲಿ ಮೂರು ಲಿಂಗಗಳನ್ನು ಆಯ್ದುಕೊಳ್ಳುತ್ತಾನೆ ಒಂದನ್ನು ತಲೆಯ ಮೇಲೂ, ಮತ್ತೆರಡನ್ನು ಕೈಗಳಲ್ಲೂ ಹಿಡಿದುಕೊಂದು ಹೊರಡಲನುವಾಗುವಾಗ ಅಲ್ಲಿನ ಲಿಂಗಗಳ ರಕ್ಷಕ "ನಾಗ" ಇವನನ್ನು ತಡೆಯಲು ಪ್ರಯತ್ನಿಸುತ್ತಾನೆ. ಆದರೆ ಪರಾಕ್ರಮಿಯಾದ ಖರಾಸುರ ಲಿಂಗಗಳನ್ನು ಹಿಡಿದುಕೊಂಡಂತೆಯೇ ನಾಗನನ್ನು ಸೋಲಿಸಿ, ಪಶ್ಚಿಮದ ಕಡಲಿಂದ ಮೇಲೆ ಬಂದು, ಲಂಕೆಯತ್ತ ನಡೆಯಬೇಕೆನ್ನುವಾಗ ಈ ಅನಾಹುತವನ್ನು ತಡೆಯುವ ಸಲುವಾಗಿ ಗಣಪತಿ ಖರಾಸುರನೊಡನೆ ಯದ್ಧಕ್ಕೆ ಬರುತ್ತಾನೆ. ಗಣಪತಿ ಯುದ್ಧಕ್ಕೆ ಬರುತ್ತಿರುವುದನ್ನು ಕಂಡ ಖರಾಸುರ ಮನಸ್ಸಿನಲ್ಲಿಯೇ ಆಲೋಚಿಸುತ್ತಾನೆ. ಈ ಲಿಂಗಗಳನ್ನು ಹಿಡಿದುಕೊಂಡೇ ಗಣಪತಿಯನ್ನು ಸೋಲಿಸುವುದು ಅಸಾಧ್ಯ ಹಾಗಾಗಿ ಈ ಮೂರು ಲಿಂಗಗಳನ್ನು ನೆಲದಲ್ಲಿಟ್ಟು ಮತ್ತೆ ಯುದ್ಧ ಮಾಡೋಣ ಎಂದು ಮುರೂ ಲಿಂಗಗಳನ್ನು ಅಲ್ಲಲ್ಲಿಯೇ ಇಟ್ಟು ಬಿಡುತ್ತಾನೆ. ನೆಲದಲ್ಲಿ ಇಟ್ಟಂತೆಯೇ ಅದು ಆ ಕ್ಸೇತ್ರದಲ್ಲಿ ಪ್ರತಿಷ್ಠಾಪನೆಯಾಗಿ ಬಿಡುತ್ತದೆ. ಆದರೆ ಇದರ ಅರಿವು ಖರಾಸುರನಿಗೆ ಆಗದೇ ಹೋಗುತ್ತದೆ. ಲಿಂಗವು ಭೂಸ್ಪರ್ಶವಾದುದನ್ನು ಕಂಡ ಕೂಡಲೇ ತಾನು ಮಾಡಬೇಕಾದ ಕಾರ್ಯ ಆಯಿತೆಂದು ಗಣಪತಿ ಅದೃಶ್ಯನಾಗುತ್ತಾನೆ... ಗಣಪತಿ ಅದೃಶ್ಯನಾದುದನ್ನು ಕಂಡು ಖರಾಸುರ ತನ್ನೊಳಗೇ ನಕ್ಕು ಲಿಂಗವನ್ನು ಮತ್ತೆ ತೆಗೆಯಲು ಪ್ರಯತ್ನಿಸುತ್ತಾನೆ. ಆದರೆ ಅದು ಅವನಿಂದ ಸಾಧ್ಯವಾಗುವುದೇ ಇಲ್ಲ .ಆಗ ಶಿವ ಪ್ರತ್ಯಕ್ಷನಾಗಿ ಇದು ದೈವ ಸಂಕಲ್ಪ. ನೀನು ಚಿಂತಿಸಬೇಡ. ಈ ಮೂರು ಲಿಂಗಗಳಿರುವ ಕ್ಷೇತ್ರವು ಖರಾಸುರ ಪ್ರತಿಷ್ಟಾಪಿತ ಕ್ಷೇತ್ರ ಎಂದು ಪ್ರಸಿದ್ಧವಾಗುತ್ತದೆ ಎಂದು ಹರಸುತ್ತಾನೆ. ಆತ ತಂದಿಟ್ಟ ಮೂರು ಲಿಂಗಗಳೇ ಕಾಪು ಉಚ್ಚಿಲ, ಸುರತ್ಕಲ್  ಹಾಗೂ ಸೋಮೇಶ್ವರ ಉಚ್ಚಿಲದಲ್ಲಿ ಕಂಡು ಬರುವ ದೇವಸ್ಥಾನಗಳು... ತಲೆಯ ಮೇಲೆದ್ದ ಲಿಂಗ ಇಟ್ಟಂತಹ ಕ್ಷೇತ್ರವು ಶಿರದಕಲ್ಲು (ಶಿರದಕಲ್ಲು ಎನ್ನುವಂತ ಈ ಊರು ಕ್ರಮೇಣ ಸುರತ್ಕಲ್ಲು ತುಳುವಿನಲ್ಲಿ ಸುರುತಕಲ್ಲು ಸುರುತಕಲ್ಲು ಅನ್ನುತ್ತಾ ಇದು ಸುರತ್ಕಲ್ ಆಗಿದೆ) ಎಂದು ಪ್ರಸಿದ್ಧವಾಗಿದೆ. ಅಲ್ಲಿ ಶಿವ ಸದಾಶಿವನಾಗಿ ನೆಲೆ ನಿಂತಿದ್ದಾನೆ. ಮತ್ತೆ ಕೈಗಳಲ್ಲಿದ್ದ ಲಿಂಗಗಳನ್ನು ಇಟ್ಟಂತಹ ಕ್ಷೇತ್ರವು ಉಚ್ಛ -ಶಿಲೆ ಇಂದಾಗಿರುವುದರಿಂದ ಉಚ್ಚಿಲ ಆಗಿ ಪ್ರಸಿದ್ಧವಾಯಿತು. ಈ ಮೂರು ದೇವಸ್ಥಾನಗಳು ಪಶ್ಚಿಮದ ಕಡಲಿಗೆ ತಾಗಿಕೊಂಡಂತಿದೆ. ಇನ್ನೊಂದು ಉಚ್ಚಿಲ ಉಳ್ಳಾಲ ಸೋಮೇಶ್ವರದ ಹತ್ತಿರವಿದೆ. ಈ ಮೂರು ಕ್ಷೇತ್ರಗಳು ಸರಿ ಸುಮಾರು ಒಂದೇ ಅಂತರದಲ್ಲಿದೆ... ಅಂದರೆ ಖರಾಸುರನ ಗಾತ್ರ ಅಷ್ಟು ದೊಡ್ಡದಿತ್ತಂತೆ ಅಂದರೆ ತಲೆಯಿಂದ ಅವನ ಕೈಗಳಿಗಿರುವ ಅಂತರ ಈಗಿನ ಅಳತೆಯ ಪ್ರಕಾರ ಇಪ್ಪತ್ಮೂರು ಕಿ.ಮೀ.

ಸುರತ್ಕಲ್ ಮತ್ತು ಸೋಮೇಶ್ವರ ಉಚ್ಚಿಲ ಈ ಎರಡು ದೇವಳದಲ್ಲಿ ಶಿವ ಪೂರ್ವ ಮುಖಮಾಡಿ ಇದ್ದಾನೆ ಆದರೆ ನಮ್ಮ ಉಚ್ಚಿಲದಲ್ಲಿ ಮಾತ್ರ ಶಿವ ಪಶ್ಚಿಮಾಭಿಮುಖ .ಖರಾಸುರ ಪ್ರತಿಷ್ಠಾಪನೆ ಮಾಡುವಾಗ ಇದು ಕೂಡ ಪೂರ್ವಾಭಿಮುಖವಾಗೇ ಇತ್ತು. ಇದು ಯಾಕೆ ಹೀಗೆ?  ಇದಕ್ಕೆ ಉತ್ತರ ಸಿಗಬೇಕಾದರೆ ನಾನು ಹೇಳಿದ ಕಥೆಯ ಮೊದಲ ಭಾಗಕ್ಕೆ ಹೋಗಬೇಕು. ನಾ ಮೊದಲೇ ಹೇಳಿದಂತೆ ನಂದಿಗೆ ಭೂಲೋಕದಲ್ಲಿ ಬಸವನಾಗಿರೋ ಶಾಪ ಇತ್ತಲ್ವ. ಆ ಬಸವ ನಮ್ಮ ಉಚ್ಚಿಲದ ದೇವಳದಲ್ಲೇ ಇದ್ದು ಅಲ್ಲಲ್ಲಿ ಸಿಕ್ಕ ಹುಲ್ಲು ಮೇಯ್ದುಕೊಂಡಿತ್ತಂತೆ. ಒಮ್ಮೆ ಇದು ಹಾಗೇ ಹುಲ್ಲು ಮೇಯ್ದುಕೊಂಡು, ಕಾರ್ಕಳದವರೆಗೂ ಹೋಯಿತಂತೆ. ಆಗ ಅಲ್ಲಿನ ಜನರು ಇದನ್ನು ಓಡಿಸಿಕೊಂಡು ಗಾಯಗೊಳಿಸತೊಡಗಿದರಂತೆ. ಕಲ್ಲು ಬಿಸಾಡತೊಡಗಿದರಂತೆ. ಆಗ ಈ ಬಸವ ಗಾಯದ ನೋವನ್ನು ತಾಳಲಾರದೇ, ದೇವಳದ ಹಿಂಭಾಗದಲ್ಲಿ ಬಂದು ಅಂಬಾ.. ಎಂದು ಬೊಬ್ಬಿಟ್ತಿತಂತೆ. ಆಗ ಶಿವ ಇದರ ಶಾಪವಿಮೋಚನೆಗಾಗಿ ಪಶ್ಚಿಮಾಭಿಮುಖವಾಗಿ ತಿರುಗಿಬಿಟ್ಟನಂತೆ. ಬಸವನಿಗೆ ಇಲ್ಲಿ ಶಾಪವಿಮೋಚನೆಯಾಗಿ ಕಲ್ಲಾಗಿ ನಂದಿಯ ಸ್ವರೂಪ ತಾಳಿ ಮತ್ತೆ ಕೈಲಾಸ ಸೇರಿದನಂತೆ. ಈಗಲೂ ಇಲ್ಲಿಯ ನಂದಿಯನ್ನು ನೋಡಿದರೆ ಇದು ಶಿಲ್ಪಿಯೋರ್ವ ಕೆತ್ತ ಮುರ್ತಿಯಂತಿಲ್ಲ ... ದೊಡ್ಡಗಾತ್ರದಲ್ಲಿರುವ ಈ ನಂದಿ ಬಸವವೊಂದು ಕಲ್ಲಾದಂತೆಯೇ ಕಾಣುತ್ತದೆ ಮತ್ತು ಇಲ್ಲಿನ ಹಿರಿಯರು ಹೇಳುವಂತೆ ಈಗಲೂ ಈ ನಂದಿಯ ಒಂದು ಕಣ್ಣು ಉತ್ತರಾಯಣದಲ್ಲಿ ತೆರೆಯುವುದು ಮತ್ತು ಇನ್ನೊಂದು ಕಣ್ಣು ದಕ್ಷಿಣಾಯಣದಲ್ಲಿ ತೆಗೆಯುವುದು ಎನ್ನುತ್ತಾರೆ ಆದರೆ ಇದನ್ನು ಪರೀಕ್ಷೆ ಮಾಡುವುದು ಸರಿಯಲ್ಲ ಅನ್ನುವುದು ಪ್ರಶ್ನೆಯಲ್ಲಿ ಕಂಡು ಬಂದಿದೆ.

ಹಾಗಾಗಿ ಈ ಮಹಾಲಿಂಗೇಶ್ವರ ಪಶ್ಚಿಮಾಭಿಮುಖಿ. ಮತ್ತೂ ಕೆಲವು ಕಥೆಯ ಪ್ರಕಾರ ಮೂರು ದೇವಳದಂತೆ ಇದು ಕೂಡ ಸಮುದ್ರಕ್ಕೆ ತಾಗಿಕೊಂಡಿತ್ತಂತೆ ಆದರೆ ಪಶ್ಚಿಮಕ್ಕೆ ತಿರುಗಿದ ನಂತರ ತನ್ನೆದುರಿಗೆ ಜಾಗ ಬೇಕು ಎಂದಾಗ ಸಾಗರವೇ ಹಿಂದೆ ಸರಿಯಿತಂತೆ. ಈಗಿಲ್ಲಿನ ದೇವಸ್ಥಾನ ಸಮುದ್ರಕ್ಕೆ ತಾಗಿಕೊಂಡಿಲ್ಲ. ಸ್ವಲ್ಪ ದೂರದಲ್ಲಿದೆ. ಉಳಿದೆರಡು ದೇವಸ್ಥಾನ ಸಮುದ್ರಕ್ಕೆ ತಾಗಿಕೊಂಡಿದೆ.

ಲೇಖನ : ಗುರುಪ್ರಸಾದ್ ಆಚಾರ್ಯ ಉಚ್ಚಿಲ 

ಚಿತ್ರ : ಬಾಲಕೃಷ್ಣ ಪೂಜಾರಿ ಉಚ್ಚಿಲ