ಉದ್ಯೋಗದ ಸಂದರ್ಶನದಲ್ಲಿ ಕೇಳುವ ತಂತಿನಡಿಗೆಯ ಪ್ರಶ್ನೆ
ಉದ್ಯೋಗದ ಸಂದರ್ಶನಕ್ಕೆ ಹೋಗುವಾಗ ಅಭ್ಯರ್ಥಿಗಳು ಯಾವುದೇ ಪ್ರಶ್ನೆಯನ್ನು ಉತ್ತರಿಸಲು ತಯಾರಿ ನಡೆಸಿ ಹೋಗುತ್ತಾರೆ. ಅಲ್ಲಿ ಕೇಳಬಹುದಾದ ಒಂದು ಪ್ರಶ್ನೆ ಮಾತ್ರ ಅವರ ತಯಾರಿ ಎಲ್ಲವೂ ತಲೆಕೆಳಗಾಗುವಂತೆ ಮಾಡುತ್ತದೆ.
“ನಿಮ್ಮ ಬಗ್ಗೆ ಹೇಳಿ” ಎಂಬುದೇ ಆ ಪ್ರಶ್ನೆ. ಮೇಲ್ನೋಟಕ್ಕೆ ಇದು ತೀರಾ ಸರಳ ಪ್ರಶ್ನೆ ಅನಿಸುತ್ತದೆ, ಅಲ್ಲವೇ? ಯಾಕೆಂದರೆ, ಈ ಜಗತ್ತಿನಲ್ಲಿ ಅಭ್ಯರ್ಥಿಗೆ ತನ್ನ ಬಗ್ಗೆ ಎಲ್ಲವೂ ತಿಳಿದಿರುತ್ತದೆ - ಯಾವುದೇ ತಯಾರಿಯಿಲ್ಲದೆ ಗಂಟೆಗಟ್ಟಲೆ ಮಾತಾಡುವಷ್ಟು ಸರಕು ಅವರಲ್ಲಿರುತ್ತದೆ.
ಆದರೆ, ಈ ಪ್ರಶ್ನೆ ಎದುರಾದಾಗ ಬಹುಪಾಲು ಅಭ್ಯರ್ಥಿಗಳಿಗೆ ಗೊಂದಲವಾಗುತ್ತದೆ. ಅವರು ಅಧೀರರಾಗುತ್ತಾರೆ. ನರ್ವಸ್ ಆಗಿ ಗೊಂದಲದಲ್ಲಿ ಅನಗತ್ಯ ಸಂಗತಿಗಳನ್ನೂ ಈ ಪ್ರಶ್ನೆಗೆ ಉತ್ತರವಾಗಿ ಹೇಳಿ, ಜೀವನದ ಒಳ್ಳೆಯ ಅವಕಾಶವೊಂದನ್ನು ಕಳೆದು ಕೊಳ್ಳುವವರು ಹಲವರು! ಆದ್ದರಿಂದಲೇ ಇದು ತಂತಿನಡಿಗೆಯ ಪ್ರಶ್ನೆ. ಉತ್ತರಿಸುವಾಗ ತುಸು ಎಚ್ಚರ ತಪ್ಪಿದರೂ ಅಪಾಯ.
ಈ ಪ್ರಶ್ನೆಯಿಂದ ಅಭ್ಯರ್ಥಿಗೆ ಎದುರಾಗುವ ಎಲ್ಲ ಗೊಂದಲ ಮತ್ತು ಸಂಕಟ ನಿವಾರಣೆಗಾಗಿ, ಉದ್ಯೋಗದಾತರು ಈ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಏನನ್ನು ನಿರೀಕ್ಷಿಸುತ್ತಾರೆ ಮತ್ತು ಅದನ್ನು ಅವರಿಗೆ ಉತ್ತರ ರೂಪದಲ್ಲಿ ನೀಡುವುದು ಹೇಗೆಂದು ತಿಳಿಯೋಣ.
ಇದೊಂದು ಮುಕ್ತ ಪ್ರಶ್ನೆ. ಹಾಗಂತ, ಈ ಪ್ರಶ್ನೆ ಕೇಳುವ ಉದ್ಯೋಗದಾತರಿಗೆ ಅಭ್ಯರ್ಥಿಯ “ಜೀವನ ಚರಿತ್ರೆ” ತಿಳಿಯುವ ಆಸಕ್ತಿ ಕಿಂಚಿತ್ತೂ ಇರೋದಿಲ್ಲ. ಈ ಪ್ರಶ್ನೆಯ ಮೂಲಕ ಸಂದರ್ಶನದ ಆರಂಭದಲ್ಲಿ ಅಭ್ಯರ್ಥಿಯಲ್ಲಿ ನಿರಾಳತೆ ಮೂಡಿಸುವುದು ಉದ್ಯೋಗದಾತರ ಉದ್ದೇಶವಾಗಿರಬಹುದು. ಯಾಕೆಂದರೆ, ಇದಕ್ಕೆ ಪ್ರತಿಯೊಬ್ಬರಿಗೂ ಉತ್ತರ ಗೊತ್ತಿರುತ್ತದೆ. ಜೊತೆಗೆ, ತನ್ನೆದುರು ಕುಳಿತಿರುವ ಅಭ್ಯರ್ಥಿ ತನ್ನನ್ನೇ ಯಾವ ರೀತಿ ಪರಿಭಾವಿಸುತ್ತಾನೆ ಎಂದು ತಿಳಿಯುವ ಉದ್ದೇಶವೂ ಉದ್ಯೋಗದಾತನಿಗೆ ಇರುತ್ತದೆ.
ಇದಕ್ಕೆ ಉತ್ತರವಾಗಿ ಯಾವನೇ ಅಭ್ಯರ್ಥಿ ತಾನು ಉದ್ಯೋಗವೊಂದನ್ನು ಪಡೆಯಲು ಮತ್ತು ಅದರಲ್ಲಿ ಮುಂದುವರಿಯಲು ಎಷ್ಟು ಹೆಣಗಾಡಿದೆ ಎಂಬ ಕತೆ ಹೇಳಲು ಶುರುವಿಟ್ಟರೆ, ಅದು ಏನನ್ನು ಸೂಚಿಸುತ್ತದೆ? ಅದು ಅವನ ಆತ್ಮವಿಶ್ವಾಸದ ಕೊರತೆಯನ್ನು ಸೂಚಿಸುತ್ತದೆ ಎಂದು ಉದ್ಯೋಗದಾತರು ಭಾವಿಸಬಹುದು! ಯಾಕೆಂದರೆ, ಅಭ್ಯರ್ಥಿಯ ಯಾವುದೇ ಉತ್ತರವನ್ನು ಉದ್ಯೋಗದಾತರು ಏನೆಂದು ಅರ್ಥ ಮಾಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಅಭ್ಯರ್ಥಿಗೆ ಯಾವುದೇ ನಿಯಂತ್ರಣ ಇರುವುದಿಲ್ಲ, ಅಲ್ಲವೇ?
ಹಾಗೆಯೇ, ಇದಕ್ಕೆ ಉತ್ತರವಾಗಿ ಯಾವನೇ ಅಭ್ಯರ್ಥಿ ತನ್ನ ಬಾಲ್ಯದ ದಿನಗಳ ಮತ್ತು ಖಾಸಗಿ ಬದುಕಿನ ಬಗ್ಗೆ ವರ್ಣರಂಜಿತವಾಗಿ ಮಾತಾಡಲು ಶುರುವಿಟ್ಟರೆ, ಅದು ಏನನ್ನು ಸೂಚಿಸುತ್ತದೆ? ಅದು ಅವನೊಬ್ಬ "ಗುರಿಯಿಲ್ಲದ ವ್ಯಕ್ತಿ” ಎಂದು ಸೂಚಿಸುವ ಅಪಾಯ ಇದ್ದೇ ಇದೆ.
ಈ ಪ್ರಶ್ನೆ, ಅಭ್ಯರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ ಎಂಬುದು ನಿಜ. ಅದೇನಿದ್ದರೂ, ಅಭ್ಯರ್ಥಿಯು ಈ ಪ್ರಶ್ನೆಯನ್ನು ತನ್ನ ಅನುಕೂಲಕ್ಕಾಗಿ ಬಳಸಿಕೊಳ್ಳಬಹುದು. ತನ್ನ ವ್ಯಕ್ತಿತ್ವದ ಕೆಲವು ಆಸಕ್ತಿದಾಯಕ ಸಂಗತಿಗಳನ್ನು, ಈ ಪ್ರಶ್ನೆಗೆ ಉತ್ತರರೂಪದಲ್ಲಿ ಅಭ್ಯರ್ಥಿ ಹೇಳಬಹುದು! ಈ ಪ್ರಶ್ನೆ ಧುತ್ತೆಂದು ಎದುರಾದಾಗ, ಮುಖ್ಯವಾಗಿ ತನ್ನ ಪ್ರೊಫೆಷನಲ್ ಸಾಧನೆಗಳ ಬಗ್ಗೆ ಆಸಕ್ತಿದಾಯಕ ರೀತಿಯಲ್ಲಿ ಅಭ್ಯರ್ಥಿ ಮಾಹಿತಿ ನೀಡಬೇಕು. ಬದಲಾಗಿ, ಅಭ್ಯರ್ಥಿ ತನ್ನ ರೆಸ್ಯೂಮಿನಲ್ಲಿ ಇರುವುದನ್ನೇ ಗಿಳಿಪಾಠ ಒಪ್ಪಿಸಿದರೆ ಯಾವ ಪ್ರಯೋಜನವೂ ಇಲ್ಲ.
ಹಾಗಾದರೆ, ಈ ಪ್ರಶ್ನೆಗೆ ಉತ್ತರವಾಗಿ ಅಭ್ಯರ್ಥಿ ಯಾವ ಸಂಗತಿಗಳನ್ನು ಹೇಳಬೇಕು? ತನ್ನ ಸಾಧನಾ ಕ್ಷೇತ್ರದಲ್ಲಿ ತನಗಿರುವ ಉತ್ಕಟ ಆಸಕ್ತಿ (ಪ್ಯಾಷನ್), ಈ ವರೆಗಿನ ಉದ್ಯೋಗಗಳಲ್ಲಿ ತಾನು ಬೆಳೆದು ಬಂದ ಬಗೆ ಮತ್ತು ಅರ್ಜಿ ಹಾಕಿರುವ ಉದ್ಯೋಗದ ಯಾವ ಅಂಶ ತನ್ನನ್ನು ಬಲವಾಗಿ ಸೆಳೆದಿದೆ - ಈ ಸಂಗತಿಗಳನ್ನು ನೇರವಾಗಿ, ಮನಮುಟ್ಟುವಂತೆ ಹೇಳಿದರೆ ಸಾಕು. ಇದನ್ನು ಹೇಳುವಾಗ, ಈ ಎರಡರಲ್ಲಿ ಒಂದು ಸೀಕ್ವೆನ್ಸ್ ಅನ್ನು ಅನುಸರಿಸಬೇಕು: ತನ್ನ ಜೀವನದ ಈಗಿನ, ಹಿಂದಿನ, ಮುಂದಿನ ಬಗ್ಗೆ ಅಥವಾ ಹಿಂದಿನ, ಈಗಿನ, ಮುಂದಿನ ಬಗ್ಗೆ. ಯಾವ ರೀತಿಯಲ್ಲಿ ಉತ್ತರಿಸಿದರೂ, ಅಭ್ಯರ್ಥಿಯ ಉತ್ತರದ ಪ್ರತಿಯೊಂದು ವಾಕ್ಯವೂ ಆತನ/ ಆಕೆಯ ಪ್ರೊಫೆಷನಲ್ ಗುರಿಗಳನ್ನು ಈಗ ಅರ್ಜಿ ಹಾಕಿರುವ ಉದ್ಯೋಗಕ್ಕೆ ತಳಕು ಹಾಕಲೇ ಬೇಕು.
ಕೆಲವು ಉದ್ಯೋಗದಾತರು ಸಂದರ್ಶನದ ಆರಂಭದ ಬಿಗುವಿನ ವಾತಾವರಣವನ್ನು ತಿಳಿಗೊಳಿಸಲಿಕ್ಕಾಗಿ ಈ ಪ್ರಶ್ನೆಯನ್ನು ಕೇಳುತ್ತಾರೆ. ಆದ್ದರಿಂದ, ಈ ಪ್ರಶ್ನೆ ಎದುರಾದಾಗ ಹೆದರುವ ಅಗತ್ಯವೇ ಇಲ್ಲ. ಹಾಗಂತ, "ಯಾಕೆ ಈ ಪ್ರಶ್ನೆ ಕೇಳುತ್ತಿದ್ದಾರೆ?” ಎಂಬ ಚಿಂತೆಯಲ್ಲಿ ಮುಳುಗಿ, ಗೊಂದಲಕ್ಕೆ ಈಡಾಗುವುದು ಬೇಕಾಗಿಲ್ಲ.
ಅಂತಿಮವಾಗಿ, “ನಿಮ್ಮ ಬಗ್ಗೆ ತಿಳಿಸಿ” ಎಂಬ ಪ್ರಶ್ನೆ, ದೊಡ್ಡ ಸಮಸ್ಯೆ ಅಲ್ಲವೇ ಅಲ್ಲ. ಗಮನಿಸಿ: ಸಂದರ್ಶನದ ಇತರ ಕೆಲವು ಸಾಮಾನ್ಯ ಪ್ರಶ್ನೆಗಳು ಉತ್ತರಿಸಲು ಇದಕ್ಕಿಂತಲೂ ಕಠಿಣ. ಉದಾಹರಣೆಗೆ, “ನಿಮ್ಮ ದೌರ್ಬಲ್ಯಗಳು ಯಾವುವು?" ಆದ್ದರಿಂದ, “ನಿಮ್ಮ ಬಗ್ಗೆ ತಿಳಿಸಿ” ಎಂಬ ಪ್ರಶ್ನೆ, ಈ ಉದ್ಯೋಗಕ್ಕೆ ಇತರ ಎಲ್ಲ ಅಭ್ಯರ್ಥಿಗಳಿಗಿಂತಲೂ ನೀವು ಸೂಕ್ತ ಅಭ್ಯರ್ಥಿ ಎಂಬುದನ್ನು ಉದ್ಯೋಗದಾತರಿಗೆ ಮನವರಿಕೆ ಮಾಡಲು ನಿಮಗೆ ಸಿಕ್ಕ ಸುವರ್ಣ ಅವಕಾಶ ಎಂದು ಭಾವಿಸಿ, ಆತ್ಮವಿಶ್ವಾಸದಿಂದ ಉತ್ತರಿಸಿ.