ಉದ್ವಿಗ್ನಗೊಳ್ಳುತ್ತಿರುವ ರಾಷ್ಟ್ರ ರಾಜಕಾರಣ

ಉದ್ವಿಗ್ನಗೊಳ್ಳುತ್ತಿರುವ ರಾಷ್ಟ್ರ ರಾಜಕಾರಣ

ಬರಹ

ಉದ್ವಿಗ್ನಗೊಳ್ಳುತ್ತಿರುವ ರಾಷ್ಟ್ರ ರಾಜಕಾರಣ

ಬೆಂಗಳೂರು ಉತ್ತರ ಕ್ಷೇತ್ರದ ಲೋಕಸಭಾ ಸದಸ್ಯ ಎಚ್.ಟಿ.ಸಾಂಗ್ಲಿಯಾನ ಅವರ ಕಛೇರಿಯ ಮೇಲೆ ರಾಜಕೀಯ ನೈತಿಕತೆಯೇ ಮೈಮೇಲೆ ಬಂದಂತೆ ಆಕ್ರೋಶ ವ್ಯಕ್ತಪಡಿಸುತ್ತಾ ದಾಳಿ ನಡೆಸಿದ ಬಿಜೆಪಿ ಕಾರ್ಯಕರ್ತರನ್ನು ನೋಡಿದರೆ, ಯಾರಿಗಾದರೂ ಅಯ್ಯೋ ಪಾಪ ಎನಿಸದಿರದು! ಮೊನ್ನೆ ಮೊನ್ನೆ ತಾನೇ ಇದೇ ಬಿಜೆಪಿಯವರು ರಾಜ್ಯದಲ್ಲಿ ವಿರೋಧ ಪಕ್ಷಗಳಿಂದ ಆಯ್ಕೆಯಾಗಿದ್ದ ಐವ್ವರು ಶಾಸಕರನ್ನು 'ಜಾತಿ' ಕೆಡಿಸಿ ನಡೆಸಿದ ರಾಜಕೀಯ ವ್ಯಭಿಚಾರದ ಮುಂದೆ ಸಾಂಗ್ಲಿಯಾನಾ ಮತ್ತು ಇತರೆ ಕೆಲವು ಬಿಜೆಪಿ ಸದಸ್ಯರು ಮೊನ್ನೆಯ ಲೋಕಸಭಾ ಮತ ಪರೀಕ್ಷೆಯಲ್ಲಿ ವ್ಯಕ್ತಪಡಿಸಿರುವ ಭಿನ್ನಾಭಿಪ್ರಾಯ ಏನೇನೂ ಅಲ್ಲ ಎಂದೇ ಹೇಳಬೇಕು. ಅವರು ತಮ್ಮ ಆತ್ಮಸಾಕ್ಷಿಗನುಗುಣವಾಗಿ, ಪರಮಾಣು ಒಪ್ಪಂದ ಭಾರತದ ಹಿತಕ್ಕೆ ಪೂರಕವಾಗಿದೆ ಎಂದು ನಂಬಿಯೇ ಮತ ಹಾಕಿರುವ ಎಲ್ಲ ಸಾಧ್ಯತೆಗಳಿವೆ. ನಿಜ, ಅವರು ತಮ್ಮ ನಿಲುವನ್ನು ತಮ್ಮ ಪಕ್ಷದ ಸಂಸದೀಯ ಸಭೆಯಲ್ಲಿ ಪ್ರಸ್ತಾಪ ಮಾಡಿ, ತಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸಬಹುದಿತ್ತು. ಅಥವಾ ತಮ್ಮ ಪಕ್ಷದ ನಿಲುವನ್ನು ಪ್ರತಿಭಟಿಸಿ, ಪಕ್ಷಕ್ಕೆ ರಾಜೀನಾಮೆ ನೀಡಬಹುದಿತ್ತು. ಆದರೆ, ಈ ನೈತಿಕ ಸೂಕ್ಷ್ಮಗಳೆಲ್ಲ ಓಬೀರಾಯನ ಕಾಲದವೆಂದೂ;ಹಣ-ಅಧಿಕಾರಗಳ ಬೆಂಬಲವಿದ್ದರೆ, ಯಾರು, ಯಾವಾಗ ಬೇಕಾದರೂ-ಆಯ್ಕೆಯಾದ ಮರುದಿನವೇ ಬೇಕಾದರೂ-ಯಾವುದೇ ಪಕ್ಷದಲ್ಲಿರಲು ಸ್ವತಂತ್ರರೆಂದು ಅವರ ಪಕ್ಷವೇ ಇತ್ತೀಚೆಗೆ ಸಾರಿ ಹೇಳಿದೆಯಲ್ಲ?

ರಸಿಕತೆಗೂ, ವ್ಯಭಿಚಾರಕ್ಕೂ ಅಂತಹ ವ್ಯತ್ಯಾಸವೇನಿಲ್ಲ- ತನ್ನ ಮನೆಯ ಮಗ ಮಾಡಿದರೆ ರಸಿಕತೆ, ಪಕ್ಕದ ಮನೆಯವರ ಮಗ ಮಾಡಿದರೆ ವ್ಯಭಿಚಾರ ಎಂದು ಹೇಳಿದಂತಿದೆ ಬಿಜೆಪಿಯವರ ಈಗಿನ 'ನೈತಿಕ' ನಿಲವು! ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಗೆ ಅವರ ಧಮನಿಗಳಲ್ಲಿ ನಿಜವಾಗಿ ನೈತಿಕ ಆಕ್ರೋಶ ಉಕ್ಕೇರುತ್ತಿದ್ದರೆ, ಅವರು ಕಲ್ಲು, ಬಡಿಗೆ, ಚಪ್ಪಲಿಗಳೊಂದಿಗೆ ಮೊದಲು ಧಾವಿಸಬೇಕಾದ್ದು, ರಾಜಕೀಯ ನೈತಿಕತೆಯನ್ನು ಒಂದಿಷ್ಟಾದರೂ ಕಾಪಾಡಲು ನಮ್ಮ ಸಂಸತ್ತು ರೂಪಿಸಿದ್ದ ಪಕ್ಷಾಂತರ ನಿಷೇಧ ಕಾನೂನನ್ನೇ ಅಪಹಾಸ್ಯಕ್ಕೀಡುಮಾಡುವಂತೆ ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಅತ್ಯಂತ ಭಂಡವೆನಿಸಿದ ಪಕ್ಷಾಂತರವನ್ನು ಪ್ರಚೋದಿಸಿದವರ ಮನೆಗಳ ಕಡೆಗೆ! ಆಗ ಅವರ ರಕ್ಷಣೆಗಾಗಿ ಬಿಜೆಪಿ ನಾಯಕರೇ ಹೋಗುತ್ತಾರೋ ಅಥವಾ ಈಗ ದಾಳಿಗೀಡಾಗಿರುವ ಭಿನ್ನಮತೀಯ ಬಿಜೆಪಿ ಸದಸ್ಯರಿಗೆ ಅವರು ಅಸಭ್ಯವಾಗಿ ಸೂಚಿಸಿರುವಂತೆ ರಕ್ಷಣೆಗಾಗಿ 10, ಜನಪಥ್ನ ಮೊರೆ ಹೋಗಬೇಕೆಂದು ಹೇಳುತ್ತಾರೋ ನೋಡಬೇಕು!

ದೇಶ ವಿಭಜನೆಯ ಸಂದರ್ಭದಲ್ಲಿ ಭುಗಿಲೆದ್ದಿದ್ದ ಕೋಮು ಹಿಂಸಾಚಾರದ ಸಂದರ್ಭದಲ್ಲಿ, ಸಮಾಜವಾದಿಗಳ ನೇತೃತ್ವ ವಹಿಸಿಕೊಳ್ಳುವಂತೆ ಕೋರಲು ತಮ್ಮನ್ನು ಭೇಟಿ ಮಾಡಿದ ಸಮಾಜವಾದಿಗಳ ನಿಯೋಗಕ್ಕೆ ಗಾಂಧೀಜಿ, ಈ ಹಿಂಸಾಚಾರಕ್ಕೆ ನೀವೂ ಕಾರಣರೆಂದು ಹೇಳಿದಾಗ ನಿಯೋಗದಲ್ಲಿದ್ದವರು ಬೆಚ್ಚಿ ಬಿದ್ದರಂತೆ. ಆಗ ಗಾಂಧಿ ಹೇಳಿದ್ದು: 1942ರ 'ಭಾರತ ಬಿಟ್ಟು ತೊಲಗಿ' ಚಳುವಳಿಯನ್ನು ಹಿಂಸಾತ್ಮಕಗೊಳಿಸಿದ ನೀವು ಅಹಿಂಸೆಯ ಆದರ್ಶವನ್ನು ಅಪಮೌಲ್ಯಗೊಳಿಸಿ, ಹಿಂಸೆಗೆ ರಾಷ್ಟ್ರ ಜೀವನದಲ್ಲಿ ಒಂದು ಸಾಧುತ್ವ ಹಾಗೂ ಸಮ್ಮತಿಯನ್ನು ಒದಗಿಸಿ ಈ ಹಿಂಸಾಚಾರಕ್ಕೆ ನೀವೂ ಕಾರಣರಾಗಿದ್ದೀರಿ! ಹಾಗೇ, ಇತ್ತೀಚೆಗೆ ರಾಜಕೀಯ ನೈತಿಕತೆಯ ಮೈಮೇಲಿನ ಕೊನೆಯ ಬಟ್ಟೆಯನ್ನೂ ಕಿತ್ತೆಸೆದು ರಾಜ್ಯದ ರಾಜಕೀಯ ವಾತಾವರಣವನ್ನು ಪೂರ್ತಿ ಯಾಗಿ ಅಪವಿತ್ರಗೊಳಿಸಿದಲ್ಲದೆ, ಅದನ್ನು ಭಂಡತನದಿಂದ ಸಮರ್ಥಿಸಿಕೊಳ್ಳಲು ಮುಂದಾದ ಬಿಜೆಪಿಯವರೇ ಸಾಂಗ್ಲಿಯಾನ, ಕುನ್ನೂರು, ಶಿವಣ್ಣ ಮತ್ತು ಮನೋರಮಾ ಅವರಿಗೆ ರಾಜಕೀಯ ನೈತಿಕತೆಯ ಗೆರೆಯನ್ನು ದಾಟುವ ಧೈರ್ಯ-ಸಮರ್ಥನೆಗಳೆರಡನ್ನೂ ಒದಗಿಸಿದ್ದಾರೆ ಎಂದು ಹೇಳಬೇಕು! ಬಿಜೆಪಿಯವರಿಗೆ-ಹಾಗೆ ನೋಡಿದರೆ ಎಲ್ಲರಿಗೂ-ಮೊದಲು ತಿಳಿಯಬೇಕಾದದ್ದು, ರಾಜಕೀಯ ಶೀಲ ಎನ್ನುವುದು ಇಡಿಯಾದದ್ದು. ಅದನ್ನು ಒಡೆದು ಸಮರ್ಥಿಸಿಕೊಳ್ಳಲಾಗುವುದಿಲ್ಲ. ಅದು ಅಶ್ಲೀಲವೆವೆನಿಸಿಕೊಳ್ಳುತ್ತದೆ.

ಅಂದ ಮಾತ್ರಕ್ಕೆ ಸಾಂಗ್ಲಿಯಾನ ಮತ್ತು ಅವರ ಮಿತ್ರರು ಮಾಡಿದ್ದು ಕ್ಷಮಾರ್ಹವೆಂದಲ್ಲ. ಮೊದಲೇ ಹೇಳಿದ ಹಾಗೆ ಅವರು ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ತಮ್ಮ ನಿಲುವನ್ನು ಬಹಿರಂಗವಾಗಿ ಸಮರ್ಥಿಸಿಕೊಳ್ಳಬಹುದಿತ್ತು. ಆದರೆ ಹಾಗೆ ರಾಜೀನಾಮೆ ನೀಡಲು ಇವರಿಗೆಲ್ಲ ಮೂಲತಃ ಪಕ್ಷದ ಬಗ್ಗೆ ನಿಷ್ಠೆ ಇತ್ತೇ ಎಂಬುದು ಪ್ರಶ್ನೆ. ಮತ ಪರೀಕ್ಷೆ ಸಮಯದಲ್ಲಿ ಪಕ್ಷದ ಆಜ್ಞೆಯನ್ನು ಉಲ್ಲಂಘಿಸಿ ಮತ ಹಾಕಿದ ಅಥವಾ ತಟಸ್ಥವಾಗುಳಿದ ರಾಜ್ಯದ ಲೋಕಸಭಾ ಸದಸ್ಯರೆಲ್ಲರೂ, ತಾತ್ವಿಕ ಕಾರಣಗಳ ಮೇಲೆ ಬಿಜೆಪಿಯಲ್ಲಿ ಅಥವಾ ಜೆಡಿಎಎಸ್‌ನಲ್ಲಿ ಇದ್ದವರಲ್ಲ ಎಂಬುದು ಅವರ ರಾಜಕೀಯ ಚರಿತ್ರೆಯನ್ನು ಬಲ್ಲ ಯಾರಿಗಾದರೂ ಸ್ಷಷ್ಟವಾಗುತ್ತದೆ. ಇವರಿಗೆಲ್ಲ, ಈಗ ಹಲ್ಲಲ್ಲು ಕಡಿಯುತ್ತಿರುವ ರಾಜಕೀಯ ಪಕ್ಷಗಳೇ ಆಗ ತಂತಮ್ಮ ರಾಜಕೀಯ ಅನುಕೂಲಗಳಿಗೆ ತಕ್ಕಂತೆ ಕರೆ ನೀಡಿ ಮಣೆ ಹಾಕಿದ್ದುದು. ಆ ರಾಜಕೀಯ ಬೇಜವಾಬ್ದಾರಿತನದ ಫಲವನ್ನು ಈ ಪಕ್ಷಗಳು ಈಗ ಅನುಭವಿಸುತ್ತಿವೆ ಅಷ್ಟೆ.

ಈ ಮತ ಪರೀಕ್ಷೆಯಲ್ಲಿ ಅತಿ ಹೆಚ್ಚು ಆಘಾತಕ್ಕೊಳಗಾಗಿರುವುದು, ತನ್ನನ್ನು ತಾನು ತಾತ್ವಿಕ ಪಕ್ಷವೆಂದು ಬಹು ಹೆಮ್ಮೆಯಿಂದ ಕರೆದುಕೊಳ್ಳುತ್ತಿದ್ದ ಬಿಜೆಪಿಯೇ. ಪಕ್ಷದ ಆಜ್ಞೆ ಉಲ್ಲಂಘಿಸಿದ ಅತಿ ಹೆಚ್ಚು-ಒಟ್ಟು ಎಂಟು ಜನ-ಸದಸ್ಯರು ಈ ಪಕ್ಷಕ್ಕೆ ಸೇರಿದವರು. ಈ ಮತ ಪರೀಕ್ಷೆ ಬಿಜೆಪಿಯನ್ನು ರಾಷ್ಟ್ರೀಯ ರಾಜಕಾರಣದಲ್ಲಿ ಒಂಟಿಯಾಗಿಸಿಬಿಟ್ಟಿದೆ. ಹಾಗೇ, ಅದರ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಕೂಟ ಛಿದ್ರವಾಗಿ ಹೋಗಿದೆ. ಬಿಹಾರದ ಜೆಡಿಯು ಮತ್ತು ಪಂಜಾಬಿನ ಅಕಾಲಿ ದಳದ ಹೊರತಾಗಿ ಮಿಕ್ಕೆಲ್ಲ ಪಕ್ಷಗಳೂ ಮಾಯಾವತಿ ನೇತೃತ್ವದ ಹೊಸ ತೃತೀಯ ರಂಗದೆಡೆಗೆ ವಲಸೆ ಹೋಗಿವೆ. ಏಕೆ ಹೀಗೆ ಎಂದು ಯೋಚಿಸುವ ಕಾಲ ಬಿಜೆಪಿಗೆ ಬಂದಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ತನ್ನ ತಾತ್ವಿಕ ರಾಜಕಾರಣವನ್ನು ಅಧಿಕಾರದ ಆತುರದಲ್ಲಿ ದ್ವೇಷದ ರಾಜಕಾರಣವನ್ನಾಗಿ ಪರಿವರ್ತಿಸಿಕೊಂಡು, ಅದಕ್ಕೆ ತಕ್ಕಂತೆ ಸಿಕ್ಕ ಸಿಕ್ಕವರನ್ನೆಲ್ಲ ಪಕ್ಷಕ್ಕೆ ಆಹ್ವಾನಿಸುತ್ತಾ ಹೇಗೋ ಅಧಿಕಾರದ ಹತ್ತಿರ ಧಾವಿಸುವ ರಾಜಕಾರಣ ಮಾಡಲು ಹೊರಟ ಬಿಜೆಪಿ, ಅತಿ ಬೇಗ ಒಂದು ರೂಕ್ಷ ಪಕ್ಷವಾಗಿ ರೂಪುಗೊಂಡು ಇತರೆಲ್ಲ ಪಕ್ಷಗಳಿಗಿಂತ ಹೆಚ್ಚು ನಿರ್ಣಾಯಕವಾದ ನೈತಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ರಾಷ್ಟ್ರದ ಅತಿ ದೊಡ್ಡ ಪಕ್ಷಗಳಲ್ಲೊಂದಾಗಿರುವ ಈ ಪಕ್ಷದ ಈ ನೈತಿಕ ಬಿಕ್ಕಟ್ಟು, ಬರೀ ಆ ಪಕ್ಷದ ಬಿಕ್ಕಾಟ್ಟಾಗಿರಲು ಸಾಧ್ಯವಿಲ್ಲ. ರಾಷ್ಟ್ರೀಯತೆಯನ್ನು ಸಂಸ್ಕೃತಿಯ ನೆಲೆಯಲ್ಲಿ ಪ್ರತಿಪಾದಿಸುವ ಈ ಪಕ್ಷವೀಗ ತನ್ನ ರಾಜಕೀಯ ಸಂಸ್ಕೃತಿಯ ಬಗೆಗೇ ಗಂಭೀರವಾಗಿ ಆಲೋಚಿಸುವ ಕಾಲ ಬಂದಿದೆ.

ಇನ್ನು ಮತ ಪರೀಕ್ಷೆಯಲ್ಲಿ ಗೆದ್ದಿರುವ ಕಾಂಗ್ರೆಸ್ಸಿನ ಮುಂದಿರುವ ದಾರಿಯ ಕಡೆ ನೋಡೋಣ. ಅದು ಈ ಮತ ಪರೀಕ್ಷೆಯನ್ನು ಗೆದ್ದು ಒಂದು ಮಹಾ ಚುನಾವಣೆಯನ್ನೇ ಗೆದ್ದ ಸಂಭ್ರಮದಿಂದ ಬೀಗುತ್ತಿದೆ! ಆದರೆ ಹಾಗೆ ಬೀಗಲು ಕಾರಣಗಳೇ ಇಲ್ಲವೆಂದು ಇದೇ ಮತ ಪರೀಕ್ಷೆಯ ಸಮಯದಲ್ಲಿ ಸದನದಲ್ಲೇ ಬಹಿರಂಗಗೊಂಡ ಕೋಟ್ಯಾಂತರ ರೂಪಾಯಿಗಳ ನಗದು ಹಗರಣ ಸ್ಪಷ್ಟವಾಗಿ ಹೇಳುತ್ತಿದೆ. ಹಾಗೆ ನೋಡಿದರೆ, 'ಡೆಕ್ಕನ್ ಹೆರಾಲ್ಡ್' ಪತ್ರಿಕೆ ಬಹು ಪರಿಣಾಮಕಾರಿಯಾಗಿ ಹೇಳಿದಂತೆ, ಈ 'ಟ್ರಸ್ಟ್ ವೋಟ್'ನಲ್ಲಿ ಸರ್ಕಾರ ವೋಟ್ ಗೆದ್ದು ಟ್ರಸ್ಟ್ ಕಳೆದುಕೊಂಡಿದೆ! ಈ ಇಡೀ ಮತ ಪರೀಕ್ಷೆಯ ಪ್ರಸಂಗ, ರಾಷ್ಟ್ರ ರಾಜಕಾರಣದ ಶುಚಿ ರುಚಿಗಳನ್ನೇ ಕೆಡಿಸಿದೆ. ಅದು ಡಿ.ಎಂ.ಕೆ. ಹೊರತಾಗಿ ಸರಿಸುಮಾರು ಎಲ್ಲ-ಕಾಂಗ್ರೆಸ್ಸೂ ಸೇರಿದಂತೆ-ಪಕ್ಷಗಳಲ್ಲೂ 'ಬಂಡಾಯ' ಭುಗಿಲೇಳಲು ಕಾರಣವಾಗಿದೆ. ಈ ಬಂಡಾಯದ ಹಿಂದೆ ಇರುವುದು ಖಂಡಿತ ಪರಮಾಣು ಒಪ್ಪಂದದ ಬಗೆಗಿರುವ ನಿಲುವುಗಳಲ್ಲ. ಏಕೆಂದರೆ ಈ ಒಪ್ಪಂದ ಲಾಲೂ ತಮ್ಮ ಭಾಷಣದಲ್ಲಿ ಹೇಳಿದಂತೆ, ಯಾವ ಸಾಮಾನ್ಯ ಸದಸ್ಯನಿಗೂ ಅರ್ಥವಾಗದಷ್ಟು ಕುಟಿಜಟಿಲವಾಗಿದೆ. ಬದಲಿಗೆ, ಪಕ್ಷಗಳೊಳಗೆ ಬಹು ದಿನಗಳಿಂದಲೂ ಹೊಗೆಯಾಡುತ್ತಿದ್ದ ಅಸಮಧಾನಗಳು ಈಗ ಈ 'ರಾಷ್ಟ್ರೀಯ ಹಿತಾಸಕ್ತಿ'ಯ ನೆಪದಲ್ಲಿ ಲಾಭದಾಯಕ ರೂಪಗಳಲ್ಲಿ ಹೊರಬಂದಿವೆ: ತಮ್ಮ ಅಪರಾಧ ಹಿನ್ನೆಲೆಗಳಿಂದಾಗಿ ಹಿನ್ನೆಲೆಗೆ ಸರಿದಿದ್ದ ಒಂದಿಬ್ಬರು ಸದ್ಯದಲ್ಲೇ ಕೇಂದ್ರ ಮಂತ್ರಿಗಳಾಗಲಿದ್ದಾರೆ. ಇನ್ನೊಂದಿಬ್ಬರು ಕೋಟ್ಯಾಂತರ ರೂಪಾಯಿಗಳ ಭ್ರಷ್ಟಾಚಾರದ ಮೊಕದ್ದೆಮೆಯ ಬಲೆಯಿಂದ ಸದ್ಯಕ್ಕಂತೂ ಪಾರಾಗಲಿದ್ದಾರೆ. ಇದರಿಂದಾಗಿ ಸರ್ಕಾರದ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಯ ವಿಶ್ವಾಸಾರ್ಹತೆ ಭಂಗಗೊಳ್ಳುವುದನ್ನು ತಪ್ಪಿಸಲು, ಈ ಹಿಂದೆ ಸರ್ಕಾರದ ಅನುಕೂಲಕ್ಕಾಗಿಯೇ ಇಂತಹುದೇ ಭ್ರಷ್ಟಾಚಾರದ ಮೊಕದ್ದಮೆಯ ಬಲೆಯಿಂದ ಹೆಚ್ಚೂ ಕಡಿಮೆ ಬಿಡುಗಡೆಗೊಂಡಿದ್ದ ಇವರ ಪ್ರಬಲ ರಾಜಕೀಯ ವಿರೋಧಿಯೊಬ್ಬರನ್ನು ಮತ್ತೆ ಬಲೆಗೆ ಕೆಡವಲು ಸಿದ್ಧತೆಗಳು ನಡೆದಿವೆ!

ಅಷ್ಟೇ ಅಲ್ಲ, ರಾಷ್ಟ್ರೀಯ ಹಿತ ದೃಷ್ಟಿಯಿಂದ ಈಶಾನ್ಯ ರಾಜ್ಯಗಳ ಗಡಿಯನ್ನು ಪರಿಷ್ಕರಿಸದಿರಲು ಬಹುಕಾಲದಿಂದ ಬದ್ಧವಾಗಿದ್ದ ಸರ್ಕಾರ ಈಗ ಆ ನೀತಿಯನ್ನು ಪುರ್ನವಿಮರ್ಶಿಸಲು ಸಿದ್ಧವಾಗಿದೆ! ಹೀಗೆ ಒಂಟಿ ಅಥವಾ ಪಕ್ಷೇತರ ಸದಸ್ಯರು ಈ ಅಣು ಒಪ್ಪಂದಿಂದ ಪಡೆದಿರಬಹುದಾದ 'ಪ್ರಯೋಜನ'ಗಳ ಪರಿಣಾಮವನ್ನು ಅರಿಯಬೇಕಿದ್ದರೆ, ತಸ್ಲೀಮಾ ನಸ್ರೀನ್ ಮೇಲೆ ಹೈದರಾಬಾದ್ನಲ್ಲಿ ದಾಳಿ ನಡೆಸಿದ ಎಂ.ಐ.ಎಂ. ಎಂಬ ಮುಸ್ಲಿಂ ಕೋಮುವಾದಿ ಪಕ್ಷದ ತರುಣ ಸದಸ್ಯ ಒವಾಸಿಸ್ ಎಂಬಾತ ಈ ಅಧಿವೇಶನದಲ್ಲಿ ಪ್ರದರ್ಶಿಸಿದ ನಡಾವಳಿಯನ್ನು ಗಮನವಿಟ್ಟು ನೋಡಬೇಕಿತ್ತು. ಈತ ಪರಮಾಣು ಒಪ್ಪಂದದ ಬಗ್ಗೆ ಒಂದೂ ಮಾತಾಡದೆ, ಬಿಜೆಪಿ ಮತ್ತು ಎಡ ಪಕ್ಷಗಳ ಮೇಲೆ ಬೈಗುಳಗಳ ಮಳೆಯನ್ನೇ ಸುರಿಸಿದ್ದಲ್ಲದೆ, ಇದ್ದಕ್ಕಿದ್ದಂತೆ ತಮ್ಮ ನಿಲುವನ್ನು ಸರ್ಕಾರದ ಪರವಾಗಿ ಬದಲಾಯಿಸಿದ ಈಶಾನ್ಯ ರಾಜ್ಯಗಳ ಒಂಟಿ ಸದಸ್ಯರ ಹಿಂದೆ ಬಾಯಗಲಿಸಿ ಕೂತು ಅವರಿಗೆ ಕುಮ್ಮಕ್ಕು ನೀಡುತ್ತಿದ್ದ. ಅವರನ್ನು ವಿರೋಧಿಸಿ ಕೂಗಾಡುತ್ತಿದ್ದ ಎಡ ಪಕ್ಷಗಳ ಸದಸ್ಯರ ಮೇಲೆ ಈತ ಏಕಾಂಗಿ ವೀರನಂತೆ ದೊಡ್ಡ ಗಂಟಲಿನಲ್ಲಿ ಹರಿಹಾಯುತ್ತಿದ್ದ. ಟಿ.ವಿ.ಯಲ್ಲಿ ಕಂಡ ಈ ದೃಶ್ಯಗಳು, ಮನಮೋಹನ ಸಿಂಗರ ನೇತೃತ್ವದ ಸರ್ಕಾರದ ನೈತಿಕ ಕೈ ಎಲ್ಲೆಲ್ಲಿ ಯಾವಾವ ರೂಪದಲ್ಲಿ ಕೆಲಸ ಮಾಡಿತ್ತು ಎಂಬುದನ್ನು ಸೂಚ್ಯವಾಗಿ ಹೇಳುವಂತಿದ್ದವು! ತನ್ನ ತಂದೆಗೆ ಹೋಲಿಸಿದರೆ, ಇದ್ದುದರಲ್ಲಿ ಸಭ್ಯ ರಾಜಕಾರಣಿಯೆನಿಸಿದ ಒಮರ್ ಅಬ್ದುಲ್ಲಾ ಕೂಡಾ ಅಂದು ಮಾತಾಡಿದ್ದು, ಪರಮಾಣು ಒಪ್ಪಂದದ ಸಾಧಕ-ಬಾಧಕಗಳ ಮೇಲಲ್ಲ. ತಮ್ಮ ಪಕ್ಷ ಇತ್ತೀಚಿನವರೆಗೆ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಮತ್ತು ಎಡ ಪಕ್ಷಗಳ 'ಅಪಾಯಕಾರಿ' ರಾಜಕಾರಣದ ಬಗ್ಗೆ!

ಈ ಭಾಷಣಗಳನ್ನು ನಮ್ಮ ರಾಷ್ಟ್ರೀಯ ಮಾಧ್ಯಮಗಳು ಪ್ರಚಂಡ ಭಾಷಣಗಳೆಂದು ಕರೆದವು. ಪರಮಾಣು ಒಪ್ಪಂದವನ್ನು ವಿರೋಧಿಸುತ್ತಿರುವವರು ಇಂಧನ ಅಗತ್ಯಗಳ ವಾಸ್ತವವನ್ನು ನಿರಾಕರಿಸುತ್ತಿಲ್ಲ ಎಂಬ ಪ್ರಾಥಮಿಕ ಅರಿವೂ ಇಲ್ಲದೆ ರಾಹುಲ್ ಗಾಂಧಿ ಬಾಲಿಶವಾಗಿ ಹೇಳಿದ 'ಕಲಾವತಿ ಕಥೆ'ಯನ್ನು ಅದ್ಭುತವೆಂದು ವರ್ಣಿಸಿದವು! ಎಡ ಪಕ್ಷಗಳು ಮತ ಹಾಕುತ್ತಿರುವುದು ಅಣು ಒಪ್ಪಂದದ ವಿರುದ್ಧವಾಗಿಯೇ ಹೊರತು, ಬಿಜೆಪಿ ಪರವಾಗಿ ಅಲ್ಲ ಎಂಬುದು ಗೊತ್ತಿದ್ದೂ, ನೀವು ಕೋಮುವಾದಿ ಬಿಜೆಪಿ ಜೊತೆ ಸೇರಿ ಸರ್ಕಾರದ ವಿರುದ್ಧ ಮತ ಹಾಕುವಿರಾ ಎಂದು ಎಡ ಪಕ್ಷಗಳ ನಾಯಕರನ್ನು ಕೇಳಿ ಅವರನ್ನು ಮುಜುಗರಕ್ಕೀಡು ಮಾಡುವ ಪ್ರಯತ್ನ ಮಾಡಿದವು. ಅಣು ಒಪ್ಪಂದದ ಹಿಂದೆ ಎಂತೆಂತಹ ಶಕ್ತಿಗಳು ಇದ್ದವೆಂದರೆ, ಸರ್ಕಾರ ಮತ ಪರೀಕ್ಷೆಯಲ್ಲಿ ಗೆದ್ದ ದಿನ ನಮ್ಮ ಷೇರುಪೇಟೆ ಸೂಚ್ಯಂಕ ಅಭೂತಪೂರ್ವ ಏರಿಕೆ ಕಂಡಿತು! ಮರುದಿನ ಅದು ಹಾಗೇ ಬಿದ್ದು ಹೋಯಿತು ಕೂಡಾ! ಅಷ್ಟೇ ಅಲ್ಲ, ಸರ್ಕಾರದ ಗೆಲುವಿನಿಂದಾಗಿ ಹಣದುಬ್ಬರ ದರ ಶೇ. 11.91ರಿಂದ ಶೇ.11.89ಕ್ಕೆ ಇಳಿದು ಹೋಯಿತಂತೆ! ಈ ಅಧಿವೇಶನದಲ್ಲಿ ಎದ್ದು ಕಂಡ ಕಾಂಗೆಸ್ಸಿನ ನಿಜವಾದ ದುರಂತವೆಂದರೆ, ಗಾಂಧೀಜಿಯನ್ನು ತನ್ನ ಪರಂಪರೆಯ ಪ್ರತೀಕ ಎಂದು ಇನ್ನೂ ಹೇಳಿಕೊಳ್ಳುತ್ತಿರುವ ಈ ಪಕ್ಷದ ಒಬ್ಬ ಸದಸ್ಯನೂ, ಸಾರಾ ಸಗಟಾಗಿ ನಾವು ಜಾಗತಿಕ ಶಕ್ತಿಯಾಗುವುದೂ ಬೇಡ, ಅದಕ್ಕಾಗಿ ಈ ಪರಮಾಣು ಶಕ್ತಿಯ ರಾಜಕಾರಣವೂ ಬೇಡ ಎಂದು ಹೇಳುವ ವಿವೇಕವನ್ನಾಗಲೀ, ಧೈರ್ಯವನ್ನಾಗಲೀ ಪ್ರದರ್ಶಿಸದೇ ಹೋದದ್ದು. ಕಾಂಗ್ರೆಸ್ ಪೂರ್ತಿಯಾಗಿ ಈಗ ಬೇರೆ ಗಾಂಧಿಗಳನ್ನೇ ತನ್ನ ಪ್ರತೀಕಗಳನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದಂತಿದೆ!

ಅದೇನೇ ಇರಲಿ, ಲೋಕಸಭಾ ಚುನಾವಣೆಗಳು ಬಹು ಹತ್ತಿರದಲ್ಲಿದ್ದಾಗ ಮನಮೋಹನ ಸಿಂಗ್ ಅವರು ರಾಷ್ಟ್ರದ ಮೇಲೆ ಅನಗತ್ಯವಾಗಿ ಹೇರಿದ ಈ ಮತ ಪರೀಕ್ಷೆ ಹುಟ್ಟು ಹಾಕಿರುವ ಈ ಮೂರು ಅಂಶಗಳು ಮುಂದಿನ ರಾಷ್ಟ್ರ ರಾಜಕಾರಣಕ್ಕೆ ಮಾರಕವೆನಿಸುವುದಂತೂ ಖಂಡಿತ:

1. ಕಾಂಗ್ರೆಸ್ಸಿನಲ್ಲಿ ಮನಮೋಹನ ಸಿಂಗರ ಬಲ ಹೆಚ್ಚಲಿದ್ದು, ಅವರ ಗುಂಪು ಪ್ರತಿಪಾದಿಸುವ ಮುಕ್ತ ಮಾರುಕಟ್ಟೆ ಆರ್ಥಿಕ ನೀತಿಗಳನ್ನು ವಿಮರ್ಶಿಸಿ ನಿಯಂತ್ರಿಸಬಲ್ಲ ಪಕ್ಷದೊಳಗಿನ ಮಧ್ಯಮ ಮಾರ್ಗಿ ಗುಂಪು, ಈಗ ಎಡ ಪಕ್ಷಗಳು ದೂರವಾಗುವುದರೊಂದಿಗೆ ದುರ್ಬಲವಾಗಲಿದೆ. ಇದರಿಂದಾಗಿ ಕಾಂಗ್ರೆಸ್ ತನ್ನ ಗಾಂಧಿ-ನೆಹ್ರೂ ವಾರಸುದಾರಿಕೆಯನ್ನು ಪೂರ್ತಿಯಾಗಿ ಕಳೆದುಕೊಂಡು, ರಾಷ್ಟ್ರ ರಾಜಕಾರಣದಲ್ಲಿ ಮಧ್ಯಮ ಮಾರ್ಗಿಯಾದ ಒಂದೂ ಪಕ್ಷ ಇಲ್ಲವಾಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.

2. ಚೀನಾ ಪರವೆಂಬ ಅಪವಾದದ ನಡುವೆಯೂ, ಇದ್ದುದರಲ್ಲಿ ವೈಯುಕ್ತಿಕ ಪರಿಶುದ್ಧತೆಯ ನಾಯಕತ್ವ ಮತ್ತು ಜನಪರ ತಾತ್ವಿಕತೆಯನ್ನು ಇನ್ನೂ ಉಳಿಸಿಕೊಂಡಂತೆ ತೋರುತ್ತಿರುವ ಎಡ ಪಕ್ಷಗಳು ಈಗ ತನ್ನ ಹಿರಿಯ ನಾಯಕ ಸೋಮನಾಥ ಚಟರ್ಜಿಯವರನ್ನು ಪಕ್ಷದಿಂದಲೇ ಉಚ್ಛಾಟಿಸುವಷ್ಟು ಕ್ರುದ್ಧವಾಗಿವೆ. ಈ ಕ್ರುದ್ಧತೆಯಲ್ಲಿ ಅದು, ತತ್ವಕ್ಕೂ ರಾಜಕಾರಣಕ್ಕೂ ಸಂಬಂಧವಿಲ್ಲವೆಂದು ನಿರ್ಭಿಡೆಯಿಂದ ಘೋಷಿಸಬಲ್ಲ ಛಾತಿ ಸಾಧಿಸಿರುವ ಮಾಯಾವತಿಯವರನ್ನು ರಾಷ್ಟ್ರದ ಪ್ರಧಾನ ಮಂತ್ರಿ ಅಭ್ಯರ್ಥಿಯೆಂದು ಘೋಷಿಸಿರುವ ಕೆಲವು ಚಿಲ್ಲರೆ ಅವಕಾಶವಾದಿ ರಾಜಕೀಯ ಪಕ್ಷಗಳ ಜೊತೆ ಸೇರುವಂತಹ ಇಕ್ಕಟ್ಟಿನ ರಾಜಕಾರಣಕ್ಕೆ ಸಿಕ್ಕಿದೆ.

3. ಮುಂದಿನ ಪ್ರಧಾನ ಮಂತ್ರಿ ತಮ್ಮ ನಾಯಕ ಅದ್ವಾನಿಯವರೇ ಎಂದು ಈವರೆಗೆ ನಂಬಿಕೊಂಡು ಬಂದಿದ್ದ ಬಿಜೆಪಿ ಒಳಗಿಂದಲೂ, ಹೊರಗಿಂದಲೂ ಒಮ್ಮೆಗೇ ಹೀನಾಯವಾಗಿ ಕೆಣಕಲ್ಪಟ್ಟಿದೆ. ಹೀಗಾಗಿ ಅದು, ಸದ್ಯದ ಈ ಗೊಂದಲದಲ್ಲಿ ಕೈ ತಪ್ಪಿಹೋದಂತೆ ಕಾಣುತ್ತಿರುವ ತನ್ನ ಗುರಿ ಸಾಧಿಸಲು ಇನ್ನಾವ 'ರಾಷ್ಟ್ರೀಯತಾ ಅಭಿಯಾನ'ವನ್ನು ಆರಂಭಿಸಿ ಈಗಾಗಲೇ ಉದ್ವಿಗ್ನಗೊಂಡಿರುವ ರಾಜಕೀಯ ವಾತಾವರಣವನ್ನು ಇನ್ನೆಷ್ಟು ಉದ್ವಿಗ್ನಗೊಳಿಸುವುದೋ ಎಂಬ ಆತಂಕ ಸೃಷ್ಟಿಯಾಗಿದೆ.

ಇದೆಲ್ಲದಕ್ಕೂ, ಬಡ ಮತ್ತು ಅಸಮ ಸಮಾಜ ಮಾತ್ರವಾಗಿದ್ದ ಭಾರತವನ್ನು, ಅಶಾಂತ ಮತ್ತು ಅಶ್ಲೀಲ ಸಮಾಜವನ್ನಾಗಿಯೂ ಪರಿವರ್ತಿಸತೊಡಗಿರುವ ಮನಮೋಹನ ಸಿಂಗರ ಅಪಕ್ವ ಆರ್ಥಿಕ ನೀತಿಗಳ ಹಠವಾದಿ ರಾಜಕಾರಣವೇ ಕಾರಣವಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲೂ ಸಂಭವಿಸಲಾರಂಬಿಸಿರುವ ಸರಣಿ ಬಾಂಬ್ ಸ್ಫೋಟಗಳು ಇಂತಹ ರಾಜಕಾರಣದ ಫಲವೇ ಆಗಿದೆ. ಇದನ್ನು ನಂಬಲಾಗದವರಷ್ಟೇ ಮನಮೋಹನ ಸಿಂಗರ ಆರ್ಥಿಕ ನೀತಿ ಮತ್ತು ರಾಜಕಾರಣವನ್ನು ಇಡಿಯಾಗಿ ಮತ್ತು ಮುಕ್ತವಾಗಿ ಬೆಂಬಲಿಸುವರು.