ಉಪ್ಪುಂದದ ಹೊಳಪು
*ಉಪ್ಪುಂದ ಚಂದ್ರಶೇಖರ ಹೊಳ್ಳರ ಅಭಿನಂದನ ಗ್ರಂಥ "ಉಪ್ಪುಂದದ ಹೊಳಪು"*
" ಉಪ್ಪುಂದದ ಹೊಳಪು" , ಉಪ್ಪುಂದ ಚಂದ್ರಶೇಖರ ಹೊಳ್ಳರ ಅಭಿನಂದನ ಗ್ರಂಥ. ಡಾ. ಕನರಾಡಿ ವಾದಿರಾಜ ಭಟ್ಟರು ಪ್ರಧಾನ ಸಂಪಾದಕರು. ನೀಲಾವರ ಸುರೇಂದ್ರ ಅಡಿಗ, ಯು. ಗಣೇಶ ಪ್ರಸನ್ನ ಮಯ್ಯ, ಎಂ. ಪ್ರಕಾಶ ಪಡಿಯಾರ್, ಸಂತೋಷ ಕೋಣಿ ಹಾಗೂ ಪ್ರಕಾಶ್ಚಂದ್ರ ಶೆಟ್ಟಿ ಹಲ್ನಾಡು ಇವರು ಸಂಪಾದಕೀಯ ಮಂಡಳಿ ಸದಸ್ಯರು.. 16 + 314 + 16 ಪುಟಗಳ, 400 ರೂಪಾಯಿ ಬೆಲೆಯ ಗ್ರಂಥವನ್ನು 2016ರಲ್ಲಿ "ಕುಂದ ಅಧ್ಯಯನ ಕೇಂದ್ರ" (ಶಂಕರ ಕಲಾ ಮಂದಿರ, ಉಪ್ಪುಂದ- 576232, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ) ಪ್ರಕಟಿಸಿದೆ.
ಖ್ಯಾತ ಚಿತ್ರ ಕಲಾವಿದ ಪಿ. ಎನ್. ಆಚಾರ್ ಅವರು ರಚಿಸಿದ ಆಕರ್ಷಕ ಮುಖಪುಟವಿರುವ ಗ್ರಂಥದಲ್ಲಿ, ಉಪ್ಪುಂದ ಹೊಳ್ಳರ ಬದುಕು ಮತ್ತು ಸಾಧನೆಗೆ ಸಂಬಂಧಿಸಿದ ಕೆಲವು ಛಾಯಾಚಿತ್ರಗಳೂ ಇವೆ.
ಕನರಾಡಿ ವಾದಿರಾಜ ಭಟ್ಟರ ಸಂಪಾದಕೀಯ ಬರೆಹ, ಪ್ರಕಾಶಕರ ಮಾತು ಇವುಗಳನ್ನು ಹೊರತುಪಡಿಸಿ ಗ್ರಂಥದಲ್ಲಿ ಒಟ್ಟು 58 ಲೇಖನಗಳಿವೆ. ಹೊಳ್ಳರಿಗೆ ಎಪ್ಪತ್ತು ಆದಾಗ ಸಿದ್ಧಪಡಿಸಿದ ಈ ಅಭಿನಂದನ ಗ್ರಂಥದ ಬರೆಹಗಳನ್ನು ಹಿರಿಯರ ಹರಕೆ, ಮಿತ್ರರ ಮೆಚ್ಚುಗೆ, ಸಹಯೋಗಿಗಳ ಮೆಲುಕು, ಕಾವ್ಯ ಮಲ್ಲಿಗೆ, ಬಂಧುಗಳ ನಲ್ನುಡಿ ಮತ್ತು ಮಾಧ್ಯಮಗಳ ಮಧ್ಯೆ ಎಂಬ ಆರು ಪ್ರತ್ಯೇಕ ಭಾಗಗಳನ್ನಾಗಿ ಮಾಡಲಾಗಿದೆ.
ಹರಿಕೃಷ್ಣ ಪುನರೂರು, ರಂಜನ ಭಟ್ಟ (ಎನ್. ಪಿ. ಭಟ್ಟ), ಶಿರೂರು ಫಣಿಯಪ್ಪಯ್ಯ, ಕೆ. ದಾಮೋದರ ಐತಾಳ, ಪಿ. ಶೇಷಪ್ಪಯ್ಯ, ಪ್ರೊ | ಎ. ಪಿ. ಮಿತ್ತಂತಾಯ, ಡಾ. ನಾ. ಮೊಗಸಾಲೆ, ಡಾ. ಎಂ. ಪ್ರಭಾಕರ ಜೋಷಿ, ಡಾ. ಶಿಕಾರಿಪುರ ಕೃಷ್ಣಮೂರ್ತಿ, ಬೈಂದೂರು ಉಮಾಪತಿ ಹೊಳ್ಳ, ನೀಲಾವರ ಸುರೇಂದ್ರ ಅಡಿಗ, ವ್ಹಿ. ಎಸ್. ಸೊರಟೂರ, ವಾಸುದೇವ ಎಸ್. ಸೊರಟೂರ, ಡಿ. ಪಿ. ಭಟ್, ಕೆ. ಜಿ. ರಾಮಚಂದ್ರ, ವಿದ್ವಾನ್ ಭಾಸ್ಕರ ಉಡುಪ, ವೇ. ಮೂ. ಶಿವರಾಮ ಕೇಶವ ಜೋಗಳೇಕರ್, ಬಾ. ಸಾಮಗ, ಶ್ರೀಮತಿ ಕೆ. ಶಾರದಾ ಭಟ್, ಡಾ. ಮಹಾಬಲೇಶ್ವರ ರಾವ್, ಡಾ. ಪದ್ಮನಾಭ ಕೇಕುಣ್ಣಾಯ, ಮಂಗೇಶ ಶೆಣೈ ಏಳ್ಜಿತ, ವ. ರಮೇಶ ಕಾರಂತ, ಕೆ. ಲಕ್ಷ್ಮಣ ನಕ್ಷತ್ರಿ, ಎಂ. ಮಜೀದ್, ವೇ. ಮೂ. ತಿರುಮಲೇಶ ಭಟ್ಟ, ಎಂ. ನಾಗರಾಜ ಭಟ್ಟ, ಸುರೇಶ ಅವಭೃತ, ಕೇಶವ ನಾಯ್ಕ, ಯು. ಸಂದೇಶ ಭಟ್, ಸುಧಾಕರ ಪಿ., ಗಣಪತಿ ಹೋಬಳಿದಾರ್, ಡಾ. ನಿಷ್ಠಿ ರುದ್ರಪ್ಪ, ಅಂಬಾತನಯ ಮುದ್ರಾಡಿ, ಹೆಚ್. ಶಾಂತರಾಜ್ ಐತಾಳ್, ಉಪ್ಪುಂದ ರಮೇಶ ವೈದ್ಯ, ವಿ. ಎಸ್. ರಾಮಮೂರ್ತಿ, ಶ್ರೀಮತಿ ಲಲಿತಾ ಅಂಬಾಗಿಲು, ಯು. ಬಾಲಕೃಷ್ಣ ವೈದ್ಯ, ಶ್ರೀಮತಿ ಕಾವೇರಿ ಬಾಲಕೃಷ್ಣ ವೈದ್ಯ, ರಮಾದೇವಿ ಆಚಾರ್ಯ, ನಾಗರತ್ನ ಹೆಬ್ಬಾರ್, ಎಸ್. ಜನಾರ್ದನ್, ಕೆ. ಎ. ರಾಮಕೃಷ್ಣ ಮೂರ್ತಿ, ಯು. ಸುಬ್ರಹ್ಮಣ್ಯ ಭಟ್, ಶ್ರೀಮತಿ ನಾಗರತ್ನ ಎಂ. ಜಿ., ದಿನೇಶ್ ಸುದರ್ಶನ್, ಕನರಾಡಿ ವಾದಿರಾಜ ಭಟ್ಟ, ಮ.ರಾ. ಹೆಬ್ಬಾರ, ರಾಮಕೃಷ್ಣ ಹೆಬ್ಬಾರ, ಗಣೇಶ ಪ್ರಸನ್ನ ಮಯ್ಯ, ವಡ್ಡರ್ಸೆ ರಘುರಾಮ ಶೆಟ್ಟಿ, ಗುರುಕಿರಣ ವೈದ್ಯ, ಮಾನಸ ಹೆಗಡೆ, ಸುವೃತಾನಂದ ಸ್ವಾಮೀಜಿ, ಪ್ರಕಾಶ ಪಡಿಯಾರ್, ಸಂತೋಷ್ ಕೋಣಿ ಮೊದಲಾದವರ ಬರಹಗಳು "ಉಪ್ಪುಂದದ ಹೊಳಪು" ವಿನಲ್ಲಿದೆ.
ಅಂಚೆ ಮತ್ತು ತಂತಿ ಇಲಾಖೆಯಲ್ಲಿ ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿಯಲ್ಲಿ ಸೇವೆ ಸಲ್ಲಿಸಿದ ಹೊಳ್ಳರು, ಕೇಂದ್ರ ಸರಕಾರಿ ನೌಕರರ ವಿಭಾಗೀಯ ಕಾರ್ಯದರ್ಶಿಯಾಗಿಯೂ ಇದ್ದವರು. ಸರಕಾರಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದು ಯಶಸ್ವಿ ಉದ್ಯಮಿಯಾಗಿ ಹೆಸರುಗಳಿಸಿದರು. ಒಂದು ಅವಧಿಗೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದರು. ಸಾಹಿತ್ಯ, ಸಂಸ್ಕೃತಿ, ಧಾರ್ಮೀಕ, ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಹೊಳ್ಳರಿಗೆ ಹಲವಾರು ಸನ್ಮಾನಗಳು, ಪ್ರಶಸ್ತಿಗಳೂ ಸಂದಿವೆ.
ಹುಟ್ಟೂರು ಉಪ್ಪುಂದದಲ್ಲಿ ಶಂಕರ ಕಲಾ ಮಂದಿರ, ಶಂಕರ ಆರ್ಟ್ ಗ್ಯಾಲರಿ, ಏಳು ಸಾವಿರಕ್ಕೂ ಅಧಿಕ ಪುಸ್ತಕಗಳಿರುವ ಗ್ರಂಥಾಲಯ, ವಾಚನಾಲಯ, ಮುನ್ನೂರಕ್ಕೂ ಅಧಿಕ ಅಮೂಲ್ಯ ವಸ್ತುಗಳಿರುವ ವಸ್ತು ಸಂಗ್ರಹಾಲಯ, ಹೊಳ್ಳರ ಚಾರಿಟೇಬಲ್ ಟ್ರಸ್ಟ್, ಲಕ್ಷ್ಮೀ ನರಸಿಂಹ ಕೈಗಾರಿಕಾ ತರಬೇತಿ ಸಂಸ್ಥೆ, ಬಸ್ರೂರಿನಲ್ಲಿ ವೃದ್ಧರಿಗಾಗಿ ವಿಶ್ರಾಂತಿಧಾಮ, ಉಪ್ಪುಂದ ಮಹಿಳಾ ವಿವಿದೋದ್ಧೇಶ ಸಹಕಾರಿ ಸಂಘ, ಕಾವೇರಿ ಬಾಲ ವಿಜಸನ ಕೇಂದ್ರ ಮುಂತಾದವುಗಳ ಸ್ಥಾಪಕರಾದ ಹೊಳ್ಳರು ರಚಿಸಿದ ಕೃತಿಗಳು ಮೂವತ್ತಕ್ಕೂ ಹೆಚ್ಚು.
2012ರಲ್ಲಿ ಬೈಂದೂರಿನಲ್ಲಿ ನಡೆದ ಕುಂದಾಪುರ ತಾಲೂಕು 12 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಉಪ್ಪುಂದ ಚಂದ್ರಶೇಖರ ಹೊಳ್ಳರು, ದಾವಣಗೆರೆಯಲ್ಲಿದ್ದಾಗ ಅಂತಾರಾಷ್ಟ್ರೀಯ ಸಂಸ್ಥೆ "ರೋಟರಿ"ಯ ಅಧ್ಯಕ್ಷರಾಗಿದ್ದವರು. ದಾವಣಗೆರೆಯ ಶ್ರೀಕೃಷ್ಣ ಸೇವಾ ಡ್ರಸ್ಟಿನ ರೂವಾರಿಗಳಲ್ಲಿ ಒಬ್ಬರು. ಶ್ರೀಕೃಷ್ಣ ವಿದ್ಯಾರ್ಥಿ ನಿಲಯದ ನಿರ್ವಾಹಕರೂ ಆಗಿದ್ದವರು.
~ *ಶ್ರೀರಾಮ ದಿವಾಣ*