ಊಟವಾದ ತಕ್ಷಣ ಕೆಲವರಿಗೆ ಎದೆಯುರಿ ಬರಲು ಕಾರಣವೇನು?
ಕೆಲವು ಮಂದಿಗೆ ಊಟದ ಬಳಿಕ ಎದೆಯುರಿ, ನಿದ್ರೆ, ಹುಳಿತೇಗು ಮೊದಲಾದ ಸಮಸ್ಯೆಗಳು ಕಾಡುತ್ತವೆ. ಇದಕ್ಕೇನು ಕಾರಣ ಗೊತ್ತಿದೆಯಾ? ಬಹಳಷ್ಟು ಮಂದಿಗೆ ಒಂದು ಭರ್ಜರಿ ಊಟದ ಬಳಿಕ ನಿದ್ರೆ ಮಾಡಬೇಕೆಂಬ ಮನಸ್ಸಾಗುತ್ತದೆ. ಏಕೆಂದರೆ ಅಷ್ಟರ ಮಟ್ಟಿಗೆ ಅವರಿಗೆ ದೇಹದಲ್ಲಿ ಅಸಹಜ ಅನುಭವಗಳಾಗಲು ಪ್ರಾರಂಭವಾಗುತ್ತವೆ. ಎದೆಯುರಿ, ಹುಳಿತೇಗು ಬರಲು ಪ್ರಾರಂಭವಾಗುತ್ತದೆ. ಇಂದಿನ ಯುವ ಜನತೆಯಲ್ಲಿ ಈ ಸಮಸ್ಯೆ ಇತ್ತೀಚೆಗೆ ಬಹಳಷ್ಟು ಕಂಡು ಬರುತ್ತಿದೆ.
ಆರೋಗ್ಯಕರವಾದ ಜೀರ್ಣ ಶಕ್ತಿ ಇಲ್ಲದೇ ಇರುವುದೇ ಈ ರೀತಿಯ ಸಮಸ್ಯೆಗೆ ಬಹುಮುಖ್ಯ ಕಾರಣ. ನಾವು ಸೇವಿಸುವ ಆಹಾರ ಚೆನ್ನಾಗಿ ಜೀರ್ಣವಾಗಲು ಹೊಟ್ಟೆಯ ಭಾಗದಲ್ಲಿ ಆಮ್ಲದ ಉತ್ಪತ್ತಿ ಆಗುತ್ತದೆ. ಇದು ಮೇಲ್ಭಾಗಕ್ಕೆ ಅಂದರೆ ಎದೆಯ ಭಾಗಕ್ಕೆ ಚಲಿಸಿದಾಗ ಎದೆಯುರಿ ಕಾಣಿಸುತ್ತದೆ. ಊಟ ಆದ ತಕ್ಷಣದಲ್ಲಿ ಕೆಲವು ಜನರಿಗೆ ಈ ರೀತಿಯ ಅನುಭವವಾಗುತ್ತದೆ. ಬಾಯಿ ಕಹಿಯಾದಂತಹ ಅನುಭವವಾಗುತ್ತದೆ. ನಮ್ಮ ಹೊಟ್ಟೆಯ ಭಾಗ ಡಯಾಫ್ರಮ್ ಮಾಂಸ ಖಂಡಗಳ ಮೂಲಕ ಎದೆಯ ಭಾಗಕ್ಕೆ ಒತ್ತಿದಾಗ ಈ ಸಮಸ್ಯೆ ಕಂಡು ಬರುತ್ತದೆ.
ಊಟ ಆದ ನಂತರ ಎದೆ ಉರಿ ಕಂಡು ಬರಲು ಇದೇ ಮುಖ್ಯ ಕಾರಣ. ತುಂಬಾ ಜನರಲ್ಲಿ ಈಗೀಗ ಈ ಸಮಸ್ಯೆ ಕಂಡು ಬರತೊಡಗಿದೆ. ನಮ್ಮ ಜೀವನ ಶೈಲಿಯು ಸರಿಯಾಗಿಲ್ಲದೇ ಇರುವುದರಿಂದ ಮತ್ತು ನಾವು ತೆಗೆದುಕೊಳ್ಳುವ ಔಷಧಿಗಳ ಅಡ್ಡಪರಿಣಾಮಗಳ ಕಾರಣದಿಂದ ಹೀಗಾಗುತ್ತದೆ. ಈ ಸಮಸ್ಯೆಯನ್ನು ಔಷಧಿಗಳ ಮೂಲಕ್ ಸರಿಪಡಿಸಬಹುದಾಗಿದ್ದರೂ ಅದು ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತದೆ.
ನಮ್ಮ ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ವಿಪರೀತವಾಗಿ ಬಳಸಿದಾಗ ಮತ್ತು ಸರಿಯಾದ ಸಮಯದಲ್ಲಿ ಆಹಾರ ಸೇವನೆ ಮಾಡದೇ ಇದ್ದಲ್ಲಿ ಈ ಸಮಸ್ಯೆ ಪದೇ ಪದೇ ಕಾಣಿಸತೊಡಗುತ್ತದೆ. ಮಸಾಲೆ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿದಾಗ ನಮ್ಮ ದೇಹ ಬಿಸಿಯಾಗುತ್ತದೆ. ಆಗ ಎದೆಯುರಿ ಕಂಡು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ತುಂಬಾ ತೀವ್ರವಾಗಿ ಈ ಅನುಭವವಾಗುವುದರಿಂದ ಬಾಯಿಯಲ್ಲಿ ಸಹ ಉರಿ ಕಂಡು ಬರುತ್ತದೆ ಮತ್ತು ಹೊಟ್ಟೆ ನೋವು ಜೊತೆಗೆ ಗ್ಯಾಸ್ಟ್ರಿಕ್ (ವಾಯು ಬಾಧೆ) ಸಹಾ ಆಗುತ್ತದೆ.
ಈ ಸಂದರ್ಭಗಳಲ್ಲಿ ತಣ್ಣಗಿರುವ ಹಾಲು, ಮಜ್ಜಿಗೆ, ಮಂಜುಗಡ್ಡೆ, ಡೈರಿ ಉತ್ಪನ್ನಗಳನ್ನು ಸೇವನೆ ಮಾಡಿದರೆ ಅದು ನಿಮ್ಮ ಹೊಟ್ಟೆಯ ಆರೋಗ್ಯವನ್ನು ಕಾಪಾಡುವುದರಲ್ಲಿ ನೆರವು ನೀಡುತ್ತದೆ. ಸರಿಯಾಗಿ ತಿಳುವಳಿಕೆ ಇರುವವರಿಂದ ಮನೆ ಮದ್ದು ಸಹ ಪಡೆದುಕೊಳ್ಳಬಹುದು. ದೈಹಿಕವಾಗಿ ನಾವು ಹೆಚ್ಚು ಚಟುವಟಿಕೆಗಳಿಂದ ಇರಬೇಕು. ನಿಯಮಿತ ವ್ಯಾಯಾಮ, ವಾಕಿಂಗ್ ಉತ್ತಮ ಪರಿಹಾರ ನೀಡುತ್ತದೆ. ಒಂದು ವೇಳೆ ಈ ಎದೆಯುರಿಯ ಸಮಸ್ಯೆ ಪದೇ ಪದೇ ಕಾಡುತ್ತಿದ್ದರೆ ಕುಟುಂಬದ ವೈದ್ಯರನ್ನು ಭೇಟಿಯಾಗಿ ಅವರ ಸಲಹೆಯನ್ನು ಪಡೆಯಬೇಕು.
ಬಹಳಷ್ಟು ಜನರಿಗೆ ಒಂದು ಕೆಟ್ಟ ಅಭ್ಯಾಸವಿದೆ. ರಾತ್ರಿಯ ಅಥವಾ ಮದ್ಯಾಹ್ನದ ಊಟ ಆದ ತಕ್ಷಣ ಮಲಗುತ್ತಾರೆ. ಇದರಿಂದ ನಿಮ್ಮ ದೇಹದಲ್ಲಿ ಜೀರ್ಣಕ್ರಿಯೆ ನಡೆಯುವುದು ನಿಧಾನವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಆಮ್ಲ ನಿಮ್ಮ ಎದೆಯ ಭಾಗಕ್ಕೆ ಚಲಿಸಲು ಪ್ರಾರಂಭಿಸುತ್ತದೆ. ಇದರಿಂದ ನಿಮಗೆ ಎದೆಯುರಿ ಕಾಣಿಸುತ್ತದೆ. ಊಟ ಆದ ಬಳಿಕ ನಿದ್ರೆ ಮಾಡಲು ಹೋಗದೇ ಚಟುವಟಿಕೆಯಿಂದ ಇರಬೇಕು. ಅರ್ಧ ಕಿಲೋ ಮೀಟರ್ ನಿಧಾನ ನಡಿಗೆ ಉತ್ತಮ. ಇದರಿಂದ ನಿಮ್ಮ ರಕ್ತದಲ್ಲಿರುವ ಸಕ್ಕರೆ ಪ್ರಮಾಣವೂ ನಿಯಂತ್ರಣದಲ್ಲಿರುತ್ತದೆ. ಜೀರ್ಣಶಕ್ತಿಯೂ ವೃದ್ಧಿಸುತ್ತದೆ. ರಾತ್ರಿಯ ಊಟಕ್ಕೂ ನಿದ್ರೆಗೂ ನಡುವೆ ಎರಡು ಗಂಟೆಯ ಅಂತರವಿರಲಿ. ಇದೇ ಕಾರಣಕ್ಕೆ ನಮ್ಮ ಹಿರಿಯರು ರಾತ್ರಿ ೭ ಗಂಟೆಗೇ ಊಟವನ್ನು ಮಾಡಿ ಮುಗಿಸುತ್ತಿದ್ದರು. ಆದರೆ ಈಗಿನ ಯಾಂತ್ರಿಕ ಯುಗದಲ್ಲಿ ರಾತ್ರಿ ೧೦ ಗಂಟೆಯಾದರೂ ಊಟ ಮಾಡಿರುವುದಿಲ್ಲ. ಊಟ ಮಾಡಿದ ತಕ್ಷಣ ಮಲಗುತ್ತಾರೆ. ಮರುದಿನದಿಂದ ಆರೋಗ್ಯ ಸಮಸ್ಯೆ ಕಾಣಿಸಲು ಪ್ರಾರಂಭವಾಗುತ್ತದೆ.
ಊಟದ ಬಳಿಕ ಯೋಗ ಮಾಡುವುದಾದರೆ ವಜ್ರಾಸನ ಮಾಡುವುದು ಉತ್ತಮ. ಏಕೆಂದರೆ ನಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ಈ ವಜ್ರಾಸನ ಹೆಚ್ಚಿಸುತ್ತದೆ. ನಾವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿದರೆ ದೇಹದಲ್ಲಿ ಬೊಜ್ಜು ಬೆಳೆಯುವುದಿಲ್ಲ. ಎದೆಯುರಿ ಮುಂತಾದ ಸಮಸ್ಯೆಗಳು ತುಂಬಾ ಅಧಿಕವಾಗಿದ್ದರೆ ಉತ್ತಮ ಆಹಾರ ತಜ್ಞರನ್ನು ಸಂಪರ್ಕಿಸಿ ನಿಮ್ಮ ಜೀವನ ಶೈಲಿಯನ್ನು ಸುಧಾರಿಸುವ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಉತ್ತಮ. ಮಾತ್ರೆ ಕೇವಲ ತಾತ್ಕಾಲಿಕ ಪರಿಹಾರ ಮಾತ್ರ ನೀಡುತ್ತದೆ, ಶಾಶ್ವತ ಪರಿಹಾರಕ್ಕೆ ಜೀವನಶೈಲಿಯಲ್ಲಿ ಬದಲಾವಣೆ, ತಿನ್ನುವ ಆಹಾರ ಪದಾರ್ಥಗಳಲ್ಲಿ ನಿಯಂತ್ರಣ ಬಹು ಮುಖ್ಯ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ