ಋಷ್ಯಶೃಂಗ

ಋಷ್ಯಶೃಂಗ

ಪುಸ್ತಕದ ಲೇಖಕ/ಕವಿಯ ಹೆಸರು
ಹರೀಶ ಹಾಗಲವಾಡಿ
ಪ್ರಕಾಶಕರು
ಛಂದ ಪುಸ್ತಕ, ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೨೫.೦೦ ಮೊದಲ ಮುದ್ರಣ: ೨೦೨೦

ಬೆಂಗಳೂರಿನ ಛಂದ ಪುಸ್ತಕದವರು ಪ್ರತೀ ವರ್ಷ ಉದಯೋನ್ಮುಖ ಬರಹಗಾರರ ಪುಸ್ತಕಗಳನ್ನು ಮುದ್ರಿಸುತ್ತಾರೆ. ೨೦೨೦ರ ಸಾಲಿನಲ್ಲಿ ಬಿಡುಗಡೆಯಾದ ೪ ಪುಸ್ತಕಗಳಲ್ಲಿ ಒಂದು ಪುಸ್ತಕವೇ ಹರೀಶ್ ಹಾಗಲವಾಡಿಯವರ ಕಾದಂಬರಿ ಋಷ್ಯಶೃಂಗ. ತುಮಕೂರಿನ ಬಳಿಯ ಹಾಗಲವಾಡಿಯವರಾದ ಹರೀಶ್ ಇವರಿಗೆ ವಿದ್ಯಾಭ್ಯಾಸದ ಕಾಲದಿಂದಲೂ ಸಂಸ್ಕೃತಿ, ಆಧ್ಯಾತ್ಮಗಳ ಸೆಳೆತ. ಈಗ ಪ್ರಸ್ತುತ ಸಂಸ್ಕೃತ ಅಧ್ಯಾಪಕರಾಗಿ, ಭಾರತೀಯ ಸಂಸ್ಕೃತಿಯ ಸಂಶೋಧಕ ವಿದ್ಯಾರ್ಥಿಯಾಗಿ ದುಡಿಯುತ್ತಾ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ‘ನ್ಯಾಸ' ಇವರ ಮೊದಲ ಕಾದಂಬರಿ.

ಹರೀಶ್ ಅವರ ಈ ಕಾದಂಬರಿಯಲ್ಲಿ ೯ ಅಧ್ಯಾಯಗಳಿವೆ. ಹರೀಶ್ ಅವರದ್ದು ನೇರವಾಗಿ ಬರೆಯುವ ಸ್ವಭಾವವಲ್ಲ. ಕಾದಂಬರಿಯನ್ನು ಅನೇಕ ಕೋನಗಳಲ್ಲಿ ಬರೆದಿದ್ದಾರೆ. ಓದಲು ಸರಾಗವಾಗಿದ್ದರೂ ಕೆಲವೆಡೆ ಅವರೇ ಪುಸ್ತಕದಲ್ಲಿ ಬರೆದುಕೊಂಡಂತೆ ಈ ಕಾದಂಬರಿ ಬರೆದದ್ದು ಒಂದು ಅಸಂಗತ ಅನುಭವದಂತೆ ಭಾಸವಾದದ್ದಿದೆ ಎಂದಿದ್ದಾರೆ. 

ಕಥೆಗಾರ ನಾಗರಾಜ ವಸ್ತಾರೆಯವರು ಈ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ. ಡಿಯರ್ ಋಷ್ಯಶೃಂಗ... ಎಂದು ಬರೆಯಲು ಪ್ರಾರಂಭಿಸಿರುವ ನಾಗರಾಜ ವಸ್ತಾರೆಯವರು ಮರುಳ ನೀನು. ಹುಚ್ಚಾಪಟ್ಟೆ ಎಣಿಕೆಗೆ ಸಿಗದವನು. ನಿಲುಕಿಗೆಟುಕದವನು ಎಂದೆಲ್ಲಾ ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ಬರೆಯುತ್ತಾರೆ ‘ ಈ ಬೆಂಗಳೂರು ನಿನ್ನನ್ನು ಕಾಡಿರುವಷ್ಟೇ- ಬಹುಷಃ ಇನ್ನೂ ಹೆಚ್ಚು, ನನ್ನನ್ನು ಕೆಣಕಿರುವುದೂ ಹೌದು. ಆದರೆ, ಇನ್ನೂ ಮದುವೆಗಣಿಯಾಗದ ಅವಸ್ಥೆಯಲ್ಲಿರುವ ನೀನು, ನಿನ್ನಂಥವರು ಕಾಣುವ ಈ ಶಹರ, ಶಾಹರಿಕತೆ ನನ್ನಲ್ಲಿ ಬೆರಗು ಹುಟ್ಟಿಸುತ್ತದೆ. ಉದ್ಯೋಗದೊಡನೆ ದುಡ್ಡು ಕೊಡುವ ಈ ಊರು ಜೀವನಕ್ಕೊಂದು ಕ್ರಮವನ್ನೂ ಕೊಡುತ್ತದೆನ್ನುವ ನಿನ್ನ ಮಾತಿಗೆ ಸಲಾಮು.’

ಸುಮಾರು ೧೨೫ ಪುಟಗಳ ಪುಟ್ಟ ಕಾದಂಬರಿಯು ಓದಲು ರುಚಿಕರವಾಗಿದೆ. ಅಪಾರ ರಚಿಸಿದ ಮುಖಪುಟ ಕಾದಂಬರಿಗೆ ಒಂದು ಹೊಸ ರೂಪ ನೀಡುತ್ತಿರುವಂತೆ ಭಾಸವಾಗುತ್ತದೆ. ಹೊಸಬರ ಹೊಸತನದ ನಿರೂಪಣೆ ಈ ಕಾದಂಬರಿಯ ಉದ್ದಕ್ಕೂ ಓದುಗರನ್ನು ಕಾಡಲಿದೆ. ಇದು ಛಂದ ಪುಸ್ತಕದ ೮೩ನೇ ಪ್ರಕಟಣೆ.