ಎಚ್ಚರಿಕೆ ಅಗತ್ಯ
ಜಾಗತಿಕವಾಗಿ ಕರೊನಾ ಸೋಂಕು ಮತ್ತೆ ಉಲ್ಬಣಗೊಂಡಿರುವುದು ಹೊಸ ತಲೆನೋವು ಸೃಷ್ಟಿಸಿದೆ. ಕಳೆದ ವಾರಕ್ಕೆ ಹೋಲಿಸಿದರೆ ಶೇಕಡ ೮ ರಷ್ಟು ಹೆಚ್ಚಳ ಕಂಡು ಬಂದಿದೆ. ಮಾರ್ಚ್ ೭ರಿಂದ ೧೩ರವರೆಗಿನ ಅವಧಿಯಲ್ಲಿ ೧.೧೦ ಕೋಟಿ ಹೊಸ ಪ್ರಕರಣಗಳು ಕಂಡುಬಂದಿರುವುದು ಮತ್ತು ೪೩ ಸಾವಿರ ಜನರು ಮೃತಪಟ್ಟಿರುವುದು ತೀವ್ರ ಕಳವಳ ಮೂಡಿಸಿದೆ. ದಕ್ಷಿಣ ಕೊರಿಯಾ ಹಾಗೂ ಚೀನಾದಲ್ಲಿ ಶೇಕಡ ೨೫ರಷ್ಟು ಪ್ರಕರಣಗಳು ಹಾಗೂ ಶೇ ೨೭ರಷ್ಟು ಸಾವಿನ ಸಂಖ್ಯೆ ಏರಿಕೆ ಕಂಡಿದೆ. ಏಷ್ಯಾದಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು, ಈ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸುವಂತೆಯೂ ಹೇಳಲಾಗಿದೆ. ಭಾರತದಲ್ಲಿ ಕೋವಿಡ್ ಮೂರನೇ ಅಲೆಯ ತೀವ್ರತೆ ತಗ್ಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ೩೦ ಸಾವಿರಕ್ಕಿಂತ ಕಡಿಮೆ ಇದೆ. ಹೀಗಿರುವಾಗ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಿ, ಆರ್ಥಿಕ ಚಟುವಟಿಕೆಗಳು ವೇಗ ಪಡೆಯಲಿವೆ ಎಂಬ ಆಶಾವಾದ ಮೂಡಿತ್ತು. ಆದರೆ, ಹಲವು ದೇಶಗಳಲ್ಲಿ ಸೋಂಕು ಪ್ರಸರಣ ತೀವ್ರಗೊಂಡಿರುವುದರಿಂದ, ಭಾರತದಲ್ಲಿ ನಾಲ್ಕನೇ ಅಲೆ ಪ್ರವೇಶಿಸಲಿದೆಯೇ ಎಂಬ ಆತಂಕ ಶುರುವಾಗಿದೆ. ಈ ಮಧ್ಯೆ ತಜ್ಞರು ನೀಡಿರುವ ಎಚ್ಚರಿಕೆಯನ್ನೂ ಕಡೆಗಣಿಸುವಂತಿಲ್ಲ. ‘ಭಾರತದಲ್ಲಿ ಕರೊನಾ ಸೋಂಕಿನ ತೀವ್ರತೆ ಕಡಿಮೆಯಾಗಿದ್ದರೂ, ಇನ್ನೂ ಪೂರ್ತಿ ನಿರ್ಮೂಲನೆಯಾಗಿಲ್ಲ. ಸರ್ಕಾರ ಹಾಗೂ ಜನರು ಕೋವಿಡ್ ಅಂತ್ಯಗೊಂಡಿದೆ ಎಂಬಂತೆ ವರ್ತಿಸುತ್ತಿರುವುದು ಅಪಾಯಕಾರಿ. ಹೊಸ ಪ್ರಭೇಧಗಳು ಮತ್ತೆ ಅಪಾಯ ತಂದೊಡ್ಡಬಹುದು' ಎಂದು ಹೇಳಿದ್ದಾರೆ. ಹಾಗಾಗಿಯೇ ಕೇಂದ್ರ ಸರಕಾರ ಮತ್ತೆ ಸುರಕ್ಷತಾ ಕ್ರಮಗಳನ್ನು ಕೊಂಚ ಬಿಗಿಗೊಳಿಸಲು ಚಿಂತನೆ ನಡೆಸಿದ್ದು, ಈ ಹಿನ್ನಲೆಯಲ್ಲಿ ರಾಜ್ಯಗಳಿಗೂ ಸೂಚನೆ ರವಾನಿಸಿದೆ.
ಚೀನಾದಲ್ಲಿ ಎರಡು ವರ್ಷದಲ್ಲೇ ಗರಿಷ್ಟ ದೈನಂದಿನ ಪ್ರಕರಣಗಳು ದಾಖಲಾಗಿದ್ದು, ಕೆಲ ನಗರಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಸೋಂಕು ಪ್ರಸರಣ ನಿಯಂತ್ರಣಕ್ಕೆ ಬರದಿದ್ದರೆ ಲಾಕ್ ಡೌನ್ ಇನ್ನಷ್ಟು ನಗರಗಳಿಗೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ಇಸ್ರೇಲ್ ನಲ್ಲಿ ಕೋವಿಡ್ ಸೋಂಕಿನ ಹೊಸ ತಳಿ ಪತ್ತೆಯಾಗಿದೆ.
‘ಕೋವಿಡ್ ಸಂಖ್ಯೆ ಕಡಿಮೆ ಆಗುತ್ತಿರುವ ಹಿನ್ನಲೆಯಲ್ಲಿ ಹೊಸ ಕ್ರಮಕ್ಕೆ ಅನುವಾಗಲು ವಿಶ್ವ ಭಾರತದತ್ತ ನೋಡುತ್ತಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೋವಿಡ್ ನಿಯಂತ್ರಣದಲ್ಲಿ ಭಾರತ ಯಶಸ್ಸು ಸಾಧಿಸಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಸೋಂಕಿನ ಹೊಸ ತಳಿ, ಮತ್ತೊಂದು ಅಲೆಯನ್ನು ಸೃಷ್ಟಿಸಿದರೆ ಆ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಬೇಕಾಗಿದೆ. ಮೂರನೇ ಅಲೆ ಹೊತ್ತಲ್ಲಿ ಜನರಲ್ಲಿ ಲಘು ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಿತ್ತು. ಪರಿಣಾಮ, ಆರೋಗ್ಯ ವ್ಯವಸ್ಥೆ ಮೇಲೆ ಅಂಥ ಒತ್ತಡ ಬೀಳಲಿಲ್ಲ. ಹಾಗಂತ, ಎರಡನೇ ಅಲೆಯಲ್ಲಿ ಆದ ಅಪಾರ ಜೀವಹಾನಿಯನ್ನು ಮರೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸನ್ನದ್ಧವಾಗಿರಬೇಕು. ಜನಸಾಮಾನ್ಯರೂ ಕೂಡ ನಿರ್ಲಕ್ಷ್ಯ ಮಾಡದೆ, ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೧೯-೦೩-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ