ಎಪ್ರಿಲ್ ೫ : ರಾಷ್ಟ್ರೀಯ ಕಡಲ ದಿನ

ಎಪ್ರಿಲ್ ೫ : ರಾಷ್ಟ್ರೀಯ ಕಡಲ ದಿನ

ಪ್ರತಿ ದಿನವೂ ವಿಶೇಷ ದಿನವೇ. ಪ್ರತೀ ದಿನ ಏನಾದರೂ ಆಚರಣೆ, ಗಣ್ಯ ವ್ಯಕ್ತಿಗಳ ಜನನ-ಮರಣ ದಿನಗಳು, ಹಬ್ಬಗಳು, ರಾಷ್ಟ್ರೀಯ ಹಬ್ಬಗಳು ಇದ್ದೇ ಇರುತ್ತವೆ. ಇಂದು ಎಪ್ರಿಲ್ ೫. ಏನಿದರ ವಿಶೇಷ ಎನ್ನುವಿರಾ? ಇಂದು ರಾಷ್ಟ್ರೀಯ ಕಡಲ ದಿನ. ಇದರ ಜೊತೆಗೆ ‘ಹಸಿರು ಕ್ರಾಂತಿಯ ಹರಿಕಾರ' ಡಾ.ಬಾಬು ಜಗಜೀವನ ರಾಂ ಅವರ ೧೧೪ ನೆಯ ಹುಟ್ಟು ಹಬ್ಬದ ಸಂಭ್ರಮ. ಬಾಬು ಜಗಜೀವನ ರಾಂ ಅವರನ್ನು ನೆನೆಯುತ್ತಾ, ನಾವಿಂದು ಕಡಲ ದಿನದ ವಿಶೇಷತೆಗಳ ಬಗ್ಗೆ ತಿಳಿಯೋಣ.

ನೌಕಾಯಾನವು ಬಹಳ ಹಿಂದಿನಿಂದಲೂ ಸಾಗಿ ಬಂದಿರುವ ಸಾಗಾಟ ವ್ಯವಸ್ಥೆ. ಭಾರತವನ್ನು ಹುಡುಕಲು ಹೊರಟ ಕೊಲಂಬಸ್ ಆಗಲಿ, ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಬಂದ ವಾಸ್ಕೋಡಿಗಾಮಾ ಆಗಲಿ ಪ್ರಯಾಣ ಬೆಳೆಸಿದ್ದು ಹಡಗಿನಲ್ಲೇ. ಹಡಗು ಒಂದು ಅದ್ಭುತ. ನೂರಾರು ಟನ್ ತೂಕದ ಲೋಹದ ವಸ್ತುವೊಂದು ನೀರಿನಲ್ಲಿ ತೇಲಿಕೊಂಡು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು ಒಂದು ಅದ್ಭುತವೇ ಸರಿ. ಪ್ರತಿಕೂಲ ಹವಾಮಾನವನ್ನು ದಾಟಿ ಮುನ್ನುಗ್ಗುವ ನೌಕಾಯಾನ ಒಂದು ಪವಾಡವೇ ಸರಿ. ಎಲ್ಲಿ ನೋಡಿದರೂ ಕಡಲು, ಒಂದು ರೀತಿಯಲ್ಲಿ ಮನೋವ್ಯಾಧಿಗೂ ಕಾರಣವಾಗುತ್ತದೆ. ಆದರೆ ನೌಕಾಯಾನದ ಮೂಲಕ ಒಂದೇ ಸಲಕ್ಕೆ ಬಹಳಷ್ಟು ಸಾಮಗ್ರಿಗಳನ್ನು ಸಾಗಿಸುವುದು ಸಾಧ್ಯವಿದೆ. ಭಾರತೀಯ ಹಡಗು ೧೯೧೯ರ ಎಪ್ರಿಲ್ ೫ ರಂದು ತನ್ನ ಮೊದಲ ಸಮುದ್ರಯಾನವನ್ನು ಪ್ರಾರಂಭಿಸಿತು. ಈ ನೆನಪಿಗಾಗಿ ಆ ದಿನವನ್ನು ರಾಷ್ಟ್ರೀಯ ಕಡಲ ದಿನ (National Maritime Day) ಎಂದು ಘೋಷಿಸಲಾಗಿದೆ. ೧೯೬೪ರಂದು ಈ ಆಚರಣೆಯನ್ನು ಘೋಷಿಸಲಾಯಿತು.

ಈ ದಿನ ಸ್ಥಳೀಯ ಭಾರತೀಯ ಉದ್ಯಮಿಗಳ ಒಡೆತನದ ಮೊದಲ ದೊಡ್ದ ಹಡಗು ಕಂಪೆನಿ ‘ದಿ ಸಿಂಧಿಯಾ ಸ್ಟೀಮ್ ನ್ಯಾವಿಗೇಷನ್ ಲಿ.’ ಇದರ ಹಡಗು ‘ಎಸ್ ಎಸ್ ಲಾಯಲ್ಟಿ' ಅಂದಿನ ಬಾಂಬೆ (ಮುಂಬಯಿ) ಯಿಂದ ಲಂಡನ್ ಗೆ ಪ್ರಯಾಣ ಬೆಳೆಸಿತ್ತು. ಆ ಸಮಯದಲ್ಲಿ ಭಾರತದಿಂದ ಸಂಬಾರು ಪದಾರ್ಥಗಳು, ಸುಗಂಧ ದ್ರವ್ಯಗಳು ಹಾಗೂ ಬಟ್ಟೆಬರೆಗಳನ್ನು ಕಳಿಸಲಾಗುತ್ತಿತ್ತು. 

ಭಾರತ ದೇಶದ ಆರ್ಥಿಕತೆ ಬೆಳೆಯಲು ನೌಕಾಯಾನ ಬಹಳ ಉಪಯುಕ್ತ ಹಾಗೂ ಅಗತ್ಯ. ನಮ್ಮ ದೇಶದ ಸರಕುಗಳಿಗೆ ವಿದೇಶಗಳಲ್ಲಿ ಉತ್ತಮ ಮಾರುಕಟ್ಟೆ ಇರುತ್ತದೆ. ಆದರೆ ಸಾಗಾಟದ ವೆಚ್ಚವೇ ಉತ್ಪಾದನಾ ವೆಚ್ಚಕ್ಕಿಂತ ಅಧಿಕವಾದರೆ ಲಾಭ ಇರುವುದಿಲ್ಲ. ಆ ಕಾರಣದಿಂದ ಒಂದೇ ಬಾರಿಗೆ ಹಲವಾರು ಟನ್ ಗಳಷ್ಟು ಸರಕನ್ನು ಸಾಗಿಸುವ ಹಡಗು ಉತ್ತಮ ಸಾಗಾಟದ ವ್ಯವಸ್ಥೆಯಾಗಿದೆ. ಈ ಕಾರಣದಿಂದಲೇ ದೊಡ್ದ ದೊಡ್ಡ ಹಡಗುಗಳು ಸಾಗರದಲ್ಲಿ ಪ್ರಯಾಣ ಬೆಳೆಸುತ್ತಲೇ ಇರುತ್ತವೆ. ಇವುಗಳಿಗೆ ತಂಗಲು ಮತ್ತು ಇವುಗಳಿಂದ ಸಾಮಾಗ್ರಿಗಳನ್ನು ಇಳಿಸಲು ಉತ್ತಮವಾದ ಬಂದರುಗಳ ವ್ಯವಸ್ಥೆಯೂ ಅಗತ್ಯವಾಗಿರುತ್ತದೆ. ನಮ್ಮ ದೇಶದಿಂದ ಸಾಮಾಗ್ರಿಗಳನ್ನು ರಫ್ತು ಮಾಡುವಂತೆ ನಮ್ಮಲ್ಲಿ ಕೊರತೆಯಿರುವ ಅಥವಾ ಅಲಭ್ಯವಾಗಿರುವ ಸಾಮಾಗ್ರಿಗಳನ್ನು ನಾವು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲೂ ನೌಕಾಯಾನದ ಅಗತ್ಯತೆ ಇದೆ. 

ಕಾಲ ಕಳೆದಂತೆ ಸಾಗಾಟದ ವಿಧಗಳೂ ಬದಲಾಗಿವೆ. ಮೊದಲಾದರೆ ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುವುದೇ ಬಹಳ ದೊಡ್ಡ ತೊಡಕಾಗಿತ್ತು. ಎಲ್ಲಿ ನೋಡಿದರೂ ನೀರು ಕಾಣಿಸುವ ಕಡಲಿನಲ್ಲಿ ಯಾವ ದಿಕ್ಕಿನಲ್ಲಿ ಹೋಗುವುದು? ಆದರೂ ನಮ್ಮ ಹಿರಿಯರು ನಕ್ಷತ್ರ ಮತ್ತು ನಕ್ಷತ್ರ ಪುಂಜಗಳನ್ನು ಆಧರಿಸಿ ದಿಕ್ಕು ನಿರ್ಧಾರ ಮಾಡುತ್ತಿದ್ದರು. ಅದರೆ ಇಂದು ಆಧುನಿಕ ಸಂಪರ್ಕ ಸಾಧನಗಳು, ನೆವಿಗೇಷನ್ ವಿಧಾನಗಳು ಎಲ್ಲಾ ಇವೆ. 

ಹಿಂದೆಲ್ಲಾ ನಮ್ಮ ಬಳಿ ಇದ್ದುದು ವಿದೇಶಿ ಸಾಗಾಟದ ನೌಕೆಗಳು. ಕ್ರಮೇಣ ಸ್ವದೇಶಿ ಹಡಗುಗಳನ್ನು ತಯಾರಿಸುವತ್ತ ಮನಸ್ಸು ಮಾಡಲಾಯಿತು. ಗುಜರಾತಿನ ಉದ್ಯಮಿ ವಾಲ್ಬಂದ್ ಹೀರಾಚಂದ್ ಎಂಬವರು ಸ್ವದೇಶೀ ತಂತ್ರಜ್ಞಾನದ ಹಡಗುಗಳ ಉದ್ಯಮವನ್ನು ಮಾಡಬೇಕೆಂಬ ಕನಸು ಕಾಣುತ್ತಾರೆ. ಇವರು ತಮ್ಮ ಸ್ನೇಹಿತರಾದ ನರೋತ್ತಮ್ ಮೊರಾರ್ಜಿ, ಕಿಲಚಂದ್ ದೇವಚಂದ್ ಹಾಗೂ ಲಲ್ಲೂಭಾಯ್ ಜೊತೆ ಸೇರಿ ಗ್ವಾಲಿಯರ್ ನ ಸಿಂಧಿಯಾಸ್ ನಿಂದ ಆರ್ ಎಂ ಎಸ್ ಎಂಪ್ರೆಸ್ ಎಂಬ ನೌಕೆಯನ್ನು ಖರೀದಿಸುತ್ತಾರೆ. ಈ ಹಡಗನ್ನು ನಂತರದ ದಿನಗಳಲ್ಲಿ ಎಸ್ ಎಸ್ ಲಾಯಲ್ಟಿ ಎಂದು ಮರು ನಾಮಕರಣ ಮಾಡಲಾಯಿತು. ಈ ಹಡಗು ಮೊದಲ ಬಾರಿಗೆ ೧೯೧೯ರಂದು ಲಂಡನ್ ಗೆ ಪ್ರಯಾಣ ಬೆಳೆಸಿತು. ಈ ಉದ್ದಿಮೆಯ ಪ್ರಾರಂಭಿಕ ದಿನಗಳಲ್ಲಿ ಬ್ರಿಟೀಷ್ ಸರಕಾರ ಹಾಗೂ ಹಡಗು ಕಂಪೆನಿಗಳಿಂದ ತೀವ್ರ ಸ್ಪರ್ಧೆ ಹಾಗೂ ಕಿರಿಕಿರಿಯನ್ನು ಅನುಭವಿಸಬೇಕಾಗಿ ಬಂತು. ಆದರೆ ಸಿಂಧಿಯಾ ಸ್ಟೀಮ್ ನ್ಯಾವಿಗೇಶನ್ ಕಂಪೆನಿ ಈ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಬೆಳೆಯಿತು.   

ಈಗಂತೂ ಭಾರತವು ಅತ್ಯಂತ ಸುಧಾರಿಕ ಹಡಗುಗಳನ್ನು ನಿರ್ಮಾಣ ಮಾಡುತ್ತಿದೆ. ಭಾರತೀಯ ಹಡಗುಗಳು ಲೀಲಾಜಾಲವಾಗಿ ನೂರಾರು ಟನ್ ಗಳಷ್ಟು ಸರಕನ್ನು ಹೇರಿಕೊಂಡು ವಿದೇಶಯಾನ ಮಾಡುತ್ತಿವೆ. ಭಾರತದ ಆರ್ಥಿಕತೆಯನ್ನು ಸುಧಾರಿಸುತ್ತಿದೆ. ಭಾರತೀಯ ಕಡಲ ದಿನವನ್ನು ಆಚರಿಸುವ ಉದ್ದೇಶವೂ ಇದೇ ಆಗಿದೆ. ಸ್ವಾವಲಂಬಿ, ಸ್ವಾಭಿಮಾನದ ಕನಸು ನನಸಾಗುವತ್ತ ಭಾರತ ಸಾಗಲಿ ಎಂಬುವುದೇ ನಮ್ಮ ಹಾರೈಕೆ.

ಚಿತ್ರ ಕೃಪೆ: ಅಂತರ್ಜಾಲ ತಾಣ