ಎಮ್ಮೆ - ನಮ್ಮ ಹೆಮ್ಮೆ !
ನಮ್ಮದೇ ದೇಶದ ತಳಿ. ಬಡವರ ಭಾಗ್ಯನಿಧಿ. ಯಾರಿಗೂ ಬೇಡದ ಕಸವನ್ನು ತಿಂದು ರಸದಂತ ಗಟ್ಟಿ ಹಾಲು ನೀಡುವ ಪಶು. ಅದಕ್ಕೆ ಆಕಳುಗಳಿಗೆ ಸಿಗಬೇಕಾದ ಗೌರವ ಮನ್ನಣೆ ಯಾವತ್ತೂ ಸಿಕ್ಕೇ ಇಲ್ಲ. ಒಂದು ರೀತಿಯಲ್ಲಿ ಅವು ಶೋಷಿತ ಜೀವಿಗಳು. ಆಕಳುಗಳನ್ನು ಗೋಮಾತೆ, ಕಾಮಧೇನು, ಇತ್ಯಾದಿಗಳಿಂದ ಕರೆದರೂ ಎಮ್ಮೆಗಳನ್ನು ಯಾರು “ಎಮ್ಮೆ ಮಾತೆ, ಎಮ್ಮೆ ತಾಯಿ” ಎಂದು ಯಾರು ಕರೆದಾರು? ಕರೆಯುವುದು ಅಪರೂಪವೇ ಸರಿ. ಹಾಗಿದ್ದರೆ ಯಾಕೆ ಈ ರೀತಿ ಎಮ್ಮೆ ಅಲಕ್ಷ್ಯಕ್ಕೆ ಒಳಗಾಗಿದೆ? ತಿಳಿದಿದೆಯೇ?
ಎಮ್ಮೆ ಮೂಲೆಗೆ ತಳ್ಳಲ್ಪಡಲು ಆಕಳಿನ ಪರ “ಲಾಬಿ” ವಹಿಸಿದವರೇ ಕಾರಣ ಎಂದು ಎಮ್ಮೆ ಪ್ರೇಮಿಗಳು ಗೊಣಗುತ್ತಾರೆ. ಎಮ್ಮೆಗೆ ಮಹಿಷನ ಅಪರಾವತಾರ, ಅದರ ಹಾಲು ಕುಡಿದರೆ ಬುದ್ಧಿ ಮಂದವಾಗುತ್ತೆ, ಅದು ಅನಿಷ್ಟದ ಸಂಕೇತ, ಗಲೀಜು ಪ್ರಾಣಿ, ಪೂಜೆಗೆ ಯೋಗ್ಯವಲ್ಲ, ಅದರ ಹಾಲನ್ನು ಅಭಿಷೇಕಕ್ಕೂ ಬಳಸಬಾರದು ಎಂಬಿತ್ಯಾದಿ ಆರೋಪಗಳ ಸುರಿಮಳೆಯನ್ನೇ ಅದರ ಮೇಲೆ ಹೊರಿಸಿ ಅನ್ಯಾಯವಾಗಿ ಅದು ಕಸಾಯಿ ಖಾನೆಗೆ ಸೇರುವಂತೆ ಮಾಡಿದ್ದು ಆಕಳನ್ನು ಗೋಮಾತೆ ಎಂದು ಅಟ್ಟಕ್ಕೇರಿಸಿ ಅದರ ಪರ ಇಲ್ಲದ್ದೆಲ್ಲಾ ಪಕ್ಷಪಾತ ಮಾಡಿ ಎಮ್ಮೆಯನ್ನು ತ್ಯಾಜ್ಯ ವಸ್ತುವಿನಂತೆ ನಿಕೃಷ್ಟವಾಗಿ ಕಂಡವರೇ ಕಾರಣ ಎಂಬುದೂ ಸಹ ಎಮ್ಮೆ ಪ್ರೇಮಿಗಳ ಅಭಿಪ್ರಾಯ. ಅದರ ತಳಿ ನಿಶ್ಯೇಷವಾಗಿ ಹೋಗಲು ನಮ್ಮಲ್ಲಿ ಪ್ರಾಣಿಗಳಲ್ಲೇ ಜರ್ಸಿ, ಎಚ್ ಎಫ್, ದೇಸಿ ತಳಿ, ಭಾರತೀಯ ತಳಿ ಎಂದೆಲ್ಲಾ ಜಾತಿ ಬೇಧದ ಭಾವ ಮೂಡಿಸುವ ಆಕಳು ಪ್ರೇಮಿಗಳೇ ನೇರವಾಗಿ ಹೊಣೆ ಎಂಬುದು ಅಂಬೋಣ. ಏನೂ ಅರಿಯದ ಚಿಕ್ಕ ಮಕ್ಕಳಿಗಿಂತ ಮುಗ್ಧ ಮನಸ್ಸಿನ ಪ್ರಾಣಿಗಳಲ್ಲೇ ಜಾತಿ ಬೇಧ ಉಂಟು ಮಾಡಿದ ಈ ಮನುಷ್ಯರ ಸಂಕುಚಿತ ಬುದ್ಧಿಗೇನನ್ನೋಣ? ಧಿಕ್ಕಾರವೆನ್ನೋಣವೇ? ಎಂದು ಎಮ್ಮೆ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಎಮ್ಮೆ ಹಾಲು ದಪ್ಪ ಜಾಸ್ತಿ. ಅದರಲ್ಲಿ ಘನ ಪದಾರ್ಥ ಮತ್ತು ಕೊಬ್ಬು ಜಾಸ್ತಿ. ಕೆಲವರಿಗೆ ಜೀರ್ಣ ಶಕ್ತಿ ಹೆಚ್ಚು ಇರುವುದಿಲ್ಲ. ಅಂತವರಿಗೆ ಸತತ ಹಾಲಿನ ಉಪಯೋಗ ಅಜೀರ್ಣ ಉಂಟು ಮಾಡೀತು. ಇವರಿಗೆ ನಮ್ಮ ನಿಮ್ಮೆಲ್ಲರ ನೆಚ್ಚಿನ ದೇಸಿ ಆಕಳಿನ ಹಾಲು ಕುಡಿದರೂ ಅಜೀರ್ಣವಾದೀತು. ಅಂತವರನ್ನು ಬಿಟ್ಟು ಇತರರಿಗೆ ಎಮ್ಮೆ ಹಾಲು ಕುಡಿಯುವುದರಿಂದ ಯಾವುದೇ ತೊಂದರೆ ಇಲ್ಲ. ಅಜೀರ್ಣ ಸಮಸ್ಯೆ ಇರುವವರಿಗೂ ಸಾಕಷ್ಟು ನೀರು ಸೇರಿಸಿ ಉಪಯೋಗಿಸಬಹುದು. ಇನ್ನು ಆಕಳಿನ ಹಾಲೇ ಶ್ರೇಷ್ಟ, ಅದು ಭಯಂಕರ ಔಷಧಿಯ ಗುಣ ಹೊಂದಿದೆ, ಅಮೃತಕ್ಕೆ ಸಮಾನ ಎಂದೆಲ್ಲಾ ಹೊಗಳಿ ಅಟ್ಟಕ್ಕೇರಿಸುವವರೆಲ್ಲಾ ಒಂದು ವಿಷಯ ತಿಳಿದು ಕೊಳ್ಳುವುದು ಒಳ್ಳೆಯದು.ಹಾಲಿನ ರುಚಿ, ಗುಣಮಟ್ಟದಲ್ಲಿ ತಳಿಯಿಂದ ತಳಿಗೆ ವ್ಯತ್ಯಾಸ ಇದೆ.ಇದೇ ಮಾದರಿ ವ್ಯತ್ಯಾಸ ದನ, ಎಮ್ಮೆಗೆ ಕೊಡುವ ಆಹಾರ ವ್ಯತ್ಯಾಸದಲ್ಲೂ ಬರುತ್ತದೆ. ಕೆಲವೊಂದು ಜೀನ್ಸ್ಗೆ ಸಂಬಂಧ ಪಟ್ಟದ್ದೂ ಇರಬಹುದು. ಇದು ಭಾರೀ ಮಹತ್ವದ ಸಂಗತಿ ಅಲ್ಲ. ಆಹಾರಕ್ಕೂ ಬುದ್ದಿವಂತಿಗೆಗೂ ಸಂಬಂಧ ಇಲ್ಲ. ಹಾಗೆಯೇ ಎಮ್ಮೆ ಹಾಲನ್ನು ಕುಡಿದವರು ದಡ್ಡರಾಗುವುದೂ ಇಲ್ಲ; ಆಕಳ ಹಾಲು, ತುಪ್ಪ ತಿಂದವರು ಅತಿ ಶ್ರೇಷ್ಟ ಬುದ್ಧಿವಂತರಾಗುವುದೂ ಇಲ್ಲ. ದಡ್ಡತನ, ಬುದ್ಧಿವಂತಿಕೆ ಅವರವರ ತಂದೆ ತಾಯಂದಿರ ಮತ್ತು ವಂಶದ ತಳಿ ಸಂಕಿರಣದ ಮೇಲೆ, ಅವರಿಗೆ ಚಿಕ್ಕಂದಿನಿಂದ ಸಿಗುವ ಸಂಸ್ಕಾರದ ಮೇಲೆ ನಿಂತಿದೆಯೇ ಹೊರತು ಹಾಲು ತುಪ್ಪದ ಸೇವನೆಯ ಮೇಲಲ್ಲ ಅನ್ನುವುದಕ್ಕೆ ಸಾಕಷ್ಟು ವೈಜ್ಞಾನಿಕ ದಾಖಲೆಗಳಿವೆ.
ಒಂದಿಷ್ಟು ಅಂಕಿ ಅಂಶ ಗಮನಿಸಿ. ವಿಶ್ವದಲ್ಲಿ ಸುಮಾರು 140 ಮಿಲಿಯನ್ ಎಮ್ಮೆಗಳಿವೆ. ಅವುಗಳಲ್ಲಿ ಶೇಕಡಾ 97 ರಷ್ಟು ಏಷ್ಯಾ ಮತ್ತು ಪೆಸಿಫಿಕ್ ಭಾಗದಲ್ಲೇ ಇವೆ. ಭಾರತ, ಚೀನಾ, ಪಾಕಿಸ್ತಾನ ಹಾಗೂ ಥೈಲ್ಯಾಂಡ್ ದೇಶಗಳಲ್ಲಿ ಎಮ್ಮೆಗಳು ವ್ಯಾಪಕವಾಗಿವೆ. ವಿಶ್ವದಲ್ಲಿರುವ ಒಟ್ಟು ಎಮ್ಮೆಗಳ ಪೈಕಿ ಶೇಕಡಾ 53 ರಷ್ಟು ಎಮ್ಮೆಗಳು ಭಾರತದಲ್ಲೇ ಇವೆ. ಸಿಂಧೂ ಮತ್ತು ಗಂಗಾ ನದಿಯ ಪ್ರದೇಶಗಳೇ ಈ ಎಮ್ಮೆಗಳ ಮೂಲಸ್ಥಾನ. ಅನಂತರ ಅವು ಏಷ್ಯಾದ ಎಲ್ಲಾ ಕಡೆ ವ್ಯಾಪಿಸಿದವು. ಸುಮಾರು ಐದು ಸಾವಿರ ವರ್ಷಗಳ ಹಿಂದೆಯೇ ಸಿಂಧೂ ಕಣಿವೆಯಲ್ಲಿ ಎಮ್ಮೆಗಳನ್ನು ಸಾಕಲಾಗುತ್ತಿತ್ತು. ಒಟ್ಟು ಉತ್ಪನ್ನವಾಗುವ ಹಾಲಿನ ಶೇ: 51 ರಷ್ಟು ಎಮ್ಮೆಗಳ ಕೊಡುಗೆ ಎಂಬುದು ಎಮ್ಮೆಯ ಹೆಮ್ಮೆ.
ಭಾರತದಲ್ಲಿ ಅಧಿಕವಾಗಿ ಉಪಯೋಗವಾಗುವ ಆಹಾರವೆಂದರೆ ಕೆನೆಭರಿತ ಎಮ್ಮೆಯ ಹಾಲು. ಆದರೆ ಎಮ್ಮೆಯ ಹಾಲು ಕುಡಿದವರ ಬುದ್ದಿ ಮಂದವಾಗುತ್ತದೆ ಎಂಬ ಮೂಢ ನಂಬಿಕೆಯೊಂದಿದೆ. ಸಾಮಾನ್ಯವಾಗಿ ಎಮ್ಮೆಗಳು ಉದಾಸೀನ ಪ್ರವೃತ್ತಿಯವುಗಳಾಗಿರುವುದರಿಂದ ಇಂಥ ನಂಬಿಕೆ ಹುಟ್ಟಿಕೊಂಡಿರಲೂ ಸಾಕು. ವಾಸ್ತವವಾಗಿ ಎಮ್ಮೆಯ ಹಾಲು ಬರೀ ಸ್ವಾಧಿಷ್ಟವಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು ಎಂದು ಸಾಬೀತಾಗಿದೆ. ಎಮ್ಮೆಯ ಹಾಲಿನಲ್ಲಿ ಹಸುವಿನ ಹಾಲಿಗಿಂತಲೂ ಹೆಚ್ಚು ಘನ ಪದಾರ್ಥ, ಪ್ರೋಟೀನ್ ಅನ್ನಾಂಗಗಳು ಹಾಗೂ ಕೊಬ್ಬಿನಂಶವಿದೆ. ಕೊಬ್ಬಿನಂಶ ಹೆಚ್ಚಾಗಿದ್ದರೂ ಎಮ್ಮೆಯ ಹಾಲಿನಲ್ಲಿ ಕೊಲೆಸ್ಟರಾಲ್ ಕಡಿಮೆಯಿದೆ. ಜೊತೆಗೆ ಹಸುವಿನ ಹಾಲಿಗಿಂತ ಹೆಚ್ಚು ಕ್ಯಾಲ್ಸಿಯಂ, ಫಾಸ್ಫರಸ್, ‘ಎ’ ಪ್ರೋಟೀನ್, ‘ಸಿ’ ಪ್ರೋಟೀನ್ ಇದ್ದು, ಕಡಿಮೆ ಸೋಡಿಯಂ ಹಾಗೂ ಪೊಟ್ಯಾಸಿಯಂ ಇವೆ. ಮೇಲಾಗಿ ಎಮ್ಮೆಯ ಹಾಲು ಬೇಗ ಕೆಡುವುದಿಲ್ಲ. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಂತೂ ಕೆಲವರು ಎಮ್ಮೆ ಹಾಲಿನಿಂದ ಚಹಾ ಮಾಡದಿದ್ದರೆ ಅದನ್ನು ಕುಡಿಯುವುದೇ ಇಲ್ಲ.
ಹಾಲು ತುಪ್ಪದ ಗುಣ ಮಟ್ಟ ಮತ್ತು ಸ್ವಭಾವ ಆಯಾ ತಳಿಯ ಮೇಲೆ ಅವಲಂಭಿಸಿದೆ. ಎಮ್ಮೆಯ ಹಾಲಿನಲ್ಲಿ ಶೇ 9.5 ರಷ್ಟು ಕೊಬ್ಬು ಇದ್ದರೇ ಆಕಳುಗಳ ಹಾಲಿನಲ್ಲಿ 5-6 ಇರುತ್ತದೆ. ಎಮ್ಮೆ ಪಕ್ಕಾ ದೇಶೀ ತಳಿ. ಮಿಶ್ರ ತಳಿಗಳಲ್ಲಿ ಹಾಲಿನ ಪ್ರಮಾಣ ಜಾಸ್ತಿ ಆದರೆ ಕೊಬ್ಬಿನಂಶ ಕಡಿಮೆ. ಒಂದಿಷ್ಟು ವ್ಯತ್ಯಾಸ ಇರಲೇ ಬೇಕು. ಪ್ರಾಣಿಗಳಲ್ಲಿ ವಿಧಗಳು ಬದಲಾದ ಹಾಗೆ ತುಪ್ಪ, ಬೆಣ್ಣೆ, ಹಾಲಿನ ಭೌತಿಕ ರೂಪದಲ್ಲಿಯೂ ಬದಲಾವಣೆ ಆಗಲೇ ಬೇಕು. ದೇಸಿ ದನಗಳ ತುಪ್ಪಕ್ಕೆ ಹಾಲಿಗೆ ಔಷಧಿ ಗುಣ ಇರುವುದಕ್ಕೆ ನಂಬಿಕೆ ಇದೆಯೇ ವಿನಃ ವೈಜ್ಞಾನಿಕ ದಾಖಲೆ ಇಲ್ಲ. ಹಾಗೆಯೇ ಎಮ್ಮೆಗಳ ತುಪ್ಪ ಅಪಾಯ ತರುತ್ತದೆ ಎನ್ನುವುದಕ್ಕೂ ಯಾವುದೇ ದಾಖಲೆಗಳಿಲ್ಲ.
ಪುರಾತನ ಕಾಲದಲ್ಲಿ ಏನೇನೆಲ್ಲಾ ಹೇಳಿದೆ ಅನ್ನುವುದು ಪ್ರಸ್ತುತದಲ್ಲಿ ಅಪ್ರಸ್ತುತ. ಆಯಾ ಕಾಲಕ್ಕೆ ಪ್ರಸ್ತುತವಾಗಿರುವ ಅನೇಕ ವಿಷಯಗಳು ಈಗ ಅಪ್ರಸ್ತುತ. ಅದಕ್ಕೆ ಅನೇಕ ಉದಾಹರಣೆಗಳಿವೆ. ಗೋವನ್ನು ಸಾಕಲು ಸಾವಿರಾರು ಕಾರಣ ನೀಡಬಹುದು. ಇದನ್ನು ಎಮ್ಮೆ ಸಾಕಲು ಸಹಾ ನೀಡಬಹುದು. ಸಗಣಿ, ಹಾಲು, ಕರು, ಗಂಜಳ ಹೀಗೇ ಅನೇಕ ವಸ್ತುಗಳು ಉಪಕಾರಿ. ಇದೇ ಸಾಕು ನಾವು ಎಮ್ಮೆಯನ್ನೂ ಸಹ ಸಾಕಲು.
ಎ1 ಮತ್ತು ಎ2 ಹಾಲಿನ ಆಧಾರದ ಮೇಲೆ ದೇಶಿ ಮತ್ತು ವಿದೇಶಿ ಅಂತ ವರ್ಗೀಕರಣ ಮಾಡುವುದು ವೈಜ್ಞಾನಿಕವಲ್ಲ. ಆಗ ದೇಶಿ ಗೋವು ಅಥವಾ ಎಮ್ಮೆ ಇದ್ದಿದ್ದು ಕಾಲ ಬದಲಾದಂತೆ ಮಿಶ್ರತಳಿಯ ಕಾಲ ಬಂತು. ಎಲ್ಲವೂ ಜಾನುವಾರುಗಳಲ್ಲವೇ? ಪ್ರಾಣಿಗಳಲ್ಲಿ ದೇಶಿ ಅಥವಾ ವಿದೇಶಿ ಎಂಬ ಬೇಧ ಬೇಡ. ಪ್ರತಿಯೊಂದಕ್ಕೂ ಅದರದ್ದೇ ಆದ ಉತ್ತಮ ಗುಣಗಳಿವೆ. ಹಾಗೆಯೇ ಎಮ್ಮೆಯೂ ಸಹ ಅನೇಕ ಉತ್ತಮ ಗುಣಗಳನ್ನು ಹೊಂದಿದ ನಮ್ಮದೇ ದೇಶದ ಶುದ್ಧ ದೇಶೀ ಪ್ರಾಣಿ.
ಆಕಳ ಹಾಲಿನಲ್ಲಿ ಔಷಧ ಗುಣ ಇದೆ. ಅದು ಔಷಧ ಗುಣ ಹೊಂದಿದ ಗಿಡಮೂಲಿಕೆಗಳನ್ನು ಮೇಯುತ್ತದೆ. ಎಮ್ಮೆ ಹಾಲಿನಲ್ಲಿ ಇದಿಲ್ಲ ಎನ್ನುವುದು ಒಂದು ಸುಳ್ಳಿನ ಕಂತೆಯಲ್ಲದೇ ಮತ್ತಿನ್ನೇನು? ಎಮ್ಮೆಯೂ ಆಕಳುಗಳು ಮೇಯುವ ಜಾಗದಲ್ಲೇ ಅದೇ ಗಿಡ ಮೂಲಿಕೆಗಳನ್ನು ಮೇಯುವದಿಲ್ಲವೇ? ಎರಡೂ ಬಹು ಉದರದ ಪ್ರಾಣಿಗಳು. ಎರಡರ ಜೀರ್ಣಕ್ರಿಯೆಗಳು ಒಂದೇ ತರದವು. ದೇಹ ರಚನೆ ಒಂದಿಷ್ಟು ಭಿನ್ನವಾಗಿದೆ ಅಷ್ಟೇ. ನಿಜವೆಂದರೆ ಯಾವುದೇ ಹಾಲಿನಲ್ಲಿ ಔಷಧಿಯ ಗುಣ ಇಲ್ಲವೇ ಇಲ್ಲ. ಹಾಲು ಒಂದು ಪರಿಪೂರ್ಣ ಆಹಾರ. ಒಂದಿಷ್ಟು ಉತ್ತಮ ಪೌಷ್ಟಿಕಾಂಶಗಳಿವೆ ಅಷ್ಟೇ.
ಆಕಳುಗಳು ಕಾಡಿಗೆ ಹೋಗಿ ದಿವ್ಯ ವನಸ್ಪತಿಯನ್ನು ಸೇವಿಸಿ ಪವಿತ್ರ ಗೋಮೂತ್ರ ಮತ್ತು ಗೋಮಯ ನೀಡುತ್ತಿದ್ದವು ಎಂಬುದನ್ನು ಒಂದು ಕ್ಷಣ ನಿಜ ಅಂದುಕೊಳ್ಳೋಣ. ಆಗ ಅವು ಹೊರಗಡೆ ಮೇಯಲು ಹೋಗಿ ದಿವ್ಯ ಔಷಧಿ ಗುಣಗಳನ್ನೆಲ್ಲಾ ಹೊಂದಿದ ವನಸ್ಪತಿಗಳನ್ನೇ ಸೇವಿಸುತ್ತವೆ ಅಂದುಕೊಂಡರೂ ಸಹ ಈಗಿನ ಕಾಲದ ಆಕಳುಗಳು ಕೊಟ್ಟಿಗೆಯಲ್ಲೇ ದಿನವಿಡಿ ಇದ್ದರೆ ಎಲ್ಲಿಯ ವನಸ್ಪತಿ ಸೇವನೆ ಭಾಗ್ಯ ದೊರೆಯಬೇಕು? ಅಥವಾ ಹೊರಗೆ ಬಿಟ್ಟರೂ ಆಗ ಇದ್ದ(?) ವನಸ್ಪತಿಗಳು ಈಗಲೂ ಇದ್ದಾವೆಯೇ? ಯಾರಿಗೆ ಗೊತ್ತು? ಕಾರಣ ಈಗ ಅದೆಲ್ಲ ಅಪ್ರಸ್ತುತ. ಪುರಾತನ ಕಾಲದ ಅನೇಕ ಪದ್ಧತಿಗಳು ಈಗ ಅಪ್ರಸ್ಥುತವಾಗಿರುವುದು ನಮಗೆಲ್ಲಾ ಗೊತ್ತೇ ಇದೆ. ಇದೂ ಸಹ ಈಗ ಅಪ್ರಸ್ತುತವಾಗಿರಬಾರದೇಕೆ? ಕಾಡಿಗೆ ಹೋದಾಗ ಅವು ವಿಷ ಗಿಡಗಳನ್ನು ತಿಂದು ಸಾವನ್ನಪ್ಪುವುದು ಮತ್ತು ಅದರ ಹಾಲು ಕುಡಿದ ಕರುಗಳೂ ಸಹ ಸಾಯುವ ಅನೇಕ ಘಟನೆಗಳು ಸಂಶೋಧನಾ ಸಮಯದಲ್ಲಿ ಗೋಚರಿಸಿವೆ.
ಇನ್ನು ಕೆಲವರು ಯಾವ ಮಟ್ಟಕ್ಕೆ ಹೋಗಿ ಜಾನುವಾರುಗಳಲ್ಲಿಯೇ ಜಾತಿ ಬೇಧ ಮಾಡುತ್ತಾರೆಂದರೆ ಈಗ ನಮ್ಮಲ್ಲಿ ಇರುವ ಸಹಸ್ರಾರು ಜನ ಬಡ ರೈತರ ಜೀವನಾಧಾರವಾಗಿರುವ, ನಮ್ಮ ದೇಶವನ್ನು ಹಾಲಿನ ಉತ್ಪಾದನೆಯಲ್ಲಿ ಎಮ್ಮೆಗಳ ಜೊತೆಗೂಡಿ ಪ್ರಪಂಚದಲ್ಲೇ ಮೊದಲ ಸ್ಥಾನ ಕೊಡಿಸಿದ ಮಿಶ್ರತಳಿಗಳು “ವಿದೇಶಿ”ಯಂತೆ. ಅವುಗಳ ಮೂಲ ಹಂದಿಯಂತೆ. ಅದು ಹಂದಿಯ ಸಂಕಿರಣವಂತೆ. ಇತ್ಯಾದಿ ಏನೇನೋ ಅಸಂಬದ್ಧಗಳು ಉದುರುತ್ತವೆ. ಅಸಲಿಗೆ ನಮ್ಮಲ್ಲಿ ಯಾವುದೂ ವಿದೇಶದಿಂದ ಫೆರಾರಿ, ಆಡಿ, ಬೆಂಜ್ ಕಾರಿನ ತರ ನೇರವಾಗಿ ಆಮದುಗೊಂಡು ಬಂದಿಳಿದು “ವಿದೇಶಿ” ಅನಿಸಿಕೊಂಡಿಲ್ಲ.. ಮಗನ ಹೆಂಡತಿ ವಿದೇಶಿಯಾದರೆ ಅಥವಾ ಅಳಿಯ ವಿದೇಶಿಯಾಗಿ ಮಗಳು ನಮ್ಮವಳೇ ಆಗಿದ್ದರೆ ಹುಟ್ಟುವ ಮಗುವಿಗೆ “ವಿದೇಶಿ” ಎಂಬ ನಾಮ ಪಟ್ಟ ಕಟ್ಟಲಾದೀತೇ? ಮಿಶ್ರತಳಿಗಳೂ ಸಹ ಸ್ವದೇಶಿಗಳು. ಮೇಕ್ ಇನ್ ಇಂಡಿಯಾ ತರ ಸ್ವದೇಶಿ ಮೇಕುಗಳೇ. ನಮ್ಮದೇ ಪ್ರಾಂತದ ಮಲೆನಾಡು ಗಿಡ್ಡ, ಹಳ್ಳಿಕಾರ್, ಅಮೃತ ಮಹಲ್, ದೇವಣಿ ಇತ್ಯಾದಿ ಸ್ಥಳೀಯ ತಳಿಗಳಿಗೆ ಸಂಕರಣದಿಂದ ಹುಟ್ಟಿದ ಕರುಗಳು. ನಮ್ಮ ನಿಮ್ಮ ಮೊಬೈಲು, ಲ್ಯಾಪು ಟಾಪು, ವಿಮಾನ ಬಸ್ಸು ಬಿಟ್ಟರೆ ಯಾವುದೂ ವಿದೇಶಿ ಅಲ್ಲ.
ಆಕಳುಗಳ ತುಪ್ಪಕ್ಕೆ ಹಾಲಿಗೆ ಔಷಧಿ ಗುಣ ಇರುವುದಕ್ಕೆ ನಂಬಿಕೆ ಇದೆಯೇ ವಿನಃ ವೈಜ್ಞಾನಿಕ ದಾಖಲೆ ಇಲ್ಲ. ಈ ಕುರಿತು ಕೆಲವೇ ಕೆಲವು ಸಂಶೋಧನಾ ಲೇಖನಗಳಿದ್ದರೂ, ಅವುಗಳಲ್ಲಿ ಪರಸ್ಪರ ವೈಯಕ್ತಿಕ ಆಸಕ್ತಿಯ ತಾಕಲಾಟಗಳಿವೆ. ಹಸುವಿನ ಎ1 ಮತ್ತು ಎ2 ಹಾಲಿನ ಬಗ್ಗೆ ಪ್ರಪಂಚದಾದ್ಯಂತ ನಡೆದಿರುವ ಸಂಶೋಧನೆಗಳನ್ನು ಆಧರಿಸಿ ಮತ್ತು ಲೇಖನಗಳ ಮಾನ್ಯತೆಯನ್ನು, ವಿಶ್ವಾಸಾರ್ಹತೆಯನ್ನು ನೋಡಿ, ಪ್ರಪಂಚದಲ್ಲಿ ಈ ವರೆಗೆ ನಡೆದಿರುರುವ ಸಂಶೋಧನೆಯ ಫಲಿತಾಂಶವನ್ನು ವಿಶ್ಲೇಶಿಸಿ ಅಥವಾ ಈ ಕುರಿತು ಸಂಶೋಧನೆ ಮಾಡಿ ಅದರ ಸಾರಾಂಶವನ್ನು ಜನರಿಗೆ ತಿಳಿಸಬೇಕು. ಪುರಾತನ ಗ್ರಂಥಗಳಲ್ಲಿ ಈ ರೀತಿ ಉಲ್ಲೇಖವಿದ್ದ ಮಾತ್ರಕ್ಕೆ ಅದೇ ಸಾರ್ವಕಾಲಿಕ ಸತ್ಯವಾಗಿರಬೇಕೆಂದೇನೂ ಇಲ್ಲ. ಅದು ಬದಲಾವಣೆಗೆ ಒಡ್ಡಿಕೊಳ್ಳಲೇ ಇಲ್ಲ ಎಂದು ಹೇಳಬಹುದು.
ಗೋಮೂತ್ರದಲ್ಲಿ, ದೇಶಿ ಹಸುವಿನ ಹಾಲಿನಲ್ಲಿ ಔಷಧಿ ಗುಣಗಳು ಹೇರಳವಾಗಿವೆ ಎಂಬುದು ಒಂದು ನಂಬಿಕೆಯೇ ಹೊರತು ವಾಸ್ತವವಲ್ಲ. ಈ ಕುರಿತು “ನಂಬಲರ್ಹ”ವಾದ ಸಂಶೋಧನಾ ದಾಖಲೆಗಳು ಎಷ್ಟು ಹುಡುಕಿದರೂ ಸಿಗಲ್ಲ. ಈ ಕುರಿತು ಯಾವಾಗಲೋ ಹಳೆಯ ದಾಖಲೆಯಲ್ಲೋ ಅಥವಾ ಇನ್ನಾವುದೇ ಗ್ರಂಥಗಳಲ್ಲಿ ಯಾವುದೋ ಕಾಲದಲ್ಲಿ ಪ್ರಸ್ತುತವಾಗಿದ್ದು ಈಗ ಅಪ್ರಸ್ತುತವಾಗಿರಬಹುದು. ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಲೇ ಬೇಕು. ಬದಲಾವಣೆ ಜಗದ ನಿಯಮ. ಪುರಾತನ ಗ್ರಂಥಗಳಲ್ಲಿ ಬರೆದಿರುವ ಅನೇಕ ಸತ್ಯಗಳು ಪ್ರಸ್ತುತ ಅಪ್ರಸ್ತುತವಾಗಿವೆ. ಬದಲಾಗಲ್ಲ, ನಾನಿರುವುದೇ ಹೀಗೆ ಅಂತ ಹೇಳುತ್ತಾ ಇದ್ದರೆ ಜಾಸ್ತಿ ದಿನ ಜನ ಸ್ವೀಕರಿಸುವುದಿಲ್ಲ. ವಿಜ್ಞಾನದಲ್ಲಿ ಆಧುನಿಕ ಅಥವಾ ಹಳೆಯದು ಅಂತೇನೂ ಇಲ್ಲ. ಯಾವುದು ಸದಾ ವಿಮರ್ಷೆಗೊಳಗಾಗಿ ಬದಲಾವಣೆಗೊಳಗಾಗುತ್ತಾ, ಪುಟವಿಟ್ಟ ಚಿನ್ನದಂತೆ ಹೊರಹೊಮ್ಮುತ್ತದೆಯೋ ಅದೇ ಕೊನೆಗೆ ಉಳಿದುಕೊಳ್ಳುವುದು. ಇದು ಆಧುನಿಕ ವಿಜ್ಞಾನಕ್ಕೆ ಸದಾ ಅನ್ವಯ. ಆಧುನಿಕ ವಿಜ್ಞಾನವು ಸದಾ ಕಟು ವಿಮರ್ಷೆಗಳಿಗೆ ಒಳಪಟ್ಟಿದೆ. ಅದಕ್ಕೆ ಅದರ ಬೆಲೆ ನಂಬುಕೆ ಜಾಸ್ತಿ. ಸಧ್ಯಕ್ಕೆ ನಾವೆಲ್ಲಾ ಓದಿದ, ಪದವಿ ಪಡೆದ ಮತ್ತು ದಿನವೂ ವಿವಿಧ ಮಾಧ್ಯಮಗಳ ಮೂಲಕ ಅನುಭವಿಸುತ್ತಿರುವ ಆಧುನಿಕ ವಿಜ್ಞಾನವೇ ಪ್ರಸ್ತುತ. ನಾವೆಲ್ಲಾ ಬದುಕುತ್ತಿರುವುದು ಆಧುನಿಕ ಜಗತ್ತಿನಲ್ಲಿ, ಆಧುನಿಕ ವಿಜ್ಞಾನದ ಸೌಲಭ್ಯದಲ್ಲಿ, ಆದರೆ ಕನವರಿಕೆ ಇರುವುದು ಗತವೈಭವದ ಪುರಾತನ ವಿಷಯದ ಬಗ್ಗೆ. ಬದಲಾವಣೆ, ಮತ್ತು ವಾಸ್ತವವನ್ನು ಒಪ್ಪಿಕೊಳ್ಳಲು ಅನೇಕರಿಗೆ ಇಷ್ಟವೇ ಇಲ್ಲ. ಇದೊಂದು ತಾಕಲಾಟವಲ್ಲದೇ ಬೇರೆನಲ್ಲ. ಜೀವನದಲ್ಲಿ ಭಾವನೆಗಳು ಮುಖ್ಯ. ಆದರೆ ಭಾವನೆಯೇ ಜೀವನವಾಗಬಾರದು ಅಲ್ಲವೇ?. ಎಮ್ಮೆಗಳ ವಿಷಯದಲ್ಲೂ ಇದೇ ಆಗುತ್ತಿದೆ.
ಎಮ್ಮೆಗಳ ಸಗಣಿಯೂ ಸಹ ಬೆಳೆಗಳಿಗೆ ಉತ್ತಮ ಗೊಬ್ಬರವಾಗಬಲ್ಲದು. ಗೋಮಯದ ಸ್ವಭಾವ ಆಹಾರದ ಮೇಲೆ, ತಳಿಯ ಮೇಲೆ ಅವಲಂಭಿತವಾಗಿದೆ. ಗೋಮೂತ್ರ ಆಕಳಿನ ಶರೀರದ ಒಂದು ತ್ಯಾಜ್ಯವೇ ಹೊರತು ಅದು ಔಷಧಿಯಾಗಲು ಸಾಧ್ಯವಿಲ್ಲ. ಇದಕ್ಕೆ ಯಾವ ಉತ್ತಮ ವೈಜ್ಞಾನಿಕ ಸಂಶೋಧನಾ ದಾಖಲೆಗಳೂ ಇಲ್ಲ. ಕೆಲವೊಂದಿದ್ದರೂ ಅವು ಪೂರ್ಣವಲ್ಲ. ನಿಜ. ಒಂದು ಕಾಲದಲ್ಲಿ ಗೋವಸ್ತುಗಳು ಔಷಧಿಯ ಗುಣ ಹೊಂದಿವೆ ಎಂಬ ನಂಬಿಕೆ ಇತ್ತು. ಈಗ ಅದೊಂದು ತಪ್ಪು ನಂಬಿಕೆ ಅಷ್ಟೇ. ಗೋವನ್ನು ಆರಾಧಿಸಲು ಇನ್ನೂ ಸಹಸ್ರ ವೈಜ್ಞಾನಿಕ ಕಾರಣಗಳಿವೆ. ಗೋಮೂತ್ರ, ಗೋಮಯ ಇದಕ್ಕೆ ಔಷಧಿಯ ಗುಣಗಳಿವೆ ಎಂಬುದೆಲ್ಲಾ ತಪ್ಪು ಕಲ್ಪನೆಗಳು. ವಿದ್ಯಾವಂತರಾದ ನಾವು ಜನರಲ್ಲಿ ಜಾಗ್ರತಿ ಮೂಡಿಸಬೇಕು. ಬದಲಾಗಿ ನೀವೇ ಮೌಢ್ಯವನ್ನು ಬಿತ್ತಿದರೆ ಹೇಗೆ? ಹೀಗೆಯೇ ಎಮ್ಮೆಯನ್ನೂ ಪರಿಗಣಿಸಿ. ಶಾಪಕ್ಕೆ ತುತ್ತಾದ ಮತ್ತು ವರ್ಣಬೇಧಕ್ಕೆ ಒಳಗಾದ ಈ ಸಂತತಿಯೂ ಸಹ ಚೇತರಿಸಿಕೊಳ್ಳಲಿ.
ಎಮ್ಮೆ ಪುರಾತನ ಕಾಲದಿಂದ ಒಂದು ರೀತಿ ಶಾಪಕ್ಕೊಳಗಾಗಿದೆ. ಕೆಲವೊಮ್ಮೆ ಪುರಾತನ ಎಂಬ ನಂಬಿಕೆಗಳು ಸಂಶೋಧನೆ ಅಥವಾ ಬದಲಾವಣೆಗೆ ಒಡ್ಡಿಕೊಳ್ಳದೇ ನಿಂತ ನೀರಾಗಿದೆ. ಬದಲಾವಣೆಗೆ ಒಡ್ಡಿಕೊಳ್ಳದೇ ಯಾವುದೋ ಕಾಲದಲ್ಲಿ ಪ್ರಸ್ತುತವಾಗಿದ್ದನ್ನು ಈವತ್ತಿಗೂ ಪ್ರಸ್ತುತ ಎಂದು ನಂಬುವುದು ಅದರ ಮೇಲೆ ವಿಶ್ವಾಸ ಕಡಿಮೆಯಾಗಲು ನಾಂದಿಯಾಗುತ್ತದೆ. ಆಧುನಿಕ ಕಾಲಕ್ಕೂ ಹೊಂದುವಂತೆ ಅದರ ಪ್ರಯೋಗಶೀಲತೆ ಜಾಸ್ತಿಯಾಗಬೇಕಿತ್ತು. ಆಗ ಅದು ಅದ್ಭುತವಾಗಿ ಬೆಳೆಯುತ್ತಿತ್ತು. ಆ ಅವಕಾಶ "ಪುರಾತನ" ಜ್ಞಾನ"ವನ್ನು ಪುರಾತನವಾಗಿಯೇ ಉಳಿಸಿದ್ದರಿಂದ ಈ ಅವಕಾಶ ಕೈತಪ್ಪಿ ಹೋಗಿರಬಹುದು. ಈಗ ಅಸ್ತಿತ್ವಕ್ಕೆ ಹೊಡೆದಾಡಬೇಕಾದ ಪರಿಸ್ಥಿತಿ ಬಂದಿದ್ದು ದುರಂತ. ಬದಲಾವಣೆಯಿಲ್ಲದ, ಚಲನ ಶೀಲತೆಯಿಲ್ಲದೇ, ವಿಮರ್ಷೆಗೊಳಪಡದ, ನಿಂತ ನೀರಂತಹ ವಸ್ತುವನ್ನು "ವಿಜ್ಞಾನ" ಅಂತ ಹೇಗೆ ಕರೆಯಬಹುದು? ಇದಕ್ಕೆ ಯಾರು ಕಾರಣರೋ ಗೊತ್ತಿಲ್ಲ. ಇದು ಎಲ್ಲ ವಿಷಯಗಳಿಗೂ ಸಹ ಅನ್ವಯ.
ಈ ಜ್ಞಾನ ಅನೇಕರಿಗೆ ಕೇವಲ ವೇದಿಕೆಯಲ್ಲಿ ಮಾತನಾಡುವವರಿಗೆ ಬರಬೇಕಿದೆ. ಇವರಿಗೆಲ್ಲಾ ನಿಮ್ಮ ಅನುಭವದ ವಿಷಯ ಯಾರು ತಿಳಿಸಿ ಹೇಳುವುದು? ಜಾನುವಾರು ಸಾಕದ ಅನೇಕ ಜನವೇ ಈ ತರ ಮಾತನಾಡುವುದು. ಒಮ್ಮೆ ಬಲವಾದ ಒದೆತ ತಿಂದವರು ಯಾವತ್ತೂ ಈ ರೀತಿ ಹೇಳರು.
ಎಮ್ಮೆಗಳಿಗೆ ಕಾಯಿಲೆಗೆಳು ಬಹಳ ಕಡಿಮೆ. ಮಿಶ್ರ ತಳಿಯ ಜಾನುವಾರುಗಳಿಗೆ ಒಂದಿಷ್ಟು ಕಾಯಿಲೆ ಜಾಸ್ತಿ. ಇದಕ್ಕೆ ಕಾರಣ ಅವುಗಳ ಉತ್ಪಾದನೆ ಜಾಸ್ತಿ. ನಿಧಾನ ನಡೆದು ಹೋಗುವ ಮನುಷ್ಯನಿಗೆ, ಸೈಕಲ್ಲಿನಲ್ಲಿ ಹೋಗುವವರಿಗೆ ವೇಗವಾಗಿ ಹೋಗುವ ಬಸ್ಸು, ಕಾರುಗಳಿಗಿಂತ ಅಪಘಾತವಾಗುವ ಸಾಧ್ಯತೆ ಕಡಿಮೆಯಲ್ಲವೇ? ಹಾಗೆಯೇ ಉತ್ಪಾದನೆ ಜಾಸ್ತಿಯಾದಾಗ ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಕಾಯಿಲೆ ಜಾಸ್ತಿ. ಇದು ದನದ ತಪ್ಪಲ್ಲ. ಬದಲಾಗಿ ಅದನ್ನು ಸಾಕುವವರ ಮೌಢ್ಯ ಅಥವಾ ಜಿಪುಣತನ ಕಾರಣ ಎನ್ನಬಹುದು. ಆ ಲೆಕ್ಕದಲ್ಲಿ ಎಮ್ಮೆಗಳು ಜಾಸ್ತಿ ಹಾಲು ನೀಡಿದರೂ ಸಹ ಅವುಗಳಿಗೆ ಗಂಟಲು ಬೇನೆ ಹೊರತು ಪಡಿಸಿದರೆ ಇತರ ಕಾಯಿಲೆ ಕಡಿಮೆ. ಕೆಚ್ಚಲು ಬಾವಂತೂ ಬಹಳ ಕಡಿಮೆ.
ಇಂಥ ಎಮ್ಮೆಗಳಿಗೆ ದೌರ್ಬಲ್ಯಗಳೂ ಇವೆ. ಎಮ್ಮೆಗಳು ಮೇಲ್ನೋಟಕ್ಕೆ ತುಂಬಾ ಗಟ್ಟಿ ಎಂಬ೦ತೆ ತೋರಿದರೂ ವಾಸ್ತವವಾಗಿ ಸೂಕ್ಷ್ಮವೇ. ಗಂಟಲು ಬೇನೆ ಎಂಬ ಕಾಯಿಲೆ ಬಂದರೆ ಸೂಕ್ತ ಚಿಕಿತ್ಸೆ ದೊರಕದಿದ್ದರೆ ಹಸುಗಳಿಗಿಂತ ಬೇಗ ಇವು ಕಾಯಿಲೆಗೆ ಬಲಿಯಾಗುತ್ತವೆ. ಮೂಗುದಾರ ಹಾಕಿ ಅಭ್ಯಾಸ ಮಾಡಿಕೊಳ್ಳದಿದ್ದರೆ ಇವುಗಳನ್ನು ಹಿಡಿಯುವುದು ತುಂಬಾ ಕಷ್ಟ. ಅದರಲ್ಲೂ ಚಿಕಿತ್ಸೆ ನೀಡಬೇಕಾದಲ್ಲಿ ಪಶು ವೈದ್ಯರು ಹರಸಾಹಸ ಮಾಡಬೇಕಾಗುತ್ತದೆ. ಇವುಗಳಿಗೆ ಹೆಚ್ಚು ಬಿಸಿಲನ್ನು ತಡೆದುಕೊಳ್ಳುವ ಶಕ್ತಿ ಇಲ್ಲ. ಎಮ್ಮೆಗಳ ಚರ್ಮದ ಕೆಳಗೆ ಕೊಬ್ಬಿನ ಪದರವಿರುವುದರಿಂದ ಹಾಗೂ ಇವುಗಳಲ್ಲಿ ಬೆವರಿನ ಗ್ರಂಥಿಗಳು ಹೆಚ್ಚು ಇಲ್ಲದಿರುವುದರಿಂದ ವಾತಾವರಣದಲ್ಲಿ ಬಿಸಿ ಹೆಚ್ಚಾದ ತಕ್ಷಣ ನೀರಿನಲ್ಲಿ ಬಿದ್ದುಕೊಳ್ಳಲು ಇಷ್ಟಪಡುತ್ತವೆ. ನೀರು ಸಿಗದಿದ್ದಲ್ಲಿ ಕೆಸರಾದರೂ ಸರಿಯೇ, ಹೊರಳಾಡಿ ಮೈಯ ಶಾಖ ಕಡಿಮೆ ಮಾಡಿಕೊಳ್ಳುತ್ತವೆ. ಆದ್ದರಿಂದ ಇವುಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಒಂದು ಸವಾಲೇ ಸರಿ. ಜೊತೆಗೆ ಎಮ್ಮೆಗಳಲ್ಲಿ ಬೆದೆಯ ಲಕ್ಷಣಗಳು ಹಸುವಿನಂತೆ ಸ್ಪಷ್ಟವಾಗಿ ಗೋಚರಿಸದಿರುವುದರಿಂದ ಕೃತಕ ಗರ್ಭಧಾರಣೆಯ ಸಮಯವನ್ನು ನಿರ್ಧರಿಸುವುದು ಕಷ್ಟ. ಹಾಗಾಗಿ ಗರ್ಭ ಧರಿಸುವುದು ಅನೇಕ ವೇಳೆ ತಡವಾಗುತ್ತದೆ. ಅಲ್ಲದೇ ಎಮ್ಮೆಗಳಿಗೆ ಕರುವಿನ ಮೇಲೆ ಅತ್ಯಂತ ಪ್ರೀತಿ. ಅಕಸ್ಮಾತ್ತಾಗಿ ಕರು ಏನಾದರೂ ತೀರಿಹೋದಲ್ಲಿ ಇವುಗಳು ತೊರೆ ಬಿಡುವುದೇ ಇಲ್ಲ. ಅಲ್ಲದೇ ಇವುಗಳ ಹಾಲನ್ನು ಯಾರಾದರೂ ನಿಯಮಿತವಾಗಿ ಹಿಂಡುತ್ತಿದ್ದರೆ ಅವರು ಅಕಸ್ಮಾತ್ತಾಗಿ ಇರದೇ ಹೋದರೆ ಇವು ಖಂಡಿತಾ ಹಾಲು ಕೊಡಲಾರವು. ಹೆಚ್ಚಿನ ಮನೆಗಳಲ್ಲಿ ಎಮ್ಮೆಗಳನ್ನು ಹಿಂಡುವವರು ಹೆಂಗಸರೇ ಆಗಿದ್ದು, ಅಕಸ್ಮಾತ್ತಾಗಿ ಗಂಡಸರ ಪಾಲಿಗೆ ಹಾಲು ಹಿಂಡುವ ಸರದಿ ಬಂದರೆ, ಸೀರೆ ಉಟ್ಟುಕೊಂಡು ಹಾಲು ಹಿಂಡಲು ಸಾಹಸ ಮಾಡಿದಲ್ಲಿ ಅವು ಬಹುಶ: ವಾಸನೆಯಿಂದ ಗುರುತು ಹಿಡಿದು ಜಾಡಿಸಿ ಒದೆಯುತ್ತವೆ. ಇಷ್ಟೆಲ್ಲಾ ಆದರೂ ನಮ್ಮದೇ ದೇಶದ ಹೆಮ್ಮೆಯ ಪ್ರಾಣಿ ಎಮ್ಮೆ. ಅದನ್ನು ಸಾಕಿ ಸಲಹೋಣ. ಅದರ ತಳಿಗಳನ್ನು ವಿನಾಶದಂಚಿಗೆ ಹೋಗದ ಹಾಗೇ ನೋಡಿಕೊಳ್ಳೋಣ.
-ಡಾ: ಎನ್.ಬಿ.ಶ್ರೀಧರ,
ಪ್ರಾಧ್ಯಾಪಕರು, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ
ಚಿತ್ರ ಕೃಪೆ: ಇಂಟರ್ನೆಟ್ ತಾಣ