ಎರಡು ಗಝಲ್ ಗಳು…
೧.
ಹೊನಲು ಬೆಳಕಿನ ನಡುವೆ ನಾನಿರುವೆ ಗೆಳತಿ
ಕನಸು ನನಸಿನ ಬಿಡದೆ ಕಾದಿರುವೆ ಗೆಳತಿ
ಬನವು ಹಸಿರಿನ ಹೊದೆಯೆ ಜಾರುವೆಯ ಏಕೆ
ಗುಣಕು ಚೆಲುವಿನ ಕಹಳೆ ಊದಿರುವೆ ಗೆಳತಿ
ತನುವು ಒಲವಿನ ಮನೆಯೆ ಆಗಿದೆಯ ಹೇಗೆ
ಹಲವು ಒಡಲಿನ ಒಳಗೆ ಸಾಗಿರುವೆ ಗೆಳತಿ
ಮರೆವು ಹುರುಪಿನ ಬಣಕೆ ತಾಗಿದೆಯ ಹೀಗೆ
ಸಿಡುಕು ಮನಸಿನ ಹೊದಿಕೆ ತೆಗೆದಿರುವೆ ಗೆಳತಿ
ಇರಲು ಕಡಲಿನ ಅಲೆಗೆ ಹೋಗದೆಯೆ ಈಶ
ಛಲವು ಗೆಲುವಿನ ಬಳಿಯೆ ನಿಂತಿರುವೆ ಗೆಳತಿ
***
೨.
ಜಾತಿಗೆ ಜಾತಿ ಪಗೆ ನಾವು ಬರೆದದ್ದೇ ಗಝಲ್
ನೀತಿ ನಿಯಮವೇ ಬೇಡ ಕೊರೆದದ್ದೇ ಗಝಲ್
ಷೇರುಗಳ ಸಮ ಸಾಲು ಹೊಸಬರಿಗೆ ಮಾತ್ರವೆ
ಗೊತ್ತಿದೆಯೆಂದವರು ಇಲ್ಲಿ ಉಸಿರಿದ್ದೇ ಗಝಲ್
ಇನ್ನೊಬ್ಬರ ಲೇವಡಿ ಮಾಡದಿರೆ ಹೊಟ್ಟೆ ತುಂಬದು
ದ್ವಿಪದಿ ಸಾಲುಗಳ ತೋಚಿದಂತೆ ತಿರುಚಿದ್ದೇ ಗಝಲ್
ಶಬ್ದಗಳ ತುರುಕಿ ಬರೆದರೆ ಓದುಗರಿಗೆ ಅರ್ಥವಾದೀತೆ
ಸ್ವಾರಸ್ಯವಿಲ್ಲದ ವಿಷಯದಲ್ಲಿ ಹೀಗೆ ತೇಲಿದ್ದೇ ಗಝಲ್
ಮನುಷ್ಯ ತನ್ನ ದೌರ್ಬಲ್ಯವ ತಿದ್ದಿಕೊಳ್ಳಲಾರನೊ ಈಶಾ
ದೊಡ್ಡವರ ದಡ್ಡತನದಿ ಹುಟ್ಟು ಪಡೆದು ಕಟ್ಟಿದ್ದೇ ಗಝಲ್
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ