ಎರಡು ಗಝಲ್ ಗಳು.....
ಗಝಲ್ ೧
ಮುಂದೊಂದು ದಿನ ಹೀಗೆಯೇ ಜೀವನವೆಂದು ಹೇಳಲಾಗುವುದಿಲ್ಲ ಗೆಳೆಯ
ಮತ್ತೆಂದೂ ಮರಳಿ ಬರುವೆನು ಎಂಬುವುದನ್ನು ತಿಳಿಸಲಾಗುವುದಿಲ್ಲ ಗೆಳೆಯ
ಎದೆಯಲ್ಲಿ ನೋವದುವು ಬಂದಿತೆಂದರೇ ಆಸ್ಪತ್ರೆಯೆಡೆಗೆ ಓಡುವ ಜಾಯಮಾನ
ಉಪ್ಪರಿಗೆಯಲ್ಲಿ ಇದ್ದ ಮನುಷ್ಯನಿಗೂ ಸಾವನ್ನು ಕಸಿಯಲಾಗುವುದಿಲ್ಲ ಗೆಳೆಯ
ಮೊದಲೆಲ್ಲವು ಹಳ್ಳಿಯಲ್ಲಿರುವ ಮದ್ದಿನಲ್ಲೇ ಕಡಿಮೆ ಆಗುತ್ತಿತ್ತು ಕಾಯಿಲೆಗಳೆಂದು
ಏನೂ ಇಲ್ಲದವರಿಗೂ ಈಗೀಗ ಆಸ್ಪತ್ರೆಯ ಸಹವಾಸ ತಪ್ಪಿಸಲಾಗುವುದಿಲ್ಲ ಗೆಳೆಯ
ಜನಸಾಮಾನ್ಯರ ನೋವುಗಳು ಉಳ್ಳವರ ಮಹಲಿನ ಒಳಗಿಂದು ತೂರಿಕೊಂಡು ಹೋಗಲಿ
ನಮ್ಮವರ ಬಾಗುವ ಗುಣವನ್ನು ಮತ್ತೆಂದೂ ಹೇಳಿ ಬದಲಾಯಿಸಲಾಗುವುದಿಲ್ಲ ಗೆಳೆಯ
ಈಶನ ಎಚ್ಚರಿಸುವ ಗುಣವನ್ನು ಬಡತನದಲಿರುವವರು ಅರಿಯದೆಯೆ ಹೋದರೆಯಿಂದು
ಬಡಪಾಯಿಯ ತಲೆಗೆ ಅವನದೇ ಕೈಯೆಂದರು ಮತ್ತೆಂದೂ ನಿಲ್ಲಿಸಲಾಗುವುದಿಲ್ಲ ಗೆಳೆಯ
***
ಗಝಲ್ ೨
ಗೊತ್ತಿರುವುದನ್ನು ಗೊತ್ತಿಲ್ಲದವರಿಗೆ ಹೇಳಿ ಕೊಡು
ಕಲಿತಿರುವುದ ಅನುಭವವಿಲ್ಲದವರಿಗೆ ಹೇಳಿ ಕೊಡು
ಕಸಂಟು ಮಾಡುತ್ತಲೇ ಇನ್ನೊಬ್ಬರ ಛೇಡಿಸುವುದು ಯಾಕೊ
ಬಾಳಿನೊಳಗೆ ಯಾವುದೇ ಛಲವಿಲ್ಲದವರಿಗೆ ಹೇಳಿ ಕೊಡು
ಬರೆದುದೆಲ್ಲವೂ ಸಾಹಿತ್ಯವಲ್ಲ ಎಲ್ಲರಿಗೂ ತಿಳಿದಿದೆ
ಬರವಣಿಗೆಯಲಿ ಗುರಿಯಿಲ್ಲದವರಿಗೆ ಹೇಳಿ ಕೊಡು
ಉಪದೇಶದಿಂದ ಮನದೊಳಗಿನ ಕೊಳೆಕಳೆದು ಫಸಲು ಬರುವುದೇ
ಹತ್ತೂರಿನ ದಾರಿಯೊಳಗೆ ಒಮ್ಮೆಯೂ ಸುತ್ತಿಲ್ಲದವರಿಗೆ ಹೇಳಿ ಕೊಡು
ಜೀವನದ ರೀತಿ ರಿವಾಜುಗಳ ಕಲಿಯದವರು ಪಂಡಿತರೆ ಈಶಾ
ಎಲ್ಲವೂ ಗೊತ್ತಿದೆಯೆನುವ ಮತಿಯಿಲ್ಲದವರಿಗೆ ಹೇಳಿ ಕೊಡು
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ