ಎರಡು ಗಝಲ್ ಗಳು....

ಎರಡು ಗಝಲ್ ಗಳು....

ಕವನ

ಗಝಲ್ ೧

ಅಂತ್ಯ ಕಾಣುವ ಮೊದಲೇ ನಿನ್ನನೊಮ್ಮೆ ಕಾಣಬೇಕು ಚೆಲುವೆ

ನಾಳೆಯ ದಿನ ನನಗೆ ಹಗಲಾಗುತ್ತದೋ ನೋಡಬೇಕು ಚೆಲುವೆ

 

ಉಪ್ಪರಿಗೆಯ ಮೇಲಿನಿಂದ ಬಿದ್ದು ನೆಲದಲ್ಲಿ ಹೊರಳಾಡಿದರೆ ಹೇಗೆ

ಮತ್ತೇರಿದ ಒಲುಮೆಯ ತುಟಿಗಳನು ಕಂಡು ಹಾಡಬೇಕು ಚೆಲುವೆ

 

ಮೈಯ ಭಾರದ ನಡುವೆಯೇ ಬಾರದ ಆಲೋಚನೆಗಳಿಗೆ ಮುನ್ನುಗಲೆ

ನೆತ್ತರಿನ ವಾಸನೆಯ ನಡುವೆಯೂ ಸೌಂದರ್ಯವ ಕಾಡಬೇಕು ಚೆಲುವೆ

 

ನೆಲದಲ್ಲೆಲ್ಲ ನಡೆದಾಡಿದ ಗುರುತುಗಳೆಡೆಯೇ ಮೋಹದ ಸವಿಯ ಕಂಡೆನೆ

ಚೆಲ್ಲಿರುವ ಬೆಳದಿಂಗಳಿನ ಉಂಗುರದ ನಡುವನ್ನು ಮುಟ್ಟಬೇಕು ಚೆಲುವೆ

 

ಕಣ್ಣಿನೊಳಗಣ ಭಾವನೆಗಳನ್ನು ಅರ್ಥಮಾಡಿಕೊಳ್ಳುವರು ಇಹರೆ ಈಶಾ

ಪಡುವಣ ಕಡಲಿನ ತೀರ ಸಹ ಕೆಂಪುವರ್ಣದಿಂದ  ಚೀರಬೇಕು ಚೆಲುವೆ

***

ಗಝಲ್ ೨

ಒಲವು ತೂರಿ ಬರಲಿ ಶಾಂತಿಯತ್ತ ನಡೆದು

ಛಲವು ಹಾರಿ ಬರಲಿ ಕ್ರಾಂತಿಯತ್ತ ನಡೆದು

 

ಆರೋಗ್ಯದಂತ ಭಾಗ್ಯ ಬೇರೇನಿದೆ ಹೇಳು

ಕಳೆಯಬೇಡ ಅದನು ಭ್ರಾಂತಿಯತ್ತ ನಡೆದು

 

ಹಮ್ಮು ಬಿಮ್ಮುಗಳು ಬರಿ ಕತ್ತಲೆಯ ಕಾಡು

ಜಗದಿ ಬೆಳಕ ಚೆಲ್ಲು ಕಾಂತಿಯತ್ತ ನಡೆದು

 

ಕಂಡ ಕಂಡಲೆಲ್ಲಾ ಸುಖವನರಸ ಹೋದೆ

ದುಃಖ ತುಂಬಿಕೊಂಡೆ ಅಶಾಂತಿಯತ್ತ ನಡೆದು

 

ಬರಿಯ ಭಾವನೆಯಲ್ಲೆ ಬಾಳು ಕೆಟ್ಟಿತು ಈಶಾ

ಮಲಗಿ ನಿದ್ರಿಸಲೇ ಬೇಕು ವಿಶ್ರಾಂತಿಯತ್ತ ನಡೆದು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್