ಎರಡು ಜಾನಪದ ಗೀತೆಗಳು
ಪ್ರೀತಿಯ ಅಕ್ಕ
ಅಕ್ಕನ ಗುಡಿಯದು ಬಕ್ಕುಡಿ ಕಂಡೈತಿ
ಪಕ್ಕದ ಮನೆಯ ಸೊಬಗು|ನೋಡುತ||
ಚಕ್ಕನೆ ಬಂದು ಹೋಗ್ಯಾಳಾ||
ತಂದಳು ಹೂವನು ಬಂದಳು ಕೇರಿಗೆ
ಚಂದದ ಪುಷ್ಪ ಘಮಘಮ|ಬೀಸ್ಯಾವ|
ಚಂದಿರ ಬಾನೊಳು ಹರಡ್ಯಾವ||
ಚೆಲುವಿನ ರೂಪಸಿ ಒಲವಿನ ಷೋಡಶಿ
ಪಿಳಪಿಳ ಕಣ್ಣ ಬಿಟ್ಯಾಳಾ|ನೋಡ್ಯಾವ|
ಥಳಥಳ ಮಿಂಚಿ ನಿಂತ್ಯಾಳಾ||
ಸೊಬಗಿನ ವದನದ ವಿಭವದಿ ಮೆರೆಯುತ
ಕಬರಿನ ಚೆಲ್ಲಿ ನಾಚುತ|ಮಲ್ಲಿಯು|
ನಭವನು ನೋಡಿ ಕುಂತ್ಯಾಳಾ||
ಹಸಿರಿನ ಸೀರೆಯು ಖುಷಿಯಲಿ ಹುಟ್ಟಳು
ನಸುನಗು ನಾಚಿ ಚಿಮ್ಮುತ|ಹೊಮ್ಮುತ|
ಹೊಸತನ ಮೆರಗು ಕಂಡ್ಯಾಳಾ||
ಅಮ್ಮನ ಪ್ರೀತಿಯು ಬಿಮ್ಮನೆ ನೀಡುತ
ಸುಮ್ಮನೆ ನಿಂತು ನೋಡ್ಯಾಳಾ|ಅಕ್ಕಳು|
ಕಮ್ಮನೆ ಬೀರಿ ಹೊಳೆದ್ಯಾಳಾ||
********
ತವರುಮನೆ
ತವರೂರ ಸಿರಿಗಾಗಿ ತವಕದಿ ಕಾಯುತ
ದವನದ ಗಂಧ ಸೂಸೈತಿ|ನೋಡವ್ವ|
ಭವನದ ಮುಂದೆ ನಿಂತೈತಿ||
ಅಣ್ಣನ ನೆನಪಾಗಿ ಬಣ್ಣದ ಕನಸೊಂದು
ಚಿಣ್ಣರ ಆಟ ಥಕಥೈತ|ತಾರವ್ವ|
ಬೆಣ್ಣೆಯ ಮಾತು ನುಡಿದೈತಿ||
ಅಪ್ಪನ ಹೆಗಲಲಿ ತೆಪ್ಪನೆ ಕುಳಿತಿದೆ
ಕಪ್ಪನೆ ಹಸುವ ಹಾಲದು|ಸವಿದಿದ್ದೆ|
ಬೊಪ್ಪನ ನಡೆಯು ಚಂದೈತಿ||
ಹಳ್ಳಿಯ ಸೊಗಡು ಬಳ್ಳಿಯ ಮರದಲಿ
ಮಳ್ಳಿಯ ಹಾಗೆ ಬರುತಿದ್ದೆ|ಬಾರವ್ವ|
ತಳ್ಳುತ ಗಾಡಿ ಸಾಗೈತಿ||
ಹೊಲದಲಿ ಹಸಿರಿನ ಕಲೆಯದು ಮೆರೆದಿದೆ
ಚೆಲುವಿನ ರಾಗ ಹಾಡುತ|ಕಾಣವ್ವ|
ಒಲವಿನ ಹಸಿರು ಕುಣಿದೈತಿ||
ಸಂಜೆಯ ಹೊತ್ತಲ್ಲಿ ಮಂಜಿನ ಹನಿಯಲಿ
ಗಂಜಿಯ ಕುಡಿದು ಆಡ್ತಿದ್ದೆ|ಕೂಗವ್ವ|
ನಂಜಿನ ಬೆಳಕು ಕವಿದೈತಿ||
ಗಂಡನ ಮನೆಯಲಿ ಬಂಡಿಯ ಹೂಡ್ಯಾಳು
ಕಂಡ್ಯಾಳು ತವರ ಸಿರಿಯನು|ನಿಲ್ಲವ್ವ||
ಬಂಡೆಯ ಹತ್ತಿ ನಡಿತ್ತೈತಿ||
-ಅಭಿಜ್ಞಾ ಪಿ ಎಮ್ ಗೌಡ
