ಎರಡು ಮಧುರ ಗಝಲ್ ಗಳು
೧.
ವಯಸ್ಸು ಮಾಗಿದಂತೆ ಸಾವದು ಕಾಣುವುದು
ಕನಸ್ಸು ಕರಗಿದಂತೆ ಸೋಲದು ಕಾಣುವುದು
ಜಯವದು ಸಿಗದಂತೆ ನೋವುಗಳು ಕಾಡಿವೆ ಏಕೊ
ಕಾಯವು ಬಸವಳಿದಂತೆ ಕೂಳದು ಕಾಣುವುದು
ಹೃದಯವಿಂದು ಸವಿಯನು ಕೊಡಲೇ ಇಲ್ಲವೆ
ಬದುಕಿಂದು ಕ್ಷೀಣಿಸಿದಂತೆ ಸೇಡದು ಕಾಣುವುದು
ಬೇಡದ ಯೋಚನೆಗೆ ದೇಹವದು ಮುದುಡಿದೆ
ಚಿತ್ತಾರವದು ಸರಿದಂತೆ ಸಿಟ್ಟದು ಕಾಣುವುದು
ಭಾವನೆಯು ತನುವಿನಲಿ ಮೂಡಿತೇನು ಈಶಾ
ಬಯಕೆಯು ಕಂತಿದಂತೆ ಗುಟ್ಟದು ಕಾಣುವುದು
***
೨.
ಹೊಳೆಯ ದಾಟಿದ ಸಮಯದಲ್ಲಿ ಅಂಬಿಗನ ಮರೆಯದಿರು ಗೆಳೆಯಾ
ದಡ ಸೇರಿದೆನೆಂದು ಸಂತಸದಲ್ಲಿ ನಾವಿಕನ ತೊರೆಯದಿರು ಗೆಳೆಯಾ
ಪ್ರೀತಿಯ ಮುತ್ತಿನ ನಂಬಿಕೆಯಲ್ಲಿ ದೋಣಿಯಲೇ ಸಾಗುತಿರುಯೆಂದೂ
ಒಳಿತು ಮಾಡಿದವರಿಗೆ ಕೆಡುಕನೆಂದೂ ಬಯಸಿ ಹೋಗದಿರು ಗೆಳೆಯಾ
ಕಣ್ಣಂಚಿನ ಹೊಳಪು ಮರೆಯಾಗದಂತೆ ನೀನೊಂದು ಪ್ರತಿಭೆಯಾಗಿರು
ಸಿಹಿ ನೆನಪುಗಳ ಮಹಾಪೂರಗಳ ನಡುವೆಯೇ ತಿರುಗದಿರು ಗೆಳೆಯಾ
ಜೀವನದ ಸುಖ ದುಃಖಗಳಲ್ಲಿ ಸತಿಯೊಲವಿನ ಜೊತೆಗೇ ನಡೆಯುತಿರು
ಕಲಿಸಿ ಪೋಷಿಸಿರುವ ತಂದೆತಾಯ ನುಡಿಯನ್ನು ದೂರದಿರು ಗೆಳೆಯಾ
ಈಶನೊಳಗಿನ ಕರುಣೆಯ ಒಲವಿನ ನೆನಪ ಹಸಿರಾಗಿಸುವ ದಿನವಿಂದು
ಬಾಳಿನ ಪಲ್ಲವಿಯೊಳು ಸೇರುತಲೇ ಅರುಚಿಯ ಸವಿಯದಿರು ಗೆಳೆಯಾ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ