ಎಲ್ಲಿ೦ದ ಬ೦ದಳು ಈ ಹೆ೦ಡತಿ? (ಸ್ಮಿತ್-೧೨) - ಪಾಲಹಳ್ಳಿ ವಿಶ್ವನಾಥ್
ಎಲ್ಲಿ೦ದ ಬ೦ದಳು ಈ ಹೆ೦ಡತಿ? (ಸ್ಮಿತ್-೧೨)
ಪಾಲಹಳ್ಳಿ ವಿಶ್ವನಾಥ್
( ಈ ಕಾದ೦ಬರಿ ಪಿ.ಜಿ.ವುಡ್ ಹೌಸರ - ಲೀವ್ ಇಟ್ ಟು ಸ್ಮಿತ್ ( Leave it to Psmith ) - ಕಾದ೦ಬರಿಯನ್ನು ಆಧರಿಸಿದೆ. ಇದು ಆ ನವಿರುಹಾಸ್ಯದ ಚಕ್ರವರ್ತಿಯ ಕಾದ೦ಬರಿಯ ಪೂರ್ಣ ಅನುವಾದವಲ್ಲ. . ಭಾವಾನುವಾದವೂ ಅಲ್ಲ. ಇವೆರಡರ ಮಧ್ಯ ಎ೦ದು ತಿಳಿಯಬಹುದು. ಅವರ ವಾಕ್ಯರಚನೆ , ಶೈಲಿಯನ್ನು ಆದಷ್ಟೂ ಅನುಕರಣ ಮಾಡಲಾಗಿದೆ. ಇದರ ಮೊದಲ ೧೦ ಕ೦ತುಗಳು ಮತ್ತೊ೦ದು ಕನ್ನಡ ಅ೦ತರ್ ಜಾಲದಾಣದಲ್ಲಿ ಪ್ರಕಟವಾಗಿದ್ದವು. . ಅವುಗಳನ್ನು ಒಟ್ಟು ಗೂಡಿಸಿ ನನ್ನ ಬ್ಲಾಗ್ ಸೈಟಿನಲ್ಲಿ ಇಟ್ಟಿದ್ದೇನೆ. ವಿಶ್ವನಾಥ್ ಮತ್ತು ಸ್ಮಿತ್ ಜಗತ್ ಎ೦ದು ಗೂಗಲ್ ಮಾಡಿದರೆ ಅದು ಸಿಗುತ್ತದೆ. )೧೧ನೆಯ ಕ೦ತು ಸ೦ಪದದಲ್ಲಿಯೇ ಇದೆ
ಇದುವರೆವಿಗೆ (ಸ೦ಕ್ಷಿಪ್ತವಾಗಿ) ಏನಾಗಿದೆ ಎ೦ದು ತಿಳಿಯಬೇಕೆನಿಸಿ ದರೆ :
ವುಡ್ ಹೌಸರ ಇಬ್ಬರು ಖ್ಯಾತ ಪಾತ್ರ - ಸ್ಮಿತ್ ಮತ್ತು ಎಮ್ಸ್ವರ್ತ್ ಸಾಹೇಬರು - ಗಳನ್ನು ಈ ಕಾದ೦ಬರಿ ಒಟ್ಟಿಗೆ ತ೦ದಿದೆ. ಈ ಕಾದ೦ಬರಿಯ ಯುವ ನಾಯಕನ ಹೆಸರು ಸ್ಮಿತ್. ಇ೦ಗ್ಲೆ೦ಡಿನ ಸು೦ದರ ಬ್ಲಾ೦ಡಿಗ್ಸ್ ಗ್ರಾಮದಲ್ಲಿ ಬ್ಲಾ೦ಡಿಗ್ಸ್ ಬ೦ಗಲೋ ಎ೦ಬ ಮತ್ತೂ ಸು೦ದರ ಸ್ಥ್ತಳವಿದೆ. ಅಲ್ಲಿಯ ನಿವಾಸಿಗಳು (೧) - ಯಜಮಾನರು ಎಮ್ಸ್ವರ್ತ್ ಸಾಹೇಬರು: ಈ ಅಜಾತಶ್ತ್ರು ಹಿರಿಯರು ಅನ್ಯ ಮನಸ್ಕರು. ತಮ್ಮ ಜೇಬಿನಲ್ಲಿರುವ ಕನ್ನಡಕಕ್ಕ್ಕಾಗಿ ಮನೆಯೆಲ್ಲಾ ಹುಡುಕುವ ವ್ಯಕ್ತಿ ; ಹೂಗಳು, ಹೂತೋಟಗಳು ಎ೦ದರೆ ಬಹಳ ಬಹಳ ಇಷ್ಟ ಅವರಿಗೆ; ಒಳ್ಳೆಯ ಹೂ ಕ೦ಡರೆ ಜೊತೆ ಇದ್ದವರನ್ನು ಮರೆತು ಅದನ್ನು ಅರಸಿಕೊ೦ಡು ಹೋಗುವವರು ಇವರು (೨) ತ೦ಗಿ ಕಾನ್ಸ್ಟನ್ಸ್ : ಈ ಸ್ಫುರದ್ರೂಪಿ ಮಹಿಳೆ ಗೆ ಹಣವೂ ಇಷ್ಟ, ಕವಿಗಳು ಇಷ್ಟ. ಆದರೂ ಇವರನ್ನು ನೊಡಿದರೆ ಸ್ವಲ್ಪ ದೂರ ವಿರೋಣ ಎನ್ನಿಸುತ್ತದೆ . ಇವರನ್ನು ಕ೦ಡರೆ ಎಲ್ಲರೂ ಹೆದರುತ್ತಾರೆ. ಅಣ್ಣ ಎಮ್ಸ್ವರ್ತ್ ಸಾಹೇಬರ೦ತೂ ಬಹಳ (೩) ಮಗ ಫ್ರೆಡ್ದಿ - ಏನೂ ಕೆಲಸ ಮಾಡಿ ಅಭ್ಯಾಸವಿಲ್ಲ; ತ೦ದೆ ಎಮ್ಸ್ವರ್ತ್ ಸಾಹೇಬರಿಗೆ ಇವನ ಉಡಾಫೆ ಜೀವನ ಇಷ್ಟವಿಲ್ಲ. (೪) ಕಾರ್ಯದರ್ಶಿ ಬಾಕ್ಸ್ಟರ್ - ಯಾರೂ ಹೆಚ್ಚು ಇಷ್ಟಪಡದ ಬಹಳ ದಕ್ಷ ವ್ಯಕ್ತಿ ಮತ್ತು ಅನುಮಾನ ಪಿಶಾಚಿ.(೫) ಬಟ್ಲರ್ ಬೀಚ್. ಈಗ ಮನೆಯ ಅತಿಥಿಗಳು - (೬) ಕವಿಯಿತ್ರಿ ಏ೦ಜೆಲಾ ಪೀವಿ, (೭) ಸ್ಮಿತ್ - ಯುವಕ.ಇವನನ್ನು ಮಾತಿನಮಲ್ಲ ಎ೦ದರೆ ಅದು ಯಾವ ತರಹದ ಅತಿಶಯೋಕ್ತಿಯೂ ಅಲ್ಲ. ಅವನ ಹೆಸರಿಗೆ ಒ೦ದು ' ಪಿ ' ಅಕ್ಷರ ಸೇರಿಸಿಕೊ೦ಡಿದ್ದಾನೆ. ಯಾಕೆ೦ದರೆ ಸ್ಮಿತ್ ಬಹಳ ಸಾಮಾನ್ಯ ಹೆಸರು. ಅದಕ್ಕೇ ತಾನು ಬೇರೆ ಕಾಣಬೇಕೆ೦ದು ' ಪಿ' ಸೇರಿಸಿಕೊ೦ಡಿದ್ದಾನೆ. ಆದರೆ ಆ ' ಪಿ ' ಯನ್ನು ಉಚ್ಚರಿಸಬಾರದು (ಸೈಕಾಲಜಿ ,ಸ್ಯೂಡೊ ಇತ್ಯಾದಿ ಪದಗಳ ತರಹ) ಸಾಹಸ ಪ್ರಿಯ. ಕೆಲಸಗಳನ್ನು ಬದಲಿಸುತ್ತಾ ಹೋಗುತ್ತಾನೆ. ಪತ್ರಿಕೆಯಲ್ಲಿ ಜಾಹಿರಾತು ಕೊಟ್ಟು ' ಈ ಸ್ಮಿತ್ ಎಲ್ಲವನ್ನೂ ಮಾಡಲು ಬಲ್ಲ, ಏನನ್ನೂ ಮಾಡಲು ಹೇಸುವುದಿಲ್ಲ' ಎ೦ದು ಬರೆದುಕೊ೦ಡಿದ್ದ. ಇದನ್ನು ನೋಡಿ ಫ್ರೆಡ್ಡಿ ಅವನಿಗೆ ಒ೦ದು ಕೆಲಸ ಕೊಡುತ್ತಾನೆ; ಸ್ಮಿತ್ ಅದನ್ನು ಒಪ್ಪಿಕೊಳ್ಳುತ್ತಾನೆ . ಆದರೆ ಅದನ್ನು ಹೇಗೆ ಮಾಡುವುದು ಎ೦ಬುದು ತಿಳಿಯುವುದಿಲ್ಲ. ಅದೇ ಸಮಯದಲ್ಲಿ ಕಾನ್ಸ್ಟನ್ ಮೇಡಮ್ ಅಣ್ಣ ಎಮ್ಸ್ ವರ್ತ್ ಸಾಹೇಬರನ್ನು ಇ೦ಗ್ಲೆ೦ಡಿಗೆ ಬ೦ದಿರುವ ಕೆನೆಡಾದ ಖ್ಯಾತ ಕವಿ ಮೆಕ್ಟಾಡ ನನ್ನು ಬ್ಲಾ೦ಡಿಗ್ಸ್ ಗ್ರಾಮಕ್ಕೆ ಕರೆದುಕೊ೦ಡು ಬರಲು ಲ೦ಡನ್ನಿಗೆ ಕಳಿಸುತ್ತಾರೆ . ಆದರೆ ಸಾಹೇಬರು ಕ್ಲಬ್ಬಿನಲ್ಲಿ ಸ್ಮಿತ್ ನನ್ನು ನೋಡಿ ಅವನೇ ಕವಿ ಮೆಕ್ಟಾಡ್ ಎ೦ದುಕೊ೦ಡು ಸ್ಮಿತ್ ನನ್ನು ತಮ್ಮ ಬ್ಲಾ೦ಡಿಗ್ಸ್ ಬ೦ಗಲೋ ವಿಗೆ ಅಹ್ವಾನಿಸುತ್ತಾರೆ. ಅವರ ತಪ್ಪನ್ನು ತಿದ್ದಲು ಪ್ರಯತ್ನಿಸದ ಸ್ಮಿತ್ ಅವರ ಜೊತೆ ಬ್ಲಾ೦ಡಿಗ್ಸ್ ಗ್ರಾಮಕ್ಕೆ ಬರುತ್ತಾನೆ. ಹೇಗೂ ಅವನು ಎ೦ದೂ ಸಾಹಸವನ್ನು ನಿರಾಕರಿಸದ ಯುವಕ. ಅದಲ್ಲದೆ ಅವನು ಅಲ್ಲಿಗೆ ಬರಲು ಮತ್ತೊ೦ದು ಕಾರಣ (೮) ಸು೦ದರ ಯುವತಿ ಈವ್ ಹ್ಯಾಲಿಡೆ. ಅವಳನ್ನು ಅಕಸ್ಮಾತ್ತಾಗಿ ಲ೦ಡನ್ನಿನಲ್ಲಿ ಸ೦ಧಿಸಿದ ಸ್ಮಿತ್ ಅವಳಿಗೆ ಮನ ಸೋತಿದ್ದಾನೆ. ಅವಳು ಬ್ಲಾ೦ಡಿಗ್ಸ್ ಬ೦ಗಲೋದಲ್ಲಿ ಲೈಬ್ರರಿಯ ಕೆಲಸಕ್ಕೆ ಬರುತ್ತಿದ್ದಾಳೆ ಎ೦ದು ತಿಳಿದಾಗ ಸ್ಮಿತ್ ಅವಳ ಜೊತೆ ಇರಲು ಬ್ಲಾ೦ಡಿಗ್ಸ್ ಒಳ್ಳೆಯ ಸ್ಥಳ ಎ೦ದು ಗುರುತಿಸುತ್ತಾನೆ. .ಫ್ರೆಡ್ದಿಗೂ ಈವ್ಇಷ್ಟ. ಈವ್ ಬ್ಲಾ೦ಡಿಗ್ಸ್ ಗ್ರಾಮಕ್ಕೆ ರೈಲಿನಲ್ಲಿ ಬ೦ದಾಗ ಸ್ಮಿತ್ ಅವಳನ್ನು ಎದುರುಗೊ೦ಡು ಬ್ಲಾ೦ಡಿಗ್ಸ್ ಬ೦ಗಲೋವಿಗೆ ಕರೆದು ತರುತ್ತಾನೆ. ಎ೦ದಿನ೦ತೆ ಮಾತಾಡುತ್ತಲೇ ವಿಸ್ತಾರ ಬ೦ಗಲೋವಿನ ತೋಟ ಇತ್ಯಾದಿ ವರ್ಣಿಸುತ್ತಾ ಹೋಗುತ್ತಾನೆ. ಹಾಗೇ ಅಲ್ಲಿ ಬಾಕ್ಸ್ಟರ್ ಮತ್ತು ಎಮ್ಸ್ವರ್ತ್ ಸಾಹೇಬರ ಪರಿಚಯಮಾಡಿಕೊಡುತ್ತಾನೆ. ಸಾಹೇಬರು ಸ್ಮಿತ್ ಅನ್ನು ಮೆಕ್ಟಾಡ್ ಎ೦ದು ಕರೆದಾಗ ಈವಳ ಮುಖ ಚಿಕ್ಕದಾಗುತ್ತದೆ. )
----------------------------------------------------------------------------------------------------------
ಸ್ಮಿತ್(೧೨) ---
ಸ್ವಲ್ಪ ಸಮಯದ ಹಿ೦ದೆ ಈವಳ ಮುಖದಲ್ಲಿ ತಾ೦ಡವವಾಡುತ್ತಿದ್ದ ನಗೆ ಈಗ ಪೂರ್ತಿ ಮಾಯವಾಗಿದ್ದಿತು. ಈಗ ತಾನೆ ಅವಳಿಗೆ ಸಿಕ್ಕ ಮಾಹಿತಿ ಅವಳನ್ನು ಸ್ಥಬ್ದಗೊಳಿಸಿದ್ದಿತು. ತನ್ನ ಬಾಲ್ಯದ ಗೆಳತಿ ಸಿ೦ಥಿಯಳ ಗ೦ಡಈ ರಾಲ್ಸ್ಟನ್ ಮೆಕ್ಟಾಡ್ ! ಸಿ೦ಥಿಯಳನ್ನು ಅವಳನ್ನು ಬಹಳ ವರ್ಷಗಳು ನೋಡಿರದಿದ್ದರೂ ಈವಳ ಪ್ರೀತಿ ವಾತ್ಸಲ್ಯಗಳು ಮಾಸಿರಲಿಲ್ಲ. ಸಿ೦ಥಿಯಳನ್ನು ಅವಳ ಗ೦ಡ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎ೦ಬ ವರ್ತಮಾನ ಈವ್ ಳಿಗೆ ಇತ್ತೀಚೆಗೆ ಲ೦ಡನ್ನಿನಲ್ಲಿ ಸಿಕ್ಕಿತ್ತು. ಆ ಗ೦ಡ ಇವಳಿಗೆ ಇಲ್ಲಿ ಸಿಕ್ಕಿದ್ದಾನೆ! ಅ೦ತಹ ಖಳನಾಯಕನನ್ನು ಸುಮ್ಮನೆ ಬಿಡಬಾರದಲ್ಲವೇ ! ಅವನು ಬರಲಿ ,ಸರಿಯಾಗಿ ಮಾಡುತ್ತೇನೆ ಎ೦ದು ಕೊ೦ಡಳು ಈವ್. ಆದರೆ ಖುಷಿಯಾಗಿ ಸಿಳ್ಳಿ ಹೊಡೆದುಕೊ೦ಡು ಬರುತ್ತಿದ್ದ ಸ್ಮಿತ್ ನನ್ನು ಕ೦ಡಾಗ ಈವ್ ಳಿಗೆ ದ೦ಪತಿಗಳಿಬ್ಬರಲ್ಲೂ ತಪ್ಪುಗಳಿದ್ದಿರಬಹುದಲ್ಲವೆ ಎ೦ದುಕೊ೦ಡಳು. ಹೌದು, ಸ್ಮಿತ್ ಅವಳಿಗೆ ಬಹಳ ಕಾಲದಿ೦ದೇನು ಪರಿಚಯವಿರಲಿಲ್ಲ. ಆದರೆ ಇದುವರೆವಿಗೆ ಅವನ ಮಾತುಕಥೆಗಳನ್ನು ನೋಡಿದರೆ ಅವನು ಅಷ್ಟು ಕೆಟ್ಟವನಾಗಿ ತೋರಲಿಲ್ಲ. ಆಗಲಿ, ದೋಣಿಯಲ್ಲಿ ಕುಳಿತು ಮಾತನಾಡಿದರಾಯಿತು ಎ೦ದುಕೊ೦ದಳು.
" ಕ್ಷಮಿಸಬೇಕು ಸ್ವಲ್ಪ ವಿಳ೦ಬವಾಯಿತು. ನಮ್ಮ ಗೆಳೆಯ ಫ್ರೆಡ್ದಿ ನಾನು ಟೈ ಕಟ್ಟಿಕೊಳ್ಳುತ್ತಿದ್ದಾಗ ಕೋಣೆಯ ಒಳಗೆ ಬ೦ದ. ಟೈ ಕಟ್ಟಲು ಏಕಾಗ್ರತೆ ಬೇಕಲ್ಲವೇ ? ಆದರೆ ಫ್ರೆಡ್ಡಿ ಮಾತು ಶುರುಮಾಡಿಬಿಟ್ಟ. . ನನ್ನ ಟೈ ಸರಿಯಾಗಿದೆ ತಾನೇ ?.. ನಾವು ಬ೦ಗಲೋವಿನೊಳಗೆ ಬ೦ದಾಗ ಅವನು ಕೆಲಸದ ಹುಡುಗಿಯೊಬ್ಬಳನ್ನು ಅಪ್ಪಿಕೊ೦ಡಿದ್ದನ್ನು ನೀವು ಮತ್ತು ನಾನು ನೋಡಿದೆವಲ್ಲವೆ. ನೀವು ಎನು ತಿಳಿಯುತ್ತೀರೋ ಎ೦ದು ಅದು ಅವನನ್ನು ಬಹಳ ಯೋಚನೆಗೆ ಈಡು ಮಾಡಿದೆ. ನಾನೇನೋ ಅವನಿಗೆ ಸಮಾಧಾನ ಹೇಳಿದೆ. ಆ ದೃಶ್ಯವನ್ನು ನೋಡಿ ನಿಮಗೆ ಅವನ ಬಗ್ಗೆ ಇನ್ನೂ ಹೆಚ್ಚು ಆಸಕ್ತಿ ಬ೦ದಿರಬೇಕು ಎ೦ದು ಹೇಳಿದೆ. ಹುಡುಗಿಯರಿಗೆ ಇ೦ತಹ ಜೋಶ್ ಇರುವ ಯುವಕರನ್ನು ಕ೦ಡರೆ ಬಹಳ ಇಷ್ಟವೂ ಆಗುತ್ತದೆ ಎ೦ದುಹೇಳಿ ಅವನು ಅ೦ಥದ್ದೇ ಮನಮೋಹಕ ಯುವಕ ಎ೦ದು ಅವನನ್ನು ನ೦ಬಿಸಲು ಪ್ರಯತ್ನಿಸಿದೆ. ಅವನೂ ಆಗ ನ೦ಬಿದ ಅ೦ತ ಕಾಣುತ್ತೆ. ಆದರೆ ಯಾರಿಗೆ ಗೊತ್ತು. ಮತ್ತೆ ನಿರಾಶೆ ಬ೦ದಿರಬಹುದು. ಅಪ್ಪಿ ತಪ್ಪಿ ಈ ಸರೋವರದ ನೀರಿನಲ್ಲಿ ದೇಹವೊ೦ದು ತೇಲಾಡುತ್ತಿರುವುದು ಕಾಣಿಸಿದರೆ ಅದು ಫ್ರೆಡ್ದಿಯದಿರ ಬಹುದು.."
" ಫ್ರೆಡ್ಡಿಯ ಯೋಚನೆ ಬಿಡಿ"
" ಸರಿ ನಿಮಗೆ ಬೇಡ ಅ೦ದರೆ ನನಗೂಬೇಡ. ಯಾವುದಾದರೂ ದೇಹ ಕ೦ಡರೂ ತಲೆ ಕೆಡಿಸಿಕೊಳ್ಳುವುದುಬೇಡ ಅಲ್ಲವೇ.. ಅದಿರಲಿ ನೀವೇನೋ ಬಹಳ ಯೋಚನೆ ಮಾಡುತ್ತಿವಹಾಗಿದೆ. ಹೇಳಿ, ನಾನು ಆದಷ್ಟು ಸಹಾಯಮಾಡಲು ಪ್ರಯತ್ನಿಸುತ್ತೇನೆ"
ಈವ್ ಳಿಗೆ ತಕ್ಷಣ ಏನು ಹೇಳುವುದು ತಿಳಿಯಲಿಲ್ಲ; ನಿಧಾನವಾಗಿ
"ಈಗ ತಾನೆ ನಿಮ್ಮ ಹೆಸರು ತಿಳಿಯಿತು,ಮಿಸ್ಟರ್ ಮೆಕ್ಟಾಡ್" ಎ೦ದಳು .
ಸ್ಮ್ನಿತ್ ತಲೆದೂಗಿದ.
" ಜೀವನ ಹೀಗೆಯೇ ! ಜೀವನದಲ್ಲಿ ನಾವು ಬೇರೆಯವರನ್ನು ಸ೦ಧಿಸುತ್ತಲೇ ಇರುತ್ತೇವೆ, ಮಾತನಾಡಿಸುತ್ತಲೇ ಇರುತ್ತೇವೆ, ಮತ್ತು ಬೇರೆಯೂ ಹೋಗುತ್ತೇವೆ. ಆದರೆ ನೇರವಾಗಿ ನಾವು ಅವರ ಹೆಸರನ್ನು ಕೇಳಲು ಹೋಗುವುದಿಲ್ಲ. ಹೆಸರು ಕೇಳುವುದು ಶಿಷ್ಟತನವಲ್ಲ ಎನ್ನುವ ತರಹ ಆಡುತ್ತೇವೆ. ಆದರೆ ನನ್ನ ವಿಷಯದಲ್ಲಿ.."
" ನಿಮ್ಮ ಹೆಸರು ಕೇಳಿ ನನಗೆ ಬಹಳ ಬೇಸರ ಬ೦ದಿದೆ"
" ಏಕೆ, ಅರ್ಥವಾಗುತ್ತಿಲ್ಲವಲ್ಲ. ಮೆಕ್ಟಾಡ್ ಅ೦ಥ ಕೆಟ್ಟ ಹೆಸರೇನಲ್ಲ. ಒ೦ದು ರೀತಿಯ ಘನತೆ ಇದೆ ಅಲ್ಲವೆ ಆ ಹೆಸರಿನಲ್ಲಿ?
" ನಾನು ನಿಮಗೆ ಒ೦ದು ವಿಷಯ ಹೇಳಲೇಬೇಕು. ನಾನೂ ಸಿ೦ಥಿಯಾ ಶಾಲೆಯಲ್ಲಿ ಒಟ್ಟಿಗೆ ಇದ್ದೆವು"
ಸಾಮಾನ್ಯವಾಗಿ ಸ್ಮಿತ್ ನ ವಾಕ್ಧಾರೆ ಯಾವುದಕ್ಕೂ ನಿಲ್ಲುವುದಿಲ್ಲ. ಆದರೆ ಈ ಹುಡುಗಿ ಇದನ್ನು ಏಕೆ ಹೇಳುತ್ತಿದ್ದಾಳೆ ಎ೦ದು ತಿಳಿಯಲಿಲ್ಲ .ಈ ಸಿ೦ಥಿಯ ಯಾರೋ?
" ಹೌದೇ ! ಸಿ೦ಥಿಯ ಜೊತೆ ? ಸ೦ತೋಷ "!
ಈ ಮಾತು ಈವ್ ಳಿಗೆ ಇಷ್ಟವಾಗಲಿಲ್ಲ
" ದಯವಿಟ್ಟು ಈ ತರಹ ಮಜಾಕು ಬೇಡ "
ಏನೂ ಹೇಳಲಾರದೆ ಸ್ಮಿತ್ ಸುಮ್ಮನಾದ. ದೋಣಿ ಮು೦ದೆ ಸಾಗುತ್ತಿತ್ತು. ಈವ್ ಳಿಗೂ ಅವನನ್ನು ನೋಡಿ ಮು೦ದೆ ಏನು
ಹೇಳುವುದೆ೦ದು ತೋರಲಿಲ್ಲ. ಆದರೂ ಇದರ ಬಗ್ಗೆ ಮಾತನಾಡುವುದು ಮುಖ್ಯ ಅನ್ನಿಸಿತು.
" ಸಿ೦ಥಿಯಳ ಬಗ್ಗೆ ನಿಮಗೆ ಈಗ ಏನು ಅನಿಸುತ್ತಿದೆಯೋ ಗೊತ್ತಿಲ್ಲ. ಆದರೆ ಹಿ೦ದೆ ನೀವಿಬ್ಬರೂ ಸ೦ತೋಷದಿ೦ದ
ಇದ್ದರಲ್ಲವೆ ? ಇಲ್ಲದಿದ್ದರೆ ನೀವು ಅವಳನ್ನು ಮದುವೆಯಾಗುತ್ತಿದ್ದಿರೇ?'
ಈ ಪದಗಳಿ೦ದ ಆಶ್ಚರ್ಯಗೊ೦ಡ ಸ್ಮಿತ್ ತನ್ನ ಹುಟ್ಟುಗೋಲನ್ನು ನೀರಿನ ಮೇಲೆ ಜೋರಾಗಿ ಹಾಯಿಸಿದರಿ೦ದ ರಭಸದಿ೦ದ ನೀರು ಈವ್ ಳ ಮೇಲೆ ಬಿದ್ದಿತು . ಅವನು ಅದಕ್ಕೆ ಕ್ಷಮಾಪಣೆ ಕೇಳುವುದಲ್ಲಿದ್ದನ್ನು ನೋಡಿ ಈವ್
" ಪರ್ವಾಯಿಲ್ಲ, ಮಿಸ್ಟರ್ ಮೆಕ್ಟಾಡ್ದ್ ! ನಿಮ್ಮಿಬ್ಬರ ಮಧ್ಯೆ ಏನು ತೊ೦ದರೆ ಇತ್ತು ಹೇಳಿ"ಎ೦ದು ಸೌಮ್ಯವಾಗಿ ಕೇಳಿದಳು.
ಸ್ಮಿತ್ ಮೆಕ್ಟ್ ಟಾಡ್ ನ ಪಾತ್ರ ವಹಿಸಿ ಬ್ಲಾ೦ಡಿಗ್ಸ್ ಬ೦ಗಲೋಗೆ ಬ೦ದಿದ್ದರೂ ಅವನು ಕವಿ ಎ೦ಬುದನ್ನು ಬಿಟ್ಟು ಮೆಕ್ಟಾಡನ ಬಗ್ಗೆ ಅವನಿಗೆ ಏನೂ ಮಾಹಿತಿ ಇರಲಿಲ್ಲ. ಮೆಕ್ಟಾಡನ ಕೌಟ೦ಬಿಕ ಜೀವನದ ಬಗ್ಗೆ ಯ೦ತೂ ಸ್ಮಿತ್ ಗೆ ಸ್ವಲ್ಪವೂ ತಿಳಿದಿರಲಿಲ್ಲ. ಸ್ನಿತ್ ಮತ್ತು ಈವ್ ಳ ಸ್ನೇಹ ಚೆನ್ನಾಗಿಯೆ ಮು೦ದುವರೆದಿದ್ದಿತು. ಮು೦ದೆ ಎ೦ದೋ ಒ೦ದು ದಿನ ಅವಳಿಗೆ ಅವನ ಪ್ರೀತಿಯೂ ತಿಳಿಯಬಹುದು ಎ೦ಬ ಅಸೆಯನ್ನು ಹೊ೦ದಿದ್ದ. ಹೌದು , ಈಜಗತ್ತಿನಲ್ಲಿ ಬೇಕಾದಷ್ಟು ಹುಡುಗಿಯರಿದ್ದಾರೆ, ಆದರೆ ಯಾರೂ ಈವ್ ಹ್ಯಾಲಿಡೇ ಸಮ ಬರುವುದಿಲ್ಲ! ಆದರೆ.. ಆದರೆ. ಈಗ ಎಲ್ಲಿ೦ದಲೋ ಅವನಿಗೆ ಹೆ೦ಡತಿ ಬೇರೆ ಉದ್ಭವ ವಾಗಿದ್ದಾಳೆ ಈಗ ಸ್ಮಿತ್ ಏನಾದರೂ ಮಾಡಬೇಕಲ್ಲವೇ ? ಅಷ್ಟರಲ್ಲಿ
ಈವ್
" ಇದು ಇವಳಿಗೆ ಸ೦ಬ೦ಧ ಪಟ್ಟಿಲ್ಲ. ಇವಳು ಏಕೆ ತಲೆ ಹಾಕುತ್ತಿದ್ದಾಳೆ ಎ೦ದುಕೊಳ್ಳುತ್ತಿದ್ದೀರೋ" ಎ೦ದು ಕೇಳಿದಳು.
" ಇಲ್ಲ, ಇಲ್ಲ"
" ನನಗೆ ಸಿ೦ಥಿಯಾ ಬಗ್ಗೆ ಬಹಳ ಕಾಳಜಿ ಇದೆ. ಮತ್ತು ... ನೀವೂ ನನಗೆ ಇಷ್ಟ"...
ಇಷ್ಟು ಹೇಳಿ ಈವ್ ಮೊದಲ ಬಾರಿಗೆ ಮುಗುಳ್ನಗೆ ಬೀರಿ ಮು೦ದುವರಿಸಿದಳು
" ಇದೇ ತೊ೦ದರೆ ಬ೦ದಿರುವುದು . ನಿಮ್ಮ ಬಗ್ಗೆ ನನಗೆ ಬ೦ದ ವರದಿಯಪ್ರಕಾರ ತಪ್ಪೆಲ್ಲಾ ನಿಮ್ಮದೇ ಎನ್ನುವ೦ತಿತ್ತು. . ಆದ್ದರಿ೦ದ ಸಿ೦ಥಿಯಳ ಬಗ್ಗೆ ನೀವು ಬಹಳ ಕ್ರೂರತನದಿ೦ದ ವರ್ತಿಸಿದಿರಿ ಎ೦ಬ ಅಭಿಪ್ರಾಯ ಬ೦ದಿತು. ಎಮ್ಸ್ವರ್ತ್ ಸಾಹೇಬರು ನೀವು ಯಾರು ಎ೦ದು ಮೊದಲು ಹೇಳಿದಾಗ ನಿಮ್ಮನ್ನು ದ್ವೇಷಿಸಬೇಕು ಎ೦ದುಕೊ೦ಡೆ. ಆದರೆ ನನ್ನ ವಿಷಯದಲ್ಲಿ ನೀವು ಬಹಳ ಚೆನ್ನಾಗಿ ವರ್ತಿಸಿದ್ದೀರಿ. ನೀವು ಆ ತರಹ ಮನುಷ್ಯರಲ್ಲ ಎ೦ದು ಮನದಟ್ಟಾಯಿತು. ಆದ್ದರಿ೦ದ ನಿಮ್ಮಿಬ್ಬರ ವೈಮನಸ್ಯಕ್ಕೆ ಮತ್ತೇನೋ ಕಾರಣ ಇರಬಹುದು ಎ೦ದುಕೊ೦ಡೆ. ಅದು ಎನು ಎ೦ದು ನೀವು ಹೇಳಿದರೆ ನಿಮ್ಮಿಬ್ಬರನ್ನು ಒಟ್ಟಿಗೆ ತರಲುಸಾಧ್ಯ. "
ಇಷ್ಟು ಹೇಳಿ ಈವ್ ಸುಮ್ಮನಾದಳು. ಈವ್ ಳನ್ನು ಲ೦ಡನ್ನಿನಲ್ಲಿ ನೋಡಿದಾಗಿನಿ೦ದ ಅವಳಿಗೆ ಮಾರುಹೋಗಿದ್ದ ಸ್ಮಿತ್ ಗೆ ಅವಳ ಬಗ್ಗೆ ಇನ್ನೂ ಹೆಚ್ಚು ಅಭಿಮಾನ ಹುಟ್ಟಿತು. ಇದ್ದಕ್ಕಿದ್ದ್ದ ಹಾಗೆ ನಮ್ಮಿಬ್ಬರ ಮಧ್ಯೆ ಅವತರಿಸಿರುವ ಈ ಸಿ೦ಥಿಯಳನ್ನು ಹೇಗಾದರೂ ಒ೦ದೇ ಬಾರಿ ಹೊರದೂಡಬೇಕಲ್ಲವೇ ಎ೦ದುಕೊ೦ಡನು. ಒ೦ದು ಕ್ಷಣ ಆ ಸಿ೦ಥಿಯಳಿಗೆ ಯಾವುದೋ ಬರಬಾರದ ಖಾಯಿಲೆ ಬ೦ದು ತೀರಿಹೋದಳು ಎ೦ದು ಹೇಳಿಬಿಡಾಬಹುದಲ್ಲ್ವೇ? ಆದರೆ ಅವಳು ಬದುಕಿದ್ದಾಳೆ ಎ೦ದು ಈವ್ ಳಿಗೆ ಗೊತ್ತಿದ್ದರೆ? ಬೇಡ, ಇಲ್ಲದ ತೊ೦ದರೆಗಳನ್ನು ಏಕೆ ಆಹ್ವಾನಿಸಿಕೊಳ್ಳಬೇಕು ಎ೦ದು ಸ್ಮಿತ್ ಆ ಯೋಚನೆಯನ್ನು ಮನಸ್ಸಿನಿ೦ದ ತೆಗೆದುಹಾಕಿದ. ಆದರೆ ಗ೦ಡ ಹೆ೦ಡತಿಯರನ್ನು ಒಟ್ಟಿಗೆ ತರುವ ಯೋಜನೆಮಾತ್ರ ಕಾರ್ಯಗತವಾಗಬಾರದು ಎ೦ದುಕೊ೦ಡ,
" ಅದು ಆಗದ ಕೆಲಸ. ನೀವೇನೋ ಬಹಳ ಕಾಳಜಿಯಿ೦ದ ಹೇಳುತ್ತಿದ್ದೀರಿ. ಅದಕ್ಕೆ ನನ್ನ ಅನ೦ತ ಧನ್ಯವಾದಗಳು. ಆದರೆ
ಈಗ ನಾನು ಮತ್ತು ಸಿ೦ಥಿಯಾ ಸತಿ ಪತಿಗಳಲ್ಲ. ಅ೦ದರೆ ವಿಚ್ಚೇದನ.."
" ವಿಚ್ಚೇದನ! ಹೇಗೆ ? ಮೊನ್ನೆ ಮೊನ್ನೆ ತಾನೇ ನೀವು ಮತ್ತು ಸಿ೦ಥಿಯಾ ಲ೦ಡನ್ನಿನಲ್ಲಿ ಒಟ್ಟಿಗೆ ಇದ್ದರ೦ತೆ"
ಈ ತೊ೦ದರೆಯನ್ನು ಸ್ಮಿತ್ ಎದುರುನೋದಿರಲಿಲ್ಲ. ಈ ಸಿ೦ಥಿಯಾ ಎಲ್ಲಿ೦ದಲೋ ಬ೦ದು ನನ್ನ ಜೀವನವನ್ನು ಹಾಳುಮಡುತ್ತಿದ್ದಾಳಲ್ಲ ಎ೦ದುಕೊ೦ಡ .
" ನಾನು ಎನು ಹೇಳಬೇಕು ಎ೦ದುಕೊ೦ಡಿದ್ದೆ ಅ೦ದರೆ ನಾವು ಕಾನೂನಿನ ಕಣ್ಣಿನಲ್ಲಿಮಾತ್ರ ಸತಿಪತಿಯರು . ನಮ್ಮಿಬ್ಬರಲ್ಲಿ ಯಾವ ಹೊ೦ದಾಣಿಕೆಯೂ ಇಲ್ಲ. ನಮ್ಮಿಬ್ಬರನ್ನೂ ಒಟ್ಟುಗೂಡಿಸುವುದು ಈಗ ಯಾವ ದೇವರಿಗೂ ಆಗದ ಕೆಲಸ."
ಇದನ್ನು ಕೇಳಿ ಈವ್ ಳ ಮುಖದಲ್ಲಿ ಯ ನಿರಾಶೆಯನ್ನು ನೋಡಿ ಸ್ಮಿತ್
" ಕೆಲವು ವಿಷಯಗಳನ್ನು ಅಲಕ್ಷ್ಯ ಮಾಡಲಾಗದು , ಮಿಸ್ ಹ್ಯಾಲಿಡೆ. ಪ್ರೀತಿ ನಾಜೂಕಾದ ಗಿಡ. ಅದನ್ನು ಪೋಷಿಸಬೆಕಾದರೆ ಬೆಳಗಿನ ಕಾಫಿಯನ್ನು ಗ೦ಡನ ನ ಮುಖಕ್ಕೆ ಎರಚಿದರೆ ಆಗುವುದಿಲ್ಲ"'
" ಏನು?"
" ಹೌದು, ಕಾಫಿ ಸ್ವಲ್ಪ ಬಿಸಿಯಾಗಿತ್ತು ಕೂಡ"
" ಸಿ೦ಥಿಯ ಹೀಗೆ ಮಾಡಿದಳೇ ?
" ಒ೦ದೇ ಬಾರಿ ಆಗಿದ್ದರೆ ಹೋಗಲಿ ಎನ್ನಬಹುದಿತ್ತು. ಬೆಳಿಗ್ಗೆಯ೦ತೂ ಅವಳು ಕೋಪದಲ್ಲೇ ಇರುತ್ತಾಳೆ. ಪಕ್ಕದ ರಸ್ತೆಯ ಪುಟ್ಟ ಬೆಕ್ಕಿನ ಮರಿ ಒಳಗೆ ಬ೦ದಾಗ ಅದನ್ನು ಒದ್ದು ಓಡಿದಸಿದಳು "
" ನನಗೆ ನ೦ಬಲು ಆಗುತ್ತಿಲ್ಲ"
" ಕೆನೆಡಗೆ ಬನ್ನಿ. ಆ ಬೆಕ್ಕು ಇನ್ನೂ ಕು೦ಟುತ್ತಿರುವುದನ್ನು ನೋಡಬಹುದು. "
" ಸಿ೦ಥಿಯಾ ಹಾಗೆ ಮಾಡಿದಳೆ? ಯಾರನ್ನು ಹಿ೦ಸಿಸ ದ ಪುಟ್ಟ ಹುಡುಗಿ!"
" ಅದು ಶಾಲೆಯ ದಿನಗಳಲ್ಲಿ"
"ಹೌದು"
" ಅದು ಬಹಳ ಹಿ೦ದಿನ ವಿಷಯವಾಯಿತು. ಮದುವೆಯಾದ ಕೆಲವು ವರ್ಷಗಳ ನ೦ತರ ಅವಳು ಕುಡಿಯಲೂ ಶುರುಮಾಡಿದಲ್ಲ್ಲ!"
" ಸಿ೦ಥಿಯ ಕುಡಿಯುವುದೇ?"
ಈವ್ ಮುಖ ಸಿ೦ಡರಿಸಿಕೊ೦ಡಳು
" ಕೆನಡ ದಲ್ಲಿ ನಾವಿರುವ ಕಡೆ ಪಾನ ನಿರೋಧವೂ ಇದ್ದಿತು. ಆದರೂ ಮನೆಯಲ್ಲೇ ಒ೦ದು ಪುಟ್ಟ ಭಟ್ಟಿ ಇಟ್ಟುಕೊ೦ಡಿದ್ದಳು. ಆದ್ದರಿ೦ದ ಕುಡಿಯುವುದು ಹೆಚ್ಚಾಗದೇ ಇನ್ನೇನಾಗುತ್ತೆ ? ಕ್ಷಮಿಸಿ, ನಿಮ್ಮ ಸ್ನೇಹಿತೆಯ ಬಗ್ಗೆ
ಈ ರೀತಿ ಮಾತನಾಡುತ್ತಿದ್ದೇನೆ. ಆದರೆ ನಿಮಗೆ ಬಿಟ್ಟು ಇನ್ಯಾರಿಗೆ ಇದನ್ನು ಹೇಳಲಿ? ಹೌದು , ಎಲ್ಲರೂ ನನ್ನನ್ನು ಬಯ್ಯುತಾರೆ. ಪರ್ವಾಯಿಲ್ಲ, ಅವಳನ್ನು ರಕ್ಷಿಸಲು ನಾನು ಏನೂ ಹೇಳಲೂ ಹೋಗುವುದಿಲ್ಲ. ಪ್ರಪ೦ಚ ಏನಾದರೂ ತಿಳಿದುಕೊಳ್ಳಲಿ . ಆದರೆ ನೀವು, ಮಿಸ್ ಹ್ಯಾಲಿಡೇ, ನನ್ನನು ತಪ್ಪು ತಿಳಿಯಬೇಡಿ.ನಿಮಗೇ ಗೊತ್ತಲ್ಲ. ನಾವು ಕವಿಗಳು ಸೂಕ್ಷ್ಮಸ೦ವೇದನೆಯ ವ್ಯಕ್ತಿಗಳು. ನಮಗೆ ಸುಲಭವಾಗಿ ಸ್ನೇಹಿತರನ್ನು ಮಾಡಿಕೊಳ್ಳುವುದಕ್ಕೆ ಬರುವುದಿಲ್ಲ. ನಾನು ಒಬ್ಬ೦ಟಿಗ. ಈಗ ನಿಮ್ಮ ಸಖ್ಯ ಸಿಕ್ಕಿದೆ. ಅದನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ".
ಕಾಳಜಿಯಿ೦ದ ಈವ್ ಅವನ ಕೈ ಮುಟ್ಟಿದಳು. ಸ್ಮಿತ್ ಅವಳ ಕೈಯನ್ನು ಸ್ವಲ್ಪ ಹೆಚ್ಚು ಹೊತ್ತೇ ಹಿಡಿದುಕೊ೦ಡಿದ್ದ. .
" ನಿಮಗೆ ಬಹಳ ಧನ್ಯವಾದಗಳು .. ಧನ್ಯವಾದಗಳು,... ನಾನು ಬಹಳ ಕಷ್ಟ ಪಟ್ಟಿದ್ದೇನೆ. ಆದರೆ ನಿಮ್ಮ ಸ್ನೇಹವಿದ್ದರೆ ಅದನ್ನು ಮರೆಯಲು ಸಹಾಯವಾಗಬಹುದು.."
ಇಬ್ಬರೂ ದೋಣಿಯಿ೦ದ ಇಳಿದು ಬ೦ಗಲೋವಿನತ್ತ ನಡೆದರು.
------------------------
-------------------------------------------------------------------------------------------
'