ಎಲ್ಲೆಡೆ ಹಲಸು ಮೇಳಗಳದ್ದೇ ಸುದ್ದಿ : ಏನಿದರ ಮಹಿಮೆ...?
ಇಂದು ಎಲ್ಲಾ ಊರಿನಲ್ಲಿಯೂ ಹಲಸು ಮೇಳಗಳು ಸುದ್ದಿಯಾಗುತ್ತಿದೆ. ಏನಿದರ ಮಹತ್ವ ಎಂದು ಒಮ್ಮೆ ಆಲೋಚಿಸೋಣ. ಹಲವು ವರ್ಷಗಳ ಹಿಂದೆ ಆಂಗ್ಲರ ಆಡಳಿತದ ಕಾಲ ಉಣ್ಣುವ ಆಹಾರಕ್ಕೆ ತೀವ್ರ ಕೊರತೆ ಇತ್ತಂತೆ. ಯಾರ ಮನೆಯಲ್ಲಾದರೂ ಅಕ್ಕಿಯ ದಾಸ್ತಾನು ಇದ್ದರೆ ಆರಕ್ಷಕರ ಬಲದ ಮೂಲಕ ತೆಗೆದುಕೊಂಡು ಹೋಗುತ್ತಿದ್ದರಂತೆ. ಒಂದು ಕುಟುಂಬಕ್ಕೆ ಇಂತಿಷ್ಟೇ ಅಕ್ಕಿ ಎಂದು ನಿಗದಿಪಡಿಸಿದ್ದರಂತೆ. ಆ ಕಾಲದಲ್ಲಿ ಹಸಿದ ಹೊಟ್ಟೆಯನ್ನು ಮಳೆಗಾಲದಲ್ಲಂತೂ ತುಂಬಿಸಿದ್ದು ಇದೇ ಹಲಸು. ಆಹಾರದ ಕೊರತೆಯಿಂದ ಕೃಶವಾದ ದೇಹ ಹಲಸು ಬೆಳೆದ ಕಾಲದಲ್ಲಿ ತುಂಬಿ ಬರುತ್ತಿತ್ತಂತೆ. ವಸ್ತು ವಿನಿಮಯದ ಕಾಲದಲ್ಲಿ ಹಲಸನ್ನು ಹಣದ ರೂಪದಲ್ಲಿ ನೀಡುತ್ತಿದ್ದರಂತೆ. ಅದರ ಅರ್ಥ ಹಲಸು ಹಸಿವಿನ ಹೊಟ್ಟೆಯನ್ನು, ಮತ್ತು ಶರೀರಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ಒದಗಿಸಿ ಕೊಡುತ್ತಿತ್ತು ಎಂದು.( ಅನ್ನಕ್ಕೆ ಪರ್ಯಾಯ ವ್ಯವಸ್ಥೆಯೇ ಹಲಸು ಆಗಿತ್ತು )
ಯಾವಾಗ ದೇಶದಲ್ಲಿ ಅಕ್ಕಿ ಗೋಧಿಯ ಉತ್ಪಾದನೆ ಜಾಸ್ತಿಯಾಯಿತೋ ಅಲ್ಲಿಗೆ ನಾವು ಹಲಸಿನ ಮಹತ್ವವನ್ನು ಮರೆಯಲು ತೊಡಗಿದೆವು. ಸುಲಭದಲ್ಲಿ ಹೊಟ್ಟೆ ತುಂಬುತ್ತಿದ್ದಂತೆ, ಕಷ್ಟಪಟ್ಟು ಮರ ಹತ್ತಿ ಆ ಮರದಿಂದ ಹಲಸು ಇಳಿಸಿ ಕತ್ತರಿಸಿ ಅದರ ಮೇಣ ತೆಗೆದು, ತುಂಡರಿಸಿ ಕಷ್ಟಪಡುವುದು ಯಾಕೆ ಎಂಬ ಮನೋಭಾವ ಬಂತು. ಆದರೆ ಇಂದು ಬೆಳೆಯುವ ಅಕ್ಕಿ ಮತ್ತು ಅದರ ಹಿಂದೆ ಬಳಸುವ ವಿಷ ರಸಾಯನಿಕಗಳ ಬಗ್ಗೆ ಅರಿವು ಇಲ್ಲದಾಯಿತು. ಇಂದು ಯಾವುದೇ ವಿಷ ರಾಸಾಯನಿಕಗಳು ಇಲ್ಲದೆ ಸಮೃದ್ಧವಾಗಿ ಪ್ರಕೃತಿಯಿಂದ ದೊರೆಯುವ ಶ್ರೇಷ್ಠ ಆಹಾರ ಹಲಸು. ಮಧುಮೇಹಿಗಳಿಗೆ ಅಕ್ಕಿ ಸಮಸ್ಯೆಯಾಗುತ್ತದೆಯಾದರೂ, ಹಲಸಿನ ಕಾಯಿಯಿಂದ ತಯಾರಿಸಿದ ಆಹಾರ ಸಮಸ್ಯೆಯಾಗಲಾರದು ಎಂದು ಅನೇಕ ಆಯುರ್ವೇದ ವೈದ್ಯರುಗಳು ಕಂಡುಕೊಂಡಿದ್ದಾರೆ.
ಹಲಸಿನಿಂದ ಸಾಧ್ಯವಿರುವ ಖಾದ್ಯ ವೈವಿಧ್ಯಗಳು ನೂರಾರು. ಆಧುನಿಕ ಖಾದ್ಯಗಳು ಬಾಯಿಗೆ ರುಚಿಕರವಾದರೂ ಶರೀರಕ್ಕೆ ಮಾರಕ ಎಂಬುದನ್ನು ಅನೇಕ ಆಹಾರ ತಜ್ಞರುಗಳು ಎಚ್ಚರಿಸುತ್ತಲೇ ಇರುತ್ತಾರೆ. ಆದರೆ ಹಲಸು ಖಾದ್ಯಗಳು ಆರೋಗ್ಯಕ್ಕೆ ಪೂರಕ ಎಂಬುದನ್ನು ಮರೆಯಬಾರದು. ಎಳೆ ಹಲಸು (ಗುಜ್ಜೆ)ನಿಂದ ತೊಡಗಿ ಹಣ್ಣಿನವರೆಗೆ, ಬೇಳೆಯಿಂದ ತೊಡಗಿ ರೆಚ್ಚೆಯವರೆಗೆ ಎಲ್ಲಾ ಹಂತಗಳಲ್ಲೂ ಹಲಸು ವೈವಿಧ್ಯಮಯವಾಗಿ ಬಳಸಲು ಯೋಗ್ಯವಾದ ವಸ್ತು. ನಾಲ್ಕೈದು ಮರವಿದ್ದರೆ ವರುಷದ ಆರು ತಿಂಗಳು ಪ್ರತಿದಿನವೂ ತರಕಾರಿಗಾಗಿ ಬೇರೆ ಹುಡುಕಬೇಕಾಗಿಲ್ಲ. ವಿಷರಹಿತ, ರುಚಿ ಸಹಿತ, ಆರೋಗ್ಯ ಪೂರಿತ ತರಕಾರಿ. ಜಾನುವಾರುಗಳಿಗೆ ಅಂತೂ ಅಮೃತ ಸಮಾನವಾದ ಆಹಾರ. ಪ್ರಪಂಚದ ಯಾವುದೇ ಆಹಾರ ವಸ್ತುಗಳಿಗೂ ಈ ಮಟ್ಟದಲ್ಲಿ ಬಳಸುವ ಯೋಗವಿಲ್ಲ. ಹೋಮ, ಪೂಜೆ ಇತ್ಯಾದಿ ಧಾರ್ಮಿಕ ಕ್ರಿಯೆಗಳಿಗೆ ಹಲಸು ಬೇಕೇ ಬೇಕು. ಹಲಸಿನ ಮರವನ್ನು ವೈವಿಧ್ಯಮಯವಾದ ಮರದ ಕೆತ್ತನೆಗಳಲ್ಲಿ ಬಳಕೆ. ನಿಜ ಅರ್ಥದಲ್ಲಿ ಕಲ್ಪವೃಕ್ಷ. ಅವುಗಳನ್ನೆಲ್ಲಾ ಮತ್ತೆ ಮತ್ತೆ ನೆನಪಿಸಿ ನಮ್ಮೊಳಗೆ ಬಳಸುವಲ್ಲಿ ಸಹಾಯಕವಾಗುವ ವಿಚಾರ ವಿನಿಮಯ ಕೇಂದ್ರವೇ ಹಲಸು ಮೇಳಗಳು.
ಹಲಸಿಗೆ ಕೊಡೋಣ ಮಾನ,
ಅದು ನಮ್ಮ ಅಭಿಮಾನ,
ವರುಷಕ್ಕೊಮ್ಮೆ ಮಾಡೋಣ ಪ್ರೀತಿಯ ಸನ್ಮಾನ.
ಪ್ರಕೃತಿಮಾತೆ ನೀಡಿದ ಅದ್ಭುತ ಕಲ್ಪವೃಕ್ಷಕ್ಕೆ ಕೃತಜ್ಞತೆ ಅರ್ಪಿಸುವ ಕಾರ್ಯಕ್ರಮವೇ ಹಲಸು ಮೇಳಗಳು. ಹಲಸಿಗೆ ನೀಡುವ ಕೃತಜ್ಞತಾ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಬೇಕಾಗಿ ವಿನಂತಿ. ೨೦೨೨ರ ಜೂನ್ ತಿಂಗಳ 25 ಮತ್ತು 26 ನೇ ತಾರೀಕು ಶನಿವಾರ, ಭಾನುವಾರಗಳಂದು ಪುತ್ತೂರಲ್ಲಿ ನಡೆಯುವ ಹಲಸು ಮೇಳಕ್ಕೆ ನಾನಂತೂ ಕುಟುಂಬ ಸಮೇತನಾಗಿ ಹೋಗುತ್ತಿದ್ದೇನೆ. ನೀವು?
-ಎ.ಪಿ. ಸದಾಶಿವ ಮರಿಕೆ.
(ವಾಟ್ಸಾಪ್ ಮೂಲಕ ಸಂಗ್ರಹಿಸಿದ್ದು- ಸುಧಾಕರ ಕೆ ಹೆಗ್ಡೆ)
ಚಿತ್ರ ಕೃಪೆ: ಇಂಟರ್ನೆಟ್ ತಾಣ