ಎಷ್ಟು ಸಮಯ ಯಾವ ಸ್ಥಳದಲ್ಲಿ ವ್ಯಯಿಸಬೇಕು ಎಂಬ ಒಂದು ಚಿಂತನೆ..!
ಆಸ್ಪತ್ರೆಗಳಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನೋವನ್ನು ಉಂಟುಮಾಡುತ್ತದೆ, ಆಟದ ಮೈದಾನದಲ್ಲಿ ಕಳೆಯುವ ದಿನಗಳು ಸಾಮಾನ್ಯವಾಗಿ ನಲಿವನ್ನು ಕೊಡುತ್ತದೆ. ಪೋಲೀಸ್ ಸ್ಟೇಷನ್, ಜೈಲು, ನ್ಯಾಯಾಲಯಗಳಲ್ಲಿ ಸವೆಸುವ ಸಮಯ ಯಾವಾಗಲೂ ಕಹಿ ನೆನಪುಗಳನ್ನು ಉಳಿಸುತ್ತದೆ. ಗ್ರಂಥಾಲಯದಲ್ಲಿ ಸವೆಸುವ ಸಮಯ ಯಾವಾಗಲೂ ಜ್ಞಾನವನ್ನು ವೃದ್ಧಿಸುತ್ತದೆ. ಸಾವು, ಸ್ಮಶಾನ, ತಿಥಿಗಳಲ್ಲಿ ಭಾಗವಹಿಸಿದಾಗ ಹೃದಯ ಭಾರವಾಗುತ್ತದೆ. ಮದುವೆ, ನಾಮಕರಣ, ಗೃಹ ಪ್ರವೇಶ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ಮನಸ್ಸು ಪ್ರಪುಲ್ಲಗೊಳ್ಳುತ್ತದೆ.
ಸಿನಿಮಾ, ನಾಟಕ, ಸರ್ಕಸ್ ಮುಂತಾದ ಸ್ಥಳಗಳು ಭಾವನೆಗಳನ್ನು ಕೆರಳಿಸುತ್ತವೆ, ದೇವ ಮಂದಿರ ಮಠ ಮಾನ್ಯಗಳು ಭಾವನೆಗಳನ್ನು ನಿಯಂತ್ರಿಸುತ್ತವೆ, ಐತಿಹಾಸಿಕ ಮತ್ತು ಪೌರಾಣಿಕ ಘಟನೆಗಳು ಕುತೂಹಲ ಮೂಡಿಸುತ್ತದೆ, ಪ್ರಸ್ತುತ ರಾಜಕೀಯ ಮತ್ತು ಹಿಂಸಾತ್ಮಕ ಘಟನೆಗಳು ಅಸಹ್ಯ ಮತ್ತು ಬೇಸರ ಮೂಡಿಸುತ್ತದೆ, ಪ್ರಕೃತಿಯೊಂದಿಗಿನ ಒಡನಾಟ ಜೀವನೋತ್ಸಾಹ ಹೆಚ್ಚಿಸುತ್ತದೆ, ಆಧುನಿಕ ತಂತ್ರಜ್ಞಾನದ ಒಡನಾಟ ಜೀವನದ ಬಗ್ಗೆ ಜಿಗುಪ್ಸೆ ಹೆಚ್ಚಿಸುತ್ತದೆ, ಪ್ರಶ್ನಿಸುವ ಮನೋಭಾವ ಮನಸ್ಸನ್ನು ವಿಶಾಲಗೊಳಿಸಿ ಸದಾ ಜಾಗೃತವಾಗಿಟ್ಟಿರುತ್ತದೆ, ಪ್ರಶ್ನಿಸದೆ ಒಪ್ಪಿಕೊಳ್ಳುವ ಮನೋಭಾವ ಮನಸ್ಸನ್ನು ಸಂಕುಚಿತಗೊಳಿಸಿ ಅರಿವಿನ ಮಟ್ಟವನ್ನು ಕುಗ್ಗಿಸುತ್ತದೆ.
ದ್ವೇಷ, ಅಸೂಯೆ, ಅಹಂಕಾರ, ಪ್ರತಿಕಾರಗಳು ಸಂಬಂಧಗಳನ್ನು ನಾಶಪಡಿಸುತ್ತದೆ, ಪ್ರೀತಿ, ಸಹಕಾರ, ತ್ಯಾಗ, ತಾಳ್ಮೆ ಸಂಬಂಧಗಳನ್ನು ಬೆಳೆಸುತ್ತವೆ, ಈ ಎಲ್ಲಾ ಆಯ್ಕೆಗಳು ಬಹುತೇಕ ನಮ್ಮ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಅನಿವಾರ್ಯತೆ ಹೊರತುಪಡಿಸಿ ನಾವು ಯಾವುದನ್ನು ಎಷ್ಟು ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳುತ್ತೇವೆ ಎಂಬುದರ ಮೇಲೆ ಬದುಕಿನ ಘನತೆ ನಿರ್ಧರಿಸಲ್ಪಡುತ್ತದೆ. ಆಯ್ಕೆಗೆ ಮುನ್ನ ದಯವಿಟ್ಟು ಯೋಚಿಸಿ...
-ವಿವೇಕಾನಂದ. ಎಚ್.ಕೆ., ಬೆಂಗಳೂರು
ಚಿತ್ರ ಕೃಪೆ; ಇಂಟರ್ನೆಟ್ ತಾಣ