ಎಸಳು

ಎಸಳು

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಾದಕ: ದೇವು ಪತ್ತಾರ
ಪ್ರಕಾಶಕರು
ಅಭಿನವ ಪ್ರಕಾಶನ, ವಿಜಯನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೨೫೦.೦೦ , ಮುದ್ರಣ: ೨೦೨೧

ದೇವು ಪತ್ತಾರ ಅವರ ಸಂಗ್ರಹ ಗುಣದ ಕಾರಣದಿಂದ ವಿ.ಕೃ.ಗೋಕಾಕರು ಬರೆದ ಮುನ್ನುಡಿಗಳು ಇಲ್ಲಿ ಸಂಕಲನಗೊಂಡಿವೆ. ಇಲ್ಲಿನ ಬಹುಪಾಲು ಮುನ್ನುಡಿಗಳನ್ನು ಗೋಕಾಕರು ಬರೆದ ಸಂಗ್ರಹಗಳ ಮೊದಲ ಮುದ್ರಣದ ಪ್ರತಿಗಳಿಂದಲೇ ಸಂಗ್ರಹಿಸಿದ್ದಾರೆ ಎಂಬುದನ್ನು ಗಮನಿಸಿದ ಅವರ ಸಂಗ್ರಹ ಗುಣದ ವಿಸ್ತಾರ ಮತ್ತು ಪರಿಶ್ರಮ ನಮ್ಮ ಗಮನಕ್ಕೆ ಬಂದೀತು. ಇಲ್ಲಿನ ಮುನ್ನುಡಿಗಳಿಗೆ ಚಾರಿತ್ರಿಕವಾದ ಮಹತ್ವವಿರುವಂತೆ ಸಾಹಿತ್ಯಕ ಮಹತ್ವವೂ ಇದೆ. ಗೋಕಾಕರು ಬರೆದ ಬಹುತೇಕ ಮುನ್ನುಡಿಗಳು ಕಾವ್ಯ ಸಂಕಲನಗಳಿಗೆ ಬರೆದವು ಎಂಬುದನ್ನು ಗಮನಿಸಿದರೆ ಅವರ ಕಾವ್ಯ ಪ್ರೀತಿಯ ಹರಹು ತಿಳಿಯುತ್ತದೆ ಮತ್ತು ಕಾವ್ಯ ಸೃಷ್ಟಿಯ ಬಗೆಗಿನ ಅವರ ಸೂಕ್ಷ್ಮ ಗ್ರಹಿಕೆಗಳನ್ನು ಗಮನಿಸಬಹುದಾಗಿದೆ. ಕನ್ನಡ ಸಾಹಿತ್ಯ ಮುನ್ನುಡಿಗಳ ಅಧ್ಯಯನಕ್ಕೆ ಈ ಸಂಕಲನ ಮುನ್ನುಡಿಯಾಗಲಿ ಎಂಬ ಸದಾಶಯವನ್ನು ಪ್ರಕಾಶಕರು ವ್ಯಕ್ತ ಪಡಿಸುತ್ತಾರೆ. 

‘ಎಸಳು' ಕೃತಿಯು ದೇವು ಪತ್ತಾರ ಅವರ ಸಂಪಾದಿತ ವಿ.ಕೃ.ಗೋಕಾಕ ಅವರು ವಿವಿಧ ಕೃತಿಗಳಿಗೆ ಅಂದರೆ ಒಟ್ಟು ೪೪ ಕೃತಿಗಳಿಗೆ ಬರೆದ ಮುನ್ನುಡಿಗಳ ಸಂಗ್ರಹವಾಗಿದೆ. ಇವುಗಳಲ್ಲಿ ಕೆಲವು ಪ್ರಮುಖ ಮುನ್ನುಡಿಗಳನ್ನು ಹೊಂದಿದ ಕೃತಿ ಹಾಗೂ ಕೃತಿಕಾರರ ವಿವರಗಳನ್ನು ಇಲ್ಲಿ ನೀಡಲಾಗಿದೆ. ಬರಿ ಪದ್ಯವಾಗದ ಕಾವ್ಯ (ವಿ ಜಿ ಭಟ್ಟ), ಆತ್ಮಪರೀಕ್ಷಣದ ಜೋಗುಳ (ಚೆನ್ನವೀರ ಕಣವಿ), ಬಣ್ಣ ಬಣ್ಣದ ಇಂದ್ರಧನಸ್ಸು (ದಿನಕರ ದೇಸಾಯಿ), ಅರಳುವ ಒಲವಿನ ಅಲರು (ರಾಮಚಂದ್ರ ಕೊಟ್ಟಲಗಿ), ಮರಳುವಿಕೆ ಮೀರಿನಿಂತ ಅರಳುಗಳ ಚೆಂದ (ಅಂಬಿಕಾತನಯದತ್ತ), ಕೇದಗೆ ಹೊಡೆಯ ಕಂಪು (ಗಂಗಾಧರ ಚಿತ್ತಾಲ), ಬುದ್ದಿ ಹೃದಯಗಳ ಸಮ್ಮಿಲನ (ಬಿ ಎ ಸನದಿ), ನೆಗ್ಗಲಿ ಮುಳ್ಳುಗಂಟಿಗಳ ನಡುವಿನ ದೇವದಾರು (ದೇಸಾಯಿ ದತ್ತಮೂರ್ತಿ), ಸಂಭಾಷಣೆಗಳ ಮಾಧುರ್ಯ (ಬೇಂದ್ರೆ ಲಕ್ಷ್ಮಣ ರಾಯರು), ಸಾಹಿತ್ಯ ಮಾಲೆಯ ಓದಿನ ಅನುಭವ (ದೇಶಪಾಂಡೆ ಮನೋಹರ ರಾಯ), ರಸಾತ್ಮಕ ವಿಮರ್ಶೆಯಾದ ಪ್ರೀತಿ (ಪಂಚಾಕ್ಷರಿ ಹಿರೇಮಠ), ಛಂದೋಗತ್ತಿಗೆ ಕುಂದಿಲ್ಲದ ನಿರರ್ಗಳತೆ (ಗಿರಡ್ಡಿ ಗೋವಿಂದರಾಜ) ಇತ್ಯಾದಿ.

ಕೃತಿಯ ಕುರಿತು ಅಬಿನವ ಪ್ರಕಾಶನದ ನ.ರವಿಕುಮಾರ ಅವರು, ‘ಕನ್ನಡದಲ್ಲಿ ಮುನ್ನುಡಿಗಳಿಗೆ ತನ್ನದೇ ಆದ ಪರಂಪರೆ ಇದೆ. ಮಾತ್ರವಲ್ಲ, ಅವುಗಳಿಗೆ ಚಾರಿತ್ರಿಕವಾದ ಮಹತ್ವ ಕೂಡಾ ಇದೆ. ಆ ಕುರಿತ ಅಧ್ಯಯನವಾಗಬೇಕಿದೆ. ಆದರೆ, ಅಂಥ ಮುನ್ನುಡಿಗಳು ಸುಲಭವಾಗಿ ಸಿಗುವಂತಾಗಬೇಕು. ಈಗಾಗಲೇ ಬೇಂದ್ರೆಯವರ ಮುನ್ನುಡಿಗಳ ಸಂಕಲನ, ಯು.ಆರ್. ಅನಂತಮೂರ್ತಿ ಅವರು ಬರೆದ ಮುನ್ನುಡಿಗಳ ಸಂಕಲನ, ಹೀಗೆ ಕೆಲವು ಬಂದಿವೆ. ಇನ್ನೂ ಕೆಲವು ಆಯಾ ಲೇಖಕರ ವಿಮರ್ಶಾ ಸಂಕಲನಗಳಲ್ಲಿ ಇತರ ಬರಹಗಳ ಜೊತೆಗೆ ಪ್ರಕಟಗೊಂಡಿವೆ. ಇನ್ನೂ ಕೆಲವಕ್ಕೆ ಅಂಥ ಭಾಗ್ಯ ಕೂಡ ಒದಗಿ ಬಂದಿಲ್ಲ. ವಿ.ಕೃ.ಗೋಕಾಕರು ಕನ್ನಡ ಸಾಹಿತ್ಯ ಕಂಡ ಅಪರೂಪದ ವಿಧ್ವಾಂಸರು ಮಾತ್ರವಲ್ಲ, ಚಿಂತನಶೀಲ ಪ್ರತಿಭೆ ಕೂಡ. ಅವರ ಹಲವು ಮುನ್ನುಡಿಗಳು, ಬರಹಗಳು, ಭಾಷಣಗಳು, ಇಂಗ್ಲಿಷ್ ಲೇಖನಗಳು ಓದುಗರಿಗೆ ದೊರೆಯಬೇಕೆಂಬ ಮಹತ್ವಾಕಾಂಕ್ಷೆಯಿಂದ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಮಾಡಿದ ಪ್ರಯತ್ನಗಳಲ್ಲಿ ಮುಖ್ಯವಾದುದು ಈ ಸಂಕಲನ. ಮತ್ತೊಂದು ಆಯಾಮದಲ್ಲಿಯೂ ಈ ಸಂಕಲನಕ್ಕೆ ಮಹತ್ವವಿದೆ. ಇಲ್ಲಿ ಮುನ್ನುಡಿ ಬರೆದವರು ಎಷ್ಟು ಮುಖ್ಯವೋ, ಅದರಲ್ಲಿನ ಸಾಹಿತ್ಯಕ ಮೌಲ್ಯವೂ ಅಷ್ಟೇ ಮುಖ್ಯ. ಹೀಗಾಗಿ ಈ ಮುನ್ನುಡಿಗಳ ಸಂಗ್ರಹದ ಪುಸ್ತಕಕ್ಕೆ ಚಾರಿತ್ರಿಕ ಮೌಲ್ಯ ತಂತಾನೇ ಬಂದಿರುತ್ತದೆ" ಎಂದಿದ್ದಾರೆ.