ಏಕತಾನತೆಯಿಂದ ವೈವಿಧ್ಯತೆಯೆಡೆಗೆ...

ಏಕತಾನತೆಯಿಂದ ವೈವಿಧ್ಯತೆಯೆಡೆಗೆ...

ಶಾಲಾ ರಜೆಯನ್ನು ಕಳೆಯಲು ಅಜ್ಜನ ಮನೆಗೆ ಹೋದಾಗ "ಪಂಜರದ ಗಿಳಿಯಾಗಬೇಡ - ಪುಸ್ತಕದ ಬದನೆಕಾಯಿಯಾಗಬೇಡ" ಎಂಬ ಮಾತು ಆಗಾಗ ಕಿವಿಯೊಳಗಡೆ ಗುನುಗುತಿತ್ತು. ಸದಾ ಶಾಲಾ ವ್ಯವಸ್ಥೆಯೊಳಗಡೆ ಸಮಯ ಕಳೆಯುತ್ತಿದ್ದ ನಮಗೆ ರಜೆ ಎಂಬುದು ಹೊಸ ಟಾನಿಕ್ ನಂತೆ ಕೆಲಸ ಮಾಡುತಿತ್ತು. ಆಗ ಅಂದಾಜು 50 ದಿನಗಳ ವಾರ್ಷಿಕ ರಜೆ ಸಿಗುತ್ತಿತ್ತು. ಈ 50 ದಿನಗಳನ್ನು ಜಾತ್ರೆ, ಗ್ರಾಮೀಣ ಆಟಗಳು, ಈಜಾಟ, ನದಿ ಸ್ನಾನ, ಮನೆ-ಮನೆ ನೆಂಟರು ಹೋಗುವುದು, ಅಜ್ಜಿಯ ಕಥೆಗಳ ಕೇಳುವಿಕೆ, ದನ, ನಾಯಿ, ಬೆಕ್ಕು , ಕೋಳಿ... ಹೀಗೆ ಸಾಕುಪ್ರಾಣಿಗಳ ಜತೆ ಒಡನಾಟ, ಹಪ್ಪಳ- ಸೆಂಡಿಗೆ ಮಾಡುವುದು, ಗದ್ದೆ - ಗುಡ್ಡ ತಿರುಗುವುದು... ಹೀಗೆ ವೈವಿಧ್ಯಮಯವಾಗಿ ಕಳೆಯುತ್ತಿದ್ದೆವು. ಆದರೀಗ ಹೆಚ್ಚಿನ ಮಕ್ಕಳು ಮೊಬೈಲ್ ಒಂದರಲ್ಲೇ ಬಂಧಿಯಾಗಿ ಮತ್ತಷ್ಟು ಏಕಾಂಗಿತನಕ್ಕೆ ಜಾರುತ್ತಿದ್ದಾರೆ. ಸಮಾಜ ಮುಖಿ ಕೆಲಸಗಳಿಂದ ಹಾಗೂ ಪ್ರಕೃತಿಯಿಂದ ದೂರ ಸರಿಯುತ್ತಿದ್ದಾರೆ.

ಆಗಿನ ಕಾಲದಲ್ಲಿ ಮಕ್ಕಳಿಗೆ ಸಮಾಜಮುಖಿ ಆಲೋಚನೆ - ಕೆಲಸಗಳಿಗೆ ಅಡಿಗಲ್ಲು ಹಾಕುವ ಕೆಲಸ ರಜಾಕಾಲದಲ್ಲಿ ನಡೆಯುತಿತ್ತು. ಮಕ್ಕಳು ಜನರ ಜತೆ ಹಾಗೂ ಪ್ರಕೃತಿಯ ಜತೆ ಬೆರೆಯಲು ಮುಕ್ತ ಅವಕಾಶ ಅಲ್ಲಿತ್ತು. ಆದರೆ ಈಗಿನ ಮಕ್ಕಳಲ್ಲಿ ಹೆಚ್ಚಿನವರಿಗೆ ಅವರ ಮೊಬೈಲ್ ಮತ್ತು ಅವರ ಮನೆಯೇ ಸಮಾಜವಾಗಿದೆ. ಯಾರೊಂದಿಗೂ ಬೆರೆಯುವುದಿಲ್ಲ. ಯಾರೊಂದಿಗೂ ಮಾತಾಡುವುದಿಲ್ಲ. ಕೆಲವರು ಮಾತಾಡಿದರೂ ಅಷ್ಟಕಷ್ಟೆ. ಪಂಜರದ ಗಿಳಿಯಂತೆ ಮನೆಯೊಳಗೆ - ಸಂಕುಚಿತ ಮನದೊಳಗೆ ವಾಸ್ತವ್ಯ ಹೂಡಿರುತ್ತಾರೆ. ಇದನ್ನು ಬಿಟ್ಟು ವೈವಿಧ್ಯಮಯ ಜಗತ್ತನ್ನು ನೋಡಲು ಹಾಗೂ ಅನುಭವಿಸಲು ಕಲಿಯಬೇಕು. ಹಾಗಾಗಿ ಮಕ್ಕಳಲ್ಲಿ ಒಂಟಿ ಭಾವ ಬಿಟ್ಟು ಸಮಷ್ಠಿಯ ಭಾವ ತುಂಬಿಸುವುದು ಮುಖ್ಯವಾಗಿದೆ. ಅದಕ್ಕೆ ಬದಲಾವಣೆ ತುಂಬಾ ಮುಖ್ಯ. ಅದು ಹೊಸ ಚೈತನ್ಯವನ್ನು ತರುತ್ತದೆ.

 ಯಾವಾಗಲೂ ಒಂದೇ ರೀತಿಯ ಆಹಾರವನ್ನು ಯಾರೂ ಇಷ್ಟ ಪಡುವುದಿಲ್ಲ. ವೈವಿಧ್ಯತೆ ಬಯಸುತ್ತಾರೆ. ಸದಾ ಏಕತಾನತೆಯನ್ನು ಬಯಸುವುದು ಸರಿಯಲ್ಲ. ಬದುಕಿನಲ್ಲಿ ನೋವು-ನಲಿವು, ಕಷ್ಟ- ಸುಖಗಳಿದ್ದರೆ ಮಾತ್ರ ವೈವಿಧ್ಯತೆ ಸಿಗುತ್ತದೆ. ಜೇಬು ತುಂಬಾ ಹಣವಿದ್ದಾಗ ಹಣದ ಏಕತಾನತೆ ಬರುತ್ತದೆ. ಆರೋಗ್ಯ ವಿದ್ದಾಗ ಆರೋಗ್ಯ ಏಕತಾನತೆ ಬರುತ್ತದೆ. ಒಂದೇ ಬಗೆಯ ಆಹಾರವಿದ್ದರೆ ಆಹಾರದ ಏಕತಾನತೆ ಬರುತ್ತದೆ. ಮನೆಯೊಳಗೆಯೆ ಬಂಧಿಯಾದರೆ ಭಾವದ ಏಕತಾನತೆ ಬರುತ್ತದೆ. ಈ ಏಕತಾನತೆ ಅತಿಯಾದರೆ ವಿಷದಂತೆ ಹಾನಿಕಾರಕ. ಹಾಗಾಗಿ ಏಕತಾನತೆ ಮುರಿದು ವೈವಿಧ್ಯತೆಗೆ ತೊಡಗುವುದು ತುಂಬಾ ಅಗತ್ಯವಾಗಿದೆ. ಮಕ್ಕಳಲ್ಲಿ ಹೊಸ ಹೊಸ ಆಚಾರ ವಿಚಾರಗಳ ಕಲಿಕೆ, ಹೊಸ ಹೊಸ ಆಟಗಳ ಕಲಿಕೆ, ಹೊಸ ಹೊಸ ಸಂಬಂಧಗಳ ಬೆಳೆಸುವಿಕೆ, ಪ್ರಕೃತಿಯ ಜತೆ ಸಹಬಾಳ್ವೆ, ಸಮಾಜವೇ ಮನೆಯೆಂಬ ಉದಾರ ಭಾವದ ಉದ್ದೀಪನವಾಗಬೇಕಾಗಿದೆ. ಈ ನಿಟ್ಟಿನಲ್ಲಿ ಈ ರಜೆಯನ್ನು ಅರ್ಥಪೂರ್ಣವಾಗಿ ಕಳೆಯಲು ನಾವು ಸಿದ್ಧರಾಗಬೇಕಾಗಿದೆ. ಆದಷ್ಟೂ ಮೊಬೈಲ್ ರಹಿತರಾಗಿ ಸೃಜನಶೀಲ ಆಲೋಚನೆಗಳಿಗಾಗಿ ಹೊಸತನದ ಹುಡುಕಾಟಕ್ಕಾಗಿ, ಮನೆ - ಕುಟುಂಬದವರ ಜತೆ ಮಾನವೀಯ ಬಂಧನಕ್ಕಾಗಿ, ಪ್ರಕೃತಿಯ ಋಣ ಸಂದಾಯಕ್ಕಾಗಿ ಈ ರಜೆಯನ್ನು ಬಳಸಲು ಬದಲಾಗಬೇಕಾಗಿದೆ. ಬನ್ನಿ ಈ ಬಳಕೆಯ ಬದಲಾವಣೆಗೆ ಸಿದ್ಧರಾಗೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್...! ಏನಂತೀರಿ...?. 

-ಗೋಪಾಲಕೃಷ್ಣ ನೇರಳಕಟ್ಟೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ