ಏಕಾಂಗಿತನದ ವಿರಾಟ್ ರೂಪ

ಏಕಾಂಗಿತನದ ವಿರಾಟ್ ರೂಪ

ಬರಹ

ನೀವು ಭಾರತೀಯರಾಗಿದ್ದರೆ ಈಗ ಮತ್ತೊಂದು ಅಸಾಧ್ಯ ಕಲ್ಪನೆಗೆ ಮುಂದಾಗಿ. ಹೀಗೆ ಹೇಳಿದನೆಂದು ಸಿಟ್ಟಾಗದಿರಿ. ಕನ್ನಡ ಓದಿಯೂ ಭಾರತೀಯನಲ್ಲದವರಾಗಿದ್ದರೆ ನೀವು ಎನ್.ಆರ್.ಐಗಳೇ ಇರಬೇಕು. ಅಂತಹವರಿಗೆ ಘಟ್ಟವೇಕೆ, ಬೆಂಗಳೂರು, ಮೈಸೂರೂ ಮಜ ಎನ್ನಿಸುತ್ತದೆ-ಏಕೆಂದರೆ, ತಾವು ಎಂದಿದ್ದರೂ ಯುರೋಪ್, ಯು.ಎಸ್.ಆಫ್ ಎಗೆ ಹಿಂದಿರುಗುತ್ತೇವೆ ಎಂಬ ನಂಬಿಕೆಯಿಂದಾಗಿ.

ಈಗ ಉಲ್ಟಾ ಎನ್‌ಆರ್‌ಐಗಳನ್ನು ಕಲ್ಪಿಸಿಕೊಳ್ಳಿ. ಸ್ವಲ್ಪಕ್ಕಿಂತಲೂ ಸ್ವಲ್ಪ ಹೆಚ್ಚು ಕಷ್ಟವಿದು. ಆ ಚಾರ್ಮಾಡಿ ಘಟ್ಟದವರೇ ಮತ್ತೂ ಜನನಿಭಿಡ ಕಾಡಿಗೆ ಹೋದಿರೆನ್ನಿ. ಒಂದರಿಂದ ಹತ್ತು ಕಿಲೋಮೀಟರ್ ಅಂತರದಲ್ಲಿ ಕಾಣುತ್ತಿದ್ದ ಮನೆಗಳು ಈಗ ಹತ್ತರಿಂದ ನೂರು ಕಿಲೋಮೀಟರ್ ಅಂತರದಲ್ಲಿ ಅಲ್ಲೊಂದು ಇಲ್ಲೊಂದು ಕಾಣುತ್ತಿದೆ ಎಂದಿಟ್ಟುಕೊಳ್ಳಿ. ಇರುವ ಮೂರು ಮತ್ತೊಂದು ಫಿನ್ಲೆಂಡ್ ನಗರಗಳ ಹೊರಗೆ ಅಕ್ಷರಶಃ ಹೀಗಿದೆ!

ಫಿನ್ಲೆಂಡ್ ಒಂಟಿ ದೇಶ. ವರ್ಷಕ್ಕೆ ಹತ್ತು ತಿಂಗಳು ಕತ್ತಲು. ಪ್ರತಿ ದಿನ ಏನಿಲ್ಲವೆಂದರೂ ಎರಡು ಮೂರು ಗಂಟೆ ಕಾಲ ಸೂರ್ಯನ ದರ್ಶನ. ಮಾಡಲು ಕೆಲಸವಿಲ್ಲದಿದ್ದರೂ ಇರಲು ಮನೆ, ತೊಡಲು ಬೆಚ್ಚನೆ ವಸ್ತ್ರ, ತಿಂಗಳ ಖರ್ಚಿಗೆ ಹಣ-ಇವಿಷ್ಟನ್ನೂ ಕೊಡುವ ಫಿನ್ನಿಶ್ ಸರ್ಕಾರ, ಇಷ್ಟಕ್ಕೆ ತನ್ನ ಪ್ರಜೆಗಳ ಅವಶ್ಯಕತೆ ಫಿನಿಶ್ ಆಯಿತೆಂದು ಭಾವಿಸುತ್ತದೆ. ಆದರೆ ಮನುಷ್ಯನ ಅವಶ್ಯಕತೆಗಳು ಪ್ರಾರಂಭವಾಗುವುದೇ ಹೊಟ್ಟೆ ಬಟ್ಟೆ ತುಂಬಿದ ಮೇಲಲ್ಲವೆ? ಇಲ್ಲದಿದ್ದರೆ, ಇಷ್ಟೆಲ್ಲ ಇದ್ದಾಗಲೂ ಇಡೀ ದೇಶದ ಶೇಕಡ ಮೂವತ್ತರಷ್ಟು ಜನರು 1960ರಲ್ಲಿ ಒಮ್ಮೆಲೆ ದೇಶ ಬಿಟ್ಟು ಹೋಗಿದ್ದೇಕೆ ಹೇಳಿ?

ಸ್ನೇಹಿತ ಸಾಮಿ ವ್ಯಾನಿಂಗನ್‌ನೊಂದಿಗೆ ಆತನ ಮನೆಗೆ ಹೋಗುತ್ತಿದ್ದೆ. ಗಂಟೆಗೆ ಸುಮಾರು ೧೨೦ ಕಿ.ಮೀ. ವೇಗದಲ್ಲಿ, ಆರು ಗಂಟೆಕಾಲದ ಪ್ರಯಾಣವದು. ಬೆಂಗಳೂರಿನಿಂದ ಗುಲ್ಬರ್ಗದವರೆಗೂ ಎಂದಿಟ್ಟುಕೊಳ್ಳಿ. ಒಂದೇ ಒಂದು ಶಾಪಿಂಗ್ ಕಾಂಪ್ಲೆಕ್ಸ್, ಎರಡು ಊರು, ಮೂರು ಮನೆ, ನಾಲ್ಕು ಮಾನವರು ಹಾಗೂ ಐದಾರು ಬಾರಿ ಮಳೆ ಕಾಣಸಿಕ್ಕಿತು ಅಷ್ಟರಲ್ಲಿ! "ಎಲ್ಲಿ ಜನ" ಎಂದು ಕೇಳಿದೆ.
"....."
"ಒಂಟಿ ಮನೆಗಳಿರುತ್ತವಲ್ಲ, ಕಳ್ಳತನವಾಗುವುದಿಲ್ಲವೆ?"
"ಜನರಿದ್ದರಲ್ಲವೆ ಕಳ್ಳರಾಗಲು ಸಾಧ್ಯ. ಒಂದು ವಿಷಯ ಗೊತ್ತೆ ನಿನಗೆ! ಇಷ್ಟರವರೆಗೂ ನೀನು ನೋಡಿದ ಮೂರೂ ಮನೆಗಳಲ್ಲಿ ಎರಡು ಮನೆಗಳಲ್ಲಿ ಜನರೇ ಇಲ್ಲ" ಎಂದು ನನ್ನ ಎರಡನೇ ಪ್ರಶ್ನೆಗೆ ಮೊದಲು ಉತ್ತರಿಸಿದ್ದ ಸಾಮಿ.

"ಭಾರತದ ಟೀಮ್ ಎರಡನೇ ಇನ್ನಿಂಗ್ಸ್‌ನಲ್ಲಿ ಚೆನ್ನಾಗಿ ಆಡುವುದಾದರೆ ಅದನ್ನೇ ಮೊದಲು ಆಡಲು ನಾನು ಹೇಳಿದೆನೆಂದು ತಿಳಿಸಿಬಿಡಿ" ಎಂದಿದ್ದರಂತೆ ಒಮ್ಮೆ ಜವಹರಲಾಲ್ ನೆಹರು- ಸ್ಟೇಡಿಯಂ ಖ್ಯಾತಿಯ ಚಿನ್ನಸ್ವಾಮಿಯವರಿಗೆ. ಹಾಗಾಯಿತು ಸಾಮಿಯ ಕಥೆ. ಕೇಳಿದ ಪ್ರಶ್ನೆಗಳಲ್ಲಿ ಎರಡನೆಯದನ್ನು ಉತ್ತರಿಸುತ್ತಿದ್ದ ಆತ. ಥೇಟ್ ಫಿನ್ನಿಶ್ ಜನರಂತೆ ಆತ. ಏಕಾಗ್ರಚಿತ್ತರಾಗಿ ಕಂಪ್ಯೂಟರ್‌ನೊಳಗೆ ಮುಳುಗಿರುವ ಫಿನ್ನಿಶ್ ಜನರನ್ನು ಮಾತನಾಡಿಸಿ ನೋಡಿ. ಎಲ್ಲ ಕಾರ್ಯಕ್ರಮಗಳನಲ್ಲದಿದ್ದರೂ ಪ್ರೋಗ್ರಾಮ್‌ಗಳನ್ನು ಮುಚ್ಚಿ ಕೆಳಗಿಳಿಸಿ (ಶಟ್ ಡೌನ್ ಮಾಡಿ) ನಂತರ ನಿಮ್ಮನ್ನು ಪಾರದರ್ಶಕರೋ ನೀವು ಎಂಬಂತೆ ನೋಡಿ, ನಿಮ್ಮ ಪ್ರಶ್ನೆಗೆ ಉತ್ತರವನ್ನು ಫಿನ್ನಿಶ್‌ನಿಂದ ಇಂಗ್ಲೀಷಿಗೆ ತರ್ಜುಮೆ ಮಾಡಿ, ಸ್ಲೋಮೋಶನ್ನಿನಲ್ಲಿ ಉತ್ತರಿಸುತ್ತಾರವರು.

ನನ್ನ ಮೊದಲ ಪ್ರಶ್ನೆ (ಎಲ್ಲಿ ಜನ?)ಯನ್ನು ಸುಮಾರು ಎರಡು ಗಂಟೆ ಕಾಲ ಮೆಲುಕು ಹಾಕಿದ ನಂತರ ತಿರುವೊಂದರಲ್ಲಿ ಸಾಮಿ ಉತ್ತರಿಸಿದ, "ಇನ್ನೊಂದತ್ತು ಸೆಕೆಂಡುಗಳಲ್ಲಿ ಜನ ಸಿಗುತ್ತಾರೆ ನೋಡು" ಎಂದು ಕಾರನ್ನು ನಿಧಾನ ಮಾಡಿ ನಿಲ್ಲಿಸಿಯೇ ಬಿಟ್ಟ. ಅಲ್ಲಿದ್ದರು ಜನ! ಅವರ ಪಕ್ಕದಲ್ಲಿ ಎರಡು ಬೃಹತ್ ತಾರು ಹಾಕುವ ಮೋಟಾರುಗಳು ತಾವೇ ತಾವಾಗಿ, ಇಂಚಿಂಚೂ - ಒಂದಿಂಚೂ ಹೆಚ್ಚೂ ಕಡಿಮೆ ಆಗದಂತೆ ನಿರ್ಜನ ರಸ್ತೆಯ ಸೊಗಸಾದ ಡಾಮರು ರಸ್ತೆಯ ಮೇಲೆ ಮತ್ತೆ ಡಾಮರು ಹಾಕುತ್ತಿತ್ತು. ಬೆಂಗಳೂರಿನ ರಸ್ತೆಗಳ ನೆನಪಾಯಿತು. ಹೊಸದಾಗಿ ತಾರ್ ಹಾಕಿದಾಗ ಅದೆಷ್ಟು ಕಲಾತ್ಮಕವಾಗಿ ಅಂಕುಡೊಂಕಾಗಿರುತ್ತದೆಂದರೆ, ಮಳೆ ಬಿದ್ದಾಗ ಸವೆದ ಟೈರಿನ ಬೈಕಿನಲ್ಲಿ ನೀವು ಪಯಣಿಸುತ್ತಿದ್ದರೆ, ಎಚ್ಚರಿಕೆಯಿಂದ ನೀವು ರಸ್ತೆಯ ಎಡಬದಿಯಲ್ಲೇ ಹೋಗಬೇಕೆಂದೇನಿಲ್ಲ. ರಸ್ತೆಯ ಮಧ್ಯಭಾಗವು ಅದೆಷ್ಟು ಪಿರಮಿಡ್ಡಿನಂತೆ ಉಬ್ಬಿರುತ್ತದೆಂದರೆ (ಅವುಗಳ ಕಾಂಟ್ರಾಕ್ಟುದಾರನ ಸೈಟಿನಲ್ಲಿ ಹೊಸ ಮನೆ ನೆಲದಿಂದ ಉಬ್ಬಿಕೊಂಡಿರುವಂತೆ) ಬೈಕನ್ನು ರಸ್ತೆಯ ಮಧ್ಯದಲ್ಲಿ ಓಡಿಸಿದರೆ ಸಾಕು. ಸರಾಗವಾಗಿ ಅದು ಜಾರುತ್ತ ರಸ್ತೆಯ ಎಡಭಾಗಕ್ಕೇ ಬಂದಿರುತ್ತದೆ!

ಫಿನ್ನಿಶ್ ರಸ್ತೆಯ ಸಮತಟ್ಟು ಗುಣಕ್ಕೆ ಬೆರಗಾದರೂ ಭಾರತವನ್ನು ಬಿಟ್ಟುಕೊಡಬಾರದೆಂದು ಒಂದು ಡೈಲಾಗ್ ಹೊಡೆದೆ ( ನನ್ನ ಜತೆ ಇದ್ದ ಸಾಮಿ ಬೆಂಗಳೂರಿನ ಸಮೀಪದ ಮೈಸೂರಿನಲ್ಲಿ ಹುಟ್ಟಿಬೆಳೆದವನು). "ಇಲ್ಲಿ ಜನರೇ ಇಲ್ಲದಿರುವುದರಿಂದ ರಸ್ತೆಗಳು ಇಷ್ಟು ಸಮತಟ್ಟಾಗಿರುತ್ತವೆ, ಅಲ್ಲವೆ?"

ಡಾಮರು ಹಾಕುತ್ತಿದ್ದ ಗಾಡಿಗಳಲ್ಲಿ ಜನರಿರಲಿಲ್ಲ. ಸಮೀಪದ ಎರಡು ಕಾರ್‌ಗಳ ಹೊರಗೆ ಮಾತ್ರ 'ಇಬ್ಬರು' ಮೇಲ್ವಿಚಾರಕರು ನಿಂತು ಡಾಮರು ಹಾಕುವುದನ್ನು ವೀಕ್ಷಿಸುತ್ತಿದ್ದರು. ಅಲ್ಲಿಂದ ಸುಮಾರು ಇನ್ನೂರ ಐವತ್ತು ಕಿ.ಮೀಟರ್ ದೂರದ ರಾಜಧಾನಿ ಹೆಲ್ಸಿಂಕಿಯ ರಿಮೋಟ್ ಕಂಟ್ರೋಲ್ ರೂಮಿನಿಂದ ಇಲ್ಲಿ ಡಾಮರು ಹಾಕುವ ಇಂಚಿಂಚು ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಯುತ್ತಿತ್ತು. ಈ ಇಬ್ಬರನ್ನು ಕುರಿತೇ ಸಾಮಿ ಹೇಳಿದ್ದು, "ಮುಂದೆ ಜನ ಸಿಗುತ್ತಾರೆ ನೋಡು" ಎಂದು!

ಇನ್ನೂ ಸ್ವಲ್ಪ ಮುಂದೆ ಹೋದಾಗ ಬೆಳೆದು ನಿಂತ ಮರಗಳನ್ನು ಇಟ್ಟಿಗೆಯ ಅಚ್ಚು ಹಾಕಿದಷ್ಟು ಕರಾರುವಾಕ್ಕಾಗಿ, ಒಂದಿಂಚೂ ಹೆಚ್ಚೂಕಡಿಮೆಯಾಗದಂತೆ ಕಡಿಯುತ್ತ, ಪಕ್ಕದಲ್ಲಿ ಜೋಡಿಸಿಡುತ್ತಿದ್ದ ಯಂತ್ರಗಳನ್ನು ನೋಡಿದೆ. ಅಲ್ಲಿ ಒಬ್ಬರೂ ಕಾಣಲಿಲ್ಲ. ಇದ್ದ ಒಬ್ಬನೇ ಮನುಷ್ಯ ಅಲ್ಲೇ ಸುಮಾರು ಐವತ್ತು ಕಿ.ಮೀ. ಹತ್ತಿರವಿದ್ದ ಮೂರೂ ಮತ್ತೊಂದು ಮನೆಯಿರುವ ಪಟ್ಟಣಕ್ಕೆ ತಿಂಡಿ ತಿನ್ನಲು ಹೋಗಿದ್ದನಂತೆ...

ನಿಜ ಹೇಳಬೇಕೆಂದರೆ, "ಜನರೆಲ್ಲಿ" ಎಂದು ಟಿಪಿಕಲ್ ಭಾರತೀಯನಂತೆ ಹೃದಯದಾಳದಿಂದ ಕೇಳುವುದನ್ನು ನಾನು ಹಲವು ದಿನಗಳ ಹಿಂದೆಯೇ ಫಿನ್ನಿಶ್ ರಾಜಧಾನಿ ಹೆಲ್ಸಿಂಕಿಯಲ್ಲೇ, ಸುಮಾರು ದಿನಗಳ ಹಿಂದೆಯೇ ನಿಲ್ಲಿಸಿಬಿಟ್ಟಿದ್ದೆ. ಯಾಕೆಂದರೆ "ಜನರೆಲ್ಲಿ" ಎಂಬ ಪ್ರಶ್ನೆಯನ್ನು ಕೇಳಲಿಸಿಕೊಳ್ಳಲಿಕ್ಕಾದರೂ ಜನರಿರಬೇಕಲ್ಲವೆ ಅಲ್ಲಿ. ಆದರೂ ಫಿನ್ಲೆಂಡಿನ ಅತ್ಯಂತ ಜನನಿಭಿಡ ಜಾಗ ರಾಜಧಾನಿಯೇ. ಇಡೀ ದೇಶದ ಶೇಕಡ ಎಂಬತ್ಟರಷ್ಟು ಜನ ಭೂ ಅಳತೆಯಲ್ಲಿ ಎರಡು ಶೇಕಡ ನೆಲವಾದ ಹೆಲ್ಸಿಂಕಿಯಲ್ಲಿದ್ದಾರೆ! ಉಳಿದ ಇಪ್ಪತ್ತು ಶೇಕಡ ಜನ ಮಿಕ್ಕುಳಿದ ಶೇಕಡ ತೊಂಬತ್ತೆಂಟು ಜಾಗವನ್ನಾಕ್ರಮಿಸಿಕೊಂಡಿದ್ದಾರೆ! ರಾಜಧಾನಿಯ ಹೊರಗೆ ಬದುಕುವ ಜನರಿಗೆ ಕಾರ್ಯನಿಮಿತ್ತ (ಸಾಮಿಯಂತೆ) ರಾಜಧಾನಿಗೆ ಬರುವುದೆಂದರೆ ತಲೆನೋವು. ಕಾರಣ ಹೆಲ್ಸಿಂಕಿಯನ್ನು ಕುರಿತ ಅವರ ಆರೋಪವನ್ನು ಕನ್ನಡಕ್ಕೆ ಭಾಷಾಂತರಿಸಿ ಹೇಳುವುದಾದರೆ, "ಅಲ್ಲಿ ಜನಾ ಅಂದ್ರೆ ಜನ"!

ಫಿನ್ಲೆಂಡಿನ ಅತ್ಯಂತ ಜನನಿಭಿಡ ಪ್ರದೇಶದಲ್ಲಿ (ತುರ್ಕು, ಹೆಲ್ಸಿಂಕಿ, ಹ್ಯಾಂಕೋ ಎಂಬ ಒಂದೆರೆಡು ಜಾಗಗಳಲ್ಲಿ) ಚದರ ಕಿಲೋಮೀಟರಿಗೆ ಹದಿನಾರು ಮಂದಿ ವಾಸಿಸುತ್ತಾರೆ! ಬೆಂಗಳೂರಿನಲ್ಲಿ ಅದೇ ಅಳತೆಯ ಜಾಗದಲ್ಲಿ ಮೂರು ಸಾವಿರ ಜನ ಮತ್ತು ಮುಂಬಯಿಯಲ್ಲಿ ಅದೇ ಅಳತೆಯ ಜಾಗದಲ್ಲಿ ಐದು ಲಕ್ಷ ಜನ ವಾಸಿಸುತ್ತಾರೆ. ಇನ್ನೈದು ವರ್ಷದಲ್ಲಿ ಸಮಗ್ರ ಆಸ್ಟ್ರೇಲಿಯ ಖಂಡದ ಜನಸಂಖ್ಯೆಯನ್ನು ಏಷ್ಯ ಖಂಡವೆಂಬುದರೊಳಗಿರುವ ಭಾರತವೆಂಬ ಒಂದು ದೇಶದ ಒಂದು ನಗರದ ಜನಸಂಖ್ಯೆ (ಮುಂಬೈ) ಮೀರಿಸುತ್ತದೆಂಬುದು ಸತ್ಯಕ್ಕೆ ಹತ್ತಿರವಾದ ಮುನ್ನೋಟ! ಇಂತಹ ಊರನ್ನು ನೋಡಿರದ ಫಿನ್ನಿಶ್ ಜನ ತಮ್ಮ ರಾಜಧಾನಿಯನ್ನು "ಹೆಲ್-ಸಿಂಕ್-ಐ" ಎನ್ನುತ್ತ ತಮ್ಮ ತವರೂರಿಗೆ ಗುಳೇ ಹೋಗುತ್ತಾರೆ. ಕೇವಲ ಒಂದು ಶತಮಾನದ ಹಿಂದೆ ಕಾಡಿನಲ್ಲಿ ಬೇಟೆಯಾಡುತ್ತಿದ್ದ ವಾಲ್ಮೀಕಿ ಜನ ಅವರು. ಈಗಷ್ಟೇ ನೋಕಿಯ ಮೊಬೈಲ್ ಬಂದು ಅವರ ಸಾಧನೆಯ ಸುದ್ಧಿ ಎಲ್ಲೆಡೆ ಎಸ್ಸೆಮ್ಮೆಸ್ ಟೆಕ್ಸ್ಟ್ ಮೆಸೇಜ್‌ಆಗಿ ಹರಡಿಬಿಟ್ಟಿದೆ. ನೋಕಿಯ ಫಿನ್ಲೆಂಡಿಗೆ ಅಶೋಕ ಸ್ಥಂಭವಿದ್ದಂತೆ. ಅದೇ ಅವರ ರಾಷ್ಟ್ರೀಯ ಸ್ಮಾರಕ ಕೂಡ!

ಲಂಡರ್ ಎಂಬ ಗೆಳೆಯ ಬದುಕಿರುವ ಜಾಗದಲ್ಲಿ ಆತ ಇಪ್ಪತ್ತು ವರ್ಷದಲ್ಲಿ ಐದು ಜನರನ್ನು ಹಾಗೂ ಒಂದು ಕರಡಿಯನ್ನು ನೋಡಿದ್ದಾನಂತೆ. ಇದೊಂದು ಉತ್ಫ್ರೇಕ್ಷಿತ ಗಣಿತವೇ ಎಂದುಕೊಳ್ಳಿ. ಆತ ಐದು ವರ್ಷದಲ್ಲಿ ಇಪ್ಪತ್ತು ಜನರನ್ನೂ ಹಾಗೂ ಇಲ್ಲದ ಕರಡಿಯನ್ನು ನೋಡಿದ್ದಾನೆ ಎಂದೇ ಲೆಕ್ಕ ಹಾಕೋಣ. ಎಲ್ಲಿದೆ ಅಂತ ಪ್ರಶಾಂತ, ಜನನಿಭಿಡ ಜಾಗ ಭಾರತದಲ್ಲಿ? ಮಲಂಡರ್‌ನನ್ನು ಸುಳ್ಳ ಎನ್ನುವಂತಿಲ್ಲ. ಆತನ ಮಾಜಿ ಪ್ರೇಯಸಿ ಇಷ್ಟರಲ್ಲೇ ಫಿನ್ಲೆಂಡಿನ ಪ್ರಧಾನಿಯಾಗಲಿದ್ದಾಳೆ ಎಂದ ಆತನ ಹೇಳಿಕೆಯನ್ನೂ ಸುಳ್ಳು ಎನ್ನುವಂತಿಲ್ಲ. ಅದೊಂದು ಆಶಯ ಎಂದುಕೊಂಡೆ. ಏಕೆಂದರೆ ಮಲಂಡರ್ ಈ ಭವಿಷ್ಯ ನುಡಿದ ಕಾಲಕ್ಕೆ ಆಕೆ ಅಲ್ಲಿನ ಶಿಕ್ಷಣಾ ಮಂತ್ರಿಯೋ ರಕ್ಷಣಾ ಮಂತ್ರಿಯೋ (ಶಿಕ್ಷೆ, ರಕ್ಷೆಯ ನಡುವಣ ವ್ಯತ್ಯಾಸವೆಂತಯ್ಯ!) ಆಗಿದ್ದಾಗಿ ಹೋಗಿತ್ತು.

ಎಪ್ಪತ್ತರ ದಶಕದಲ್ಲಾಗಲೇ ದಲೈ ಲಾಮಾರನ್ನು ಫಿನ್ಲೆಂಡಿಗೆ ಕರೆತಂದಿದ್ದ ಮಲಂಡರ್. ಈಗಾಗಲೇ ಬುದ್ಧನೇ ಹೇಳಿಕೊಟ್ಟನೆನ್ನಲಾದ ವಿಪಶ್ಯನ ಧ್ಯಾನ ವಿಧಾನವನ್ನು ಅಲ್ಲಿನ ಜನರಿಗೆ ಪರಿಚಯಿಸಿಕೊಟ್ಟಿದ್ದ ಮಲಂಡರ್. ಬೌದ್ಧ ಧರ್ಮದ ಈ ಧ್ಯಾನವನ್ನು ಅಲ್ಲಿನ ಕ್ರೈಸ್ತ ಧರ್ಮದ ದೇವಾಲಯಗಳಲ್ಲಿ ನಿಯಮಿತವಾಗಿ ಹೇಳಿಕೊಡುತ್ತಿದ್ದಾರೆ ಕ್ರೈಸ್ತರೂ ಅಲ್ಲದ, ಬೌದ್ಧರೂ ಅಲ್ಲದ ವಿಪಶ್ಯನ ಸಾಧಕರು. ಇದಕ್ಕೆ ಮೂಲ ಪ್ರೇರಣೆ ಮಲಂದರ್. ಆತ ಇಲ್ಲಿದ್ದಿದ್ದರೆ, "ಅಲ್ಲಿ ನೋಡು ಮಲಂದರ್, ಇಲ್ಲಿ ನೋಡು ಸಿಕಂದರ್" ಎಂದು ನಮ್ಮ ಜನ ಹಾಡಿಹೋಗಳಬಹುದಾಗಿತ್ತು, ಛೇ!

ಸಾಮಿಯೊಂದಿಗಿನ ಆ ಒಂದು ಪ್ರಯಾಣ, ಹೆಲ್ಸಿಂಕಿಯಿಂದ ಪಕ್ಕದ ದೇಶವಾದ ಸ್ವೀಡನ್ನಿನ ರಾಜಧಾನಿ ಸ್ಟಾಕ್‌ಹೋಮಿಗೆ ಹದಿನೈದು ಗಂಟೆ ಕಾಲದ ಹಡಗು ಪ್ರಯಾಣ ಹಾಗೂ ಭಾರತ ಸಂಜಾತ ಫಿನ್ನಿಶ್ ಪ್ರಜೆ ಕೇತನ್ ಭುಪ್ತನೊಂದಿಗಿನ ಸುಮಾರು ಹನ್ನೆರೆಡು ಗಂಟೆ ಕಾಲದ ರಾತ್ರಿಯ ಆತನ ಹರಿಕಥೆ--ಈ ಮೂರು ಪ್ರಯಾಣಗಳದ್ಡು ಒಂದು ತೂಕವಾದರೆ ಮಿಕ್ಕುಳಿದ ಎರಡು ಭೇಟಿಗಳ ಒಟ್ಟು ನಾಲ್ಕೂವರೆ ತಿಂಗಳ ಫಿನ್ಲೆಂಡ್ ಪ್ರಯಾಣದ್ದು ಒಂದೇ ತೂಕ!

ಈ ಪ್ರವಾಸ ಕಥನದ ಇತರ ಭಾಗಗಳು

1. ಸಾವಿನ ಚೇತೋಹಾರಿ ಆರಂಭ 2. ಮೊಬೈಲ್ ಮೌನಿಗಳು
3. ಏಕಾಂಗಿತನದ ವಿರಾಟ್ ರೂಪ 4. ಸಾಮಿ ಎಂಬ ಕಂಪೆನಿಕೊಡುವ ವಾನ್ ಇಂಜನ್
5. 'ಸಾನ' ಮಾಡಿದರೆ ಫಿನ್ನಿಶ್ 6. ಒಬ್ಬಂಟಿಯೊಳಗೊಬ್ಬಂಟಿತನದ ಗ್ಯಾರಂಟಿ
7. ಫಿನ್ಲೆಂಡಿನಲ್ಲಿ 'ಭಾರ'ತದ ಅಡುಗೆ 8. ಇಲ್ಲದೆಯೂ ಇರುವವನ ಕಥೆ
9. ಫಿನ್ನಿಶ್ ನಾಲಗೆ ಹೊರಳಿದರೆ ಕನ್ನಡ! 10.ಎಲ್ಲೆಲ್ಲಿಯೂ ಎದುರು ಸಿಗುವವರು
11.ಏಳೇಳು ಸುತ್ತಿನ ಕೋಟೆಯೊಳಗಿನ ರಾಜಕುಮಾರಿ