ಏಕಾಂತದ ಏಕಾಂತ...!

ಏಕಾಂತದ ಏಕಾಂತ...!

(ಬಿಜಿನೆಸ್ಸು ಟ್ರಿಪ್ಪಿನಲ್ಲಿ ಹೊರದೇಶವೊಂದರ ಹೋಟೆಲಿನಲ್ಲಿ ಬೆಳಕಿನ್ನೂ ಹರಿಯದ ಬೆಳಗಿನ ಜಾವದಲಿ ತಟಕ್ಕನೆ ಎಚ್ಚರವಾದಾಗ ಕಾಡಿದ ಭಾವಕ್ಕೆ ಪದ - ಪ್ರಾಸ ಜೋಡಿಸಿ ಪೋಣಿಸಿ ಹೊಸೆದ ಆಲಾಪನೆ - ಈ ಏಕಾಂತದ ಏಕಾಂತ )

ಒಬ್ಬಂಟಿಯಾಗಿ ಕೂತ ಏಕಾಂತ
ಒಳಗೆ ಕುಳಿತವನಾವನೊ ಸಂತ
ಪ್ರಾಂಜಲ ಮನಸೇ ಅನಂತ
ಗೊಂದಲ ಗೂಡೊಳಗಿತ್ತ ಹೊರಗಿತ್ತ? 
ಬಿಟ್ಟರು ಬಿಡದೆ ಕಾಡಿ ಏಕಾಂತ...

ಹೊರಗೆಷ್ಟು ಪ್ರಶಾಂತ...
ಒಳಗೆಷ್ಟು ಕೊತಕೊತ?
ಏನೆಲ್ಲಾ ಹೂತ, ಹೊಸಕಿತ್ತ
ಮುಚ್ಚಿಡಲೇನೆಲ್ಲ ಒಳ ಊತ
ಉಬ್ಬಿದ ನರನಾಡಿಗೂ ಆಪ್ತ

ಶಮನವಾಗದುದ್ವೇಗ ಸುಷುಪ್ತ
ಮೌನವನಪ್ಪಲು ಮನ ಮುಕ್ತ..
ಹಾರಾಡಿದರೂ ಬಿಡದ ಭ ರತ
ಬೇಕಾಲೋಚನೆಗೆ ಏಕಾಂತ
ಏಕಾಂತಕೂ ಬಿಡದಲ್ಲ ಏಕಾಂತ!

ಸತತ ಏನೆಲ್ಲ ಅನುರಣಿತ
ನೂರೆಂಟು ಲೆಕ್ಕಾಚಾರ ಗುಣಿತ
ಬೇಕು ಬೇಡದ್ದೆಲ್ಲ ಗುನುಗುನಿತ
ಕಂಡು ಕೇಳಿದ್ದೆಲ್ಲಾ ಅನುಮಾನಿತ
ಒಂದರೆಕ್ಷಣವೂ ನಿಲ್ಲದ ಸತತ

ವರ್ಷಾಂತರಗಳ ಸನ್ನಿಹಿತ
ಆ ಋಷಿ ತಪಗಳ್ಹೇಗೆ ಸಾಗಿತ್ತ?
ಸ್ನೇಹಿತನಲ್ಲದಾ ಏಕಾಂತ
ಸಂಯಮ ಕಡಿವಾಣ ಉಚಿತ
ಮನಸ್ಹೇಗೆ ಗೆದ್ದರೊ ಖಚಿತ?

ಜಾತಕಪಕ್ಷಿಯ ಮನೋಗತ
ಕೂತಿದ್ದರೂ ಬರದಲ್ಲ ಏಕಾಂತ
ಬಿಡದಲ್ಲ ಥೈ ತಕ ಕುಣಿತ
ಎಂದಾಗುವುದು ಭುವಂಗತ
ಏಕಾಂತದ ಏಕಾಂತ?

ನಾಗೇಶ ಮೈಸೂರು, ಸಿಂಗಪುರದಿಂದ

Comments

Submitted by makara Wed, 05/15/2013 - 08:03

ಒಬ್ಬನು ಪ್ರಪಂಚವನ್ನೇ ಗೆಲ್ಲಬಹುದು ಆದರೆ ತನ್ನ ಮನಸ್ಸನ್ನು ಗೆದ್ದವನೇ ನಿಜವಾದ ಶೂರ ಎಂದು ಇದಕ್ಕೇ ಭಗವಾನ್ ಬುದ್ಧ ಹೇಳಿದ್ದು. ಏಕಾಂತದಲ್ಲೂ ಏಕಾಕಿಯಾಗಿರಲು ಬಿಡದ ಈ ಮನಸ್ಸಿನ ಬಗೆಗಿನ ಉತ್ತಮ ಚಿತ್ರಣ ನಿಮ್ಮ ಈ ಕವನ, ನಾಗೇಶರೆ.
Submitted by nageshamysore Wed, 05/15/2013 - 19:13

In reply to by makara

ನಮಸ್ಕಾರ ಶ್ರೀಧರರವರಿಗೆ, ಮನಸಿನ ವ್ಯಾಪಾರ ಕುರಿತು ಬರೆಯ ಹೊರಟಾಗೆಲ್ಲ, ಅನಿಸಿದ್ದೆಲ್ಲ ಪದಗಳಲ್ಲಿ ಬಿಚ್ಚಿಡಲು ಸಾಧ್ಯವಾಗಲಿಲ್ಲವೇನೊ ಎನ್ನುವ ಅಪರಿಪೂರ್ಣ ಭಾವ (ಈ ಕವನ ಬರೆದ ಮೇಲೂ) ಕಾಡುತ್ತಿತ್ತು. ನಿಮ್ಮ ಪ್ರತಿಕ್ರಿಯೆ ಆ ಭಾವಕ್ಕೆ ತುಸು ಸಮಾಧಾನದ ಲೇಪ ಹಚ್ಚಿತು, ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು! -ನಾಗೇಶ ಮೈಸೂರು, ಸಿಂಗಪುರದಿಂದ
Submitted by lpitnal@gmail.com Wed, 05/15/2013 - 09:42

ಪ್ರಿಯ ನಾಗೇಶರವರೇ, ಸೊಗಸಾದ, ಮುದನೀಡುವ ಕವನ, ತಮ್ಮ ಸಮಯವನ್ನು ಸುಂದರವಾಗಿ ಬಳಸಿಕೊಂಡಿದ್ದೀರಿ.ದನ್ಯವಾದಗಳು
Submitted by nageshamysore Wed, 05/15/2013 - 19:18

In reply to by lpitnal@gmail.com

ವಂದನೆಗಳು ಇಟ್ನಾಳರೆ, ತಮ್ಮ ಮೆಚ್ಚುಗೆಗೆ ಚಿರಋಣಿ, ತಮ್ಮಂತಹವರ ಪ್ರೋತ್ಸಾಹದಿಂದ ಇನ್ನಷ್ಟು ಬರೆಯಲು (ಸಮಯದ ಸದುಪಯೋಗಪಡಿಸಿಕೊಳ್ಳಲು) ಹುಮ್ಮಸ್ಸು, ಉತ್ಸಾಹ ಹೆಚ್ಚುತ್ತಿದೆ. ತಮ್ಮ ಅಭಿಮಾನ, ಪ್ರೋತ್ಸಾಹ ಹೀಗೆ ಇರಲಿ! -ನಾಗೇಶ ಮೈಸೂರು, ಸಿಂಗಪುರದಿಂದ
Submitted by H A Patil Thu, 05/16/2013 - 10:34

ನಾಗೇಶ ಮೈಸೂರು ರವರಿಗೆ ವಂದನೆಗಳು ' ಏಕಾಂತದ ಏಕಾಂತ..!' ತುಂಬ ಪ್ರಬುದ್ಧವಾದ ರಚನೆ, ಏಕಾಂತದ ಕುರಿತ ಅನೇಕ ವಿಷಯಗಳನ್ನು ಮತ್ತು ಭಾವನೆಗಳನ್ನು ಪದರ ಪದರವಾಗಿ ಬಿಡಿಸಿಟ್ಟಿದ್ದೀರಿ. ಇದನ್ನು ಓದುತ್ತ ಹೋದಂತೆ ನಾವು ಮನುಷ್ಯ ಜೀವಿಯ ಗತಕಾಲ ಮತ್ತು ವರ್ತಮಾನ ಕಾಲಗಳ ಪ್ರವಾಹದಲ್ಲಿ ತೇಲಿ ಹೋದ ಅನುಭವವನ್ನು ಬಹಳ ಅರ್ಥಪೂರ್ಣವಾಗಿ ಗಹನವಾಗಿ ಕಟ್ಟಿ ಕೊಟ್ಟಿದ್ದೀರಿ, ಸತ್ವಪೂರ್ಣವಾದ ಕವನ ನೀಡಿದ್ದಕ್ಕೆ ಧನ್ಯವಾದಗಳು.
Submitted by nageshamysore Thu, 05/16/2013 - 18:23

In reply to by H A Patil

ಹಿರಿಯರಾದ ಪಾಟೀಲರಿಗೆ ನಮಸ್ಕಾರ, ಏಕಾಂತದ ಏಕಾಂತ ತಮಗು ಮೆಚ್ಚಿಗೆಯಾದದ್ದು ತುಂಬಾ ಸಂತಸ. ತಮ್ಮ ಈ ಅನಿಸಿಕೆ ಕಲಿಯುವ ಹಾದಿಯಲ್ಲಿರುವ ನನ್ನಂತಹವರಿಗೆ ಪ್ರೋತ್ಸಾಹ ಹಾಗು ಉತ್ಸಾಹವನ್ನು ತುಂಬುತ್ತಿದೆ, ತುಂಬ ಧನ್ಯವಾದಗಳು ಪಾಟೀಲರೆ! -ನಾಗೇಶ ಮೈಸೂರು, ಸಿಂಗಪುರದಿಂದ
Submitted by nageshamysore Thu, 05/16/2013 - 18:28

In reply to by kavinagaraj

ಕವಿನಾಗರಾಜ್ ರವರಿಗೆ ನಮಸ್ಕಾರ, ಏಕಾಂತದ ಮೂಲ ಹುಡುಕಿಸುತ್ತ ಒಂದು ಒಳ್ಳೆ ಲೇಖನವನ್ನು ನನ್ನಿಂದ ಓದಿಸಿಬಿಟ್ಟಿರಿ, ತುಂಬಾ ಧನ್ಯವಾದಗಳು. ಅಂದಹಾಗೆ, ಇದು ಬರೆದ ಹೊತ್ತು, ಒಂದು ತರದ ಏಕಾಂತವೆ ( ವ್ಯವಹಾರ ನಿಮಿತ್ತ ಪ್ರಯಾಣ)  ! - ನಾಗೇಶ ಮೈಸೂರು, ಸಿಂಗಪುರದಿಂದ