ಏಕಾಂತ : ಬೋರು ಏಕಂತ?
ಮಾಡಲು ಕೆಲಸವಿಲ್ಲದೆ ಒಬ್ಬರೇ ಕುಳಿತಿದ್ದಾಗ ಅಂಥವರು ಕೆಲವರು, ’ಅಯ್ಯೋ, ಬೋರು!’ ಎಂದು ಹಲುಬುವುದನ್ನು ಕಂಡಿದ್ದೇವೆ. ಓದುವ, ಸಂಗೀತ ಆಲಿಸುವ ಮುಂತಾದ ಅಭ್ಯಾಸಗಳನ್ನು ಅವರು ರೂಢಿಸಿಕೊಂಡಿರದಿದ್ದರೇನಂತೆ, ದೇವರು ಕೊಟ್ಟ ಮಿದುಳು ಮತ್ತು ಅದರಲ್ಲಿ ಯೋಚನಾಶಕ್ತಿ ಇವೆರಡೂ ಇರುತ್ತವಲ್ಲ. ಇವೆರಡನ್ನು ಬಳಸಿ ಅವರು ಬೋರನ್ನು ದೂರ ಇಡಬಹುದಲ್ಲಾ!
ಮನೆಯೆದುರಿನ ಮರದಲ್ಲಿನ ಎಲೆಯನ್ನು ನೋಡುತ್ತ ಅದರಲ್ಲಿನ ಸೃಷ್ಟಿಕೌತುಕಗಳನ್ನು ಅರಿಯಲೆತ್ನಿಸುವುದೇನು ಅಂಥಿಂಥ ರೋಮಾಂಚನವೇ? ಮರದಮೇಲೆ ಬಂದು ಕುಳಿತ ಹಕ್ಕಿಯ ಬಗೆಬಗೆಯ ಒಯ್ಯಾರಗಳನ್ನು ಸವಿಯುವುದೇನು ಅಂಥಿಂಥ ಸೊಗಸೇ? ಮರದಲ್ಲಿ ಜಿಗಿದಾಡುವ ವಾನರಗಡಣವನ್ನು ದಿಟ್ಟಿಸುವುದೇನು ಅಂಥಿಂಥ ಮನೋರಂಜನೆಯೇ? ಮನೆಯೊಳಗೇ ಅಗೋ ಆ ಗೋಡೆಯ ಮೂಲೆಯಲ್ಲಿ ಬಲೆ ನೇಯುತ್ತಿರುವ ಜೇಡದ ಚಾಕಚಕ್ಯವೇನು ಅಂಥಿಂಥ ದೃಶ್ಯವೇ? ಇಂಥ ಅದೆಷ್ಟು ನೋಟಗಳ ಸೊಬಗು ನಮಗೆ ಎಲ್ಲೆಂದರಲ್ಲಿ ಸದಾಕಾಲ ಲಭ್ಯವಿಲ್ಲ? ಇಂಥ ಒಂದೊಂದು ನೋಟದಮೇಲೂ ನಮ್ಮ ಲಹರಿಯನ್ನು ಹರಿಯಬಿಟ್ಟಾಗ ಅದು ನಮ್ಮಲ್ಲಿ ಹುಟ್ಟಿಸುವ ಕೌತುಕಗಳು ಮತ್ತು ತೆರೆದಿಡುವ ಮಾಹಿತಿ, ಕಲ್ಪನೆ, ಕನಸುಗಳು ಇವೇನು ಸಾಮಾನ್ಯವೇ?
ನಿಮಗೆ ನೋಟದ ಹಂಬಲವೇ ಇಲ್ಲದಿದ್ದರೆ ಆಗಲೂ ಸಮಸ್ಯೆಯಿಲ್ಲ, ಮನದಲ್ಲೇ ಏನನ್ನಾದರೂ ನೆನೆಯುತ್ತಿರಬಹುದಲ್ಲ? ಅದು ಗತದ ನೆನಪಾಗಿರಬಹುದು, ಪ್ರಸ್ತುತದ ಯೋಚನೆ ಆಗಿರಬಹುದು ಅಥವಾ ಭವಿಷ್ಯತ್ತಿನ ಬಗ್ಗೆ ಯೋಜನೆ ಆಗಿರಬಹುದು. ಕನಸು ಕಾಣಲು ಏನಡ್ಡಿ?
ನೀವು ವಿವಾಹಿತರಾಗಿದ್ದಲ್ಲಿ, ಒಬ್ಬರೇ ಕೂತಿದ್ದಾಗ ಸಂಗಾತಿಯ ಸರಸ-ವಿರಸಗಳನ್ನಾದರೂ ನೆನೆಯಬಹುದಲ್ಲ! ಏಕಾಂಗಿಯಾಗಿದ್ದವ ತನ್ನ ಅರ್ಧಾಂಗಿಯನ್ನು ನೆನೆಯುತ್ತ ಕಾಲಕ್ಷೇಪ ಮಾಡಬಹುದು.
ಏಕಾಂತದಲ್ಲಿರುವ ಕಾಂತೆಯಾದರೆ, ’ಏ, ಕಾಂತ’, ಎಂದು ಆಕೆ ತನ್ನ ಕಾಂತನನ್ನು ನೆನೆಯಬಹುದು.
ಕಾಂತನೋ, ’ಏಕಂತ?’ ಎಂದು ಆಕೆಯ ವಿಷಯದಲ್ಲಿ ತನಗೇ ಹಲವು ಪ್ರಶ್ನೆಗಳನ್ನು ಹಾಕಿಕೊಳ್ಳಬಹುದು.
ಇಷ್ಟೆಲ್ಲ ಅವಕಾಶಗಳಿರುವಾಗ ಏಕಾಂತ ಬೋರು ಏಕಂತ?