ಏರ್ ಇಂಡಿಯಾಗೆ ‘ಮಹಾರಾಜ' ವೈಭವ ಮತ್ತೆ ಮರುಕಳಿಸಲಿ

ಏರ್ ಇಂಡಿಯಾಗೆ ‘ಮಹಾರಾಜ' ವೈಭವ ಮತ್ತೆ ಮರುಕಳಿಸಲಿ

ಅಪಾರ ನಷ್ಟದಿಂದಾಗಿ ಭಾರೀ ಚರ್ಚೆಯಲ್ಲಿದ್ದ ಭಾರತದ ಪ್ರತಿಷ್ಟಿತ ವಿಮಾನಯಾನ ಸಂಸ್ಥೆ ‘ಏರ್ ಇಂಡಿಯಾ ಇಂಟರ್ ನ್ಯಾಷನಲ್ ಲಿ. ನ ಆಡಳಿತ ೬೯ ವರ್ಷಗಳ ಸುದೀರ್ಘ ಅವಧಿ ಬಳಿಕ ಮತ್ತೆ ಟಾಟಾ ಗ್ರೂಪ್ ನ ಪಾಲಾಗಿದೆ. ಧೀಮಂತ ಉದ್ಯಮಿ ಜೆ ಆರ್ ಡಿ ಟಾಟಾ ಅವರ ಕನಸಿನ ಕೂಸಾದ ‘ಟಾಟಾ ಏರ್ ಲೈನ್ಸ್' ೧೯೩೨ರಲ್ಲಿ ಆರಂಭವಾಗಿ ಭಾರತೀಯ ವಿಮಾನಯಾನ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿತ್ತು. ಆದರೆ ೧೯೪೬ರಲ್ಲಿ ‘ಟಾಟಾ ಏರ್ ಲೈನ್ಸ್' ರಾಷ್ಟ್ರೀಕರಣಗೊಂಡು ಸರ್ಕಾರದ ತೆಕ್ಕೆಗೆ ಬಂದಿತು. ಸರ್ಕಾರಿ ವಿಮಾನವೆಂಬ ಧೋರಣೆಯಿಂದಾಗಿ ಏರಿ ಇಂಡಿಯಾ ಬಿಳಿ ಆನೆಯಾಯಿತು. ಸಾಕುವುದು ಕಷ್ಟವೆನಿಸಿತು. ವಿಮಾನಗಳ ನಿರ್ವಹಣೆ ಕಷ್ಟವಾಯಿತು. ಸಿಬ್ಬಂದಿ ಸಂಬಳಕ್ಕೂ ತಾತ್ವಾರ ಆಯಿತು. ಜಾಗತಿಕ ಮಟ್ಟದ ಗುಣಮಟ್ಟದ ವಿಮಾನ ಸೇವೆ ನೀಡುವಲ್ಲಿ ಸಂಸ್ಥೆ ಹಿಂದೆ ಬಿದ್ದಿತು. ಪೈಪೋಟಿ ಎದುರಿಸಲಾಗದೇ ಕಂಗಾಲಾಯಿತು.

ಕೊನೆಗೂ ಸರ್ಕಾರಿ ಸಂಸ್ಥೆಯನ್ನು ಕೇಂದ್ರ ಸರ್ಕಾರ ಖಾಸಗಿಯವರಿಗೆ ನೀಡಲು ನಿರ್ಧರಿಸಿ ಬಿಡ್ ಆಹ್ವಾನಿಸಿತು. ಏರ್ ಇಂಡಿಯಾಗಿದ್ದ ಸಾಲದ ಪ್ರಮಾಣ ನೋಡಿ ಇದನ್ನು ಖರೀದಿಸಲು ಯಾರೂ ಮುಂದೆ ಬರಲಿಲ್ಲ. ಕೊನೆಗೆ ಟಾಟಾ ಗ್ರೂಪ್ ೧೮,೦೦೦ ಕೋಟಿಗೆ ಬಿಡ್ ಮಾಡಿತು. ಇದರಲ್ಲಿ ೨,೭೦೦ ಕೋಟಿ ರು. ನಗದು ಪಾವತಿ ಮತ್ತು ೧೫,೩೦೦ ಕೋಟಿ ಸಾಲದ ಬಾಬ್ತು. ಇದಕ್ಕೆ ಕೇಂದ್ರ ಸರ್ಕಾರ ಸಮ್ಮಿತಿಸಿ ಅಂತಿಮವಾಗಿ ಆಡಳಿತ ಅಧಿಕಾರವನ್ನು ೬೯ ವರ್ಷಗಳ ಬಳಿಕ ಟಾಟಾ ತೆಕ್ಕೆಗೆ ನೀಡಿದೆ. ಇದೀಗ ಟಾಟಾ ಸಂಸ್ಥೆ ಏರ್ ಇಂಡಿಯಾವನ್ನು ಹೇಗೆ ಮುನ್ನಡೆಸಲಿದೆ ಎಂಬ ಕುತೂಹಲ ಮೂಡಿದೆ. ಈಗಾಗಲೇ ಏರ್ ಏಷ್ಯಾ ಮತ್ತು ವಿಸ್ತಾರ ಏರ್ ಲೈನ್ಸ್ ನಲ್ಲಿ ಅಲ್ಪ ಪಾಲನ್ನು ಟಾಟಾ ಸಂಸ್ಥೆ ಹೊಂದಿದೆ. ಇದೀಗ ಸಂಪೂರ್ಣ ಪಾಲು ಹೊಂದಿರುವ ಏರ್ ಇಂಡಿಯಾದ ಚಿತ್ರಣವನ್ನು ಬದಲಿಸಬೇಕಿದೆ. ಉದ್ಯಮ ನಡೆಸುವ ಅನುಭವ ಹೊಂದಿರುವ ಟಾಟಾ ಸಮೂಹಕ್ಕೆ ವಿಮಾನಯಾನ ಆಡಳಿತ ಕಷ್ಟವಾಗಲಾರದು. ಅಷ್ಟೇ ಅಲ್ಲದೆ ಟಾಟಾ ಬ್ರ್ಯಾಂಡ್ ವ್ಯಾಲ್ಯೂ ಇರುವುದರಿಂದ ಬ್ಯಾಂಕುಗಳಿಂದ ಸಾಲವೂ ಸುಲಭವಾಗಿ ಸಿಗಲಿದೆ. ಈಗಾಗಲೇ ಎಸ್ ಬಿ ಐ ನೇತೃತ್ವದ ಬ್ಯಾಂಕುಗಳ ಒಕ್ಕೂಟ ಕೋಟ್ಯಾಂತರ ರು. ಸಾಲ ನೀಡಲು ಮುಂದೆ ಬಂದಿದೆ.

ಏರ್ ಇಂಡಿಯಾದ ಸೇವೆ ಹೇಗಿರಲಿದೆ ಎಂಬ ಬಗ್ಗೆ ಗುಟ್ಟನ್ನು ಇನ್ನೂ ಟಾಟಾ ಬಿಟ್ಟುಕೊಟ್ಟಿಲ್ಲ. ಮಲ್ಯರ ರೀತಿ ಲಕ್ಷುರಿ ವಿಮಾನಯಾನ ಸೇವೆ ನೀಡುವರೇ ಅಥವಾ ಏರ್ ಡೆಕ್ಕನ್ ರೀತಿ ಅಗ್ಗದ ಸೇವೆ ನೀಡುವರೇ ಎಂಬ ಕುತೂಹಲ ಮೂಡಿಸಿವೆ. ಟಾಟಾ ಆಡಳಿತದಲ್ಲಿ ಏರ್ ಇಂಡಿಯಾಗೆ ಮತ್ತೆ ಮಹಾರಾಜ ವೈಭವ ಲಭಿಸುವ ನಿರೀಕ್ಷೆ ಇದೆ. ಇದರಿಂದಾಗಿ ಕಿಂಗ್ ಫಿಷರ್, ಜೆಟ್ ಏರ್ ವೇಸ್ ಬಂದ್ ಆದ ನಂತರ ಕುಗ್ಗಿರುವ ವಿಮಾನಯಾನ ಕ್ಷೇತ್ರ ಚೇತರಿಕೆ ಕಾಣಲಿದೆ.

ಕೃಪೆ: ಕನ್ನಡ ಪ್ರಭ ಪತ್ರಿಕೆ, ದಿ.೨೮-೦೧-೨೦೨೨, ಸಂಪಾದಕೀಯ

ಚಿತ್ರ ಕೃಪೆ: ಬಿಸೆನೆಸ್ ಸ್ಟ್ಯಾಂಡರ್ಡ್