ಏಳು ಕಾಗೆಗಳ ಸೋದರಿ

ಏಳು ಕಾಗೆಗಳ ಸೋದರಿ

ಹಲವಾರು ವರುಷಗಳ ಹಿಂದೆ, ಒಂದು ಕಡಿದಾದ ಗುಡ್ಡದ ತುದಿಯಲ್ಲಿದ್ದ ಕೋಟೆಯಲ್ಲಿ ಒಬ್ಬ ಜನನಾಯಕ ಮತ್ತು ಅವನ ಮಡದಿ ವಾಸವಾಗಿದ್ದರು. ಅವರಿಗೆ ಏಳು ಗಂಡು ಮಕ್ಕಳು. ಶಕ್ತಿಶಾಲಿ ಯುವಕರಾಗಿ ಬೆಳೆಯುತ್ತಿದ್ದ ತಮ್ಮ ಮಕ್ಕಳ ಬಗ್ಗೆ ಅವರಿಗೆ ಹೆಮ್ಮೆ. ಅವರಿಬ್ಬರೂ ತಮಗೊಂದು ಹೆಣ್ಣುಮಗುವಾಗಲಿ ಎಂದು ಬಯಸುತ್ತಿದ್ದರು.

ಒಂದು ಬೇಸಗೆಯಲ್ಲಿ ಅವರ ಬಯಕೆ ಈಡೇರಿತು. ಅವರಿಗೊಂದು ಹೆಣ್ಣು ಮಗು ಹುಟ್ಟಿತು. ಆದರೆ ಆ ಮಗು ದುರ್ಬಲವಾಗಿತ್ತು; ಅದು ಅವತ್ತೇ ಮೃತ್ಯುವಶವಾಗಬಹುದೆಂದು ಅಪ್ಪ-ಅಮ್ಮನಿಗೆ ಭಯವಾಯಿತು. ಜನನಾಯಕ ತನ್ನ ಎಳೂ ಮಗಂದಿರನ್ನು ಕರೆದು, ಅವರು ಅತಿ ಹತ್ತಿರದ ವೈದ್ಯರ ಬಳಿಗೆ ವೇಗವಾಗಿ ಸಾಗಿ, ವೈದ್ಯರನ್ನು ಬೇಗನೇ ಕರೆತರಬೇಕೆಂದು ಆದೇಶಿಸಿದ. ಎಲ್ಲ ಏಳು ಮಗಂದಿರೂ ವೈದ್ಯರನ್ನು ಹುಡುಕುತ್ತಾ ಕುದುರೆಯೇರಿ ದೌಡಾಯಿಸಿದರು.

ಒಂದು ಗಂಟೆ ಸರಿಯಿತು; ಎರಡು ಗಂಟೆ ಸರಿಯಿತು; ಮೂರು ಗಂಟೆಗಳು ಸರಿದವು. ಯಾರೊಬ್ಬ ಮಗನೂ ವಾಪಾಸು ಬರಲಿಲ್ಲ. ಜನನಾಯಕ ಕೋಣೆಯೊಳಗೆ ಅತ್ತಿತ್ತ ನಡೆದಾಡುತ್ತ, ತನ್ನ ಮಗಂದಿರು ಎಲ್ಲಿಗೆ ಹೋದರೆಂದು ತಲೆಕೆಡಿಸಿಕೊಂಡಿದ್ದ. ಕೊನೆಗೆ ಅವನ ತಾಳ್ಮೆ ತಪ್ಪಿತು. “ಈ ನನ್ನ ಮಗಂದಿರು ನನ್ನನ್ನು ಬಹಳ ಕಾಯಿಸಿದ್ದಾರೆ. ಕೆಲಸಕ್ಕೆ ಬಾರದ ಈ ಸೋಮಾರಿ ಮಗಂದಿರು ಎಲ್ಲರೂ ಕಪ್ಪು ಕಾಗೆಗಳಾಗಿ ಬದಲಾಗಿ ಹೋಗಲಿ" ಎಂದು ಶಾಪವಿತ್ತ.

ಅವನು ತನ್ನ ಮಾತು ಮುಗಿಸುವಷ್ಟರಲ್ಲಿ ಆ ಕೋಟೆಯಲ್ಲಿ ರೆಕ್ಕೆಗಳು ಬಡಿಯುವ ಸದ್ದು ಕೇಳಿಸಿತು. ತಕ್ಷಣವೇ ಜನನಾಯಕ ಕಿಟಕಿಯ ಹತ್ತಿರ ಹೋಗಿ ನೋಡಿದಾಗ ಏಳು ಕಾಗೆಗಳು ಹಾರಿ ಹೋಗುವುದು ಕಾಣಿಸಿತು. ಅವು ಕಾಗೆಗಳಾದ ತನ್ನ ಮಗಂದಿರು ಎಂದು ಅವನಿಗೆ ಅರಿವಾಯಿತು. ಅವನಿಗೆ ಪಶ್ಚಾತ್ತಾಪವಾಯಿತು. ತನ್ನ ಪ್ರೀತಿಯ ಮಗಂದಿರಿಗೆ ಅಂತಹ ಕಠೋರ ಶಾಪ ಕೊಟ್ಟದ್ದಕ್ಕಾಗಿ ತನ್ನನ್ನು ತಾನು ಕ್ಷಮಿಸಿಕೊಳ್ಳಲು ಅವನಿಗೆ ಸಾಧ್ಯವಾಗಲೇ ಇಲ್ಲ.

ಮಧುಮತಿ ಹೆಸರಿನ ಅವರ ಹೆಣ್ಣು ಮಗು ಆರೋಗ್ಯವಂತಳಾಗಿ ರೂಪವತಿಯಾಗಿ ಬೆಳೆದಳು. ಆದರೆ ಅವಳಿಗೆ ತನ್ನ ಏಳು ಸೋದರರ ಬಗ್ಗೆ ಏನೂ ತಿಳಿದಿರಲಿಲ್ಲ. ಯಾಕೆಂದರೆ, ತಾನು ಶಾಪವಿತ್ತ  ದುರದೃಷ್ಟದ ದಿನದ ಬಗ್ಗೆ ಯಾರೊಬ್ಬರೂ ಮಾತಾಡಬಾರದೆಂದು ಜನನಾಯಕ ತಾಕೀತು ಮಾಡಿದ್ದ.

ತನ್ನ ಹನ್ನೊಂದನೆಯ ಹುಟ್ಟುಹಬ್ಬದಂದು ಮಧುಮತಿ ಪಕ್ಕದ ಗುಡ್ಡದಲ್ಲಿದ್ದ ಕೋಟೆಗೆ ಮೊದಲ ಬಾರಿ ಹೋದಳು. ಅಲ್ಲಿದ್ದ ಮುದುಕಿಯೊಬ್ಬಳು ಮಧುಮತಿಗೆ ಏಳು ಅಣ್ಣಂದಿರು ಇದ್ದಾರೆಂದು ತಿಳಿಸಿದಳು. ಅವರೆಲ್ಲರೂ ಹೇಗೆ ಕಪ್ಪು ಕಾಗೆಗಳಾಗಿ ಬದಲಾಗಿ ಹಾರಿ ಹೋದರೆಂದು ವಿವರಿಸಿದಳು. ಈ ಸುದ್ದಿ ತಿಳಿದ ಮಧುಮತಿ, "ನನ್ನ ತಪ್ಪಿನಿಂದಾಗಿ ಅಣ್ಣಂದಿರು ಕಾಗೆಗಳಾದರು. ಹಾಗಾಗಿ ಅವರನ್ನು ನಾನೇ ಹುಡುಕಬೇಕು” ಎಂದು ಯೋಚಿಸಿದಳು.

ತನ್ನ ಕೋಟೆಗೆ ಮರಳಿದ ಮಧುಮತಿ, ತನ್ನ ಅಣ್ಣಂದಿರನ್ನು ಹುಡುಕಲು ತಾನು ಹೋಗೇ ಹೋಗುತ್ತೇನೆಂದು ಹಟ ಹಿಡಿದಳು. ಅವಳ ದೃಢ ನಿರ್ಧಾರ ಕಂಡ ಅಪ್ಪ-ಅಮ್ಮ ಕೊನೆಗೆ ದುಃಖದಿಂದಲೇ ಸಮ್ಮತಿ ನೀಡಿದರು.

ಮರುದಿನ ಮುಂಜಾನೆ ತನ್ನ ಏಳು ಅಣ್ಣಂದಿರನ್ನು ಹುಡುಕಲಿಕ್ಕಾಗಿ ಮಧುಮತಿ ಕೋಟೆಯಿಂದ ಹೊರಟಳು. ಬೆಟ್ಟಗಳು, ತೊರೆಗಳು, ಹೊಲಗಳು, ಬಯಲುಗಳು, ಕಾಡುಗಳನ್ನು ದಾಟುತ್ತಾ ಅವಳು ಮುಂದೆ ಸಾಗಿದಳು. ಆದರೆ ಅವಳಿಗೆ ಎಲ್ಲಿಯೂ ಏಳು ಕಾಗೆಗಳು ಕಾಣಿಸಲಿಲ್ಲ.

ಹುಡುಕಿ ಹುಡುಕಿ ದಣಿದ ಮಧುಮತಿ ಹುಡುಕಾಟ ಕೈಬಿಟ್ಟು ಹಿಂತಿರುಗಬೇಕೆಂದು ಯೋಚಿಸಿದಳು. ಆಗ ಅವಳಿಗೆ ಹಾದಿ ಬದಿಯಲ್ಲಿದ್ದ ಒಂದು ಲೋಹದ ಬಲೆ ಕಾಣಿಸಿತು. ಅದರಲ್ಲೊಂದು ಕಪ್ಪು ಕಾಗೆ ಸಿಕ್ಕಿಹಾಕಿಕೊಂಡಿತ್ತು. “ಅಯ್ಯೋ, ಇದು ನನ್ನೊಬ್ಬ ಅಣ್ಣನಾಗಿರಬಹುದು” ಎಂದು ಯೋಚಿಸುತ್ತಾ ಅವಳು ಕಷ್ಟ ಪಟ್ಟು ಆ ಬಲೆಯಿಂದ ಕಪ್ಪು ಕಾಗೆಯನ್ನು ಬಿಡಿಸಿದಳು.

ತಕ್ಷಣವೇ ಅಲ್ಲಿ ಬೆಳಕಿನ ಝಳಕ್ ಕಾಣಿಸಿತು. ಮಧುಮತಿಯ ಎದುರು ಒಬ್ಬಳು ಸುಂದರ ಯಕ್ಷಿಣಿ ನಿಂತಿದ್ದಳು. “ನನ್ನನ್ನು ರಕ್ಷಿಸಿದ್ದಕ್ಕಾಗಿ ನಿನಗೆ ಕೃತಜ್ನತೆಗಳು. ನಿನ್ನ ಉಪಕಾರಕ್ಕಾಗಿ ನಿನ್ನ ಅಣ್ಣಂದಿರು ಎಲ್ಲಿದ್ದಾರೆಂದು ಹೇಳುತ್ತೇನೆ. ಗಮನವಿಟ್ಟು ಕೇಳು. ಇಲ್ಲಿಗೆ ಹತ್ತಿರದಲ್ಲಿರುವ ಒಂದು ಪರ್ವತದ ತುದಿಯಲ್ಲಿ ಒಂದು ಕೋಟೆಯಿದೆ. ಅಲ್ಲಿರುವ ಒಬ್ಬ ಕ್ರೂರಿ ಮಾಂತ್ರಿಕನೇ ನಿನ್ನ ಅಣ್ಣಂದಿರನ್ನು ಕಾಗೆಗಳನ್ನಾಗಿ ಬದಲಾಯಿಸಿದವನು. ಯಾಕೆಂದರೆ ಅವನು ನಿನ್ನ ಅಪ್ಪ-ಅಮ್ಮನಿಗೆ ಸಂಕಟ ಕೊಡಬೇಕೆಂದು ಕಾದಿದ್ದ. ಅವನು ನಿನ್ನ ಅಣ್ಣಂದಿರನ್ನು ಕೋಟೆಯೊಳಗೆ ಬಂಧಿಸಿ ಇಟ್ಟಿದ್ದಾನೆ. ಆ ಕೋಟೆಯನ್ನು ಯೋಧರು ಕಾಯುತ್ತಿದ್ದಾರೆ ಮತ್ತು ಅವರು ಯಾರನ್ನೂ ಕೋಟೆಯೊಳಗೆ ಹೋಗಲು ಬಿಡೋದಿಲ್ಲ.”

ಅಂತಹ ದುರ್ಗಮ ಕೋಟೆಗೆ ಹೋಗಿ ತನ್ನ ಅಣ್ಣಂದಿರನ್ನು ರಕ್ಷಿಸಲು ತನ್ನಿಂದ ಸಾಧ್ಯವಿಲ್ಲ ಎಂದು ಭಾವಿಸಿದ ಮಧುಮತಿ ಅಳ ತೊಡಗಿದಳು. ಆಗ ಯಕ್ಷಿಣಿ ಹೇಳಿದಳು, “ಅಳಬೇಡ. ಇಗೋ, ನಿನಗೊಂದು ಮ್ಯಾಜಿಕ್ ಕಾಗೆಯ ಗರಿ ಕೊಡುತ್ತೇನೆ. ಇದನ್ನು ತಗಲಿಸಿದಾಗ ಆ ಕೋಟೆಯ ಬಾಗಿಲುಗಳು ತೆರೆಯುತ್ತವೆ ಮತ್ತು ಅಲ್ಲಿರುವ ಕಾವಲುಗಾರರು ನಿದ್ದೆ ಮಾಡುತ್ತಾರೆ.”

ಯಕ್ಷಿಣಿಗೆ ವಂದಿಸಿ, ಮಧುಮತಿ ಅಲ್ಲಿಂದ ಆ ಪರ್ವತಕ್ಕೆ ಧಾವಿಸಿದಳು. ಅದರ ಕಡಿದಾದ ಬದಿಗಳನ್ನು ಹಲ್ಲುಕಚ್ಚಿ ಹತ್ತಿದಳು. ಕೋಟೆಯ ಮಹಾದ್ವಾರ ತಲಪಿ, ಬಾಗಿಲುಗಳ ಸಂದಿಯಲ್ಲಿ ಮ್ಯಾಜಿಕ್ ಕಾಗೆ ಗರಿಯನ್ನು ತುರುಕಿಸಿದಳು. ತಕ್ಷಣವೇ ಆ ಬಾಗಿಲುಗಳು ತೆರೆದುಕೊಂಡವು ಮತ್ತು ಮಧುಮತಿ ಕೋಟೆಯೊಳಗೆ ನಡೆದಳು. ಅಲ್ಲಿದ್ದ ಕಾವಲುಗಾರರ ಬಳಿಗೆ ಸದ್ದು ಮಾಡದೆ ಹಿಂಬದಿಯಿಂದ ಹೋಗಿ ಅದೇ ಗರಿಯನ್ನು ತಗಲಿಸಿದಳು. ತಕ್ಷಣವೇ ಅವರು ನಿದ್ದೆಗೆ ಜಾರಿ ಕೆಳಕ್ಕೆ ಕುಸಿದರು.

ಮಧುಮತಿ ಕೋಟೆಯೊಳಗೆ ಸುತ್ತಾಡಿದಳು. ಕೊನೆಗೆ ಒಂದು ದೊಡ್ಡ ಕೋಣೆಗೆ ಬಂದಳು. ಆ ಕೋಣೆಯಲ್ಲಿ ಒಂದು ಉದ್ದದ ಮೇಜು ಇತ್ತು. ಆ ಮೇಜಿನಲ್ಲಿ ಏಳು ತಟ್ಟೆಗಳಲ್ಲಿ ಆಹಾರ ಇಡಲಾಗಿತ್ತು. “ಇದು ನನ್ನ ಅಣ್ಣಂದಿರು ಊಟ ಮಾಡುವ ಮೇಜು ಆಗಿರಬೇಕು. ಅವರು ಬರುವ ತನಕ ಇಲ್ಲೇ ಕಾಯುತ್ತೇನೆ” ಎಂದವಳು ಅಲ್ಲೇ ಒಂದು ಕುರ್ಚಿಯಲ್ಲಿ ಕಾದು ಕುಳಿತಳು.

ದೂರದಿಂದ ನಡೆದು ಪರ್ವತವೇರಿ ಬಂದಿದ್ದ ಅವಳಿಗೆ ಹಸಿವಾಗಿತ್ತು, ದಣಿವಾಗಿತ್ತು. ಅವಳು ತಟ್ಟೆಯಿಂದ ಸ್ವಲ್ಪ ಆಹಾರ ತಿಂದಳು. ಕೆಲವೇ ನಿಮಿಷಗಳಲ್ಲಿ ಅವಳಿಗೆ ಅಲ್ಲೇ ನಿದ್ದೆ ಬಂತು.

ಫಕ್ಕನೆ ಅವಳಿಗೆ ರೆಕ್ಕೆಗಳು ಬಡಿಯುವ ಸದ್ದು ಕೇಳಿ ನಿದ್ದೆಯಿಂದ ಎಚ್ಚರವಾಯಿತು. ಏಳು ಕಾಗೆಗಳು "ಕಾ, ಕಾ" ಎಂದು ಕೂಗುತ್ತಾ ಕೋಣೆಯೊಳಗೆ ಬರುವುದನ್ನು ಅವಳು ಕಂಡಳು. ತಕ್ಷಣವೇ ಅವಳು ಕುರ್ಚಿಯಿಂದ ಎದ್ದು ಬದಿಗೆ ಸರಿದಳು. ಎಲ್ಲ ಕಾಗೆಗಳೂ ಕುರ್ಚಿಯಲ್ಲಿ ಕುಳಿತಾಗ ಅವಳು ಮೇಜಿನ ಸುತ್ತ ಓಡುತ್ತಾ ಪ್ರತಿಯೊಂದು ಕಾಗೆಯನ್ನೂ ಮ್ಯಾಜಿಕ್ ಗರಿಯಿಂದ ಮುಟ್ಟಿದಳು. ಆ ಕ್ಷಣದಲ್ಲಿ ಕಾಗೆಗಳಾಗಿದ್ದ ಅವಳ ಏಳು ಅಣ್ಣಂದಿರಿಗೆ ಶಾಪ ವಿಮೋಚನೆ ಆಯಿತು.

ಆದರೆ ಮಧುಮತಿಯ ಏಳು ಅಣ್ಣಂದಿರಿಗೆ ಅವಳ ಗುರುತು ಸಿಗಲಿಲ್ಲ. ಅವಳು ತಾನಾರೆಂದು ತಿಳಿಸಿದಾಗ “ಇದು ತಮ್ಮ ತಂಗಿ" ಎಂದು ತಿಳಿದು ಅವರಿಗೆಲ್ಲ ಮಹದಾನಂದವಾಯಿತು.

ಆಗ ಅವರಲ್ಲೊಬ್ಬ ಹೇಳಿದ, “ತಕ್ಷಣವೇ ನಾವಿಲ್ಲಿಂದ ಪಾರಾಗಬೇಕು. ಯಾಕೆಂದರೆ ಮಾಂತ್ರಿಕ ಬರುವ ಹೊತ್ತಾಯಿತು.” ಅವರೆಲ್ಲರೂ ಮಲಗಿದ್ದ ಕಾವಲುಗಾರರನ್ನು ದಾಟಿ, ಮಹಾದ್ವಾರ ಹಾದು ಕೋಟೆಯಿಂದ ಹೊರಬಂದರು. ಅನಂತರ ಓಡುತ್ತಾ ಜಾರುತ್ತಾ ಪರ್ವತದಿಂದ ಕೆಳಗಿಳಿದರು.

ಅನಂತರ ಮಧುಮತಿ ಮತ್ತು ಏಳು ಅಣ್ಣಂದಿರು ತಮ್ಮ ಮನೆಯತ್ತ ಹರುಷದಿಂದ ಸಾಗಿದರು. ಎರಡು ದಿನಗಳ ಬಳಿಕ ಅವರು ಮನೆಯೊಳಗೆ ಬಂದು ನಿಂತಾಗ ಜನನಾಯಕ ಮತ್ತು ಅವನ ಮಡದಿಯ ಸಂತೋಷಕ್ಕೆ ಪಾರವೇ ಇಲ್ಲ. ಅವರ ಎಲ್ಲ ಎಂಟು ಮಕ್ಕಳೂ ಸುರಕ್ಷಿತವಾಗಿ ಮನೆಗೆ ಮರಳಿದ್ದರು. ಈ ಅಪೂರ್ವ ಮರುಮಿಲನವನ್ನು ಅವರು ಸಂತೋಷಕೂಟ ಏರ್ಪಡಿಸಿ,  ಸಂಭ್ರಮದಿಂದ ಆಚರಿಸಿದರು.