ಏಳು ವರುಷ ಕೃತಕ ಹಾಲು ಮಾರಿ ಕೋಟಿಗಟ್ಟಲೆ ರೂಪಾಯಿ ಕೊಳ್ಳೆ!

ಏಳು ವರುಷ ಕೃತಕ ಹಾಲು ಮಾರಿ ಕೋಟಿಗಟ್ಟಲೆ ರೂಪಾಯಿ ಕೊಳ್ಳೆ!

ಲೀಟರಿಗೆ ಕೇವಲ ಆರು ರೂಪಾಯಿ ವೆಚ್ಚದಲ್ಲಿ ಉತ್ಪಾದಿಸಿದ ಕೃತಕ ಹಾಲನ್ನು ಲೀಟರಿಗೆ ೨೫ ರೂಪಾಯಿಗೆ ಏಳು ವರುಷ ಮಾರಾಟ ಮಾಡಿ ಕೋಟಿಗಟ್ಟಲೆ ರೂಪಾಯಿ ಕೊಳ್ಳೆ ಹೊಡೆದಿದ್ದಾರೆ ಇಬ್ಬರು ಸೋದರರು!

ಈ ಮಹಾ ಅಪರಾಧ ಪತ್ತೆಯಾದದ್ದು ಮಧ್ಯಪ್ರದೇಶದ ಎಸ್.ಟಿ.ಎಫ್.ನ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅಶೋಕ್ ಅವಸ್ಥಿ ಅವರು ಎರಡು ಹಾಲು ಶೀತಲೀಕರಣ ಘಟಕಗಳಿಗೆ ಜುಲಾಯಿ ೨೦೧೯ರ ಕೊನೆಯಲ್ಲಿ ಧಾಳಿ ಮಾಡಿದಾಗ. ಇದರ ಹಿನ್ನೆಲೆಯನ್ನು ಅವರು ವಿವರಿಸಿದ್ದು ಹೀಗೆ: ಮಧ್ಯಪ್ರದೇಶದ ಚಂಬಲಿನಲ್ಲಿ ಹಾಲಿನ ಉತ್ಪಾದನೆ ದಿನಕ್ಕೆ ೧೧ ಲಕ್ಷ ಲೀಟರ್  ಮಾತ್ರ; ಆದರೆ ಇಲ್ಲಿಂದ ದಿನಕ್ಕೆ ೩೦ ಲಕ್ಷ ಲೀಟರ್ ಹಾಲು ಪೂರೈಕೆ ಆಗುತ್ತಿದೆ. ಈ ವ್ಯತ್ಯಾಸ ಅಂದರೆ, ೧೯ ಲಕ್ಷ ಲೀಟರ್ ಹಾಲು ಕೃತಕ ಹಾಲು. ಇದು ಕ್ಯಾನ್ಸರಿಗೆ ಕಾರಣ; ಮಾತ್ರವಲ್ಲ, ಹಲವಾರು ಭೀಕರ ರೋಗಗಳಿಗೂ ಕಾರಣ.

ಇದರಿಂದಾಗಿಯೇ ಭಿಂಡ್ ಮತ್ತು ಮೊರೆನಾದಲ್ಲಿರುವ ಎರಡು ಶೀತಲೀಕರಣ ಘಟಕಗಳಿಗೆ ಎಸ್.ಟಿ.ಎಫ್. ಪೊಲೀಸರು ಧಾಳಿ ನಡೆಸಿದರು. ಆಗ ವಖಂಡೇಶ್ವರಿ ಡೈರಿಯಲ್ಲಿ ೧೭,೦೦೦ ಲೀಟರ್ ಕೃತಕ ಹಾಲು, ೧,೦೦೦ ಕಿಗ್ರಾ ಮೋವಾ ಮತ್ತು ೧,೫೦೦ ಕಿಗ್ರಾ ಕೃತಕ ಚೀಸ್ ವಶಪಡಿಸಿಕೊಳ್ಳಲಾಯಿತು. “ಆ ಡೈರಿಗಳಲ್ಲಿ ಭಾರೀ ಪರಿಮಾಣದ ಯೂರಿಯಾ, ರಾಸಾಯನಿಕ ವಸ್ತುಗಳು, ಗ್ಲುಕೋಸ್, ಶಾಂಪೂ, ರಿಫೈನ್‍ಡ್ ತೈಲ ಮತ್ತು ಜಲಜನಕ ಪೆರೊಕ್ಸೈಡ್ ಇವೆಲ್ಲ ಪತ್ತೆಯಾದವು; ಆದರೆ ಅಲ್ಲಿ ಸಾಚಾ ಹಾಲು ಇರಲೇ ಇಲ್ಲ” ಎಂದು ಅಶೋಕ್ ಅವಸ್ಥಿ ಅವರು ಮಾಹಿತಿ ನೀಡಿದರು. ಅವೆಲ್ಲ ವಸ್ತುಗಳು ಕೃತಕ ಹಾಲಿನ ಉತ್ಪಾದನೆಗೆ ಬಳಕೆಯಾಗುತ್ತಿದ್ದವು!

ಇದೆಲ್ಲ ಶುರುವಾದದ್ದು ಏಳು ವರುಷಗಳ ಮುಂಚೆ ದೇವೇಂದ್ರ ಗುರ್ಜಾರ್ (೪೨ ವರುಷ) ಮತ್ತು ಜೈವೀರ್ ಗುರ್ಜಾರ್ (೪೦ ವರುಷ) ಎಂಬ ಇಬ್ಬರು ಸೋದರರು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಧಾಕ್‍ಪುರ ಹಳ್ಳಿಯಿಂದ ಮೋಟರ್-ಬೈಕಿನಲ್ಲಿ ಹಾಲು ಮಾರಾಟ ಮಾಡಲು ಆರಂಭಿಸಿದಾಗ. (ಭೋಪಾಲದಿಂದ ಆ ಹಳ್ಳಿ ೪೬೫ ಕಿಮೀ ದೂರದಲ್ಲಿದೆ) ಇವತ್ತು ಅವರ ಸಂಪತ್ತು ಹೇಗಿದೆ ಅಂತೀರಾ? ಅವರೀಗ ಎರಡು ಕೋಟಿ ರೂಪಾಯಿ ಮೌಲ್ಯದ ಶೀತಲೀಕರಣ ಘಟಕ, ಹಲವು ಹಾಲಿನ ಟ್ಯಾಂಕರುಗಳು, ಮೂರು ಬಂಗಲೆಗಳು, ಭಾರೀ ಬೆಲೆಯ ಕಾರುಗಳು ಹಾಗೂ ಹಲವು ಎಕ್ರೆ ಕೃಷಿಜಮೀನಿನ ಮಾಲೀಕರು!

ಕ್ರಮೇಣ ಕೃತಕ ಹಾಲು ಉತ್ಪಾದಿಸಲು ಆರಂಭಿಸಿದ ಅವರಿಗೆ ಈ ಕಾನೂನುಬಾಹಿರ ಚಟುವಟಿಕೆಯಿಂದ ಕೋಟಿಗಟ್ಟಲೆ ರೂಪಾಯಿ ಗಳಿಸಬಹುದೆಂದು ಅಂದಾಜಾಯಿತು. ಅನಂತರ, ಹರಿಯಾಣ, ಉತ್ತರಪ್ರದೇಶ, ರಾಜಸ್ಥಾನ ಮತ್ತು ಢೆಲ್ಲಿಯ ಹೆಸರುವಾಸಿ ಕಂಪೆನಿಗಳಿಗೆ “ಹಾಲು” ಪೂರೈಸತೊಡಗಿದರು.

ಭೋಪಾಲದ ವೈದ್ಯ ಡಾ.ಸಂಜಯ್ ಕುಮಾರ್ ಕೃತಕ ಹಾಲಿನ ಅಪಾಯದ ಬಗ್ಗೆ ಹೀಗೆ ಎಚ್ಚರಿಸುತ್ತಾರೆ: “ಯೂರಿಯಾದ ಸೇವನೆ ಎಂದಿಗೂ ಗುಣವಾಗದ ಗ್ಯಾಸ್ಟ್ರಿಕ್ ಸಮಸ್ಯೆಗಳು, ಹೊಟ್ಟೆಯ ಸೋಂಕುಗಳು ಮತ್ತು ಹಸಿವಿನ ನಾಶಕ್ಕೆ ಕಾರಣವಾದೀತು. ಯಾರೇ ವ್ಯಕ್ತಿ ದೀರ್ಘ ಕಾಲ ಕಲಬೆರಕೆಯ ಹಾಲನ್ನು ಕುಡಿದರೆ, ಕ್ಯಾನ್ಸರ್ ರೋಗ ಬಂದೀತು.”

ಈ ಸಮಾಜಘಾತಕ ದಂಧೆಯ ಬಗ್ಗೆ ಹಲವರು ದೂರು ನೀಡಿದ್ದರೂ ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳದ ಮಧ್ಯಪ್ರದೇಶ ಸರಕಾರ ಈಗ ಎಚ್ಚತ್ತಿದೆ. ಇದರಲ್ಲಿ ತೊಡಗಿದ್ದವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ ಅನುಸಾರ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. (ಆಧಾರ: ೨೯-೭-೨೦೧೯ರ ಹಿಂದುಸ್ಥಾನ ಟೈಮ್ಸ್ ಪತ್ರಿಕೆಯ ವರದಿ)

ಇತರ ರಾಜ್ಯಗಳಲ್ಲಿಯೂ ಕೃತಕ ಹಾಲಿನ ದಂಧೆ ರಾಜಾರೋಷವಾಗಿ ನಡೆಯುತ್ತಿರಬಹುದು. ಎಲ್ಲಿಯ ವರೆಗೆ ಹಾಲು ಮತ್ತು ಆಹಾರದ ಗುಣಮಟ್ಟ ರಕ್ಷಿಸಬೇಕಾದ ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಿಸುದಿಲ್ಲವೋ ಅಲ್ಲಿಯ ವರೆಗೆ ಇಂತಹ ದಂಧೆ ನಡೆಯುತ್ತಲೇ ಇರುತ್ತದೆ, ಅಲ್ಲವೇ? ಹಾಲಿನ ಬಳಕೆದಾರರೂ ಎಚ್ಚತ್ತುಕೊಳ್ಳಬೇಕಾಗಿದೆ. ಗಮನಿಸಿ: ಯಾವುದೇ ರೀತಿಯಲ್ಲಿ ಸಂಸ್ಕರಿಸದ ಹಾಲನ್ನು ಖರೀದಿಸುವುದು ಈ ಸಮಸ್ಯೆಗೆ ಒಂದು ಪರಿಹಾರ. ಅಂದರೆ, ಆ ದಿನ ಕರೆದ ಹಾಲನ್ನು ಐದಾರು ಗಂಟೆಗಳೊಳಗೆ ಖರೀದಿಸಿ ಬಳಸುವುದು.

(ಸೂಚನೆ: ೨೨ ಜನವರಿ ೨೦೨೦ರಂದು “ಸಂಪದ”ದಲ್ಲಿ ಪ್ರಕಟಿಸಿರುವ “ಬಿಳಿ ಹಾಲಿನ ಕಪ್ಪು ವಹಿವಾಟು” ಲೇಖನವನ್ನೂ ಓದಿಕೊಳ್ಳಬಹುದು. ಅದರ ಇನ್ನೊಂದು ಕರಾಳ ಮುಖವನ್ನು ಈ ಲೇಖನ ನಿಮ್ಮೆದುರು ತೆರೆದಿಟ್ಟಿದೆ.)