ಏಳೋ ರಂಗ...
ಕವನ
ಏಳೊ ರಂಗ ನೋಡು ರಂಗ
ಬಾನಿನಲ್ಲಿ ರಂಗಿದೆ
ಬೆಳ್ಳಿಕಿರಣ ತುಂಬಿ ಗಗನ
ಹೊನ್ನ ಬಣ್ಣ ಬಳಿದಿದೆ ||
ತಟ್ಟ ಬೇಡ ಬಿಟ್ಟು ಬಿಡಮ್ಮ
ಬಹಳ ನಿದ್ದೆ ಕಣ್ಣಲಿ
ಇಷ್ಟು ಬೇಗ ಎದ್ದು ನಾನು
ಹೇಳು ಏನು ಮಾಡಲಿ ||
ಸೂರ್ಯ ದೇವ ತಾಯಿ ಮಡಿಲು
ಬಿಟ್ಟು ಮೇಲೆ ಬಂದನು
ಕಾರ್ಯದಲ್ಲಿ ತೊಡಗಿಕೊಳ್ಳಿ
ಮನುಜ ಕುಲವೆ ಎಂದನು ||
ಸೂರ್ಯದೇವ ಬರದೆ ಇದ್ರೆ
ಜಗಕೆ ಏನು ನಷ್ಟವು
ಸ್ವಲ್ಪ ಸಮಯ ತಡೆದು ಬರಲು
ಅವಗೆ ಏನು ಕಷ್ಟವು ||
ಸಸ್ಯರಾಶಿ ಜೀವರಾಶಿ
ನಗಲು ಬೇಕು ಸೂರ್ಯನು
ಜಡತೆ ಕಳೆದು ಜಗದ ಒಳಗೆ
ಸ್ಪೂರ್ತಿ ತುಂಬೊ ಸೂರ್ಯನು. ||
-ಈರಪ್ಪ ಬಿಜಲಿ ಕೊಪ್ಪಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್