ಏ ದಿಲ್ ಮಾಂಗೆ (ಹೆನ್ರಿ) ಮೊರ್ -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೨
(೬೫)
ಕಲಾಭವನವನ್ನು ದೂರದಿಂದ ನೋಡುವವರಿಗೆ, ಹತ್ತಿರ ಹೋಗದವರಿಗೆ ಅದೊಂದು ಸನ್ಯಾಸಾಶ್ರಮ. ಟಾಗೋರ್ ಸಂತ. ಆದರೆ ಮನುಷ್ಯರನ್ನು ದೇವರೆಂದು ಭಾವಿಸುವುದು ಇಬ್ಬರನ್ನೂ ಒಮ್ಮೆಲೆ ಅವಮಾನಿಸುವುದಾಗಿದೆ. ಕಲೆಯನ್ನು ’ನೋಡುವಾಗ’ ಅದು ’ಮೂಡಿಬಂದ’ ಸಂದರ್ಭ, ಅದನ್ನು ಕಲಾವಿದರು ಎದುರಿಸಿದ ರೀತಿ--ಇವೆರಡನ್ನೂ ಗಮನಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅಲ್ಲಿರುವುದು ಚಿತ್ರವೇ ಅಲ್ಲ.
೧೯೯೧ರಲ್ಲಿ ಕಲಾಭವನದಲ್ಲಿ ನಡೆದ ಅಂತಹ ಒಂದು ಘಟನೆಯನ್ನು ಗಮನಿಸಿಃ
ಬೀರೇಂದ್ರ ಸಿಂಗ್ ಎಂಬ ಅರೆಬೆಂಗಾಲಿ ಅಲ್ಲಿದ್ದ ಫಟಿಂಗ ಕಲಾವಿದ್ಯಾರ್ಥಿಗಳಲ್ಲಿಯೇ ಅತ್ಯುತ್ತಮ. ಎಲ್ಲರ ಬಳಿ ಸಾಲ ತೆಗೆದುಕೊಂಡು, ಅದನ್ನು ಹಿಂದಿರುಗಿಸುವ ಸಂದರ್ಭ ಬಂದಾಗ ಆತ ತನ್ನ ತಾತ, ಅಜ್ಜಿ, ಅಪ್ಪ, ಅಮ್ಮ, ಇಲ್ಲದ ತಮ್ಮ, ತಂಗಿಯರನ್ನೆಲ್ಲಾ, ತಲಾ ಒಬ್ಬೊಬ್ಬರನ್ನೂ ಹತ್ತಾರು ಸಲ ಸಾಯಿಸಿಬಿಟ್ಟು, ಅವರ ಶವಸಂಸ್ಕಾರದ ಖರ್ಚುವೆಚ್ಚಗಳನ್ನೆಲ್ಲ ಸಹ-ವಿದ್ಯಾರ್ಥಿಗಳ ಆ ಸಾಲಗಳಿಂದಲೇ ಜಮಾ ಮಾಡಿಬಿಟ್ಟಿದ್ದ! ಸಹಪಾಠಿಗಳು ಮತ್ತು ಪಾಠಿಗಳಲ್ಲದವರೂ ಇದರಿಂದ ರೋಸಿ, ನಂತರ ರೊಚ್ಚಿಗೆದ್ದಿದ್ದರು.
ಒಮ್ಮೆ ಹೀಗಾಯಿತುಃ ಕಲ್ಕತ್ತದ ಗ್ಯಾಲರಿ ಯಜಮಾನತಿಯೊಬ್ಬಳನ್ನು ಕರೆದುಕೊಂಡು ಪ್ರಕ್ಷುಬ್ ದಾ ಬೀರೇಂದ್ರನ ಸ್ಟುಡಿಯೋಕ್ಕೆ ಬಂದ, ಎಲ್ಲರ ಸ್ಟುಡಿಯೋಗಳಿಗೂ ಭೇಟಿ ನೀಡುವಂತೆ. ಆಗಾಗ ಹಾಗೆಲ್ಲ ಕಲಾಸಂಗ್ರಹಕಾರರು ಸ್ಟುಡಿಯೋಗಳಿಗೆ ಭೇಟಿ ನೀಡುವುದು, ಕಲಾಕೃತಿಗಳನ್ನು ಕೊಂಡುಕೊಳ್ಳುವುದು ಅಲ್ಲಿನ ರೂಢಿ. ಅಲ್ಲಿದ್ದ ಶಿಲ್ಪಕೃತಿಯ ಪೋಸ್ಟರ್ ಒಂದನ್ನು ನೋಡಿ ಗ್ಯಾಲರಿಯಾಕೆ "ಇದು ಯಾರ ಕೃತಿ?" ಎಂದು ಕೇಳಿದಳು.
"ಹೆನ್ರಿ ಮೂರನದು" ಎಂದ ಪ್ರಕ್ಷು.
"ಎಲ್ಲಿರುತ್ತಾರೆ ಅವರು?" ಎಂದಳು. ಅಲ್ಲಿಗೆ ತಿಳಿಯಿತು, ಆಕೆಗೆ ಕಲೆಯ ಬಗ್ಗೆ ಏನೂ ಗೊತ್ತಿಲ್ಲವೆಂದು.
ಮೋಕ್ಷ ಪಡೆದಿದ್ದೇನೆ ಎಂದು ಸಾಧಿಸಿದರೂ ಪ್ರಕ್ಷು ಸ್ವಲ್ಪ ತರ್ಲೆಯೇಃ "ಈತನೇ ಹೆನ್ರಿ ಮೂರ್. ಅರ್ಧ ಬೆಂಗಾಲಿ, ಇನ್ನರ್ಧ ಬ್ರಿಟಿಷ್" ಎಂದು ಬೀರೇಂದ್ರನನ್ನು ತೋರಿಸಿದ. ಹೆನ್ರಿ ಮೂರ್ ಇಂಗ್ಲೆಂಡಿನ ಪ್ರಸಿದ್ದ ಶಿಲ್ಪಿ! ಸತ್ತು ವರ್ಷಗಳಾಗಿತ್ತು (30 July 1898 – 31 August 1986)! ಬೀರೇಂದ್ರನ ಸ್ಟುಡಿಯೋಕ್ಕೆ ಆ ವರ್ಷ ಹೆನ್ರಿ ಮೂರನ ಕಲಾಕೃತಿಗಳ ಒಂದು ಬೃಹತ್ ರೆಟ್ರೊಸ್ಪೆಕ್ಟ್ (ಸಮ್ಯಕ್) ಪ್ರದರ್ಶನ ಭಾರತದ ಪ್ರಮುಖ ನಗರಗಳಲ್ಲೆಲ್ಲ ಏರ್ಪಟ್ಟಿತ್ತು. ಪ್ರೌಢನಾದ ಕಲಾವಿದನೊಬ್ಬನ ಎಲ್ಲ ಹಂತಗಳ ಕಲಾಕೃತಿಗಳ ಆಯ್ದ ಪ್ರದರ್ಶನವನ್ನು ’ರೆಟ್ರೊಸ್ಪೆಕ್ಟ್’ ಎನ್ನುವುದು. ಸಮ್ಯಕ್ ಎಂಬುದು ಅದರ ಸಮಾನಾರ್ಥವಲ್ಲ--ಕನ್ನಡದ ಕಲಾವಿದರಲ್ಲಿ ಅಂತಹ ಅಭ್ಯಾಸ ಕಡಿಮೆ ಇರುವುದೇ ಕನ್ನಡದಲ್ಲಿ ಪರ್ಯಾಯ ಪದವಿಲ್ಲದಿರುವುದಕ್ಕೆ ಕಾರಣ ಮತ್ತು ಸಾಕ್ಷಿ! ಮೂರನ ರೆಟ್ರಾಸ್ಪೆಕ್ಟ್ ಪ್ರದರ್ಶನದ ಶಿಲ್ಪಕೃತಿಯೊಂದರ ಪೋಸ್ಟರ್ ಒಂದು ಈ ಸ್ಟುಡಿಯೊದಲ್ಲಿತ್ತು!
"ಈ ಕಲಾಕೃತಿಯನ್ನು ನಾನು ಕೊಳ್ಳಬಹುದೆ? ನೀವು ತುಂಬ ಪ್ರಸಿದ್ಧರಿರಬೇಕು" ಎಂದಳಾಮೂರ್ಖಗ್ಯಾಲರಿಯಾಕೆ.
ಕೂಡಲೆ ಎಚ್ಚತ್ತುಕೊಂಡ ಬೀರೇಂದ್ರ ನುಡಿದ, "ಹೌದು. ಬೆಂಗಾಲಕ್ಕೆಲ್ಲ ನಾನು ಜಗತ್ರಸಿದ್ಧ. ನಾನೇ ಹೆನ್ರಿ ಮೂರ್. ಈ ಕಲಾಕೃತಿಯನ್ನು ನೀವು ಕೊಳ್ಳಬಹುದು" ಎಂದು ಆ ಪೋಸ್ಟರಿನ ಕಡೆ ಬೆರಳು ಮಾಡಿ, ಪ್ರಕ್ಷುಬ್ಧನನ್ನು ನೋಡಿದ. ಆತ ನಗುತ್ತಿದ್ದ!
(೬೬)
ಮೂರು ಸಾವಿರ ರೂಗಳಿಗೆ ಆ ಪೋಸ್ಟರ್ ರೂಪದ ಕಲಾಕೃತಿಯನ್ನು ಹೆನ್ರಿ ಮೂರನೆಂಬ ಬೀರೇಂದ್ರ ಮಾರಾಟ ಮಾಡುವಂತೆ ನೋಡಿಕೊಂಡ ಪ್ರಕ್ಷುಬ್ಧ. ಈ ಮೋಕ್ಷವಂತ ಹೀಗೆಲ್ಲ ಯಾಕೆ ಮಾಡುತ್ತಿದ್ದಾನೆಂದು ತಿಳಿಯದೇ ಹೋದ ಬೀರ! ಪೋಸ್ಟರನ್ನು ಮಡಿಚಿ, ಒಳ್ಳೆಯ ಪ್ಯಾಕಿಂಗ್ ಮಾಡಿ, ಆಕೆಯ ಕೈಗಿತ್ತ.
"ಹಣವನ್ನು ನಾಳೆ ಹೊರಡುವ ಮುನ್ನ ಪ್ರಕ್ಷುವಿನ ಕೈಗೆ ಕೊಟ್ಟಿರುತ್ತೇನೆ. ಅವರ ಹತ್ತಿರ ತೆಗೆದುಕೊಳ್ಳಿ" ಎಂದಳಾಕೆ.
ಬಿಟ್ಟಿ ಪೋಸ್ಟರಿಗೆ ಬಂದ ಮೊರು ಸಾವಿರದ ಲಾಭದ ಮೋಡದಲ್ಲಿ ತೇಲುತ್ತಿದ್ದ ಬೀರೇಂದ್ರ-ಮೊರನಿಗೆ ಏನೋ ಎಡವಟ್ಟಾಗುತ್ತಿದ್ದುದರ ಅನುಮಾನವೂ ಬರಲಿಲ್ಲ!
ಬೀರೇಂದ್ರ ಮಹಾನ್ ಫಟಿಂಗ ಎಂದೆ. ಅಂದೇ ರಾತ್ರಿ ಅದು ಹೇಗೋ ಜಪಾನ್ ಕೋಳಿಯೊಂದನ್ನು ಕಳ್ಳತನದಲ್ಲಿ ಸಂಪಾದಿಸಿಕೊಂಡು ಬಂದು, ತನ್ನ ಸ್ಟುಡಿಯೋದೊಳಗೆ ಕಟ್ಟಿಹಾಕಿದ್ದ. ಸಮೀಪದ ಕಾಲಾರ್ ದುಖಾನಿಕ ಸ್ಟೂಡೆಂಟ್-ಮಸಾಲಾ-ಮಾಲ್ನಿಂದ ಕದ್ದ ಮಾಲ್ ಅದು!ಮರುದಿನ ಮಧ್ಯಾಹ್ನ ಎಲ್ಲರೂ ಮಲಗಿದ್ದಾಗ ಅದನ್ನು ಕೊಂದು, ಹೀಟರಿನಿಂದ ಪ್ಲಾಸ್ಟಿಕ್ ಬಕೆಟ್ಟಿನಲ್ಲಿ ನೀರು ಕುದಿಸಿ, ಅದನ್ನು ಅದರಲ್ಲಿ ಅದ್ದಿ, ರೆಕ್ಕೆಪುಕ್ಕ ತೆಗೆದು, ಮಸಾಲ ಹಾಕಿ, ಮಧ್ಯರಾತ್ರಿಯಲ್ಲಿ ಬೇಯಿಸಿ, ಅದರ ಮರುದಿನ ತಿನ್ನುವ ಉಪಾಯವಿತ್ತು ಆತನಿಗೆ. ಇಡಿಯ ಕಲಾಭವನದಲ್ಲೇ ಬ್ಲಾಕ್ ಅಂಡ್ ವೈಟ್ ಟಿವಿ ಇದ್ದದ್ದು ಆತನ ಸ್ಟುಡಿಯೊದಲ್ಲಿಯೇ! ಮಿಕ್ಕವರ ಬಾಳಿ ಕಲರ್ ಟಿವಿ ಇತ್ತೆಂದಲ್ಲ, ಸಣ್ಣ ಬ್ಯಾಟರಿ ರೇಡಿಯೋ ಇದ್ದವರ ಠೀವಿಯೇ ಹೆಚ್ಚು ಅಲ್ಲಿ.
ಎಂಟು ಮಂದಿಯೊಂದಿಗೆ ಪ್ರಕ್ಷುಬ್ ದಾ ಬೀರೇಂದ್ರನನ್ನು ಕೋಳಿಯೊಟಕ್ಕೆ ತನ್ನ ಹಾಸ್ಟಲ್ಲಿಗೆ ಬರುವಂತೆ ಆಹ್ವಾನಿಸಿದ. "ಇಂದು ನರಿ ಮುಖ ನೋಡಿದೆ" ಎಂದುಕೊಂಡ ಬೀರೇಂದ್ರ, ಬೆಳಿಗ್ಗೆ ಮೊರು ಸಾವಿರ ರೂಗಳ ಲಾಭ, ಇನ್ನೆರೆಡು ದಿನ ಕಳ್ಳ ಜಪಾನ್ ಕೋಳಿಯ ಊಟ, ಈಗ ಬಾಡೂಟ--ಇವೆಲ್ಲವನ್ನೂ ನೆನೆಸಿಕೊಂಡು ಮೊದಲೇ ಮೋಡದಲ್ಲಿ ತೇಲುತ್ತಿದ್ದ ಆತ ಮತ್ತೂ’ ಮೊರ್’-ಅಂತಸ್ತಿನ ಮೇಲಿನ ಮೋಡಕ್ಕೆ ಜಿಗಿದು, ಬಾಡೊಟವನ್ನು ಜಿಗಿದು ಜಿಗಿದು ತಿಂದು ಮುಗಿಸಿದ.
ಊಟದ ನಂತರ ಒಂದೆರೆಡು ಬೀಡಿ ಎಳೆದು, ಸ್ಟುಡಿಯೋದಲ್ಲಿ ಕಲಾಕೃತಿ ರಚಿಸುವ ಜೋಶಿನಲ್ಲಿ ಬಂದು ನೋಡುತ್ತಾನೆ ಬೀರೇಂದ್ರ, ಬೀಗ ತೆಗೆವ ಅವಶ್ಯಕತೆಯೇ ಇಲ್ಲ! ಬೀಗ ಒಡೆದಿದೆ!
ಇವ ಕಳ್ಳತನದಲ್ಲಿ ತಂದು ಕಟ್ಟಿಹಾಕಿದ ಜಪಾನು ಕೋಳಿಯನ್ನು ಕದ್ದು ನೋಡಿದ ಮರಿಬೀರೇಂದ್ರನೊಬ್ಬ ಪ್ರಕ್ಷುಬ್ಧನಿಗೆ ಸುದ್ಧಿ ಮುಟ್ಟಿಸಿದ್ದ. ರಾತ್ರಿ ಎಂಟೂವರೆಯಿಂದ ಒಂಬತ್ತೂ ಕಾಲಿನವರೆಗೂ ಊಟದ ಮೆಸ್ಸಿನಲ್ಲಿ ಬಂಡಿಗಟ್ಟಲೆ ಉಣ್ಣುತ್ತಿದ್ದ ಬೀರೇಂದ್ರ ಕುಳಿತಿದ್ದ ಬೆಂಚಿನಿಂದ, ಆತನ ಸ್ಟುಡಿಯೋದ ತಾಣದ ಮೊಲಕ ಹುಡುಗರ ಹಾಸ್ಟೆಲಿನ ಪ್ರಕ್ಷುಬ್ ದಾನ ಕೋಣೆಯವರೆಗೂ ಎಂಟು ಮಂದಿ ವಿದ್ಯಾರ್ಥಿಗಳು ಕಾವಲು ನಿಂತುಬಿಟ್ಟಿದ್ದರು--ಬೀರೇಂದ್ರನ ಸ್ಟುಡಿಯೊದ ಬೀಗ ಮುರಿದು, ಕೋಳಿ ಕದ್ದು, ಅದನ್ನು ಅದಾಗಲೇ ಕಾದಿದ್ದ ಬಕೆಟುನೀರಿನಲ್ಲಿ ಶಿರರಹಿತವಾಗಿ ಮುಳುಗಿಸಿ, ಬೋಡು ಮಾಡಿ, ಕುಯ್ದು, ಬೇಯಿಸಿ, ಪಾತ್ರೆಗಳಲ್ಲಿ ಕೋಳಿಸಾರನ್ನು ಮುಚ್ಚಿಡುವ ತನಕ! ಅಂದರೆ ಒಟ್ಟು ಹತ್ತು ಮಂದಿಗೆ ಜಪಾನ್ ಬಾಡೂಟಕ್ಕೆ ಆಹ್ವಾನವಿತ್ತು! ಬೀರೇಂದ್ರ ಇದ್ದ ಮೋಡದಿಂದ ಕೆಳಗಿನ ಹಂತದ ಮೋಡಕ್ಕೆ ಜಿಗಿದುಬಿದ್ದಿದ್ದ!
(೬೭)
ಬೆಳಿಗ್ಗೆಯೇ, ನಾಲ್ಕು ಜಾಮೊನನ್ನು ಆರು ಬ್ರೆಡ್ ಪೀಸ್ಗಳ ನಡುವೆ ಇರಿಸಿ ಧೀರೇಂದ್ರ, ಜಪಾನ್ ಕೋಳಿಯ ದುಃಖವನ್ನು ಹಂಚಿಕೊಂಡು ತಿನ್ನುತ್ತಿರುವಾಗ, ಹತ್ತು ಜಾಮೊನಿನಷ್ಟು ಸಿಹಿ ಸುದ್ಧಿ ನೀಡಿದ ಪ್ರಕ್ಷುಬ್ಧಃ
"ಆ ಮೊರ್ಖ ಗ್ಯಾಲರಿಯಾಕೆಗೆ ಮತ್ತೂ ಹತ್ತು ಪ್ರಿಂಟ್ ಬೇಕಂತೆ. ಒಂದಕ್ಕೆ ಮೊರು ಸಾವಿರ. ಪ್ರಿಂಟನ್ನೇ ಅಸಲಿ ಎಂದುಕೊಂಡಿದ್ದಾಳಾಕೆ. ಮಧ್ಯಾಹ್ನ ಹನ್ನೆರಡು ಗಂಟೆ ಟ್ರೈನಿಗೆ ಆಕೆ ಹೋಗುತ್ತಿದ್ದಾಳೆ. ರೈಲ್ವೇ ಸ್ಟೇಷನ್ನಿನಲ್ಲಿ ಹನ್ನೊಂದುವರೆಗೆ ಆಕೆ ನಿನಗೆ ಒಂದು ಪ್ರಿಂಟಿಗೆ ಮೊರು ಸಾವಿರದಂತೆ, ಮೊವತ್ತು ಸಾವಿರ ಕೊಡಲಿದ್ದಾಳೆ. ನೆನ್ನೆಯ ಪ್ರಿಂಟ್ ಹಣವನ್ನೂ ಅಲ್ಲಿಯೇ ನೀಡುತ್ತಾಳಂತೆ. ನೀನು ತುಂಬ ಸ್ಮಾರ್ಟ್ ಅಲ್ಲವೆ. ನೋಡು ಏನು ಮಾಡುತ್ತೀಯ. ಇದೊಂದು ಸುವರ್ಣ ಅವಕಾಶ".
ಬೀರೇಂದ್- ಮೊರ್ನಿಗೆ ಪ್ರಕ್ಷುಬ್ ದಾ ಮೋಕ್ಷ ಪಡೆದವನಂತೆ ಕಾಣಲಿಲ್ಲ, ಬದಲಿಗೆ ಮೋಕ್ಷವನ್ನು ದಯಪಾಲಿಸುವ ಸಾಕ್ಷಾತ್ ದೇವರಂತೇ ಕಂಡುಬಿಟ್ಟ.
"ಪ್ರಕ್ಷುಬ್, ನೆನ್ನೆ ಜಪಾನ್ ಕೋಳಿ ಕದ್ದದ್ದನ್ನು ಮಾಫ್ ಮಾಡಿದ್ದೇನೆ. ಯಾರಿಗೂ ಕಂಪ್ಲೇಂಟ್ ಮಾಡೊದಿಲ್ಲ" ಎಂದು ಹೆನ್ರಿ ಮೊರನ ಬಿಟ್ಟಿ ಪೋಸ್ಟರ್ಗಳನ್ನು ಅಂಟಿಸಿಕೊಂಡಿದ್ದ ಸ್ಟುಡಿಯೋಗಳ ಕಡೆಗೆ ಓಡಿದ ಬೀರೇಂದ್ರ.
ಪ್ರತಿ ಸ್ಟುಡಿಯೋಕ್ಕೆ ನುಗ್ಗಿ, ಇದ್ದವರ ಬಳಿ ತಲಾ ಮುನ್ನೂರು ರೂಪಾಯಿ ಅಡ್ವಾನ್ಸ್ ಕೊಟ್ಟು, ಇನ್ನೂ ಇನ್ನೂರು ರೂಗಳನ್ನು ಸಂಜೆ ನೀಡುವುದಾಗಿ ಆಶ್ವಾಸನೆ ನೀಡಿ, ಹತ್ತರ ಬದಲು ಹದಿನೈದು ಪೋಸ್ಟರ್ಗಳನ್ನು ಸಂಗ್ರಹಿಸಿದ್ದ ಬೀರೇಂದ್ರ, ಒಂದೇ ಗಂಟೆಯಲ್ಲಿ. ಒಟ್ಟೂ ನಾಲ್ಕೂವರೆ ಸಾವಿರ ರೂಗಳನ್ನು ಖರ್ಚು ಮಾಡಿದ್ದ.
"ನಲವತ್ತೆಂಟು ಸಾವಿರ ಅಸಲು ಬರುವಾಗ, ನಾಲ್ಕೂವರೆ ಸಾವಿರ ಹೋದರೆ ನಲವತ್ತಮೊರು ಸಾವಿರ ನಿವ್ವಳ ಲಾಭ ಇಪ್ಪತ್ತನಾಲ್ಕು ಗಂಟೆಯಲ್ಲಿ" ಎಂದು ಕುಣಿದುಕೊಂಡೇ ಓಡಿದ ರೈಲು ನಿಲ್ದಾಣಕ್ಕೆ, ಸೈಕಲ್ ರಿಕ್ಷಾದಲ್ಲಿ ಹೋದರೆ ನಿಧಾನವಾಗುತ್ತದೆ ಎಂದು!
(೬೮)
ಸ್ಟೇಷನ್ನಿನಲ್ಲಿ ಮೊರ್ಖ ಗ್ಯಾಲರಿಯಾಕೆ ಸಿಕ್ಕಳು. ಮೊದಲ ಶಾಕ್: "ಒಂದೇ ಪೋಸ್ಟರ್ ಸಾಕು" ಎಂದಳು. ಎರಡನೇ ಶಾಕ್: "ಮೊರು ಸಾವಿರವನ್ನು ಪ್ರಕ್ಷುಬ್ಧನಿಗೆ ಈಗಾಗಲೇ ಕೊಟ್ಟಿದ್ದೇನೆ" ಎಂದಳು. ಮೋರನೇ ಶಾಕ್: "ಇದು ಕಲಾಕೃತಿ ಅಲ್ಲ, ಬರೀ ಬಿಟ್ಟಿ ಸಿಗೋ ಪೋಸ್ಟರ್ ಎಂದು ಪ್ರಕ್ಷು ನನಗೆ ಬಿಡಿಸಿ ಹೇಳಿದ, ಯೊ ಚೀಟ್" ಎಂದಳು. ನಾಲ್ಕನೇ ಶಾಕ್: "ಆದರೂ ಮೊರು ಸಾವಿರವನ್ನು ಪ್ರಕ್ಷುಗೆ ಕೊಟ್ಟಿದ್ದೇನೆ. ಏಕೆ ಗೊತ್ತೆ? ನೀನು ಮಾಡಿದ ಪಾಪ ಕರ್ಮಗಳನ್ನು ತೊಳೆಯಲು. ನೀನು ತಲಾ ಮುನ್ನೂರು ಕೊಟ್ಟು ಕೊಂಡಿರುವ ಪೋಸ್ಟರುಗಳಿಗೆ ನಿನಗೆ ಹಣ ವಾಪಸ್ ದೊರಕದು. ಒಟ್ಟೂ ನಿನ್ನ ಇಪ್ಪತ್ತನಾಲ್ಕು ಗಂಟೆಗಳ ಲಾಸ್: ನಾಲ್ಕೂವರೆ ಸಾವಿರ ರೂಗಳು" ಎಂದಳು. ಅಂತಿಮ ಶಾಕ್: "ನಿನ್ನ ಹತ್ತಿರ ಹಣ ಕೊಟ್ಟು ವಂಚಿತರಾದವರ ಗೋಳು ನೋಡಲಾಗದೆ ಸ್ವತಃ ಪ್ರಕ್ಷುಬ್ದನೇ ನನ್ನನ್ನು ಫೋನ್ ಮಾಡಿಸಿ ಕಲ್ಕತ್ತದಿಂದ ಕರೆಸಿದ್ದ. ಮತ್ತೆಂದೂ ಹೀಗೆ ಮಾಡೀಯೆ ಹುಷಾರ್" ಎಂದಳು!!
ಬೀರೇಂದ್ರನ ಮೋಡಗಳೆಲ್ಲ ಕರಗಿ, ತನ್ನ ಸ್ಟುಡಿಯೋದೊಳಗಿನ ಜಪಾನ್ ಕೋಳಿಯ ರೆಕ್ಕೆಪುಕ್ಕಗಳಿಂದಾವೃತ್ತವಾದ ರೆಡ್ ಆಕ್ಸೈಡ್ ನೆಲದ ಮೇಲೆ ಮಲಗಿದಾತ ಹೊರಗೆ ಬಂದದ್ದು ಎರಡು ದಿನಗಳ ನಂತರವೇ. ಮಾನಸಿಕವಾಗಿ ಈ ಶಾಕ್ನಿಂದ ಹೊರಗೆ ಬಂದನೋ ಇಲ್ಲವೋ ಗ್ಯಾರಂಟಿ ಇಲ್ಲ!//