ಒಂಟೆ ಎಂಬ ಮರಳುಗಾಡಿನ ಹಡಗು !
ಬಾಲ್ಯದಿಂದಲೂ ಒಂಟೆ ಎನ್ನುವ ಪ್ರಾಣಿಯ ಬಗ್ಗೆ ತಿಳಿದುಕೊಳ್ಳುವಾಗ ಅಥವಾ ಪಾಠದಲ್ಲಿ ಒಂಟೆಯ ಬಗ್ಗೆ ಉಲ್ಲೇಖಗಳು ಬಂದಾಗ 'ಮರಳುಗಾಡಿನ ಹಡಗು' ಎನ್ನುವ ವಾಕ್ಯವೊಂದು ಬಂದೇ ಬರುತ್ತದೆ. ಯಾವ ಕಾರಣಕ್ಕಾಗಿ ಒಂಟೆಯನ್ನು ಮರಳುಗಾಡಿನ ಹಡಗು ಎನ್ನುತ್ತಾರೆ ಗೊತ್ತೇ? ಒಂಟೆಯ ಬಗ್ಗೆ ಇರುವ ಹಲವಾರು ಸ್ವಾರಸ್ಯಕರವಾದ ಸಂಗತಿಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.
ಮರುಭೂಮಿಯಲ್ಲಿ ಗಟ್ಟಿಯಾದ ನೆಲ ಇರುವುದು ಕಡಿಮೆ. ಅದು ಮರಳುಗಾಡು. ಈ ನೆಲದಲ್ಲಿ ಸಂಚರಿಸಲು ಒಂಟೆ ಸೂಕ್ತವಾದ ಪ್ರಾಣಿಯಾಗಿದೆ. ಆದರ ದೇಹರಚನೆ ಮತ್ತು ಚಯಾಪಚಯ ಕ್ರಿಯೆಗಳ ವಿಧಾನವು ನೀರು ಮತ್ತು ಆಹಾರದ ಅಲಭ್ಯತೆಯ ಸಮಯದಲ್ಲೂ ತೊಂದರೆಯಾಗದಂತೆ ನಿರ್ಮಾಣಗೊಂಡಿದೆ. ಒಂಟೆಗಳ ಕಾಲಿನ ಬೆರಳುಗಳು ಅಗಲವಾಗಿರುವುದರಿಂದ ಮತ್ತು ಎರಡು ಬೆರಳುಗಳ ನಡುವೆ ದಪ್ಪನೆಯ ಹೆಣಿಗೆಯಂತಹ ರಚನೆಗಳಿರುವುದರಿಂದ ಮರಳಿನಲ್ಲಿ ನಡೆಯುವಾಗ ಕಾಲಿನ ಅಡಿ ಭಾಗವು ಬಿಸಿಯಾದ ಮರಳು ಕಾಲನ್ನು ಸುಡುವುದರಿಂದ ರಕ್ಷಣೆ ನೀಡುತ್ತದೆ. ಮರಳುಗಾಡಿನಲ್ಲಿ ಒಂದೊಂದು ಸಮಯ ಒಂದೊಂದು ರೀತಿಯ ವಾತಾವರಣವಿರುತ್ತದೆ. ಇಲ್ಲಿ ಸಂಚಾರ ಮಾಡುವಾಗ ಹಲವಾರು ಸಮಯದವರೆಗೆ ಆಹಾರ, ನೀರು ಸಿಗದೇ ಇರುವ ಸಾಧ್ಯತೆಯೂ ಇದೆ. ಹಗಲಿನಲ್ಲಿ ವಿಪರೀತ ಸೆಖೆ, ರಾತ್ರಿ ವಿಪರೀತ ಚಳಿಯ ವಾತಾವರಣ ಇರುತ್ತದೆ. ಬಿಸಿಯಾದ ಗಾಳಿ, ಮರಳನ್ನು ಹೊತ್ತೊಯ್ಯುವ ಬಿರುಗಾಳಿ ಇವೆಲ್ಲವನ್ನೂ ಎದುರಿಸಲು ಒಂಟೆ ಸಶಕ್ತವಾಗಿದೆ.
* ಮರಳಿನ ಬಿರುಗಾಳಿ ಎದ್ದಾಗ ಆ ಮರಳಿನ ಕಣಗಳು ಕಣ್ಣಿನ ಒಳಗೆ ಪ್ರವೇಶಿಸದಂತೆ ಒಂಟೆಗಳಿಗೆ ಮೂರು ಜತೆ ಕಣ್ಣಿನ ರೆಪ್ಪೆಗಳಿವೆ. ಇದರ ಜೊತೆ ಎರಡು ಜೊತೆ ಹುಬ್ಬುಗಳಿವೆ. ಒಂಟೆ ಏನಾದರೂ ಬ್ಯೂಟಿ ಪಾರ್ಲರ್ ಹೋದರೆ ಎರಡೆರಡು ಹುಬ್ಬುಗಳಿರುವುದರಿಂದ 'ಐಬ್ರೋ' ಮಾಡಿಸಿಕೊಳ್ಳುವುದು ವಿಪರೀತ ದುಬಾರಿಯಾದೀತು, ಅಲ್ಲವೇ?! ಜೋರಾದ ಸುಳಿಗಾಳಿ ಎದ್ದಾಗ ಮರಳು ಮೂಗಿನ ಒಳಗೆ ಪ್ರವೇಶಿಸದಂತೆ ತಡೆಯಲು ಒಂಟೆಗಳು ತಮ್ಮ ಮೂಗನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುತ್ತವೆ.
* ಮರಳುಗಾಡಿನ ಸಸ್ಯಗಳು ಸಣ್ಣ ಸಣ್ಣದಾದ ಎಲೆಗಳನ್ನು ಹೊಂದಿರುತ್ತವೆ. ಇದರ ಜೊತೆಗೆ ಮುಳ್ಳುಗಳೂ ಇರುವ ಸಾಧ್ಯತೆ ಇದೆ. ಈ ಕಾರಣದಿಂದ ಇಂತಹ ಸಸ್ಯಗಳ ಎಲೆಗಳನ್ನು ತಿನ್ನುವಾಗ ಗಾಯಗಳಾಗದಂತೆ ತಡೆಯಲು ದಪ್ಪವಾದ ತುಟಿಗಳನ್ನು ಒಂಟೆ ಹೊಂದಿರುತ್ತದೆ.
* ಒಂಟೆಗಳ ಚರ್ಮವು ಬಹಳ ದಪ್ಪವಾಗಿರುವುದರಿಂದ ಬಿಸಿಲಿನ ಧಗೆಯನ್ನು ತಡೆದುಕೊಳ್ಳಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಮೊಣಕಾಲುಗಳ ಹಾಗೂ ಎದೆಯ ಚರ್ಮ ಬಹಳ ದಪ್ಪವಾಗಿರುವುದರಿಂದ ಒಂಟೆಗಳು ಆರಾಮವಾಗಿ ಬಿಸಿಯಾದ ಮರಳಿನ ಮೇಲೂ ಕುಳಿತುಕೊಳ್ಳುತ್ತದೆ.
* ಒಂಟೆಗಳು 'ಫೇಮಸ್' ಆಗಿರುವುದು ಅದರ ಬೆನ್ನಿನ ಮೇಲಿರುವ ಡುಬ್ಬಕ್ಕೆ. ಸಣ್ಣವರಿರುವಾಗ ಈ ಡುಬ್ಬಗಳ ಬಗ್ಗೆ ಹಲವಾರು ಮಿಥ್ಯ ಕಥೆಗಳಿದ್ದವು. ಇದರ ಒಳಗೆ ಒಂಟೆಗಳು ಯಥೇಚ್ಛವಾದ ನೀರು ಸಂಗ್ರಹ ಮಾಡಿಕೊಳ್ಳುತ್ತದೆ. ನಂತರ ಬಾಯಾರಿಕೆಯಾದಾಗ ಇದರಿಂದ ನೀರನ್ನು ಬಳಸಿಕೊಳ್ಳುತ್ತದೆ. ಇದು ಒಂದು ರೀತಿಯಲ್ಲಿ ಅರ್ಧ ಸತ್ಯ ಸಂಗತಿ. ನಿಜವಾಗಿ ಒಂಟೆಯ ಡುಬ್ಬದಲ್ಲಿರುವುದು ನೀರು ಅಲ್ಲ, ಅದರ ಒಳಗಿರುವುದು ಸುಮಾರು ನಲವತ್ತರಿಂದ ಐವತ್ತು ಕಿಲೋಗ್ರಾಂ ನಷ್ಟು ಕೊಬ್ಬು. ಬಹಳ ಸಮಯದವರೆಗೆ ಒಂಟೆಗೆ ಆಹಾರ ಮತ್ತು ನೀರು ಸಿಗದೇ ಹೋದರೆ ಅದು ಈ ಕೊಬ್ಬನ್ನು ಕರಗಿಸಿಕೊಂಡು ನೀರು ಮತ್ತು ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಹೀಗೆ ಕೊಬ್ಬು ಬಳಕೆಯಾಗುವಾಗ ಅದರ ಡುಬ್ಬದ ಗಾತ್ರ ಕಡಿಮೆಯಾಗುತ್ತಾ ಹೋಗುತ್ತದೆ. ಉತ್ತಮ ಆಹಾರ ಮತ್ತು ನೀರು ದೊರೆತಾಗ ಮತ್ತೆ ಮೂಲ ರೂಪಕ್ಕೆ ಈ ಡುಬ್ಬಗಳು ಮರಳುತ್ತವೆ. ನೀರು ದೊರೆತಾಗ ಒಂದೇ ಬಾರಿಗೆ ನೂರು ಲೀಟರ್ ನಷ್ಟು ನೀರನ್ನು ಕುಡಿಯಬಲ್ಲದು. ಅದೂ ಕೇವಲ ಹತ್ತರಿಂದ ಹನ್ನೆರಡು ನಿಮಿಷಗಳ ಒಳಗೆ. ಒಂಟೆಯ ಡುಬ್ಬವು ಕೊಬ್ಬನ್ನು ಶೇಖರಿಸಿಕೊಳ್ಳುವ ಕೆಲಸವನ್ನು ಮಾತ್ರ ಮಾಡುವುದಲ್ಲ, ಅದು ದೇಹದ ಉಷ್ಣತೆಯನ್ನು ಕಾಪಾಡುವ ಕೆಲಸವನ್ನೂ ಮಾಡುತ್ತದೆ. ಮರಳುಗಾಡಿನಲ್ಲಿ ವಿಪರೀತ ಸೆಖೆ ಹಾಗೂ ಚಳಿಯ ವಾತಾವರಣವಿರುವ ಸಮಯದಲ್ಲಿ ತನ್ನ ದೇಹದ ಉಷ್ಣತೆಯನ್ನು ಈ ಡುಬ್ಬದಲ್ಲಿರುವ ಕೊಬ್ಬಿನ ಸಹಾಯದಿಂದ ಹೊಂದಿಸಿಕೊಳ್ಳುತ್ತದೆ. ಚಳಿಗಾಲದಲ್ಲಿ ಐದಾರು ತಿಂಗಳವರೆಗೆ ಹಾಗೂ ಬಿರು ಬೇಸಿಗೆಯಲ್ಲಿ ಒಂದು ವಾರದ ವರೆಗೆ ಇವುಗಳು ನೀರನ್ನು ಕುಡಿಯದೇ ಬದುಕಬಲ್ಲವು. ಎರಡು ಡುಬ್ಬಗಳನ್ನು ಹೊಂದಿದ ಒಂಟೆಗಳೂ ಇವೆ.
* ಒಂಟೆಗಳು ಮರಳುಗಾಡಿನಲ್ಲಿ ಪ್ರತೀ ಗಂಟೆಗೆ ಅರವತ್ತು ಕಿ ಮೀ ವೇಗದಲ್ಲಿ ನಡೆಯಬಲ್ಲವು. ಅರಬ್ ರಾಷ್ಟ್ರಗಳಲ್ಲಿ ಒಂಟೆಗಳ ಓಟದ ಸ್ಪರ್ಧೆಯೂ ನಡೆಯುತ್ತದೆ. ಸುಮಾರು ಐದು ಕ್ವಿಂಟಾಲ್ ತೂಕವನ್ನು ಹೊತ್ತುಕೊಂಡು ದಿನವೊಂದಕ್ಕೆ ನಲವತ್ತು ಕಿಮೀ ನಡೆಯುವ ಸಾಮರ್ಥ್ಯವೂ ಒಂಟೆಗಿದೆ.
* ಒಂಟೆ ಅಪಾಯಕಾರಿ ಪ್ರಾಣಿಗಳಲ್ಲ. ಕುದುರೆಗಳಂತೆ ಒಂಟೆಯನ್ನು ಸವಾರಿಗೆ ಮಾನವ ಬಳಸುತ್ತಾ ಬಂದಿದ್ದಾನೆ. ಒಂಟೆಯ ಉಗುಳುವಿಕೆ ಮಾತ್ರ ತುಂಬಾನೇ ಅಪಾಯಕಾರಿ, ಅದು ಕಿರಿಕಿರಿಯಾದರೆ, ಗಾಬರಿಯಾದರೆ ಅಥವಾ ಅಪಾಯದ ಸಂದರ್ಭ ಎದುರಾದರೆ ಜೋರಾಗಿ ಉಗುಳುತ್ತದೆ. ಈ ಉಗುಳಿನಲ್ಲಿ ನಮ್ಮಂತೆ ಕೇವಲ ಜೊಲ್ಲು ಮಾತ್ರ ಬಾರದೇ ಹೊಟ್ಟೆಯಲ್ಲಿ ಜೀರ್ಣವಾಗದೇ ಉಳಿದ ಆಹಾರ ವಸ್ತುಗಳೂ ಬರುತ್ತವೆ. ಹಾಗಾಗಿ ಒಂಟೆ ಉಗುಳುವಾಗ ಅದರ ಎದುರು ಹೋಗುವುದು ತೀರಾ ಅಸಹ್ಯಕರವಾಗಿರುತ್ತದೆ.
* ಒಂಟೆಯ ಹಾಲು ಅತ್ಯಂತ ಪೌಷ್ಟಿಕದಾಯಕ ಹಾಗೂ ಸ್ವಾದಿಷ್ಟವಾಗಿರುತ್ತದೆ. ಆಕಳ ಹಾಲಿಗೆ ಹೋಲಿಸಿದರೆ ಕೊಬ್ಬಿನ ಅಂಶ ಕಡಿಮೆ. ಒಂಟೆ ಹಾಲಿನ ಸೇವನೆಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಹಾಲು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ. ರಕ್ತಪರಿಚಲನೆ ಸರಾಗವಾಗಿ ಆಗುತ್ತದೆ. ಈಗಾಗಲೇ ಒಂಟೆ ಹಾಲನ್ನು ಕೆಲವು ಕಂಪೆನಿಗಳು ಪ್ಯಾಕೇಟ್ ರೂಪದಲ್ಲಿ ಮಾರುಕಟ್ಟೆಗೆ ತಂದಿವೆ.
(ಮಾಹಿತಿ: ಸೂತ್ರ ಪತ್ರಿಕೆ)
ಚಿತ್ರ ಕೃಪೆ: ಅಂತರ್ಜಾಲ ತಾಣ