ಒಂದನ್ನು ಎರಡಾಗಿಸುವ ಮ್ಯಾಜಿಕ್ ಹಂಡೆ

ಒಂದನ್ನು ಎರಡಾಗಿಸುವ ಮ್ಯಾಜಿಕ್ ಹಂಡೆ

ಧೂಮಪ್ಪ ಮತ್ತು ಅವನ ಪತ್ನಿ ದ್ಯಾಮವ್ವ ಬಡವರು, ಶ್ರಮಜೀವಿಗಳು. ಪರ್ವತದ ತಪ್ಪಲಿನ ಹಳ್ಳಿಯೊಂದರಲ್ಲಿತ್ತು ಅವರ ಪುಟ್ಟ ಮನೆ. ತಮ್ಮ ಪುಟ್ಟ ಜಮೀನಿನಲ್ಲಿ ಅವರು ತಮಗೆ ಸಾಕಷ್ಟು ತರಕಾರಿಗಳನ್ನು ಬೆಳೆಸಿ ಬದುಕುತ್ತಿದ್ದರು.

ಅದೊಂದು ದಿನ ಧೂಮಪ್ಪ ತನ್ನ ಜಮೀನಿನಲ್ಲಿ ಅಗೆಯುತ್ತಿದ್ದಾಗ ಆತನಿಗೆ ದೊಡ್ಡ ಹಿತ್ತಾಳೆಯ ಹಂಡೆಯೊಂದು ಕಾಣಿಸಿತು. ಅದರ ಸುತ್ತಲಿನ ಮಣ್ಣನ್ನು ಸಡಿಲಿಸಿ ಆತ ಅದನ್ನು ಹೊರತೆಗೆದ. ಅದು ಖಾಲಿಯಾಗಿದ್ದನ್ನು ಕಂಡು ಆತನಿಗೆ ನಿರಾಶೆ. ತನ್ನ ಪತ್ನಿಗೆ ಇದು ಯಾವುದಾದರೂ ಕೆಲಸಕ್ಕೆ ಬಂದೀತು ಎಂದವನು ಯೋಚಿಸಿದ. ಹಾಗಾಗಿ ಅದನ್ನು ಕಷ್ಟ ಪಟ್ಟು ಎತ್ತಿಕೊಂಡ. ಆಗ ಅವನ ಹಣದ ಪರ್ಸ್ ನೆಲಕ್ಕೆ ಬಿತ್ತು. ಧೂಮಪ್ಪ ಅದನ್ನೆತ್ತಿ ಹಂಡೆಯೊಳಗೆ ಹಾಕಿ ಮನೆಯತ್ತ ನಡೆದ.

ಅದನ್ನು ಕಂಡ ದ್ಯಾಮವ್ವ ಕೇಳಿದಳು, “ಇದೇನು? ಇದನ್ನು ಎಲ್ಲಿಂದ ತಂದೆ?” ಧೂಮಪ್ಪ ಉತ್ತರಿಸಿದ, “ಇದು ನಮ್ಮ ತರಕಾರಿ ಹೊಲದಲ್ಲಿತ್ತು. ಇದು ಅಡುಗೆ ಮಾಡಲಿಕ್ಕಾಗದಷ್ಟು ದೊಡ್ಡದಾಗಿದೆ ಮತ್ತು ಸ್ನಾನ ಮಾಡಲಿಕ್ಕಾಗದಷ್ಟು ಸಣ್ಣದಾಗಿದೆ. ಆದರೂ ಏನಾದರೂ ಉಪಯೋಗಕ್ಕೆ ಬಂದೀತೆಂದು ತಂದಿದ್ದೇನೆ. ನನ್ನ ಹಣದ ಪರ್ಸ್ ಅದರೊಳಗಿದೆ.”

ದ್ಯಾಮವ್ವ ಬಾಗಿ ಹಂಡೆಯೊಳಗೆ ಇಣುಕಿದಳು. ಆಗ ಅವಳ ಹೇರ್-ಪಿನ್ ಹಂಡೆಯೊಳಗೆ ಬಿತ್ತು. ಅದನ್ನು ಎತ್ತಿಕೊಳ್ಳಲು ಕೈಚಾಚಿದ ಅವಳು ಅಚ್ಚರಿಯಿಂದ “ಓ, ನೋಡಿಲ್ಲಿ” ಎಂದು ಗಂಡನನ್ನು ಕರೆದು ಹೇಳಿದಳು. “ಇದೇನಪ್ಪಾ! ನನ್ನ ಹೇರ್-ಪಿನ್ ಮತ್ತು ನಿನ್ನ ಹಣದ ಪರ್ಸ್ ಎತ್ತಿಕೊಳ್ಳಲಿಕ್ಕಾಗಿ ನಾನು ಹಂಡೆಯೊಳಗೆ ಕೈಹಾಕಿದೆ. ಇಗೋ ನೋಡಿಲ್ಲಿ, ನನ್ನ ಕೈಗೆ ಎರಡು ಹೇರ್-ಪಿನ್ ಮತ್ತು ಎರಡು ಹಣದ ಪರ್ಸ್ ಸಿಕ್ಕಿವೆ!”

“ಹೌದೇನು? ಈಗಲೇ ಎರಡೂ ಪರ್ಸ್ ತೆರೆದು ನೋಡು. ಒಂದು ಪರ್ಸ್ ಖಾಲಿಯಾಗಿದೆಯಾ ನೋಡು” ಎಂದು ಉದ್ವೇಗದಿಂದ ಕೂಗಿದ ಧೂಮಪ್ಪ. ಎರಡೂ ಪರ್ಸುಗಳಲ್ಲಿ ಸಮಾನ ಮೊತ್ತದ ಹಣವಿತ್ತು! ಅದನ್ನು ಕಂಡು ಅವರಿಗೆ ಅಚ್ಚರಿಯೋ ಅಚ್ಚರಿ. “ಇದನ್ನು ನಂಬಲಾಗುತ್ತಿಲ್ಲ. ಈಗ ನಮಗೆ ಎರಡು ಪಟ್ಟು ಹಣ ಸಿಕ್ಕಿದೆ ಮತ್ತು ಎರಡು ಹೇರ್-ಪಿನ್ ಸಿಕ್ಕಿವೆ” ಎಂದಳು ದ್ಯಾಮವ್ವ.

ಅನಂತರ ಒಂದು ಗಂಟೆಯ ಹೊತ್ತು ಅವರು ಹಲವಾರು ವಸ್ತುಗಳನ್ನು ಆ ಮ್ಯಾಜಿಕ್ ಹಂಡೆಯೊಳಗೆ ಹಾಕಿದರು. ಧೂಮಪ್ಪ ತನ್ನ ಒಳ್ಳೆಯ ಕೋಟು ಹಾಕಿದಾಗ ಎರಡು ಕೋಟುಗಳು ಸಿಕ್ಕವು. ದ್ಯಾಮವ್ವ ಒಂದು ಕಂಬಳಿ ಹಾಕಿ, ಎರಡು ಕಂಬಳಿ ಹೊರತೆಗೆದಳು. ಅದರೊಳಗೆ ಏನು ಹಾಕಿದರೂ ಅದು ಎರಡಾಗುತ್ತಿತ್ತು!

ಅಷ್ಟಾಗುವಾಗ ಧೂಮಪ್ಪ ಹೇಳಿದ, “ನಾವೀಗ ಹಣದ ಪರ್ಸನ್ನು ಮತ್ತೆಮತ್ತೆ ಹಂಡೆಯೊಳಗೆ ಹಾಕಿ ತೆಗೆಯೋಣ. ಹಾಗೆ ಮಾಡಿದರೆ, ನಾಳೆ ಬೆಳಗಾಗುವಾಗ ನಮಗೆ ಬೇಕಾದ್ದನ್ನೆಲ್ಲ ಖರೀದಿ ಮಾಡಲಿಕ್ಕೆ ಬೇಕಾದಷ್ಟು ಹಣ ನಮಗೆ ಸಿಗ್ತದೆ.” ಪುನಃ ಹಣದ ಪರ್ಸನ್ನು ಹಂಡೆಯೊಳಗೆ ಹಾಕಿದಾಗ, ಅದು ಹಣದ ಸಹಿತ ಎರಡಾಯಿತು. ಎರಡೂ ಪರ್ಸುಗಳಲ್ಲಿದ್ದ ಹಣವನ್ನು ಒಂದೇ ಪರ್ಸಿಗೆ ಹಾಕಿ, ದ್ಯಾಮವ್ವ ಅದನ್ನು ಮತ್ತೆ ಹಂಡೆಯೊಳಗೆ ಹಾಕಿದಳು; ಅದೂ ಎರಡಾಯಿತು. ಹೀಗೆ ಮಾಡುತ್ತಮಾಡುತ್ತಾ ಮಧ್ಯರಾತ್ರಿಯ ಹೊತ್ತಿಗೆ ಅವರು ಹಣವನ್ನು ರಾಶಿ ಹಾಕಿಕೊಂಡರು!

ಮರುದಿನ ಬೆಳಗ್ಗೆ ದೊಡ್ಡ ಚೀಲದಲ್ಲಿ ಹಣ ತುಂಬಿಸಿಕೊಂಡು ಧೂಮಪ್ಪ ಮಾರುಕಟ್ಟೆಗೆ ಹೊರಟ. ಕಳೆದ ಮೂವತ್ತು ವರುಷಗಳಲ್ಲಿ ಖರೀದಿ ಮಾಡಿದ್ದಕ್ಕಿಂತ ಜಾಸ್ತಿ ಮನೆಬಳಕೆಯ ವಸ್ತುಗಳನ್ನು ಒಂದೇಟಿಗೆ ಖರೀದಿ ಮಾಡಿ ಮನೆಗೆ ಮರಳಿದ.

ಮನೆಯೊಳಗೆ ಬರುತ್ತಿದ್ದಂತೆ ಧೂಮಪ್ಪ "ದ್ಯಾಮವ್ವ, ನೋಡಿಲ್ಲಿ. ಏನೆಲ್ಲ ತಂದಿದ್ದೇನೆ ನೋಡು” ಎಂದು ಕೂಗಿದ. ಮ್ಯಾಜಿಕ್ ಹಂಡೆಯನ್ನೇ ದಿಟ್ಟಿಸಿ ನೋಡುತ್ತಿದ್ದ ದ್ಯಾಮವ್ವ ಫಕ್ಕನೆ ಬಾಗಿಲಿನತ್ತ ತಿರುಗಿದಾಗ ಆಯತಪ್ಪಿ ಹಂಡೆಯೊಳಗೇ ಬಿದ್ದಳು! “ಅಯ್ಯೊಯ್ಯೋ, ಏನು ಮಾಡಿಕೊಂಡೆ!" ಎನ್ನುತ್ತಾ ಧೂಮಪ್ಪ ಹಂಡೆಯ ಹತ್ತಿರ ಧಾವಿಸಿ ಬಂದು ದ್ಯಾಮವ್ವನನ್ನು ಹೊರಗೆಳೆದ. ಅಷ್ಟರಲ್ಲಿ ಆ ಹಂಡೆಯೊಳಗಿಂದ ಇನ್ನೆರಡು ಕಾಲುಗಳು ಹೊರಚಾಚಿದವು. ಅಲ್ಲಿದ್ದಳು ಇನ್ನೊಬ್ಬಳು ದ್ಯಾಮವ್ವ! ಅವಳನ್ನೂ ಹೊರಗೆಳೆದ ಧೂಮಪ್ಪ.
ಎರಡನೆಯ ದ್ಯಾಮವ್ವನನ್ನು ಕಂಡು ಮೊದಲನೆಯ ದ್ಯಾಮವ್ವ ಕಿರುಚಿದಳು, “ಇದು ಸಾಧ್ಯವೇ ಇಲ್ಲ. ಈ ಮನೆಯಲ್ಲಿ ಎರಡನೆಯ ದ್ಯಾಮವ್ವ ಇರಲು ಸಾಧ್ಯವೇ ಇಲ್ಲ. ಇವಳನ್ನು ಈಗಲೇ ಹಂಡೆಯೊಳಗೆ ಹಾಕು.”

“ಏನು ಮಾತಾಡುತ್ತಿದ್ದಿ ನೀನು? ಇವಳನ್ನು ಪುನಃ ಹಂಡೆಯೊಳಗೆ ಹಾಕಿ ಇನ್ನೂ ಇಬ್ಬರು ದ್ಯಾಮವ್ವರನ್ನು ಹೊರ ತೆಗೆಯಬೇಕೇ? ಎರಡು ಹೆಂಡತಿಯರೇ ಬೇಡ ಅಂತಿರುವಾಗ ಮೂವರನ್ನು ಇಟ್ಟುಕೊಂಡು ನಾನೇನು ಮಾಡಲಿ?” ಕೇಳಿದ ಧೂಮಪ್ಪ.

ಅಷ್ಟರಲ್ಲಿ ಧೂಮಪ್ಪನೂ ಆಯತಪ್ಪಿ ಆ ಹಂಡೆಯೊಳಗೆ ಬಿದ್ದ! ಇಬ್ಬರು ದ್ಯಾಮವ್ವರೂ ನುಗ್ಗಿ ಬಂದು ಧೂಮಪ್ಪನನ್ನು ಹಂಡೆಯಿಂದ ಹೊರಗೆಳೆದಾಗ ಅದರಿಂದ ಇನ್ನೊಬ್ಬ ಧೂಮಪ್ಪ ಮೇಲೆದ್ದ! ಮೊದಲನೇ ಧೂಮಪ್ಪನಿಗೆ ತಲೆಕೆಟ್ಟು ಹೋಯಿತು.

ಆಗ ಮೊದಲನೇ ದ್ಯಾಮವ್ವ ತಲೆ ಕೊಡವಿಕೊಳ್ಳುತ್ತಾ ಹೇಳಿದಳು, “ಇಲ್ಲಿ ಕೇಳಿ. ಈಗ ನಿನ್ನ ತದ್ರೂಪ ಮತ್ತು ನನ್ನದೂ ತದ್ರೂಪ ಇರೋದು ಒಳ್ಳೆಯದೇ ಆಯಿತು. ನಾವಿಬ್ಬರು ಮೊದಲಿನಂತೆಯೇ ಬದುಕೋಣ. ಈ ಹೊಸ ದಂಪತಿ ಇಲ್ಲೇ ಪಕ್ಕದಲ್ಲಿ ಇನ್ನೊಂದು ಮನೆ ಕಟ್ಟಿಕೊಂಡು ವಾಸ ಮಾಡಲಿ.”

ಅವರಿಗೆ ಬೇರೆ ಪರಿಹಾರವೇ ಇರಲಿಲ್ಲ, ಅಲ್ಲವೇ? ಅಂತೂ ಹಳೆಯ ಧೂಮಪ್ಪ-ದ್ಯಾಮವ್ವ ದಂಪತಿ ತಮ್ಮಲ್ಲಿದ್ದ ಹಣದಿಂದ ಹೊಸ ಮನೆ ಕಟ್ಟಿಸಿಕೊಂಡರು. ಹೊಸ ಧೂಮಪ್ಪ-ದ್ಯಾಮವ್ವ ದಂಪತಿಗೆ ಪಕ್ಕದಲ್ಲೇ ಅಂತಹದೇ ಇನ್ನೊಂದು ಮನೆ ಕಟ್ಟಿಸಿಕೊಟ್ಟರು. ತಮ್ಮ ಮನೆಗೆ ಏನನ್ನು ಖರೀದಿಸಿ ತಂದರೂ ಅದನ್ನು ಮ್ಯಾಜಿಕ್ ಹಂಡೆಯೊಳಗೆ ಹಾಕುತ್ತಿದ್ದರು; ಅದು ಎರಡಾಗುತ್ತಿತ್ತು. ಎರಡನೆಯದನ್ನು ಹೊಸ ದಂಪತಿಗೆ ಕೊಡುತ್ತಿದ್ದರು.

ಅಕ್ಕಪಕ್ಕದ ಮನೆಯವರಿಗೆ ಧೂಮಪ್ಪ-ದ್ಯಾಮವ್ವ ದಂಪತಿ ರಾತ್ರಿಬೆಳಗಾಗ ಬೇಕಾದರೆ ಶ್ರೀಮಂತರಾದದ್ದನ್ನು ಕಂಡು ಆಶ್ಚರ್ಯ. ಅವರ ಮನೆಯ ಪಕ್ಕದಲ್ಲೇ ಹೊಸಮನೆಯಲ್ಲಿ ತದ್ರೂಪಿ ದಂಪತಿಗಳನ್ನು ಕಂಡು ಇನ್ನೂ ಆಶ್ಚರ್ಯ. ಹೊಸ-ದಂಪತಿ ತಮ್ಮ ಹತ್ತಿರದ ಸಂಬಂಧಿಗಳೆಂದು ಅಕ್ಕಪಕ್ಕದವರಿಗೆ ಸಮಜಾಯಿಷಿ ಕೊಟ್ಟುಕೊಟ್ಟು ಹಳೆಯ ಧೂಮಪ್ಪ-ದ್ಯಾಮವ್ವ ದಂಪತಿಗೆ ಸಾಕೋಸಾಕಾಯಿತು.