ಒಂದಾನೊಂದು ಕಾಲದಲ್ಲಿ

ಒಂದಾನೊಂದು ಕಾಲದಲ್ಲಿ

ಮಗ : ಅಪ್ಪ..ಅಪ್ಪ..ಒಂದು ಕಥೆ ಹೇಳಪ್ಪ.

ತಂದೆ : ಸರಿ ಒಂದು ರಾಜನ ಕಥೆ ಹೇಳ್ತೀನಿ...

ಒಂದಾನೊಂದು ಕಾಲದಲ್ಲಿ ಕುಮಾರ ಅಂತ ಒಬ್ಬ ರಾಜ ಇದ್ದ.  ಆತನಿಗೆ ಯಡ್ಡಿ ಎಂಬ ಒಬ್ಬ ಉತ್ತರಾಧಿಕಾರಿಯೂ ಇದ್ದ. ಅವರಿಬ್ಬರ ಮಧ್ಯೆ ಒಂದು ಒಪ್ಪಂದ ಆಗಿತ್ತು. ಎರಡೂವರೆ ವರ್ಷದ ನಂತರ ಯಡ್ಡಿಗೆ ಪದವಿ ಒಪ್ಪಿಸಿ ರಾಜನಾದ ಕುಮಾರನು ಉತ್ತರಾಧಿಕಾರಿಯ ಸ್ಥಾನಕ್ಕೆ ಬರುವುದು ಎಂದು. ಸರಿ ಕುಮಾರನು ರಾಜ್ಯಭಾರ ಶುರುಮಾಡಿದ. ಇದ್ದದ್ದರಲ್ಲೇ ಕುಮಾರನು ಅಲ್ಪ ಸ್ವಲ್ಪ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಅವಾಗವಾಗ ಕುದುರೆಯ ಮೇಲೇರಿ  ತನ್ನ  ಪ್ರಾಂತ್ಯದ ನಿವಾಸಿಗಳ ಮನೆಗಳಿಗೆ ತೆರಳಿ ವಾಸ್ತವ್ಯ ಹೂಡಿ ಅವರ ಮನೆಯಲ್ಲಿ ಆತಿಥ್ಯ ಪಡೆದುಕೊಂಡು ಗಡದ್ದಾಗಿ ನಿದ್ದೆ ಹೊಡೆದು ಎದ್ದು ಬಂದು ಬಿಡುತ್ತಿದ್ದನು.

ಮಗ: ಅಪ್ಪ ರಾಜನಿಗೆ ಆತಿಥ್ಯ ಮಾಡುವ ಅಷ್ಟು ಸಿರಿವಂತರಾ ಅವರ ಪ್ರಾಂತ್ಯದ ನಿವಾಸಿಗಳು?

ಅಪ್ಪ : ಇಲ್ಲಪ್ಪ ಏನೋ ರಾಜ ನಮ್ಮ ಮನೆಗೆ ಬಂದು ಊಟ ಮಾಡಿದರೆ ಮುಂದೊಮ್ಮೆ ನಮಗೆ ಸಹಾಯ ನೀಡಬಹುದು ಎಂಬ ಕನಸಿನಿಂದ ಸಾಲ ಸೋಲ ಮಾಡಿ ತಮ್ಮ ಮನೆಗಳನ್ನು ಸಿಂಗರಿಸಿ ಆತನಿಗೆ ಸಕಲ ಸವಲತ್ತುಗಳನ್ನು ನೀಡಿ ತಾವುಗಳು ಮನೆ ಆಚೆ ಮಲಗುತ್ತಿದ್ದರು. ಆದರೆ ಈ ರಾಜ ಅಲ್ಲಿಂದ ವಾಪಸ್ ಬಂದ ನಂತರ ಅವರನ್ನು ಅವರ ಮನೆಯ ಊಟವನ್ನು ಮರೆತೇ ಬಿಡುತ್ತಿದ್ದ. ಹಾಗೋ ಹೀಗೋ ಎರಡೂವರೆ ವರ್ಷ ಪೂರೈಸಿದ ರಾಜ ಇನ್ನೇನು ತನ್ನ ಪದವಿಯನ್ನು ತನ್ನ ಉತ್ತರಾಧಿಕಾರಿಯಾದ ಯಡ್ಡಿಗೆ ಹಸ್ತಾಂತರಿಸಬೇಕು ಎನ್ನುವಷ್ಟರಲ್ಲಿ ಒಬ್ಬ ದುಷ್ಟನ ಆಗಮನವಾಯಿತು.

ಮಗ  : ದುಷ್ಟ ಅಂದರೆ ಅದೇ ಮಹಾಭಾರತದಲ್ಲಿ ಶಕುನಿ ಅಂತ ಹೇಳಿದ್ದೆ ಅಲ್ಲ ಅಂಥಹವನೇ?

ಅಪ್ಪ : ಇಲ್ಲ ಮಗ ಈ ದುಷ್ಟ ಆ ಶಕುನಿಗಿಂತ ಅತಿ ದುಷ್ಟ, ಅತಿ ನೀಚ. ಆತ ಬೇರಾರು ಅಲ್ಲ ಕುಮಾರ ರಾಜನ ಪಿತಾಮಹ. ಈತ ತನ್ನ ಸ್ವಾರ್ಥದಿಂದ ಮಗನ ಪದವಿ ಉಳಿಸಲು ಯಡ್ಡಿಯ ಮೇಲೆ ಸಮರ ಸಾರಿದ. ಇದನ್ನು ಕಂಡು ಅಕ್ಕ ಪಕ್ಕದ ರಾಜರು ಹಾಗೂ ಪ್ರಪಂಚದಾದ್ಯಂತ ಎಲ್ಲ ರಾಜರು ಎಲ್ಲವನ್ನೂ ಬಡಿದುಕೊಂಡು ನಗಲು ಪ್ರಾರಂಭಿಸಿದರು.

ಮಗ : ಅಪ್ಪ ಇದು ಕೂಡ ಮಹಾಭಾರತದ ಹಾಗೆ ೧೮ ದಿನ ಯುದ್ಧ ನಡೆಯಿತ ?

ಅಪ್ಪ : ನನಗೆ ಸರಿಯಾಗಿ ನೆನಪಿಲ್ಲ ಮಗ, ಆದರೆ ಅದೊಂದು ಭೀಕರ ಕಾಳಗ..ಕತ್ತಿ, ಗುರಾಣಿ, ಕುದುರೆ, ಆನೆ. ಅಕ್ಷೋಹಿಣಿ ಸೈನ್ಯ, ರಥಗಳು, ಸಾರಥಿಗಳು ಇದು ಯಾವುದು ಇರಲಿಲ್ಲ. ಬರೀ ಮಾತಿನ ಕಾಳಗ..ಹೇಗೆಂದರೆ ದಿಗ್ಗಜರು ಸಿನೆಮಾದಲ್ಲಿ ವಿಷ್ಣು ಅಂಬರೀಶರ ಹಾಗೆ ಕುಚಿಕು ಕುಚಿಕು ಎಂದು ಹಾಡು ಹೇಳುತ್ತಿದ್ದ ರಾಜ ಕುಮಾರ ಹಾಗೂ ಯಡ್ಡಿ ಒಬ್ಬರೊನ್ನಬ್ಬರು ಹಿಡಿದು ಕೊಲ್ಲುವಷ್ಟು ಬದ್ಧ ವೈರಿಗಳಾಗಿದ್ದರು. ಪಿತಾಮಹನ ಮಾತು ಕೇಳಿ ರಾಜ ಕುಮಾರ ತನ್ನ ಗುಂಡಿಯನ್ನು ತಾನೇ ತೋಡಿಕೊಂಡಿದ್ದ. ಇವರಿಬ್ಬರ ಯುದ್ಧ ಎಷ್ಟು ದಿನಗಳಾದರೂ ಮುಗಿಯದೆ ಇದ್ದಾಗ ಪ್ರಜೆಗಳ ಪಂಚಾಯ್ತಿಗೆ ಬಂದರು. ಅಲ್ಲಿ ಪ್ರಜೆಗಳು ಯಡ್ಡಿಯ ಮೇಲಿನ ಅನುಕಂಪದಿಂದ ಯಡ್ಡಿಯೇ ನಮ್ಮ ನೂತನ ರಾಜ ಎಂದು ಘೋಷಿಸಿಬಿಟ್ಟರು. ಆದರೂ ಯಡ್ಡಿಗೆ ಬೇಕಾದಷ್ಟು ಬೆಂಬಲವಿರದಿದ್ದ ಕಾರಣ ಪಟ್ಟಾಭಿಷೇಕ ವನ್ನು ಮುಂದೂಡಿದರು. ಇಲ್ಲಿ ತಮ್ಮ ಚಾಕಚಕ್ಯತೆ ಉಪಯೋಗಿಸಿದ ಯಡ್ಡಿ ಬೇರೆ ರಾಜ್ಯದ ರಾಜರು ಅತೀ ಸಿರಿವಂತರಾದ ರೆಡ್ಡಿ ಸಹೋದರನ್ನು ತಮ್ಮ ರಾಜ್ಯಭಾರದಲ್ಲಿ ಉನ್ನತ ಮಂತ್ರಿ ಪದವಿಯ ಆಸೆ ತೋರಿಸಿ ಅವರಿಂದ ಬೇರೆ ರಾಜ್ಯದ ರಾಜರಿಗೆ ಕೊಪ್ಪರಿಗೆಗಟ್ಟಲೆ ಮುತ್ತು, ಹವಳ, ಒಡವೆಗಳನ್ನು ಕಾಣಿಕೆಯಾಗಿ ನೀಡಿ ಬೆಂಬಲಕ್ಕೆ ಕರೆತಂದರು. ಮರುದಿನ ರಾಜ್ಯದೆಲ್ಲಡೆ ತಳಿರು ತೋರಣಗಳಿಂದ ಸಿಂಗರಿಸಿ, ರಾಜ್ಯದ ಬೀದಿ ಬೀದಿಗಳನ್ನು ಸಾರಿಸಿ ರಂಗೋಲಿ ಬಿಡಿಸಿ ಅತ್ಯಂತ ವೈಭವೋಪೇತವಾಗಿ ಅರಮನೆ ಮುಂಭಾಗದಲ್ಲಿ ದೊಡ್ಡ ವೇದಿಕೆ ಸಿದ್ಧ ಪಡಿಸಿ ಯಡ್ಡಿಯ ಪಟ್ಟಾಭಿಷೇಕ ನೆರವೇರಿತು.

ಮಗ : ಅಪ್ಪ ಕಥೆ ಮುಗಿದು ಹೊಯಿತ?

ಅಪ್ಪ : ಇಲ್ಲ ಮಗ ಅಸಲಿ ಕಥೆ ಈಗಲೇ ಶುರುವಾಯಿತು.

ಇತ್ತ ಯಡ್ಡಿಯ ಪಟ್ಟಾಭಿಷೇಕ ನಡೆಯುತ್ತಿದ್ದ ಹಾಗೆ ಮಾಜಿ ರಾಜ ಕುಮಾರನ ಪಾಳಯದಲ್ಲಿ ಹೊಗೆ ಹೊತ್ತಿಕೊಂಡಿತು. ಹೇಗಾದರೂ ಮಾಡಿ ಯಡ್ಡಿಯನ್ನು ಕೆಳಗಿಳಿಸಲು ರಣತಂತ್ರ ರೂಪಿಸತೊಡಗಿದರು. ಯಡ್ಡಿ ಇದ್ಯಾವುದನ್ನು ಪರಿಗಣಿಸದೆ ತನ್ನ ಆಸ್ಥಾನ ನರ್ತಕಿಯಾದ ಶೋಭಾಳಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಕೊಟ್ಟದ್ದು ಹಲವರಿಗೆ ನುಂಗಲಾರದ ತುಪ್ಪವಾಗಿತ್ತು.  ಒಂದು ಕಡೆ ರಾಜ್ಯದ ಹೆಣ್ಣುಮಕ್ಕಳಿಗೆ ಉಚಿತವಾಗಿ ಸೀರೆಯನ್ನು, ಹಣವನ್ನು , ಬಂಡಿಗಳನ್ನು ನೀಡಿ ಒಳ್ಳೆಯ ರಾಜ ಎನಿಸಿಕೊಂಡು, ಇನ್ನೊಂದು ಕಡೆ ತನ್ನದೇ ರಾಜ್ಯದ ರೈತರ ಭೂಮಿಯನ್ನು ಕಬಳಿಸಲು ಶುರುವಿಟ್ಟುಕೊಂಡ. ಇದನ್ನೇ ಕಾದು ಕುಳಿತಿದ್ದ ಮಾಜಿ ರಾಜ ಕುಮಾರನು ಇನ್ನೊಬ್ಬ ರಾಜ್ಯದ ರಾಜನಾದ ಸಿದ್ದುವಿನ ಜೊತೆ ಒಂದಾಗಿ ಒಟ್ಟಾಗಿ ಯಡ್ಡಿಯ ಮೇಲೆ ಬಹಿರಂಗ ಸಮರ ಶುರುಮಾಡಿದರು.

ಯಡ್ಡಿಯ ಮಂತ್ರಿಮಂಡಲದಲ್ಲಿ ಬಿರುಕುಂಟಾಯಿತು. ಯಾವಾಗ ಬೇರೆ ರಾಜ್ಯದ ರಾಜರಿಗೆ ಸರಿಯಾದ ಗೌರವ ಸಿಗಲಿಲ್ಲವೋ ಮೊದಲಿಗೆ ಐಶ್ವರ್ಯದ ಆಸೆಗೆ ಬೆಂಬಲ ಕೊಟ್ಟವರೆಲ್ಲ ಯಡ್ಡಿಯನ್ನು ದೂರ ತೊರೆದು ಹೊರಟರು. ಯಡ್ಡಿಯ ಪರಿಸ್ಥಿತಿ ನೀರಿನಿಂದ ಆಚೆ ಬಂದ ಮೀನಿನಂತಾಗಿತ್ತು. ಮತ್ತೆ ರೆಡ್ಡಿ ಸೋದರರ ಮೊರೆ ಹೋಗಿ ಹಾಗೋ ಹೀಗೋ ತನ್ನ ಪದವಿಯನ್ನು ಉಳಿಸಿಕೊಂಡನು. ಮುಂದೆಯೂ ಹೀಗೆ ಎರಡು ಮೂರು ಬಾರಿ ಹೀಗೆ ಯಡ್ಡಿಯ ಪದವಿ ಅತಂತ್ರವಾದಾಗಲೂ ಏನೇನೋ ಮಾಡಿ ತನ್ನ ಪದವಿ ಉಳಿಸಿಕೊಂಡನು. ಹೀಗಿರುವಾಗ ಪಕ್ಕದ ರಾಜ್ಯದ ಸಿದ್ದುವಿಗೆ ಇದೆಲ್ಲ ಇರುವುದು ರೆಡ್ಡಿ ಸೋದರರ ಕೈಯಲ್ಲಿ ಎಂದು ಅರಿವಾಗಿ ತನ್ನ ಸೈನ್ಯವನ್ನು ಕಟ್ಟಿಕೊಂಡು ರೆಡ್ಡಿ ಪಾಳಯದ ಮೇಲೆ ದಂಡೆತ್ತಿ ಹೋದನು. ಮೊದಮೊದಲು ಅತ್ಯಂತ ಹುರುಪಿನಿಂದ ಹೋರಾಟ ಸಿದ್ದುವಿನ ಸೈನ್ಯ ರೆಡ್ಡಿ ಪಾಳಯ ಸೇರುವ ಹೊತ್ತಿಗೆ ಹೈರಾಣಾಗಿ ಹೋಗಿದ್ದರು.

ಮಗ : ಯಾಕಪ್ಪ ಹಾಗೆ.

ಅಪ್ಪ : ಇನ್ನೇನು ಮತ್ತೆ ಯುದ್ದಕ್ಕೆ ಹೋರಾಟ ಸೈನಿಕರು ಹೆಣ್ಣು ಸೈನಿಕರ ಜೊತೆ ಸೇರಿ ಕುಣಿಯುವುದು, ಚೀರುವುದು ಮಾಡಿದರೆ ಇನ್ನೇನು ಆಗುತ್ತದೆ. ಅದೂ ಅಲ್ಲದೆ ಇದರ ಉಪಯೋಗ ಪಡೆದುಕೊಂಡ ದರೋಡೆಕೋರರು ಸೈನಿಕರ ಗುಂಪಿನಲ್ಲಿ ನುಗ್ಗಿ ಅವರ ಒಡವೆ ಆಭರಣಗಳನ್ನು ದರೋಡೆ ಮಾಡಿದ್ದರು. ಸಿದ್ದುವಿನ ಸೈನ್ಯ ದಂಡೆತ್ತಿ ಬರುತ್ತಿರುವ ವಿಚಾರ ಗೂಡಾಚಾರರ ಮೂಲಕ ತಿಳಿದುಕೊಂಡ ರೆಡ್ಡಿ ಸೋದರರು ತಮ್ಮ ಆಪ್ತ ಮಿತ್ರ ರಾಮುಲು ಜೊತೆಗೂಡಿ ತಮ್ಮ ಪಾಳಯದಲ್ಲೆಲ್ಲ ಪ್ರಚಾರ ಮಾಡಿ ಸಿದ್ದು ಸೈನ್ಯಕ್ಕೆ ಸಡ್ಡು ಹೊಡೆದರು.

ಇದಾದ ಕೆಲವೇ ದಿನಗಳಲ್ಲಿ ರಾಜ ನರ್ತಕಿ ಶೋಭಾಳನ್ನು ಆಚೆ ಇಟ್ಟಿದ್ದ ಯಡ್ಡಿ ಮತ್ತೆ ಮಂತ್ರಿಗಿರಿ ಕೊಡುವುದಾಗಿ ಅರಮನೆಗೆ ಕರೆತರುವುದನ್ನು ಕೇಳಿ ಕೆಂಡಾಮಂಡಲನಾದ ಬೆಮಬಲ ನೀಡಿದ್ದ ನೆರೆ ರಾಜ್ಯದ ಮಂತ್ರಿ ಗೂಳಿ ಅರಮನೆಯಲ್ಲಿ ಸಭೆ ನಡೆಯುತ್ತಿದ್ದಾಗ ತನ್ನ ಬಟ್ಟೆಗಳನ್ನು ಕಿತ್ತು ಹಾಕಿ ಸಭೆಗೆ ಅವಮಾನ ಮಾಡಿ ವೈರಿ ರಾಜ್ಯದ ಪಡೆಗೆ ಸೇರಿಬಿಟ್ಟ.

ಅಪ್ಪ : ಅಷ್ಟರಲ್ಲಿ ಮಗ ದೀರ್ಘ ನಿದ್ದೆಯಲ್ಲಿರುವುದನ್ನು ಗಮನಿಸಿ ತಾನು ಮುಸುಕು ಹಾಕಿಕೊಂಡು ಮಲಗಿಬಿಟ್ಟ

Comments