ಒಂದಿಷ್ಟು ಹನಿಗಳು…
ಕಳ್ಳಾ ಪೋಲಿಸ್ ಆಟ
ಈ ಸರ್ಕಾರ
ಬಂದಾಗ-
ಇವರೇ ಪೋಲಿಸ್;
ಅವರು
ಮಹಾ ಕಳ್ಳರು-
ಇಲ್ಲಾ ತಿರುಗು ಮುರುಗು...
ಕಣ್ಣು ಬಾಯಿ
ಬಿಟ್ಟುಕೊಂಡು
ಉಸಿರು ಬಿಗಿಹಿಡಿದು
ತಮ್ಮದೆಲ್ಲವ ಬಾಚಿ
ಹಿಡಿದುಕೊಂಡ ಪ್ರಜೆಗಳು
ಮಾತ್ರ ಬೆರಗು ಬೆರಗು!
***
ಏಪ್ರಿಲ್ ಫೂಲ್
ಮೊದಮೊದಲು
ಏಪ್ರಿಲ್
ಒಂದರಂದು ಮಾತ್ರ-
ತಮಾಷೆಗಾಗಿ
ಮಾಡುತಿದ್ದರು
ಫೂಲ್...ಫೂಲ್...
ಇಂದು ವರ್ಷವಿಡೀ
ಎಲ್ಲರೂ-
ಒಂದಲ್ಲಾ ಇನ್ನೊಂದರಲಿ
ಆಗುತಿರುವರು ಸದಾ ಫೂಲ್-
ಇದುವೇ ಇಂದಿನ ಜಗತ್ತಿನ
ವಿಸ್ಮಯದ ಕಮಾಲ್!
***
ಇತಿಹಾಸ ನಿರ್ಮಿಸುವವರು!
ಜಗತ್ತಿನ
ರಾಜಕಾರಣಿಗಳು-
ಇತಿಹಾಸ ಓದುವುದಿಲ್ಲ;
ಬರೀ ಹೊಸ
ಇತಿಹಾಸದ
ಸೃಷ್ಟಿಕರ್ತರು...
ಅಸಂಬದ್ಧ
ಆಡಳಿತದಿಂದ
ಪ್ರಜೆಗಳು-
ದಂಗೆ ಎದ್ದಾರು ಎಂಬ
ಕನಿಷ್ಠ ಜ್ಞಾನವೂ
ಇಲ್ಲದವರು!
***
ಮುಗಿಲು ಮುಟ್ಟಿದ ಹಾಲಿನ ಬೆಲೆ....
ಓ ಸರ್ಕಾರದ
ಸಾಂಭಾವಿತರೇ-
ನಿಮ್ಮ
ಅಧಿಕಾರ ಹಿಡಿಯುವ
ಚಾಣಾಕ್ಷ
ಫ್ರೀ..ಫ್ರೀ..ಫ್ರೀ ಗಳಿಂದ...
ನಾವು ಹೊಟೆಲ್ನಲಿ
ಕುಡಿಯುವ
ಕಾಫಿಯ ಬೆಲೆ
ಗಗನಕೇರಿ-
ಮನಕಾಗಿದೆ
ದುಗುಡಾನಂದ!
***
ಸರಳ ಮತ್ತು ಸಂಕೀರ್ಣ
ನಮ್ಮ ತಿಮ್ಮ-
ಗೇರಿಲ್ಲದ
ಕ್ಲಚ್ಛ್ ಇಲ್ಲದ
ಸರಳ ಸ್ಕೂಟಿಯನು
ಕೊಟ್ಟ ಆ ದೇವರಿಗೆ
ನಮಸ್ಕಾರಗಳ ಕೊಟ್ಟ....
ಆದರೆ-
ದೇವಾ ಸರಳ
ಸ್ಕೂಟಿಯನೇನೋ ಕೊಟ್ಟೆ;
ಆದರೆ ಸಂಕೀರ್ಣ
ಹೆಂಡತಿಯನೇಕೆ ಇಟ್ಟೆ?-
ಎಂದು ಕೊರಗಿಬಿಟ್ಟ!
-ಕೆ ನಟರಾಜ್, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
