ಒಂದು ಅಪಘಾತ
ಅಲ್ಲೊಂದು ಅಪಘಾತ ನಡೆದಿತ್ತು. ಆ ಅಪಘಾತ ನಡೆಯಲು ಜೊತೆಯಿದ್ದ ಪ್ರಯಾಣಿಕರೇ ಕಾರಣ. ಮಿತಿಮೀರದ ವೇಗದಲ್ಲಿ ಬಸ್ಸನ್ನೋಡಿಸಿಕೊಂಡು ಬರುತ್ತಿದ್ದ ಡ್ರೈವರ್ ಕಾಳಪ್ಪನನ್ನು ‘ಡೇವರಣ್ಣಾ, ಡೇವರಣ್ಣಾ, ವಸಿ ಜೋರಾಗ್ ಬುಡು’ ಎಂದವರು ಅವರೇ, “ಏ ಇಸಿ ತೂ, ಆ ಗುಂಗುರ್ ಮಲ್ಲಿಕಾರ್ಜುನ ಬಸ್ಸಮ ಅದೇನ್ ಒಡಸ್ದನುಡೋ, ವಳ್ಳೇ ಎಮ್ಮ ಮ್ಯಾಲ ಮಳೆ ಉಯ್ದಂಗ ಮಲಿಕ್ಕಂಡ್ ಹೊಯ್ತನ, ನಮ್ ಕಾಳ ಯಾನಪ್ಪ ಹಿಂಗೋಡುಸ್ದನು, ಮರ ಗಿಡಗೊಳೇ ಕಾಣಲ್ವಲ್ಲುಡೋ...’ ಇತ್ಯಾದಿಯಾಗಿ ಪರಿಪರಿಯಾಗಿ ಹೊಗಳುವಾಗ ಕಾಳಪ್ಪನ ಮನಸ್ಸಿನೊಳಗೆ ವಿದ್ಯುತ್ ಸಂಚಾರವಾಯಿತು. ಇಡೀ ರಸ್ತೆಯೇ ತನ್ನದೇನೋ ಎಂಬಂತೆ ಕಾಳ ವೇಗವಾಗಿ ಬಸ್ಸನ್ನೋಡಿಸಿದ. ಅಷ್ಟಕ್ಕೆ “ಯೋ ಯೋ... ಹಸ ಕಣ ಹಸ, ರೋಡುಗ್ ಬತ್ತದ, ವಸಿ ಮೆಲ್ಲುಗ್ ಬುಡ... ಯೋ...’ ಎಂದು ಚೀರಿಕೊಂಡರು. ಬ್ರೇಕ್ ಮೇಲೆ ಕಾಲಿಟ್ಟರೂ ಬಸ್ ನಿಯಂತ್ರಣಕ್ಕೆ ಬರುವುದಿಲ್ಲವೆಂಬುದನ್ನರಿತ ಕಾಳಪ್ಪ ಹಿಂದುಮುಂದು ನೋಡದೇ, ಮರುಯೋಚಿಸದೆ ಬಸ್ಸನ್ನು ಹಠಾತ್ತನೇ ಎಡಕ್ಕೆ ತಿರುಗಿಸಿಬಿಟ್ಟ. ಅವನು ತಿರುಗಿಸಿದ ರಭಸಕ್ಕೆ ರೋಡಿನ ಎಡಗಡೆಯಲ್ಲಿ ಮೇಯುತ್ತಿದ್ದ ಕತ್ತೆಗಳೆರಡು ಬೆಚ್ಚಿ ಚದುರಿದರೂ, ಒಂದು ಕತ್ತೆಗೆ ಬಸ್ಸಿನ ಬಂಪರ್ ಬಡಿದು ಸ್ಥಳದಲ್ಲೇ ಅಸುನೀಗಿದರೆ, ಮತ್ತೊಂದು ಕತ್ತೆ ಚಕ್ರಕ್ಕೆ ಸಿಲುಕಿ ಅಪ್ಪಚ್ಚಿಯಾಯಿತು. ‘ನಮ್ ಕಿಟ್ಟಪ್ಪನ್ ಕತ್ತ ತಾನುಡ, ಸತ್ರ ಸಾಯ್ತವ ಬಾ, ಆ ತಾಯಿ ನಮ್ ದ್ಯಾವ್ತೆ ಹಸುಗೇನು ಆಗ್ಲಿಲ್ವಲ್ಲ’ ಎಂದವರು ಕೆರಳಿದ್ದು ಹಸವೂ ಕೂಡ ಬಂಪರ್ ಗುದ್ದಿ ತೀರಿಕೊಂಡಿದೆ ಎಂದು ತಿಳಿದಾಗ.
ಹಸುವಿನ ವಾರಸುದಾರರ ಪತ್ತೆ ಇಲ್ಲವಾದರೂ ಡ್ರೈವರ್ ಕಾಳಪ್ಪನನ್ನು ಅಲ್ಲಿ ಇದ್ದ ಮರಕ್ಕೆ ಕಟ್ಟಿ ಹಾಕಲಾಯಿತು. ‘ಉಡೋ, ನೀನು ಗುದ್ಸಿರೋದು ಯಾವ್ ಪ್ರಾಣಿಗ ಅನ್ಕಂಡಿದ್ದಯ್, ನಾಮ್ ಸಂಕ್ರಾಂತಿಗ ಪೂಜ ಮಾಡೋ ಹಸುಗ ಕಡೋ, ವಸಿ ತಡ್ಕ ನಿಂಗದ ಇವತ್ತು ಮಾರಿಹಬ್ಬ” ಎಂದ ಕೆಲವರ ಮುಖದಲ್ಲಿ ಕೋಪಜ್ವಾಲೆ ಕೊತ ಕೊತನೆ ಕುದಿಯುತ್ತಿತ್ತು. “ನಾಯಾನ್ ಮಾಡ್ಲಿ ಸೋಮಿ, ತಪ್ಸಕ ಎಷ್ಟೆ ಟ್ರೈ ಮಾಡುದ್ರುವೆ ಆಗ್ಲಿಲ್ಲ” ಎಂದ ಕಾಳಪ್ಪನು ಅಸಹಾಯಕನಾಗಿ ನಿಂತುಕೊಂಡ.
ಅಷ್ಟಕ್ಕೆ ಒಂದು ಬೀಡಿ ಸೇದಿಕೊಂಡು ಸೈಕಲ್ ಓಡಿಸಿಕೊಂಡು ಬಂದ ಕೃಷ್ಣ ಆಲಿಯಾಸ್ ಕಿಟ್ಟಪ್ಪ ತನ್ನ ಎರಡು ಕತ್ತೆಗಳು ಸತ್ತು ಬಿದ್ದಿರುವುದನ್ನು ಕಂಡು ಪಂಚೆ ಕಟ್ಟಿಕೊಂಡು ಗೊಳೋ ಎಂದು ಅಳತೊಡಗಿದನು. “ಯೇನ ಇಮ ಐಕ್ಳತ್ತಂಗ ಅತ್ತನು, ಬುಡಾ ಅತ್ತಗ, ಕತ್ತ ಸತ್ರೂ ಯಾರಾರ ಅತ್ತರೇನ? ವಸಿ ಇತ್ತಗ್ ನೋಡು, ಹಸಾನೇ ತೀರ್ಕಂಡಿಲ್ವ, ಮೊದ್ಲೇ ಊರ್ಗ ಮಳಬೆಳ ಇಲ್ಲ, ಇನ್ನೂ ಈಯವ್ವನ್ ಶಾಪನು ಅಂಟ್ಕಂಡ್ರ ಅಷ್ಟೇ ಆಮೇಕ” ಎಂದರೂ ಕಿಟ್ಟಪ್ಪನಿಗೆ ಸಮಾಧಾನವಾಗಲಿಲ್ಲ. ಆತ ಮೊನ್ನೆ ತಾನೇ ಆ ಎರಡೂ ಕತ್ತೆಗಳನ್ನು ಸಂತೆಯಿಂದ ದುಡ್ಡು ಕೊಟ್ಟು ತಂದಿದ್ದ. ನೂರು ರೂಗೆ ಹತ್ತು ರೂ ತಿಂಗಳ ಬಡ್ಡಿ ಸಾಲದಲ್ಲಿ ಆ ಕತ್ತೆಗಳನ್ನು ಹೊಡೆದುಕೊಂಡು ಬಂದಿದ್ದವನಿಗೆ ಮುಂದುವರೆಯುವ ಆಸೆಯಿತ್ತು. ಆ ಕತ್ತೆಗಳು ಬಂದ ನಂತರ ಊರಿನವರ ಬಟ್ಟೆಗಳನ್ನೆಲ್ಲಾ ಒಪ್ಪ ಮಾಡಿಕೊಂಡು ಕತ್ತೆ ಮೇಲೆ ಕೂರಿಸಿಕೊಂಡು ಹೋಗಿ ಬಟ್ಟೆ ಹೊಗೆದು ಒಣಗಿಸಿಕೊಂಡು ಬಂದರೆ ದಿನಕ್ಕೆ ನೂರಾರು ರೂಗಳನ್ನು ಸಂಪಾದಿಸಬಹುದು, ಸುಲಭವಾಗಿ ತನ್ನ ಸಾಲ ತೀರಿಸಿಕೊಳ್ಳಬಹುದೆಂದು ಕಿಟ್ಟಪ್ಪ ಯೋಚಿಸಿದ್ದ. ‘ಹಂಗಲ್ಲ ಬುದ್ಯೋರ, ಯಾನಂದ್ರ...’ ಎಂದು ತಡವರಿಸಿದ ಕೃಷ್ಣಪ್ಪನ್ನು ‘ಸುಮ್ಕಿರ ಅತ್ತಗ’ ಎಂದು ದೂರ ತಳ್ಳಿದರು.
ಅಷ್ಟಕ್ಕೆ ಊರಿನ ‘ಅಯ್ನೋರು’ ಬಂದರು. ಸತ್ತು ಬಿದ್ದಿದ್ದ ಹಸುವನ್ನು ಕಂಡು ಗಾಬರಿಯಾದ ಅವರು, ತಮ್ಮ ಬೆರಳುಗಳನ್ನು ಮಣ ಮಣ ಎಂದು ಎಣಿಸಿ, ಚಿಟಿಕೆ ಹಾಕುವವರಂತೆ ಲೆಕ್ಕ ಹಾಕಿ ಕೊನೆಗೆ “ಚೆ” ಎಂದು ಮುಖ ಗಂಟಿಕ್ಕಿಕೊಂಡರು. ಅಲ್ಲಿದ್ದವರು ‘ಏನಾಯ್ತು ಅಯ್ನೋರೆ, ಯಾನಾರ ಶಾಪ್ವ ಬುದ್ಯೋ?’ ಎಂದು ಗಾಬರಿಗೊಂಡು ಕೇಳಿದರು. ಅಯ್ನೋರು ಹೇಳಿದರು - ‘ಹಸು ಸತ್ತ ಘಳಿಗೆ ಯಮಗಂಡಕಾಲ, ಆ ಹಸುವಿನೊಳಗಿದ್ದ ಮುನ್ನೂರು ಮುಕ್ಕೋಟಿ ದೇವರೂ ಮುನಿಸ್ಕೊಂಡಿದ್ದಾರೆ, ಅದೂ ಹಸುವಿಗೆ ಗುದ್ಸಿರೋನು ಯಾರೂ... ಚೆ! ಹೇಳಲು ಅಸಹ್ಯವಾಗುತ್ತದೆ’. ಕಾಳಪ್ಪನ ಕಡೆ ತಿರುಗಿದ ಒಂದಷ್ಟು ಜನ ತಾವೂ ‘ಚೆ’ ಎಂದರು. ಅಷ್ಟಕ್ಕೆ ಊರಿನ ಯಜಮಾನರ ಪ್ರವೇಶವೂ ಆಯಿತು. ಅವರಲ್ಲಿ ಒಬ್ಬನಾದ ಮರಿಸಿದ್ದೇಗೌಡ ಏಕ್ದಂ ಕಾಳಪ್ಪನ ಕೆನ್ನೆಗೆ ಭಾರಿಸಿಬಿಟ್ಟ. ಮೂಗಲ್ಲಿ ರಕ್ತ ಸೋರುತ್ತಿದ್ದರೂ ಕಾಳಪ್ಪನೆಡೆಗೆÉ ತಿರುಗಿ ನೋಡುವವರಿರಲಿಲ್ಲ.
ಇನ್ನೊಂದಷ್ಟು ಯಜಮಾನರು ಬರುವವರಿದ್ದರು. ಅವರೆಲ್ಲಾ ಬಂದ ಮೇಲೆ ಅಲ್ಲೇ ಪಂಚಾಯಿತಿ ನ್ಯಾಯ ಶುರುಮಾಡೋಣವೆಂದುಕೊಂಡವರು ಮಳೆಗೆ ಹೆದರಿ ಕಾಳಪ್ಪನ ಕಟ್ಟನ್ನು ಬಿಚ್ಚಿ ರಾಮಮಂದಿರದ ಚಾವಡಿಯಲ್ಲಿ ಸೇರಿಕೊಂಡರು. ಬಿಟ್ಟರೆ ಎದ್ದು ಬಿದ್ದು ಓಡಲು ತಯಾರಿದ್ದ ಕಾಳಪ್ಪನನ್ನು ಚಾವಡಿಯ ಚಪ್ಪರದ ಕಂಬಕ್ಕೆ ಕಟ್ಟಿಹಾಕಲಾಯಿತು. ಎಲ್ಲಾ ಯಜಮಾನರು ಬಂದು ಚಾವಡಿಯಲ್ಲಿ ಕುಳಿತರು. ಯಜಮಾನರೆನಿಸಿಕೊಂಡವರಲ್ಲಿ ಒಂದಷ್ಟು ಜನ ಅದಾಗಲೇ ಸಾರಾಯಿ ಹೀರಿಕೊಂಡು ತಮಗೆ ತಪ್ಪಿತಸ್ಥನಂತೆ ಕಾಣುವವರ ಮೇಲೆ ಎಗರಲು ಉಗುರು ಪರಚಿಕೊಂಡು ತಯಾರಿದ್ದರು. ಪಟ್ಟಾಪಟ್ಟಿ ಚಡ್ಡಿ ಕಾಣುವಂತೆ ಪಂಚೆ ತೊಟ್ಟಿದ್ದ ಯಜಮಾನನೊಬ್ಬ ‘ಅಮ ಕಾಳಪ್ಪ ದೊಡ್ಡ್ ಯಾಡ. ಬಸ್ಸ್ ಬುಡಕ ಬರಲ್ಲ, ಅವನ್ಯಾಕ್ ಕಟ್ ಹಾಕ್ದರಿ, ಬುಟ್ಬುಡಿ, ಯೆಂಗೋ ಬದಿಕ್ಕಳ್ಳಿ, ಈಗ ಊರಗ್ ಅಂಟ್ಕಡಿರ ಶಾಪನ ಯಂಗ್ ತೊಲುಗ್ಸದು ಹೇಳಿ’ ಎಂದಾಗ ಚಾವಡಿಯ ತುಂಬಾ ಗದ್ದಲ ಶುರುವಾಯಿತು.
‘ಯಾನಂದರಿ ಸೋಮಿ, ಅವನೆಂಗ್ ಬುಡಕಾದ್ದು ಅಂತೀನಿ, ದೇವಾನ್ ದೇವ್ತೆಗಳೇ ಮುನಿಸ್ಕಂಡವ ಅಂತ ಅಯ್ನೋರ್ ಹೇಳರ, ಇವನ್ಗ ಒಂದು ಶಿಕ್ಷ ಕೊಡ್ಲಿಲ್ಲ ಅಂದ್ರ ವಿಮೋಚ್ನ ಯಂಗಾದ್ದು ಸೋಮಿ’ - ನೂರು ಮಾತುಗಳಲ್ಲಿ ಒಂದೂ ಬೇಡದಂತೆ ಆಡುವ ಯಜಮಾನ್ ಮರಿಸಿದ್ದೇಗೌಡ ಹುಲಿಯಂತೆ ಹೌಹಾರಿದ.
‘ಹೂಂಕಣೇಳಿ ಬುದ್ಯೋರ, ಅಮ ಶಿಕ್ಷ ಅನುಭೋಗುಸ್ದೇ ಈ ಬೀದಿಯಿಂದ ಕದಲ್ಬುಟ್ಟಾನ ಸೋಮಿ, ಮೊದ್ಲು ಅವನ್ಗ ಶಿಕ್ಷ ಕೊಡಿ, ಆಮೇಲ ಊರೋರೆಲ್ಲ ಸೇರಿ ಈ ಶಾಪನ ತೊಳ್ಕಳ್ಳಮೂ’ – ಮರಿಸಿದ್ದೇಗೌಡನಿಗೆ ಜೊತೆಯಾಗಿ ಟವೆಲ್ಲನ್ನು ಒದರಿ ನಿಂತುಕೊಂಡ ಮತ್ತೊಬ್ಬ ವ್ಯಕ್ತಿ ಹೇಳಿದ.
‘ಶಿಕ್ಷ ಕೊಡಕೂ ಮುಂಚ ಒಂದ್ಸಾವ್ರ ತಪ್ಕಾಣ್ಕ ಹಾಕ್ಸಿ ಸೋಮಿ’ – ಅಲ್ಲೇ ಇದ್ದ ಮತ್ತೊಬ್ಬ ಹೇಳಿ.
‘ವಡೈ, ಇದೆತ್ತೆತ್ಲಾಗ್ ಮಾತಾಡ್ದಯುಡೋ, ಒಂದ್ಸಾವ್ರ ಯಾವ್ ಮೂಲ್ಗುಡಾ?, ಐದ್ಸಾವ್ರ ಹಾಕ್ಸಿ ನಮ್ಮಪ್ನೋರ’ – ಎಂದು ಮತ್ತೊಬ್ಬ ವ್ಯಕ್ತಿ ಅವಲತ್ತುಕೊಂಡ.
ಚಾವಡಿಯ ಮೆಟ್ಟಿಲುಗಳ ಮೇಲೆ ಕುಳಿತಿದ್ದ ಕತ್ತೆಗಳ ವಾರಸುದಾರನಾದ ಕಿಟ್ಟಪ್ಪನು ‘ಸೋಮೇ...’ ಎಂದ. ಅಷ್ಟಕ್ಕೆ ಕೆಂಡಮಂಡಲನಾದ ಮರಿಸಿದ್ದೇಗೌಡ ‘ಡೋ ಕಿಟ್ಟ, ಯಾನಡ ನಿಂದು ರೋದ್ನ, ನಮ್ ಕತ ನಮ್ಗಾದ್ರ ನಿನ್ನದೇನುಡೋ ಸುಬ್ರುವೇ, ಸುಮ್ಕೆ ಕುಕ್ಕುರ್ದೆಯಾ ಇಲ್ಲ ಎಕ್ಕಡ್ದಲ್ ಹೊಡ್ದು ಜಾತಿ ಕೆಡಿಸ್ಲುಡೋ, ನಿನ್ನನ್ನ ಮೆಟ್ಲವರ್ಗ ಬುಟ್ಟುದೇ ತಪ್ಪಾಯ್ತು ನೋಡ್ಡ’ ಎಂದು ರೇಗಿಕೊಂಡ.
ಯಜಮಾನರೆಲ್ಲಾ ತಮ್ಮ ತಮ್ಮಲ್ಲೇ ಪಿಸು ಪಿಸು ಆಡಿದರು. ಊರಿನ ಅಯ್ನೋರ ಕರೆದುಕೊಂಡು ಬರಲು ಯಾರೋ ಓಡಿದರು. ಬಿಳಿ ಬಿಳಿ ಪಂಚೆ ಜುಬ್ಬ ತೊಟ್ಟು ಬಂದ ಅಯ್ನೋರು ಯಾರನ್ನೂ ಮುಟ್ಟಿಸಿಕೊಳ್ಳದೇ ಚಾವಡಿಯ ಒಂದು ಕಡೆ ಕುಳಿತರು. ಅವರು ಬಂದೊಡನೆ ಬನ್ನಿ ಬುದ್ಯೋರ ಎಂದು ಕೆಲವರು ಎದ್ದು ನಿಂತು ಜಾಗ ಮಾಡಿಕೊಟ್ಟರು. ಅಯ್ನೋರು ತುಂಬಾ ಕಂಗೆಟ್ಟಂತೆ ಕಂಡು ಬಂದರು. ಇದರಿಂದ ಎಲ್ಲರಿಗೂ ದಿಗ್ಭ್ರಮೆಯಾಯಿತು. ಚೇತರಿಸಿಕೊಂಡ ಯಜಮಾನರು ‘ನೀಮೇ ಹಿಂಗ ಕುಂತ್ರ ನಮ್ ಕೈಕಾಲಾಡುದ್ದ ಯೇಳಿ, ಒಸಿ ಯೇನ್ ಮಾಡದು ಯೇಳಿ ಬುದ್ಯೋ’ ಎಂದು ಕೇಳಿಕೊಂಡರು. ಅಯ್ನೋರು ಮಾತನಾಡಲಿ ಎಂದು ಎಲ್ಲರೂ ಕಾದುಕುಳಿತರು. ಮುನಿಸಿಕೊಂಡಿರುವ ದೇವರ ಓಲೈಕೆಗೆ ಯಾವುದಾದರು ಶಾಂತಿ ಪೂಜೆ ಮಾಡಿಸಬಹುದೇ ಎಂದು ಮತ್ತೆ ಮತ್ತೆ ಕೇಳುತ್ತಿದ್ದರು. ಅದಕ್ಕೆ ಅಯ್ನೋರು ‘ಗುದ್ಸಿರೋನು ಬೇರೆ ಯಾರಾದ್ರು ಆಗಿದ್ರೆ ಶಾಂತಿ ಹೋಮ ನಡೆಯುತ್ತಿತ್ತು, ಆದರೆ ಗುದ್ಸಿರೋನು... ಚೆ! ಬೇಸರ ಆಗುತ್ತೆ, ಇರಲಿ ನಾನೊಂದು ಚಕ್ರ ಬರೆದುಕೊಡುತ್ತೇನೆ ಅದನ್ನು ಈ ಚಾವಡಿಗೆ ನೇತುಹಾಕಿ, ಜೊತೆಗೆ ಈ ಸಲದ ಮಾರಿಹಬ್ಬ ತುಂಬಾ ಜೋರಾಗಿ ಮಾಡಿದರೆ ಮುನಿಸಿಕೊಂಡಿರೋ ದೇವತೆಗಳು ತಣ್ಣಗಾಗಬಹುದು, ಕಾಳಪ್ಪನಿಗೆ ಏನಾದ್ರೂ ಶಿಕ್ಷೆ ಕೊಡೋದು ಮರಿಬೇಡಿ, ಇಲ್ಲಾಂದ್ರೆ ದೇವತೆಗಳ ಕೋಪ ಇಳುಗೋಲ್ಲ’ ಎಂದು ಹೇಳಿದ ಅಯ್ನೋರು ಯಾರನ್ನೂ ಸೋಕಿಸಿಕೊಳ್ಳದೇ ಹೊರಟುಬಿಟ್ಟರು.
ಅಯ್ನೋರು ತೆರಳಿದೊಡನೆ ಯಜಮಾನರು ಕಾರ್ಯಪ್ರವೃತ್ತರಾದರು. ಆದರೆ ತಪ್ಪು ಕಾಣಿಕೆಯ ವಿಚಾರದಲ್ಲಿ ಗೊಂದಲವೇರ್ಪಟ್ಟಿತು. ಕೆಲವರು ಹತ್ತು ಸಾವಿರವೆಂದರೆ, ಕೆಲವರು ಮೂರು ಸಾವಿರ ಎಂದರು. ಐದು ಸಾವಿರ ಎಂದು ಹೇಳುತ್ತಿದ್ದವರ ಸಂಖ್ಯೆ ಹೆಚ್ಚಿತ್ತು. ಆದರೆ ಡ್ರೈವರ್ ಕಾಳಪ್ಪನಿಗೆ ಬರುತ್ತಿದ್ದ ತಿಂಗಳ ಸಂಬಳ ಕೇವಲ ನಾಲ್ಕು ಸಾವಿರ! ಕೊನೆಗೆ, ಐದು ಸಾವಿರ ದಂಡ ಮತ್ತು ದೇವರುಗಳ ಆತ್ಮತೃಪ್ತಿಗೆಂದು ನೂರು ಛಡಿಯೇಟು ಕೊಡುವುದಾಗಿ ತೀರ್ಮಾನಿಸಲಾಯಿತು. ಚಾವಟಿಯನ್ನು ಮಾರಮ್ಮನ ಗರ್ಭಗುಡಿಯೊಳಗಿಟ್ಟು ಪೂಜೆ ಮಾಡಿಸಿ, ಅರಿಶಿಣ ಕುಂಕುಮ ಮೆತ್ತಿ ತರಸಲಾಯಿತು. ಮೊದಲು ಯಾರು ಪ್ರಾರಂಭಿಸುವುದು ಎಂಬ ಪ್ರಶ್ನೆ ಎದ್ದಾಗ ‘ಆ ಕಳ್ ಸೂಳಮಗನ್ಗ ಮೊದ್ಲು ನಾನೇ ಬುಡ್ತೀನಿ ತತ್ತರಿ’ ಎಂದು ಕೋಪದಿಂದ ಮರಿಸಿದ್ದೇಗೌಡ ಎದ್ದ.
ಮರಿಸಿದ್ದೇಗೌಡ ಕೋಪದಿಂದ ಮೆಟ್ಟಿಲು ಇಳುಗುವಾಗ ಕಿಟ್ಟಪ್ಪ ‘ಸೋಮ್ಯಾರಾ...’ ಎಂದು ಕಾಲು ಹಿಡಿಯಲು ಬಂದ. ವೇಗವಾಗಿ ನುಗ್ಗಿದ ಮರಿಸಿದ್ದಗೌಡ ಕಾಲುಗಳು ಕಿಟ್ಟಪ್ಪನನ್ನು ಅಷ್ಟೇ ರಭಸವಾಗಿ ತಳ್ಳಿದವು. ಕಾಳಪ್ಪನ ಬಳಿ ಬಂದವನೇ ಚಾವಟಿಯಿಂದ ಚಟಾರ್ ಚಟಾರನೆ ನಾಲ್ಕು ಬಿಟ್ಟನು. ಸಮಾಧಾನವಾಗದೆ ಮತ್ತೆ ಕೈಯೆತ್ತುವಷ್ಟರಲ್ಲಿ ಅವರ ಬೀದಿಯೊಳಗೆ ಒಂದು ಬೈಕು ಸರ್ರನೆ ನುಗ್ಗಿತು. ಬಂದಿದ್ದವನು ಸುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಹೆಸರು ಮಾಡಿ ತನ್ನದೇ ದಲಿತ ಸಂಘ ಕಟ್ಟಿಕೊಂಡಿದ್ದ ನಾಗರಾಜು. ಸ್ವಲ್ಪ ಓದಿಕೊಂಡಿದ್ದ. ಅವನು ಬಂದೊಡನೆ ಹೊಡೆಯುವುದನ್ನು ನಿಲ್ಲಿಸಿದ ಮರಿಸಿದ್ದಗೌಡ ‘ಯೋ ಬಯ್ಯೋ, ಇಮ ಒಬ್ಬ ಬಾಕಿ ಇದ್ದ, ಬಯ್ಯ, ಇಮ ಏನ್ ಮಾಡನ ಗೊತ್ತಯ್ಯ ನಿಂಗ?’ ಎಂದ.
‘ರೀ ಸ್ವಾಮಿ, ಅವನು ಏನಾದ್ರೂ ಮಾಡಿರ್ಲಿ ಕಣ್ರಿ, ಅದನ್ನ ನೋಡ್ಕೊಳ್ಳೋಕೆ ಪೋಲೀಸು ಕೋರ್ಟು ಕಚೇರಿ ಅಂತ ಇದೆ’ ಎಂದೊಡನೆ ಇಡೀ ಸಭೆಯೇ ಗದ್ದಲದ ಜ್ವಾಲಾಮುಖಿಯನ್ನೆಬ್ಬಿಸಿತು. ‘ಅವ್ನವ್ವನ್ನ, ಅವ್ನೇನುಡಾ ಮಾತಾಡದು, ನಾ ಕಂಡಿಲ್ದಿರೋ ಟೇಷನ್ನು, ಕೋರ್ಟು ಕಚೇರಿನುಡಾ?’ ಎಂದ ಬೀದಿಯ ಗಟ್ಟಿಯಾಳು ಧಾಮೋದರ ನಾಗರಾಜನ ಎದೆಗೆ ಗುದ್ದಿಕೊಂಡು ನಿಂತ. ಹೆದರದ ನಾಗರಾಜು ‘ಅಲ್ಲಾ ರೀ, ಅವ್ನು ಬೇಕು ಅಂತ ಮಾಡಿಲ್ಲ, ಏನೋ ಆಕಸ್ಮಿಕವಾಗಿ ನಡೆದಿದೆ, ಅದನ್ಯಾಕೆ ಇಷ್ಟು ದೊಡ್ಡದಾಗಿ ಬೆಳೆಸ್ತಾ ಇದ್ದೀರಾ? ಕಾಳನ್ನ ಕಟ್ಟಿ ಹಾಕೋಕೆ ನಿಮ್ಗೆ ಪರ್ಮಿಷನ್ ಕೊಟ್ಟೋರ್ಯಾರು?’ ಎಂದ. ನಾಗರಾಜುವಿನ ಮಾತುಗಳನ್ನು ಕೇಳಲು ಸಭೆ ತಯಾರಿರಲಿಲ್ಲ. ಯಾರೋ ‘ಡೋ ಮೊದ್ಲು ಈ ಬೊಡ್ಡೈದನ್ನೂ ಕಟ್ಟಾಕ್ರುಡಾ, ಯಾನೋ ಸಂಗ ಕಟ್ಕಂಡಿವ್ನಿ ಅಂತ ಎಗ್ರಾಡ್ತನ, ತತ್ತರುಡ ಹಗ್ಗನ’ ಎಂದು ಯಾವುದೋ ಧ್ವನಿ ಬೊಗಳುವುದರಲ್ಲಿ ನಾಗುರಾಜುವಿನ ಬೆಂಬಲಿಗರಾದ ನಾಲ್ಕು ಜನ ಚಾವಡಿಗೆ ಬಂದರು. ನಾಗರಾಜುವಿಗೆ ಸ್ವಲ್ಪ ಧೈರ್ಯ ಬಂತು.
‘ಯಾರ್ರಿ ಅವ್ನು ಕಟ್ಟಿ ಹಾಕೋನು, ತಲೆ ಬಗ್ಗಿಸ್ಕೊಂಡು ನಿಂತ್ಕೊಳ್ಳೋಕೆ ನಾನೇನು ಕಾಳಪ್ಪ ಅಲ್ಲ, ಬನ್ರಿ ನೋಡೋಣ’ ಎಂದು ತೊಡೆ ತಟ್ಟಿ ನಿಂತ ನಾಗರಾಜುವಿನ ಮೇಲೆ ಬೀಳಲು ನೂರಾರು ಜನ ತಯಾರಿದ್ದರೂ ಊರ ಯಜಮಾನರ ಸನ್ನೆಗೆ ಸೋತು ಸುಮ್ಮನಿದ್ದರು.
‘ನೋಡಯ್ಯ ನಾಗ್ರಾಜು, ಇಮ ಕಾಳ ಸರಿಯಾಗಿ ಬಸ್ ಬುಡಕಾಗ್ದೆ ನಮ್ ದ್ಯಾವ್ತೆ ಹಸುನ ಕೊಂದವ್ನ, ಈಗ ಅದು ನಮ್ಗ ಶಾಪ್ವಾಗ್ ತಿರ್ಗದ, ಇದ್ ಸರಿನಾ? ಓದ್ದಮ ನೀನೇ ಯೇಳಪ್ಪ’ – ಎಂದು ಯಾವುದೋ ಯಜಮಾನಿಕೆ ಮಾತನಾಡಿತು.
‘ಯಾವ್ದಣ್ಣೈ ಶಾಪ, ನೀಮು ನೂರಾರ್ ಕುರಿ ಕೋಳಿ ಕುಯ್ಕಂಡ್ ತಿಂದರ್ಯಲ್ಲ ಅದ್ ಶಾಪ್ವಲ್ವಾ?’ ಎಂದು ನಾಗರಾಜುವಿನ ಜೊತೆ ಬಂದಿದ್ದ ವ್ಯಕ್ತಿ ನುಡಿಯಲು ನಾಗರಾಜು ಸುಮ್ಮನಿರುವಂತೆ ಕೈಸನ್ನೆ ಮಾಡಿದ.
‘ಡೋ ನೀನೆಲ್ಲಿದ್ದಯ್ ಅನ್ನ ಗ್ಯಾನ ಇದ್ದುಡಾ, ಹಸುನ ಹೋಗಿ ಕುರಿ ಕೋಳಿಗ ಅದೆಂಗ್ ಹೋಲಿಸ್ದರುಡಾ?’ – ಮತ್ತೆ ಮರಿಸಿದ್ದೇಗೌಡ ಕೂಗಿಕೊಂಡ.
ಅಷ್ಟಕ್ಕೇ ನಾಗರಾಜು ಮಾತಿನಲ್ಲಿ ಮುನ್ನುಗ್ಗಿದ್ದ ‘ಯಾಕ್ರೀ ಹೋಲಿಸ್ಬಾರ್ದು, ಇವು ಪ್ರಾಣಿಗಳಾದ್ರೆ ಅವೂ ಪ್ರಾಣಿಗಳೇ, ನಿಮಗೆ ಇಲ್ಲಿ ದೇವ್ರು ಕಂಡ್ರೆ ಅಲ್ಲಿ ಯಾಕೆ ದೇವರು ಕಾಣೋಲ್ಲ ಹೇಳಿ. ನೀವು ಹೇಳೋ ಎಷ್ಟೋ ದೇವರುಗಳು ಹಂದಿ ಜನ್ಮ ಹೆತ್ತಿಲ್ವಾ, ಮತ್ಯಾಕೆ ನೀವು ಹಂದಿ ತಿಂತೀರಾ? ಅದನ್ನೂ ಪೂಜ್ಸಿ, ಇಲ್ದಿದ್ರೆ ಹೇಗೆ ಕುರಿ ಕೋಳಿ ರುಚಿ ನಾಲಗೆಗೆ ಹತ್ತುತ್ತೋ ಹಾಗೆ ಹಸು ಕೂಡ ನಾಲಗೆಗೆ ಹತ್ತೋ ಒಂದು ಶುಚಿ ರುಚಿಯಾದ ಆಹಾರÀ ಅನ್ನೋದು ಒಪ್ಕೊಳ್ರಿ, ಅದಕ್ಕೇಕೆ ದೇವರು ಪಟ್ಟ ಕೊಟ್ಟಿದ್ದೀರಿ?’ ಎಂದ.
ಅಷ್ಟಕ್ಕೇ ಮತ್ತೊಬ್ಬ ಯಜಮಾನನಾದ ಗುರುಸಿದ್ದನಿಗೆ ಅಸಹಾಯಕ ಕೋಪ ಬಂದಿತು. ಪಂಚೆ ಬಿಚ್ಚಿಹೋಗಿರುವುದನ್ನು ಕಡೆಗಣಿಸಿ ಕೋಪದಿಂದ ಎದ್ದು ನಿಂತವನು ‘ಹಸನ ಕಡ್ಕಂಡ್ ತಿನ್ನೋರು ನಿಮ್ಮಂತ ಹೊಲೆಯಾರ್ ಬಡ್ಡೆತವು ಕಣ ಬೊಡ್ಡೇದೆ, ನಮ್ಗ ಅದು ದ್ಯಾವ್ರು ಕಣ, ಒಂದ್ ಜೀಮದ್ ಬೆಲ ನಿಂಗೇನುಡ ಗೊತ್ತು’ ಎಂದು ಹೇಳಿ ಕೆಂಡ ಮಂಡಲನಾದ. ಆದರೆ ಅಷ್ಟೇ ಶಾಂತನಾಗಿದ್ದ ನಾಗರಾಜು ‘ರೀ ಸ್ವಾಮಿ, ನಿಮಗೆ ಅದು ದೇವ್ರಾದ್ರೆ ನಮಗೆ ಆಹಾರ, ಅದು ತಾನು ದೇವರು ಅಂತ ನಿಮಗೆ ಹೇಳ್ಕೊಂಡೇ ಹುಟ್ಲಿಲ್ಲ, ಯಾರೋ ನಿಮ್ಮ ದೊಡ್ಡವರು ಹೇಳಿದ್ರು ಕೇಳಿದ್ರಿ, ಆದರೆ ಅದು ಆಹಾರ ಅಂತ ನಮ್ಮ ದೊಡ್ಡವರು ಹೇಳಿದ್ದಾರೆ, ನಾವು ತಿಂತೀವಿ. ಒಂದು ವೇಳೆ ಅದು ದೇವರಾಗಿದ್ದರೆ ಕತ್ತಿಗೆ ಕುತ್ತಿಗೆ ಕೊಡಬಾರದಾಗಿತ್ತು, ನಾಲಗೆಗೆ ರುಚಿಯಾಗಬಾರದಿತ್ತು, ಹೊಟ್ಟೆಯಲ್ಲಿ ಜೀರ್ಣವಾಗಿ ಮಲವಾಗಬಾರದಿತ್ತು’ ಎಂದಾಗ ಒಂದಷ್ಟು ಜನ ಉದ್ರೇಕರಾಗಿ ನಾಗರಾಜುವಿನ ಮೇಲೆಗರೇಬಿಟ್ಟರು. ಯಾವನೋ ಒಬ್ಬ ನಾಗರಾಜುವಿನ ಮೂತಿಗೆ ಗುದ್ದಿದ್ದರಿಂದ ರಕ್ತ ತೊಟ್ಟಕ್ಕಿತು. ಉಳಿದ ಜನರೆಲ್ಲಾ ಸೇರಿಕೊಂಡು ಮೊದಲು ನ್ಯಾಯ ತೀರ್ಮಾನವಾಗಲಿ ಎಂದುಕೊಂಡು ಜಗಳ ಬಿಡಿಸಿದರು. ಇಷ್ಟಾದರು ವಿಚಲಿತನಾಗದ ನಾಗರಾಜು ಕರ್ಚಿಪ್ನಲ್ಲಿಯೇ ಸೋರುತ್ತಿದ್ದ ರಕ್ತವನ್ನು ಹಿಡಿದುಕೊಂಡ.
‘ವಡೈ, ಯಾನ ನಿಂದು? ಪಟ್ಣಕ್ ಹೋಗ್ಬುಟ್ಟು ಒಂಚಿಂಕ ಒದ್ಬುಟ್ಟಿವ್ನಿ ಅಂತ ಬಾಯಿಗ್ ಬಂದಂಗ್ ಒದುರ್ದಯುಡ, ಸುಮ್ಕ ಅಮಿಕ್ಕಂಡು ನಿನ್ನಟ್ಟಿಗ್ ಹೋಗು, ಕಾಳಪ್ಪಂಗ ಕೊಡ ಶಿಕ್ಷ ಕೊಟ್ಟು ನಾಮು ಶಾಪ ಕಳ್ಕತೀಮಿ’ ಎಂದು ಮರಿಸಿದ್ದೇಗೌಡ ಹೇಳಿದಾಗ ನಾಗರಾಜು ಅದು ನಡೆಯದ ಮಾತು ಎಂದು ನಿಂತ. ಜೊತೆಯಲ್ಲಿದ್ದವರು ‘ಅವನನ್ನು ಮುಟ್ಟಿ, ನೋಡುವ’ ಎಂಬಂತೆ ಕೆಕ್ಕರಿಸಿದರು.
ನಾಗರಾಜು ಮಾತನ್ನು ಮುಂದುವರೆಸಿದ – ‘ಮೊದಲನೆಯದಾಗಿ, ನೀವೇ ಒಂದು ವ್ಯವಸ್ಥೆ ಕಟ್ಟಿಕೊಂಡು ಈ ರೀತಿ ಶಿಕ್ಷಿಸಲು ಅನುಮತಿ ಕೊಟ್ಟೋರಾರು, ಈ ಹಳ್ಳಿಯಲ್ಲಿ ಪೋಲೀಸ್ ಸ್ಟೇಷನ್ ಇಲ್ದೇ ಇರಬಹುದು, ನಮ್ಮ ಹೋಬಳಿನಲ್ಲಿದೆಯಲ್ಲ, ಹೋಗಿ ಕಂಪ್ಲೆಂಟ್ ಕೊಡಿ, ಬಸ್ಸಿಗೆ ಇನ್ಸೂರೆನ್ಸ್ ಇದೆ, ಎಲ್ಲಾ ಕೋರ್ಟ್ನಲ್ಲೇ ಡಿಸೈಡ್ ಆಗುತ್ತೆ, ಅವನನ್ನ ಕಟ್ಟಿಹಾಕೋಕೆ ನೀವ್ಯಾರು? ಜೊತೆಗೆ ಸತ್ತುಹೋದ ಹಸುವಿನ ವಾರಸುದಾರರು ಎಲ್ಲಿ ತೋರಿಸಿ’ ಎಂದ.
ಆತನ ಮಾತಿನಿಂದ ಮತ್ತೂ ಉಗ್ರರಾದ ಜನರ ಗಮನ ಬೇರೆ ಕಡೆಗೆ ಹೋದದ್ದು ಆ ಹಸುವಿನ ವಾರಸುದಾರರನ್ನು ಹುಡುಕುವಾಗ. ಈವರೆವಿಗೂ ಆ ಹಸು ಯಾರಿಗೆ ಸೇರಿದ್ದು ಎಂಬುದೇ ತಿಳಿದಿರಲಿಲ್ಲ. ಗುರುಮಲ್ಲಶೆಟ್ಟಿ, ಸ್ವಲ್ಪ ವಯಸ್ಸಾಗಿದೆ, ಮಾತು ಕಡಿಮೆ, ಸುಧಾರಿಸಿಕೊಂಡು ಆತ ಹೇಳಿದ – ‘ನೋಡು ನಾಗ್ರಾಜು, ನಮ್ಮಳ್ಳಿಲಿ ಯೇನೇ ಗಲಾಟ ಗೌಜು ನಡುದ್ರೂ ಅದರ್ ತೀರ್ಮಾನ ಆಗದು ಈ ಚಾವಡಿಲೇ. ಇಲ್ಲೂ ಹಂಗೆ, ನಮ್ ಬೀದಿ ಒಳಕ್ಕ ಪೋಲಿಸ್ನೋರ್ನ ಬರಕ ಇದುವರ್ಗು ಬುಟ್ಟಿಲ್ಲ, ಬುಡದೂ ಇಲ್ಲ’ ಎಂದ. ಅಷ್ಟಕ್ಕೇ ನಾಗರಾಜುವಿನ ಜೊತೆಯಿದ್ದ ಒಬ್ಬ ‘ಅದು ನೀವ್ ಮಾಡ್ಕಂಡಿರದು ಸೋಮಿ, ಆದ್ರ ಗೌನ್ಮೆಂಟು ಹಂಗೇಳಲ್ಲ ಕಣೇಳಿ’ ಎಂದಾಗ ಉಳಿದವರು ‘ಈ ಸೂಳಮಕ್ಳು ಬರಿ ಮಾತ್ಗ ಬಗ್ಗಲ್ಲ, ಕಟ್ಟಾಕ್ರುಡಾ ಒಂದ್ ಗತಿ ಕಾಣ್ಸಮು’ ಎಂದು ಕೋಪದಿಂದ ಎದ್ದಾಗ ಮತ್ತೆ ಯಜಮಾನರ ಸನ್ನೆಯ ಮೇರೆಗೆ ಮೌನಕ್ಕೆ ಶರಣಾದರು.
ಕತ್ತೆಯ ವಾರಸುದಾರನಾದ ಕಿಟ್ಟಪ್ಪ ಮತ್ತೆ ‘ಬುದ್ಯೋರ... ಸಾಲ ಮಾಡ್ಕಂಡಿವ್ನಿ...’ ಎಂದು ಮಾತು ಮುಂದುವರೆಸುವಷ್ಟರಲ್ಲಿ ಯಾವನೋ ಒಬ್ಬ ಆತನ ಕತ್ತಿನ ಪಟ್ಟಿಯನ್ನು ಹಿಡಿದುಕೊಂಡು ದರ ದರನೆ ಎಳೆದು ಚಾವಡಿ ಚಪ್ಪರದ ಹೊರಗೆ ಹಾಕಿ ‘ಯೇನಾಯ್ತುಡ ನಿಂಗ, ಅಲ್ಲೆಲ್ಲಾ ಹಸ ಸತ್ತೋಗದ, ಶಾಪ ಅದು ಇದು ಅಂತ ತಲೆ ಕೆಡುಸ್ಕತಾ ಇದ್ರ ನಿಂದೇನುಡಾ ಸಿಬ್ರಿ, ನೀನೂ ಈ ಊರ್ನವ್ನಲ್ವುಡ?’ ಎಂದು ರೇಗಿದನು. ಅವನನ್ನು ಎಳೆದುಕೊಂಡುಹೋದ ರೀತಿ ನಾಗರಾಜುವಿಗೆ ಇಷ್ಟವಾಗಲಿಲ್ಲ.
‘ಕಿಟ್ಟಪ್ಪನ ಬಾಯಿ ಯಾಕ್ರಿ ಮುಚ್ಚಿಸ್ತೀರಾ? ಕತ್ತೆಗಳೂ ಪ್ರಾಣಿಗಳಲ್ವಾ, ಮುಂಜಾನೆ ಎದ್ದಾಗ ಕತ್ತೆ ಮುಖ ನೋಡುದ್ರೆ ಒಳ್ಳೇದು ಅಂತೀರಿ, ಕತ್ತೆಯನ್ನು ಲಕ್ಷ್ಮಿಅಂತ ಪೂಜಿಸ್ತೀರಿ, ಜೊತೆಗೆ ಆತ ಆ ಎರಡು ಕತ್ತೆಗಳ್ನ ದುಡ್ಡು ಕೊಟ್ಟು ತಂದಿದ್ದಾನೆ, ಈಗ ಆ ದುಡ್ಡನ್ನು ಹೊಂದಿಸಿಕೊಡೋರು ಯಾರು?’ ಎಂದು ನಾಗರಾಜು ಪ್ರಶ್ನೆ ಎಸೆದೆ.
ಈ ಪ್ರಶ್ನೆ ಬಂದಿದ್ದೆ ಮರಿಸಿದ್ದೇಗೌಡನಿಗೆ ಇನ್ನಿಲ್ಲದ ಖುಷಿಯಾಯಿತು. ‘ಜಿಟ, ಊಂಕನುಡಾ, ನಿನ್ ಮಾತ್ನ ಒಪ್ಕಳವ್, ನನ್ ಪ್ರಶ್ನಗ ಉತ್ರ ಕೊಡು. ನೀನು ಹಸ ತಿಂದಯಲ್ಲ ಹಂಗ ಕತ್ತನೂ ತಿಂದಯ?’ ಎಂದು ಕೇಳಿದನು. ಇಡೀ ಸಭೆಯ ಗೊಳ್ ಎಂದಿತು. ಓದಿಕೊಂಡಿದ್ದ ನಾಗರಾಜು ಯಾವುದಕ್ಕೂ ಬಗ್ಗದವನಾಗಿದ್ದ. ‘ಸರಿ ಸ್ವಾಮಿ, ನಿಮ್ಮ ಪ್ರಶ್ನೆಗೆ ಉತ್ತರ ಕೊಡ್ತೀನಿ, ಅದಕ್ಕಿಂತ ಮುಂಚೆ ನನ್ನದೊಂದು ಸಣ್ಣ ಪ್ರಶ್ನೆ, ಆ ಪ್ರಶ್ನೆಯಲ್ಲೇ ಉತ್ತರ ಇದೆ’ ಎಂದ. ಯುದ್ಧಕ್ಕೆ ನಿಂತವನಂತೆ ಕಂಡುಬಂದ ಮರಿಸಿದ್ದೇಗೌಡ ‘ಅದೇನ್ ಕೇಳುಡಾ’ ಎಂದ. ‘ನೀನು ಹಸುವಿನ ಹಾಲು ಕುಡಿತೀಯಲ್ಲ, ಹಾಗೆ ಕತ್ತೆ ಹಾಲು ಯಾಕೆ ಕುಡಿಯೋಲ್ಲ’ ಎಂದು ನಾಗರಾಜು ಕೇಳಿದೊಡನೆ ಮರಿಸಿದ್ದೇಗೌಡ ಪತರುಗುಟ್ಟುವುದರ ಜೊತೆಗೆ ‘ಯೇ, ಮೊದ್ಲು ಈ ಬೊಡ್ಡೈದನ್ನೂ ಕಟ್ಟಾಕ್ರುಡಾ’ ಎಂದ. ವಿಚಲಿತನಾಗದ ನಾಗರಾಜು ‘ಕಟ್ಟಿಹಾಕುವುದು ಇರಲಿ, ನನ್ನ ಪ್ರಶ್ನೆಗೆ ಉತ್ತರಿಸಿ ಸೋಮಿ’ ಎಂದ. ಅದಕ್ಕೆ ಆತ ‘ಕುಡಿಯಲ್ಲಕಯ್ಯಾ’ ಎಂದ ಮುಖ ತಿರುಗಿಸಿಕೊಂಡು.
‘ಯಾಕೆ?’
‘ಯಾಕಂದ್ರ, ಯಾರಾದ್ರೂ ಈ ಲೋಕ್ದಲ್ಲಿ ಕತ್ತ ಹಾಲ್ ಕುಡ್ದರುಡೋ’
‘ಅದನ್ನೇ ಕೇಳಿದ್ದು ಯಾಕೆ ಅಂತ?’
‘ಅದು ಕೆಟ್ಟದು ಕಣ ಹ್ಯಾಪ ಮೊಗ್ದವ್ನೆ’
‘ಕೆಟ್ಟದ್ದು ಅಂತ ಯಾರೇಳಿದ್ದು’
‘ಯೋ ಸುಮ್ನ ತಲ ತಿನ್ಬೇಡ, ಅದರ ಹಾಲ್ ಕುಡ್ದು ನಂಗ ಅಬ್ಯಾಸ ಇಲ್ಲ ಕಯ್ಯಾ, ಇದ್ದಿದ್ರ ಇವತ್ತು ಚೊಂಬ್ ಗಟ್ಲೇ ಕುಡಿತಿದ್ದಿ’
‘ನಾವೂ ಹಾಗೆ ಸ್ವಾಮಿ, ಹುಟ್ಟಿದಾಗಿಂದ ನಮ್ಮ ದೊಡ್ಡವರು ಅಭ್ಯಾಸ ಮಾಡ್ಸಿದ್ರೆ ತಿಂತಾ ಇದ್ವಿ, ನೀವು ಕುರಿ ಕೋಳಿ ತಿನ್ನೋದು ಕೂಡ ಚಿಕ್ಕಂದಿನಿಂದ ಬಂದ ಅಭ್ಯಾಸ, ಅಷ್ಟಕ್ಕೂ ತಿನ್ನುವ ವಸ್ತುಗಾಗಿ ಜಗಳ ಕಾಯೋ ನಾವೆಲ್ಲಾ ಒಂದೇ ದೇಶದವರೇ?’
ಮರಿಸಿದ್ದೇಗೌಡನ ಪಿತ್ತ ನೆತ್ತಿಗೇರಿತು. ‘ಡೋ, ಈ ಬೋಡ್ಡೈಕ್ಳು ಜಗ್ಳ ಆಡಕೇ ಇಂಜಾನದಿಂದ ಪಿಲಾನ್ ಮಾಡ್ಕ ಬಂದರ, ಮೊದ್ಲು ಈ ಬೋಡ್ಡೈಕ್ಳನ್ನ ಕಟ್ಟಾಕ್ರುಡೋ’ ಎಂದ.
‘ರೀ ಕಟ್ಟಿಹಾಕೋದು ಆಮೇಲಿರಲಿ, ಕಾಳಪ್ಪ ಏನೂ ತಪ್ಪು ಮಾಡಿಲ್ಲ, ಮೊದಲು ಅವನ ಕಟ್ಟನ್ನ ಬಿಚ್ಚಿ, ಇಲ್ಲದಿದ್ದರೆ ಕಥೆ ನೆಟ್ಟಗಿರೋದಿಲ್ಲ’ ಎಂದು ನಾಗರಾಜು ಹೇಳಿದೋಡನೆ ಒಂದಷ್ಟು ಜನ ಪಂಚೆ ಟವೆಲ್ಲನ್ನು ಕೊಡವಿಕೊಂಡು ಎದ್ದು ನಿಂತರು. ‘ಬುಡಲ್ಲ ಅಂದ್ರ ಯೇನ್ ಮಾಡ್ದೆಯುಡೋ, ಅದೇನ್ ಕಿಸ್ದಯ್ ನಾಮು ಚಿಂಕ ನೋಡ್ತಿಮಿ’ ಎಂದವರೇ ನಾಗರಾಜು ಮತ್ತು ತಂಡದ ಮೇಲೆ ಬಿದ್ದರು. ಆ ಗುಂಪಿಗೆ ಈ ಜನಗಳು ಕಾಲಿಗೆ ಸಿಕ್ಕ ತರಗೆಲೆಗಳಂತೆ ಸಿಕ್ಕಿಕೊಂಡರು. ಇಷ್ಟಬಂದಂತೆ ಬಡಿದು ಕಂಬಕ್ಕೆ ಕಟ್ಟಿ ಹಾಕಿದರು.
ಮತ್ತೆ ಚಾವಡಿಯ ಹಜಾರದಲ್ಲಿ ಕುಳಿತು ಏದುಸಿರುಬಿಟ್ಟ ಯಜಮಾನರು. ‘ತುಂಡೈಕ್ಳೆಲ್ಲಾ ಮಚ್ಚು ಕಡ್ಕತ್ತಿ ಎತ್ಕಂಡು ಆ ರೋಡ್ತಮು ನಿಂತ್ಕಳ್ರುಡಾ, ಅವರ್ ಜನ ಬಂದ್ರ ಹಿಂದ ಮುಂದ ನೋಡ್ದೆ ಕೊಚ್ಚಾಕಿ, ದೇವತೆಗಳ ಶಾಂತಿಗ ಅಂತ ಅಯ್ನೋರು ಒಬ್ಬಂಗ ಶಿಕ್ಷೆ ಕೊಡಕ್ ಹೇಳರ, ಇವ್ರೆಲ್ರುಗೂ ಭಾರುಸ್ರುಡ’ ಎಂದು ಒಕ್ಕೊರಲಿನಿಂದ ಯಜಮಾನರು ಹೇಳಿದರು. ಎಲ್ಲರಿಗೂ ಇಷ್ಟಬಂದಂತೆ ಭಾರಿಸುವಾಗ ಇತ್ತಕಡೆ ಹೊಲಗೇರಿಯಿಂದ ಜನಗಳು ಈ ವಿಚಾರ ತಿಳಿದು ದೊಣ್ಣೆ ಮಚ್ಚುಗಳನ್ನು ಹೊತ್ತುಕೊಂಡು ನುಗ್ಗಿದರು. ಹೊಡೆದಾಟ ಬಡಿದಾಟ ಶುರುವಾಗಿ ಅಲ್ಲೊಂದು ಕುರುಕ್ಷೇತ್ರವೇ ನಡೆಯುವಂತೆ ಕಂಡಿತು. ಅಷ್ಟಕ್ಕೇ, ನಾಗರಾಜು ಕಟ್ಟು ಬಿಡಿಸಿಕೊಂಡು ಓಡಿಬಂದ. ಆಗಷ್ಟೇ ಪ್ರಾರಂಭವಾಗಿದ್ದ ಈ ಬಡಿದಾಟವನ್ನು ತಡೆಯುವಲ್ಲಿ ಸಫಲವಾದ. ಎರಡೂ ಕಡೆಯ ಜನಗಳು ಹೆಡೆಯೆತ್ತಿದ ವಿಷ ಸರ್ಪದಂತೆ ಮೊರೆಯುತ್ತಿದ್ದರು.
ಸಮಾಧಾನಪಡಿಸಿ ತನ್ನ ಜನಗಳನ್ನು ತನ್ನ ಬೀದಿಗೆ ನಾಗರಾಜು ಕರೆದುಕೊಂಡು ಬಂದಾಗ ಜನರು ಅಸಹಾಯಕರಾಗಿ ಮಾತನಾಡಿದರು.
‘ನೀಮ್ ಯಾವಾಗ್ ಬಂದ್ರಿ ಸಾ, ನಮ್ಗೊಂದ್ ಮಾತೇಳದಲ್ವ, ಈ ಬೀದಿವೊಳ್ಗ ನುಗ್ಗುದ್ ನಮ್ ಐಕಳು ಇನ್ನೂ ಬಂದಿಲ್ವಲ್ಲ ಅಂತ ಕೆಂಚಿ ನೋಡಕ್ ಬಂದಿದ್ರಿಂದ ಒಳ್ಳೆದಾಯ್ತು, ಇಲ್ದಿದ್ರ ಅಡ್ನಾಡಿ ಬೊಡ್ಡೇತವು ನಿಮ್ಮನ್ನ ಕೊಂದೇ ಬುಡವ್ರಲ್ಲ ಸಾ’
‘ಈಗ್ಲೂ ನೀಮು ಊ ಅನ್ನಿ, ಆ ಸೂಳಮಕ್ಳಗ ಒಂದ್ ಗತಿ ಕಾಣಿಸ್ತಿಮಿ’
ನೋವಿನಲ್ಲೂ ಮಾತನಾಡಿದ ನಾಗರಾಜು ‘ದಯವಿಟ್ಟು ಎಲ್ಲರೂ ಸುಮ್ನಿರಿ, ಹೊಡೆದಾಟ ಬಡಿದಾಟ ಕೊಲೆಯಿಂದ ಯಾವುದಕ್ಕೂ ಪರಿಹಾರ ಸಿಗೋಲ್ಲ, ಇದು ಇವತ್ತು ನಿನ್ನೆಯದಲ್ಲ, ನಾಳೆ ನಾನು ಪಟ್ಟಣಕ್ಕೆ ಹೋಗಿ ಪೋಲೀಸರೊಂದಿಗೆ ಈ ವಿಚಾರವಾಗಿ ಮಾತನಾಡುವೆ’ ಎಂದನು. ಎಲ್ಲರೂ ಹಿಂಸೆಯಿಂದ ಆಗಲಿ ಎಂದು ಒಪ್ಪಿಕೊಂಡರು.
ಮುಂಜಾನೆಯೇ ಪೋಲೀಸ್ನವರನ್ನು ಕಾಣುತ್ತೇನೆ ಎಂದು ಹೇಳಿದ್ದ ನಾಗರಾಜು ಆಗಿದ್ದ ಪೆಟ್ಟಿನ ನೋವನ್ನು ತಾಳದಾದ. ನಾಗರಾಜು ಮತ್ತು ಉಳಿದವರಿಗೆ ಮನೆ ಔಷಧಿ ಕೊಡಲಾಯಿತು. ಅವರೆಲ್ಲಾ ಸಂಪೂರ್ಣವಾಗಿ ಗುಣಮುಖರಾಗಲು ಬರೋಬ್ಬರಿ ಇಪ್ಪತ್ತು ದಿನಗಳು ಹಿಡಿದವು. ಈ ದಿನಗಳಲ್ಲಿ ತನ್ನ ಜನಗಳಿಂದ ಯಾವುದೇ ಗಲಭೆಯಾಗದಿರುವಂತೆ ನಾಗರಾಜು ನೋಡಿಕೊಂಡ. ಇಪ್ಪತ್ತನೇ ದಿನ ಈ ವಿಚಾರದ ಇತ್ಯರ್ಥಕ್ಕೆ ಪಟ್ಟಣ್ಣಕ್ಕೆ ಹೊರಟೇಬಿಟ್ಟ.
ಆದರೆ,
ಆದರೆ, ಇಪ್ಪತ್ತನೇ ದಿನದ ರಾತ್ರಿ ಹೊಲಗೇರಿಯಿಂದ ಒಂದೈದು ಜನ ಪಂಜಿನೊಂದಿಗೆ ಕಂಬಳಿ ಮೊಗಚಿಕೊಂಡು ಹೊರಟರು. ಸರಿರಾತ್ರಿ. ಸುಮಾರು ಹನ್ನೆರಡು ಘಂಟೆಯಿರಬಹುದು. ಸುತ್ತಲ ನೀರವತೆಗೆ ಊರಂಚಿನ ಕೆರೆಯೇರಿ ಮೇಲಿನ ಗಾಳಿಯ ರಭಸ ಗುಯ್ ಎಂದು ಕಿವಿಗೆ ಬಡಿಯುತ್ತಿತ್ತು. ಏನೂ ಇಲ್ಲದಿದ್ದರೂ ಅದೇನನ್ನೋ ನೋಡಿಕೊಂಡು ‘ಕುಯ್ಯೋ’ ಎಂದು ರಾಗ ಎಳೆದು ಬೊಗಳುವ ನಾಯಿಗಳು. ಕೆರೆಯೇರಿ ಮೇಲೇ ಹಾದುಹೋಗುವ ಹೊಲ ಕಾಡಿನ ಕಾಲ್ದಾರಿ ಅಕ್ಷರಶಃ ಮುಗುಮ್ಮಾಗಿ ಏನೋ ಅವ್ಯಕ್ತ ಭಯ ಹುಟ್ಟು ಹಾಕುತ್ತಿತ್ತು. ಯಾರಿಗೂ ತಿಳಿಯದಂತೆ ಬೀದಿಯೊಳಗೆ ನುಗ್ಗಿದ ಆ ಐದು ಜನ ಗುಡಿಸಲಿಗೆ ಬೆಂಕಿ ಇಟ್ಟು ದಿಕ್ಕಾಪಾಲಾಗಿ ಓಡಿಬಿಟ್ಟರು.
ಐದುಕಡೆಯಿಂದ ಬೆಂಕಿಯಿಟ್ಟಿದ್ದರಿಂದ ಅಗ್ನಿ ತನ್ನ ಕೆನ್ನಾಲಗೆ ಚಾಚಿ ಭಗ್ಗನೆ ಭುಗಿಲೆದ್ದಿತು. ಮನೆಯೊಳಗಿನ ಜನ ಚಿಳ್ಳೋ ಎಂದು ಚೀರಿಕೊಳ್ಳುವವರೆವಿಗೂ ಅಕ್ಕಪಕ್ಕದವರಿಗೆ ತಿಳಿಯಲಿಲ್ಲ. ಬೆದರಿದ ಬೀದಿ ಜನ ಕೂಡಲೇ ಕಾರ್ಯ ಪ್ರವೃತ್ತರಾದರು. ದೊಣ್ಣೆಗಳಿಂದ ಬೆಂಕಿಯನ್ನು ಚದುರಿಸಿದರು, ಧಗಧಗನೆ ಉರಿವ ಬೆಂಕಿಯೇ ದೊಣ್ಣೆಗೆ ಹತ್ತಿಕೊಳ್ಳತೊಡಗಿತು. ಹೆಂಗಸರು ಇದ್ದಬದ್ದ ನೀರನ್ನೆಲ್ಲಾ ತಂದು ಸುರಿದರೂ ಬೆಂಕಿ ನಂದಲಿಲ್ಲ. ಗುಡಿಸಿಲಿನ ಪಕ್ಕದಲ್ಲೇ ಒಣಹುಲ್ಲಿದ್ದದ್ದರಿಂದ ಬೆಂಕಿಯ ಆರ್ಭಟ ಆ ಬೀದಿಯನ್ನೇ ಗೆದ್ದುಕೊಂಡಿತು. ಜನ ಏನೂ ಮಾಡದ ಸ್ಥಿತಿಯಲ್ಲಿ ನಿಂತರು. ಒಳಗಿದ್ದ ಒಂದೇ ಒಂದು ಜೀವವೂ ಹೊರಗೆ ಬರಲಿಲ್ಲ.
ಮುಂಜಾನೆಯ ಸೂರ್ಯ ರಕ್ತ ನೋಡಲೆಂದೇ ಆ ದಿನ ಹುಟ್ಟಿದ್ದ. ಬೆಳಗಾದದ್ದೇ ಇಡೀ ಊರಿನಲ್ಲಿ ಗಲಭೆ ಎದ್ದಿತು. ‘ಅಲ್ಲ ಕಣ್ರುಡ, ಗಟ್ಟಿ ಮನ್ಸ, ನಮ್ ಯಜ್ಮಾನ ಮರಿಸಿದ್ದೇಗೌಡನ್ ವಂಶವೇ ನಿರ್ವಂಶ ಆಗೋಯ್ತಲ್ಲುಡಾ, ಇನ್ನೂ ಆ ಬೋಡ್ಡೈಕ್ಳನ್ನು ಬುಟ್ರ ನಮ್ಗ ಉಳ್ಗಾಲ ಇಲ್ಲ’ ಎಂದು ಹೊಲೆಗೇರಿಗೆ ನುಗ್ಗಿದರು. ಇವರಿಗಿಂತಲೂ ಮುಂಚೆಯೇ ಸಜ್ಜಾಗಿದ್ದ ಆ ಜನರೂ ಯುದ್ಧಕ್ಕೆ ನಿಂತರು. ದೊಣ್ಣೆ, ಸೌದೆ, ಮಚ್ಚು, ಕಡ್ಕತ್ತಿಯಿಂದ ಹೊಡೆದಾಟ ಬಡಿದಾಟ ಶುರುವಾಯಿತು. ಈ ಗಲಭೆಗೆ ಹೆಂಗಸರೂ ಶಾಮೀಲಾದರು. ಕೈಯಲ್ಲಿ ಕಾರದಪುಡಿ ತುಂಬಿಕೊಂಡು ಕಸಪೊರಕೆ ಹಿಡಿದು ನಿಂತರು. ಅವರು ಒಂದೆರಡು ತಲೆ ಕೊಚ್ಚಿದರೆ, ಇವರು ಒಂದೆರಡು ತಲೆ ಕೊಚ್ಚಿದರು. ಇದೆಲ್ಲಾ ಕ್ಷಣಮಾತ್ರದಲ್ಲಿ ನಡೆದುಹೋಯಿತು. ಅಷ್ಟಕ್ಕೇ ಇತರೆ ಬಣ್ಣದ ಜನಗಳು ಮಧ್ಯೆ ನುಗ್ಗಿ ಎರಡೂ ಗುಂಪುಗಳನ್ನು ಸಮಾಧಾನ ಪಡಿಸಿದರು.
ಊರಿನ ಪ್ರಮುಖ ಪಂಚಾಯಿತಿ ಸ್ಥಳವಾದ ಬಸವನಗುಡಿಯ ಮೊಗಸಾಲೆಯಲ್ಲಿ ಊರಿನ ಜನರೆಲ್ಲಾ ಸೇರಿಕೊಂಡರು. ಈ ಎರಡೂ ಗುಂಪುಗಳು ಇಲ್ಲೂ ಮೊರೆಯುತ್ತಿದ್ದವು. ಪಂಚೆಯೊಳಗೆ ಯಾರಿಗೂ ಕಾಣದಂತೆ ಮಚ್ಚು, ಕತ್ತಿಗಳನ್ನು ತುರುಕಿಕೊಂಡಿದ್ದರು. ಇತರೆ ಜನಗಳು ‘ಇವೆಲ್ಲಾ ಬೇಕಾ?’ ಎಂದೊಡನೆ ಮತ್ತೆ ಮಾತಿನ ಗಲಭೆ ಜಾಸ್ತಿಯಾಯಿತು.
‘ನಮ್ ಮರಿಸಿದ್ದೇಗೌಡ, ಅವ್ನ್ ಕುಟುಂಬ ಅಲ್ಲಿ ಸುಟ್ಟು ಕರಕ್ಲಾಗದ, ಅವನ್ ಗುಡ್ಲಿಗೆ ಬೆಂಕಿಯಿಟ್ಟಮ ಯಾರ? ಅವರ್ನ ಮೊದ್ಲು ಎಳಿರಿ ಸೋಮಿ, ಆ ಬೊಡ್ಡೈಕ್ಳನ್ನ ಕೊಚ್ಚಿ ಮಾರವ್ವನ್ ಮುಂದ ತಲೆ ಇಡವರ್ಗು ನಮ್ಗ ಸಮಾಧಾನ ಇಲ್ಲ’
‘ಇದನ್ನೆಲ್ಲ ಆ ನಾಗ್ರಾಜನೇ ಮಾಡ್ಸಿರೋದು, ಆ ಸೂಳಮಗ ಮತ್ತ ಆ ನಾಕ್ ಜನಾನೇ ಇದನ್ನ ಮಾಡಿರದು, ಅವರ್ನ ಮೊದ್ಲು ಕರ್ಸಿ ಸೋಮಿ’
‘ಈ ಬೋಡ್ಡೈಕ್ಳು ಹಸನ ಕೊಂದದ್ದಲ್ದೇ ನಮ್ ಜನ್ಗೊಳ್ನು ಸುಟ್ಟ ಹಾಕವ್ರೆ, ಮೊದ್ಲು ಆ ಬೋಡ್ಡೈಕ್ಳನ್ನ ಕರಿರಿ’
ಏನೇ ಹೇಳಿದರೂ ಆ ಜನಗಳನ್ನು ಮೌನವಾಗಿರಿಸಲು ಉಳಿದವರಿಗೆ ಸಾಧ್ಯವಾಗಲಿಲ್ಲ. ಹೊಲಗೇರಿಯಿಂದ ಬಂದ ಜನರೂ ಸುಮ್ಮನೇ ಇರಲಿಲ್ಲ.
‘ಯಾವಂಡ ಅವ ನಮ್ ನಾಗ್ರಾಜುನ ಸೂಳಮಗ ಅಂದಮ, ಅಂತ ಹಲ್ಕ ಕೆಲ್ಸನ ಮಾಡ ಜನ ನಾಮಲ್ಲ, ನಾಕ್ ಜನಾನು ಕಟ್ಟಾಕಿ ದನಕ್ ಹೊಡ್ದಂಗ್ ಹೊಡ್ದರಲ್ಲ, ನೀವೇ ಮಾಡಿದ್ರೂ ಮಾಡಿ ನಮ್ಮೆಲ್ ಎತ್ತಾಕಿರ್ಬೈದು’
‘ಯೋ, ಈ ಊರಲ್ಲಿ ಏನೇ ನಡೆದ್ರೂ ನಾಮೇ ಜಬಾಬ್ದಾರಿ ನುಡೋ, ನಾಮೇ ಮಾಡಿಮಿ ಅನ್ನಕ ನಿನ್ನತ್ರ ಏನುದ್ದುಡೋ ಕಂಡದ್ದು’
ಒಂದಷ್ಟು ಹೆಣಗಳು ಬಿದ್ದಿರುವುದರಿಂದ ಪಂಚಾಯಿತಿಯ ಮೂಲಕ ಶಾಂತಿ ತರುವುದು ನಿಜಕ್ಕೂ ಕಷ್ಟ. ಇಲ್ಲೂ ಕೂಡ ಜನಗಳು ಯುದ್ಧಕ್ಕೆ ಸನ್ನದ್ಧರಾಗೇ ನಿಂತಿದ್ದರು. ಮದ್ಯೆ ನಿಂತು ‘ಸಮಾಧಾನ ಸಮಾಧಾನ’ ಎಂದು ಹೇಳಿದವರನ್ನೂ ಜಾಡಿಸಿ ನುಗ್ಗಿದರು. ಮತ್ತೆ ಹೊಡೆದಾಟ ಬಡಿದಾಟ ಶುರುವಾಯಿತು. ಅಷ್ಟಕ್ಕೇ ಒಂದು ಜೀಪು ವೇಗವಾಗಿ ಬಂದು ಅಲ್ಲಿ ನಿಂತುಕೊಂಡಿತು. ಪೋಲೀಸ್ ಜೀಪನ್ನು ಕಂಡ ಒಂದಷ್ಟು ಜನ ಕೆಟ್ಟನೋ ಬಿದ್ದನೋ ಎಂಬ ದಿಕ್ಕಾಪಾಲಾಗಿ ಓಡಿದರು. ಅಷ್ಟು ಜನರಲ್ಲಿ ಒಬ್ಬರೂ ಪೋಲೀಸರ ಕೈಗೆ ಸಿಗಲಿಲ್ಲ. ಪಟ್ಟಣಕ್ಕೆ ಹೋಗಿದ್ದ ನಾಗರಾಜು ಪೋಲೀಸ್ ಜೀಪಿನೊಂದಿಗೆ ಊರಿಗೆ ಬಂದಿದ್ದ. ಆದರೆ, ತಾನಿಲ್ಲದೇ ಇರುವಾಗ ನಡೆದ ಘಟನೆಗೆ ತೀವ್ರ ಮರುಕಪಟ್ಟ. ನಾವು ನಾವೇ ಕಿತ್ತಾಡಿ ಹೆಣ ಬೀಳುವುದು ಈ ಶತಮಾನದ ದುರಂತವೆಂದು ಬಗೆದ.
ಪೋಲೀಸರಿಗೆ ಯಾರೂ ಸಿಗದಿದ್ದರೂ ಪೋಲೀಸರ ಆಜ್ಞೆಯ ಮೇರೆಗೆ ಚಾವಡಿಯಲ್ಲಿ ಎಲ್ಲರನ್ನೂ ಸೇರಿಸಲಾಯಿತು. ಅಷ್ಟಕ್ಕೇ ಪೋಲೀಸ್ ತುಕಡಿಗಳು ಊರನ್ನೆಲ್ಲಾ ಸುತ್ತುವರೆದಿದ್ದವು. ನಾಲ್ಕು ಹೆಣಗಳನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಿ, ಉಳಿದವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕಳುಹಿಸಲಾಯಿತು. ಚಾವಡಿಯಲ್ಲಿ ಸೇರಿದ್ದ ಜನಗಳ ಮೂಲಕ ಎಲ್ಲಾ ವಿಚಾರಗಳನ್ನು ಪೋಲೀಸರು ಸಂಗ್ರಹಿಸಿಕೊಳ್ಳಲು ಪ್ರಯತ್ನಿಸಿದರು. ಇಷ್ಟಾದರೂ ತಿದ್ದಿಕೊಳ್ಳದ ಜನ ಇಲ್ಲೂ ಕೂಗಾಡಿದರು.
‘ನೀಮೇ ಹೇಳಿ ಸೋಮಿ, ಒಂದಸುಗ ಗುದ್ಸಿ ಸಾಯ್ಸೋದು ನ್ಯಾಯ್ವಾ? ಅವನ್ನ ನಾಮು ಈ ನಾಗ್ರಾಜು ಹೇಳ್ವಂಗ ಸುಮ್ಕೆ ಬುಟ್ಬುಡ್ಬೇಕಂತ, ಹೇಳಿ ಸೋಮಿ’ - ಪೋಲೀಸ್ ಕಂಡು ಹೆದರಿದ್ದರೂ ಗುರುಮಲ್ಲಶೆಟ್ಟಿ ತಡಬಡಾಯಿಸಿ ಈ ರೀತಿ ಒದರಿದ.
ಅಷ್ಟಕ್ಕೆ ನಾಗರಾಜು ‘ರೀ, ಪೋಲೀಸ್ನೋರ್ನೆ ಕೇಳ್ರಿ, ಎಲ್ಲದಕ್ಕೂ ಒಂದು ರೀತಿ ನೀತಿ ಅನ್ನೋದಿರುತ್ತೆ, ಕಾಳಪ್ಪನ್ನ ಕಟ್ಟಿ ಹಾಕಿ ಒಡೆಯೋಕೆ ನೀವ್ಯಾರಿ?್ರ’
ಅಲ್ಲೇ ಇದ್ದ ಕಿಟ್ಟಪ್ಪ ‘ಬುದ್ಯೋರ...’ ಎಂದ. ಆದರೆ, ಆತನ ಮಾತು ಯಾರಿಗೂ ಕೇಳಲಿಲ್ಲ.
ಜಗಜಟ್ಟಿಯಂತೆ ವರ್ತಿಸುವ ಧಾಮೋದರ ಎದೆ ನಿಗುರಿಸಿಕೊಂಡು ಎದ್ದ ‘ಇಡೀ ಜನ್ಗೊಳೆ ತಿರುಗ್ ಬಿದ್ರ ಯಾವ್ ಪೋಲೀಸ್ ಯಾನ್ ಮಾಡಕ್ಕಾದ್ದು, ಊರ್ಗಂಟಿರ ಶಾಪನ ಅವ್ರ್ ಹೋಗಸ್ದರುಡೋ’ ಎಂದು ಘರ್ಜಿಸಿದ.
ಮಾತಿಗೆ ಮಾತು ಬೆಳೆದಾಗ ಮಧ್ಯೆ ಪ್ರವೇಶಿಸಿದ ಪೋಲೀಸರು. ಊರಿನ ಯಜಮಾನರಿಗೆ ಅಪಘಾತವಾದ ಸ್ಥಳವನ್ನು ತೋರಿಸುವಂತೆ ಕೇಳಿಕೊಂಡರು. ಎಲ್ಲರೂ ಅಪಘಾತ ನಡೆದ ಸ್ಥಳಕ್ಕೆ ನುಗ್ಗಿದರು. ಮದ್ಯೆ ಯಾರೋ ‘ಯೇ ಹಸುನಾ ನಾಮೇ ಊಳ್ಬೇಕು, ಈ ಪೋಲೀಸ್ನೋರು ಆಸ್ಪತ್ರಗ ಸಾಗುಸ್ಬುಡ್ತಾರ ಬುಡ್ಬಾರ್ದು’ ಎಂದ. ಮತ್ತೊಬ್ಬ ‘ಈ ಹೊಲೆಯಾರ್ ನನ್ ಮಕ್ಳು ಕುಯ್ಕಂಡ್ ತಿನ್ಕಂಡಿದ್ರೂ ತಿನ್ಕಂಡಿರ್ತರ’ ಎಂದ. ವೇಗವಾಗಿ ನಡೆಯುತ್ತಿದ್ದ ಪೋಲೀಸರ ಬಳಿ ಬಂದ ಕಿಟ್ಟಪ್ಪ ‘ಸೋಮಿ, ಯಾನ ಅಂದ್ರ...’ ಅನ್ನುವಷ್ಟರಲ್ಲಿ ‘ರೀ ಹೋಗಿ ಅತ್ಲಾಗೆ’ ಎಂದರು.
ಅಪಘಾತ ನಡೆದ ಸ್ಥಳಕ್ಕೆ ಬಂದ ಎಲ್ಲರಿಗೂ ಆಶ್ಚರ್ಯವಾಯಿತು. ಅಲ್ಲಿ ಹಸುವೂ ಇರಲಿಲ್ಲ, ಕತ್ತೆಗಳೂ ಇರಲಿಲ್ಲ. ಸದ್ದಿಲ್ಲದೇ ಹುಳುಗಳು ಅವುಗಳನ್ನು ಮೇಯ್ದು ಬರಿ ಮೂಳೆ ಉಳಿಸಿದ್ದವು!