ಒಂದು ಆದಿಮ ಪ್ರೇಮ

ಒಂದು ಆದಿಮ ಪ್ರೇಮ

ಪುಸ್ತಕದ ಲೇಖಕ/ಕವಿಯ ಹೆಸರು
ನಂದಿನಿ ಹೆದ್ದುರ್ಗ
ಪ್ರಕಾಶಕರು
ವೀರಲೋಕ ಬುಕ್ಸ್ ಪ್ರೈ.ಲಿ., ಚಾಮರಾಜಪೇಟೆ, ಬೆಂಗಳೂರು -೫೬೦೦೧೮, ಮೊ: ೭೦೨೨೧೨೨೧೨೧
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೨೩

ವೀರಲೋಕ ಪ್ರಕಾಶನ ಸಂಸ್ಥೆಯಿಂದ ಹೊರಬಂದಿರುವ ನಂದಿನಿ ಹೆದ್ದುರ್ಗ ಅವರ ಕವಿತೆಗಳ ಸಂಗ್ರಹ ‘ಒಂದು ಆದಿಮ ಪ್ರೇಮ. ತಮ್ಮ ಕವಿತೆಗಳ ಬಗ್ಗೆ, ಅವುಗಳು ಹುಟ್ಟಿದ ಸಮಯ ಮೊದಲಾದುವುಗಳ ಬಗ್ಗೆ ಖುದ್ದು ಕವಯತ್ರಿ ನಂದಿನಿ ಅವರು ತಮ್ಮ ಮೊದಲ ಮಾತಿನಲ್ಲಿ ಬರೆದದ್ದು ಹೀಗೆ…

“ಮದ್ಯಾಹ್ನ ಮೌನವಾಗಿದೆ. ಥೇಟು ನನ್ನಂತೆ. ನನ್ನದು ಇಳಿಹೊತ್ತಾ ನಡುಮದ್ಯಾಹ್ನವಾ ತಿಳಿಯುತ್ತಿಲ್ಲ. ತಿಳಿದು ಮಾಡುವುದಾದರೂ ಏನು. ತೃಣಮಪಿ ನ ಚಲತಿ ತೇನವಿನಾ. ಕಾಲ ತನ್ನಷ್ಟಕ್ಕೆ ತಾನು ಎಳೆಬೆಳಗು ನಡುಬಿಸಿಲು ಇಳಿಸಂಜೆಯೂ ಹೌದು. ಬಿಸಿಲು ಹಾದು ಹೋಗಿ ಬೆಚ್ಚಗಿರುವ ಈ ಮೆಟ್ಟಿಲುಗಳ ಮೇಲೆ ಕೂತು ಯೋಚಿಸುತ್ತಿದ್ದೇನೆ. ಮಳೆ ಮುನಿಸಿಕೊಂಡ ಹೊತ್ತು. ಏನಾದರೂ ಬರೆಯಬೇಕಿತ್ತು. ಏನೂ ಹೊಳೆಯುತ್ತಿಲ್ಲ. ಅಸಲಿಗೆ ಏನೂ ಹೊಳೆಯದೆ ಇರುವುದೂ ಸುಖವೆ. ಹೀಗೆ ಖಾಲಿ ಕೂತಾಗಲೆಲ್ಲ ನಮಗಾಗಿಯೇ ಕೂತಿರಬಹುದು ಅಂದುಕೊಳ್ಳುತ್ತವೆ ಈ ಗುಬ್ಬಚ್ಚಿಗಳು. ನಾನೊಂದು ಜೀವ ಇಲ್ಲಿ ಕೂತಿದ್ದೀನಿ ಎನ್ನುವ ಖಬರೂ ಇಲ್ಲದೆ ತೀರಾ ಹತ್ತಿರಕ್ಕೆ ಬಂದು ಒಂದಕ್ಕೊಂದು ಕುಸ್ತಿಗೆ ಬಿದ್ದಿವೆ. ಬಿಟ್ಟರೆ ನನ್ನ ಮುಂಗೈಗೇರಿ ಕೆನ್ನೆಗೆ ಮುತ್ತು ಕೊಟ್ಟಾವು.
ಕಾಯುವ ಬೀಳ್ಕೊಡುವ ನನ್ನ ಲೋಕದ ಪುಟ್ಟ ದೇವತೆಯರು ಇವರು.
ನಂಬಲಾರರು ಮಂದಿ. ಇವಳು ಮತ್ತು ಹಕ್ಕಿಗಳ ಒಡನಾಟವನ್ನು.….
ಎದೆಯ ಒಳಪದರಿನಲ್ಲಿ ಬೆಚ್ಚಗಿರುವ ಆ ಹೆಸರು ನಾನು ಮೌನಕ್ಕೆ ಜಾರಿದಾಗೆಲ್ಲ ಬೆರಳ ತುದಿಗಿಳಿಯುತ್ತದೆ. ನೀರಿನೊಂದು ಹನಿ ಸಿಕ್ಕರೆ ಮಣ್ಣು ಮೆತ್ತಗಿದ್ದರೆ ಹೆಸರಿನ ಮೊದಲಕ್ಷರ ತಿದ್ದುತ್ತೇನೆ.
ಸಿಕ್ಕಿದ್ದೇ ಹಕ್ಕು ಎಂಬಂತೆ ಮೆಲ್ಲಗೆ ಅಲ್ಲಿಂದ ಜಾರಿಕೊಂಡು ಬೆಳಗು ಬೈಗಿನ ಸುಖದ ಗಲಾಟೆಗಳಲ್ಲಿ ಊರಾಡಿ ಅಲೆದಾಟ ಬೇಸರ ಬಂದು ಮತ್ತೆ ಒಳಗಿನ ಬಿಸುಪಿಗೆ ಬಂದು ಕೂರುತ್ತದೆ.
'ನಾನು ನಿನ್ನ ಪ್ರೀತಿಸುತ್ತೇನೆ ನನ್ನ ಹೆಸರೇ!
ಜಗದೆದಿರು ಕೂಗಿ ಹೇಳಬೇಕೆನಿಸುತ್ತದೆ.
'ನಾನು ನಿನ್ನ ಪ್ರೀತಿಸುತ್ತೇನೆ'
ನಿನ್ನ ಪ್ರೀತಿಸುತ್ತೇನೆ ಎನ್ನುವ ಈ ಭಾವ ಎಷ್ಟು ಸುಖವಾಗಿದೆ ಎನ್ನುವುದನ್ನು ಹೇಳಿ ತಿಳಿಸಬಹುದೆ?
ಮತ್ತೂ ಮೌನ. ಮೌನಕ್ಕೆ ಅಗಾಧ ಶಕ್ತಿಯಿದೆ.
ಅಪರಿಮಿತ ಚೆಲುವಿದೆ. ಅಸಂಖ್ಯ ಅರ್ಥಗಳಿವೆ.
ಎಲ್ಲಿದೆ ಮೌನ, ಹುಚ್ಚಾ ನಿನಗೆ ಅಂದಿದ್ದೆ ಅಲ್ಲವೆ ನೀನು. ಒಂದಿಡೀ ದಿನ ಮಾತಾಡಿ ಗಂಟಲೊಣಗಿ ಜೀವದ ಕಸುವು ಕುಂದಿದ ಮೇಲೂ ನಾನು ಮೌನವನ್ನೇ ಬದುಕುತ್ತೇನೆ. ನನ್ನ ಮುಗಿಯದ ಮಾತಿಗೆ ಬೇಸತ್ತು ನೀನು ಆಕಳಿಸುವಾಗ ನಿನ್ನ ಕಣ್ಣಿನ ಸೋಮಾರಿತನ ಮತ್ತು ಮೌನ ನನಗಿಷ್ಟ.
ಬಾ ಇಲ್ಲಿ. ಈ ಕವಿತೆಗಳು ನಿನ್ನವು. ಕೂತು ಓದು, ಅಕ್ಷರಗಳ ಮುದ್ದಿಸು, ಬರೆದ ನನ್ನ ಹೃದಯವನ್ನು ಮೆಲ್ಲಗೆ ನೇವರಿಸಿ ಎಂದಿನಂತೆ ಮಸೆದ ಚಾಕುವಿನಿಂದ ತುಸುವೇ ಇರಿ. ಛಿಲ್ಲೆನ್ನುವುದು ನನಗಿಷ್ಟ.

***
ತಲೆಗೆ ಮಿಂದು ಒಣಗಿಸಿಕೊಳ್ಳುವ ಖುಷಿಗೆ ಕಟ್ಟೆಯ ಮೇಲೆ ಕಾಲು ನೀಡಿ ಕೂತರೆ ಹಳದಿ ಬಣ್ಣದ ಪುಟ್ಟ ಚಿಟ್ಟೆ ಸಲೀಸು ಬಂದು ಬೆರಳ ಮೇಲೇ ಕೂತಿದೆ. ಅದರ ಕೂದಲಿನಂತ ಪಾದಗಳು ಆಚೀಚೆ ಹರಿದರೆ ಮುಳುಮುಳು ಪುಳಕ ನನಗೆ.
'ಮಹಾರಾಣಿಯವರೆ ಏನಾಜ್ಞೆ ಕೊಟ್ಟಿರಿ?
ಮಹಾರಾಣಿಯವರೆ ಇನ್ನಷ್ಟು ಹೊತ್ತು ಇಲ್ಲೇ ಕೂತಿರಿ.
ಮಹಾರಾಣಿಯವರು ಆಕಳಿಸುವುದಿಲ್ಲವಾದರೆ ಒಂದು ಕವಿತೆ ಓದಿ ಖುಷಿ ಪಡಿಸಲೆ?'
ಹಾರದಂತೆ ಏನಾದರೂ ಆಮಿಷ ತೋರಲೆ!
ಆದರೆ… ಬರೆದ ಹಳೆ ಕವಿತೆಯಂತೆ ಪುಟ್ಟ ಹಕ್ಕಿಯೊಂದು ಪುರ್ರನೆ ಬಂದು ಗಬಕ್ಕನೆ ಚಿಟ್ಟೆಯನ್ನು ಗುಳಕಾಯಿಸಿದರೆ?
ಉಹು. ಕಾಲು ಮೆಲ್ಲಗೆ ಅಲುಗಾಡಿಸಿದೆ. ಚಿಟ್ಟೆ ಆಕಾಶಕ್ಕೆ ಹಾರಿ ಹೋಯಿತು. ಚಿಟ್ಟೆ ನಿಜದಲ್ಲಿ ಆಕಾಶದ್ದು.
ಮೋಡಗಳೂ ಚಿಟ್ಟೆಗಳು ಸ್ವಂತ ಅಣ್ಣತಂಗಿ.

ಹೆಸರೇ..
ಈ ಜಗದ ತಂದೆ ತಾಯಿಗಳು ನಾವು.
ಪೂರ್ತಿ ಅರಳಿದ ಹೂವನ್ನು ದೇವರಿಗೇರಿಸಿದರೆ ಮುದುಕ ಗಂಡ ಸಿಗ್ತಾನೆ ಅಂತ ಅಜ್ಜಿ ಹೆದರಿಸ್ತಿದ್ರು. ಹುಡುಗ ಗಂಡ ಸಿಕ್ಕವರೆಲ್ರೂ ಸುಖವಾಗಿಲ್ಲ ಅಜ್ಜಿ ಅಂತ ಈ ಹೊತ್ತಿಗೆ ಕೂಗಿ ಹೇಳಬೇಕೆನಿಸುತ್ತದೆ. ನೆಮ್ಮದಿಯ ವ್ಯಾಖ್ಯಾನ ಅಜ್ಜಿಯ ದೃಷ್ಟಿಯಿಂದ ಏನಿದೆಯೊ. ನಕ್ಕು ಸುಮ್ಮನಾಗುತ್ತೇನೆ. ಬದುಕು ಮುಗಿಯದ ಪ್ರಯಾಣ. ತಲುಪುವುದೊ ಎಲ್ಲಿಗೊ ನಿಶ್ಚಿತವಿಲ್ಲ.
ಯಾರೋ ಬರುತ್ತಾರೆ ಹೋಗುತ್ತಾರೆ. ಇನ್ನೆರಡು ದಿನ ಇರಲಿ ಎನಿಸಿದವರು ಹೇಳದೆ ಕೇಳದೆ ಮನೆ ಬಿಡುತ್ತಾರೆ. ಹೊರಟರೆ ಸಾಕು ಎನ್ನುವವರು ಚಕ್ಕಳಮಕ್ಕಳ ಹಾಕಿ ಕೂತೇ ಬಿಡುತ್ತಾರೆ.
ಇಲ್ಲೇ ಇರುವವನ ಎದೆಯಲ್ಲಿ ಒಲವು ಉದ್ಭವಿಸಲಿ ಅಂತೊಂದು ಆಸೆ. ಹಾಗೆಂದುಕೊಂಡಾಗಲೆಲ್ಲ ದೇವರು ಕೊಂಕಿನಲ್ಲಿ ನಗುತ್ತಾನೆ. ಹಣೆಯಲ್ಲಿ ಅಕ್ಕರೆ ಬರೆಯದ ಜೀವಗಳಿಗೆ ಪ್ರೀತಿ ದುಬಾರಿ ಎನ್ನುವ ವಾಸ್ತವ ಎದುರಾಗಿ ಎಂದೂ ಬಾರದ ಅವನಿಗಾಗಿ ಕದ ತೆಗೆಯುತ್ತೇನೆ.
'ಎರಡು ಬಿಲ್ವ ಹೆಚ್ಚಿಗೆ ಧರಿಸುತ್ತೇನೆ ನಾಳೆ.
ಈ ಹಗಲು ಮುಗಿಯುವುದರೊಳಗೆ ಒಂದು ಕವಿತೆಯಾಗಿ ಬಾ ನನ್ನ ಶಿವನೇ' ಅಂತೊಂದು ಆಮಿಷ ಒಡ್ಡಿದ್ದು ಕೈಗೂಡಿದೆ. ತಡರಾತ್ರಿ ಗುಡಿಯಿಂದ ಹಾಡು ಕೇಳುತ್ತಿದೆ.

***
ನಾನು ಗುಲಾಬಿ ಬಣ್ಣದ ಸೀರೆಯನ್ನೇ ಆರಿಸಬಹುದು ಅಂತಂದುಕೊಂಡಿದ್ದರು ಅವರು.
ಬಿಳಿ ನನಗೆ ಮೆಚ್ಚುಗೆ.
'ಏಳು ಬಣ್ಣದ ಕೂಡಿಕೆ. ಜೀವ ನಾಗತಳಿಕೆ.
ಸಾಸಿವೆ ಹೊಲದಲ್ಲೇ ಸಾವು ಗೆಲ್ಲಬೇಕು.
ತುಳುಕುವ ಕಣ್ಣೀರು ಹರಿಯಗೊಡಬೇಕು.
ಗಾಯದ ಮೂಲಕವೇ ಒಳಗಿಳಿಯುವುದು ಬೆಳಕು.
ದೂರಬಾರದು ದೇವರನ್ನು'
ಕನಸಿನಲ್ಲಿ ಬರೆದ ಕವಿತೆ ಬೆಳಿಗ್ಗೆಯೇ ಮರೆತುಹೋಗಿದೆ. ನಡುವಿನ ಮೌನ ಮಾತ್ರ ಒಳಗುಳಿದು ಜೀವ ಗರಿಯಷ್ಟು ಹಗುರ. ಒಂದು ಕವಿತೆಯೂ ಹುಟ್ಟದ ಮೇಲೆ ಮೌನವನ್ನಿಟ್ಟುಕೊಂಡು ಏನು ತಾನೇ ಮಾಡಲಿ. ಹಗುರ ಎದೆಯಿಂದ ಚಿಟ್ಟೆಗಳು ಹಾರಿ ಹಗಲಿನಾಕಾಶಕ್ಕೆ ರಂಗೋಲಿ ಹಾಕುತ್ತಿವೆ.
ಧೋಗುಟ್ಟಿ ಸುರಿವ ಮಳೆನಕ್ಷತ್ರಗಳು ಹೊದ್ದು ಮಲಗಿವೆ. ತಗ್ಗಿನ ಗದ್ದೆಯಲ್ಲಿ ನಾಟಿ ಮುಗಿದಿದೆ. ಮೇಲಿನ ಗದ್ದೆಗಳಲ್ಲಿ ನವಿಲ ಹಿಂಡು. ಬರುವ ವರ್ಷದ ಬೆಳೆ ನಿಜಕ್ಕೂ ಹುಲುಸು. ಹಕ್ಕಿ ಹಿಕ್ಕೆಯೆಂಬುದು ಮಣ್ಣಿಗೆ ಅಮೃತ. ಪ್ರೀತಿ ಭರಪೂರ ಸಿಕ್ಕಿದವರು ಮೆದುವಾಗಿರ್ತಾರಂತೆ. ನಾನೋ ಶತ ಒರಟ ಹೆಣ್ಣು.
'ನನ್ನ ಅಂದಂದಿನ ಕವಿತೆಗಳ ಅಂದಂದೇ‌ ಕರುಣಿಸು ಶಿವನೇ,ಪ್ರೀತಿಯನ್ನೂ”