ಒಂದು ಒಳ್ಳೆಯ ನುಡಿ (10)- ಕರ್ತವ್ಯ

ಒಂದು ಒಳ್ಳೆಯ ನುಡಿ (10)- ಕರ್ತವ್ಯ

ಬದುಕಿನೀ ಕ್ಷೇತ್ರದಲಿ ಕರ್ತವ್ಯ ಹಲವುಂಟು

ಮೊದಲು ಋಣಸಂದಾಯ ಮರೆಯದಿರಬೇಕು/

ಮಮತೆಯೊಲುಮೆಯ ಸಾಲ ಇತ್ತವರ,ಹೆತ್ತವರ

ಅಮ್ಮ--ಅಪ್ಪ ಎಂಬ ಪ್ರೀತಿಯಲಿ ಸಾಕು/

ಈ ಸಂಸಾರ ಎಂಬುದು ಒಂದು ದೊಡ್ಡ ಆಲದ ಮರದಂತೆ ಎಂಬ ಕಟು ಸತ್ಯವನ್ನು ನಾವೆಲ್ಲ ಒಪ್ಪಿಕೊಳ್ಳಲೇಬೇಕು. ಆಲದ ಮರ ತಾನು ಮಾತ್ರ ಅಲ್ಲ ,ಮರದ ಸುತ್ತ ಬಿಳಲುಗಳನ್ನು ಸಹ ತನ್ನೊಂದಿಗೆ ಜೋಪಾನವಾಗಿ ಕಾಪಾಡುತ್ತದೆ. ಒಂದು ವೇಳೆ ಮರ ಬಿದ್ದರೂ ಬಿಳಲುಗಳು ಗಟ್ಟಿಯಾಗಿ ಇರುತ್ತವೆ. ಇದೇ ಸಂಸಾರದ ಗುಟ್ಟು.ತಾನು ಹೋದರೆ ಹೋಗಲಿ,ತನ್ನ ನಂತರ ತನ್ನವರು ಚೆನ್ನಾಗಿರಲಿ ಎಂಬ ಆಶಯ.

ಒಬ್ಬರು ಹಿರಿಯರು ಒಮ್ಮೆ ಹೇಳಿದ ಮಾತು 'ನಮ್ಮ ಮಕ್ಕಳನ್ನು  ಸಾಕುವುದು ಕರ್ತವ್ಯವೆಂಬ ಹಾಗೆ, ನಾಳೆ ಇವರು ನಮ್ಮನ್ನು ನೋಡಿಯಾರು ಎಂಬ ಸ್ವಾರ್ಥದಿಂದ ಅಲ್ಲ 'ಅದೇ ಕಾಲಘಟ್ಟದಲ್ಲಿ ನಾವಿಂದು ಬಂದು ನಿಂತಿದ್ದೇವೆ. ಹೌದು, ಮಕ್ಕಳಿಗೆ ಅನ್ನದ ದಾರಿಯನ್ನು ಹೆತ್ತವರು ಮಾಡಿಕೊಡಲೇ ಬೇಕು, ಕೊಡದಿದ್ದಲ್ಲಿ ಉಂಡಾಡಿಗಳೋ, ಕಳ್ಳರೋ, ಬೇಗ ಹಣ ಸಂಪಾದನೆ ಮಾಡುವ ಅಡ್ಡದಾರಿಗೆ ಇಳಿಯುತ್ತಾರೆ.

ಅನ್ನ ಸಂಪಾದಿಸುವ ಮಕ್ಕಳು ಹಿರಿಯರನ್ನು ಚೆನ್ನಾಗಿ ನೋಡಿಕೊಂಡರೆ ಸರಿ, ಇಲ್ಲ ಎಂದಾದರೆ, ಅವರ ಗತಿ, ಊಹಿಸಲೂ ಸಾಧ್ಯವಿಲ್ಲ. ಇತ್ತೀಚೆಗೆ ನೋಡ್ತಾ ಇರುವ ವಾಸ್ತವ ಸತ್ಯ-ಅಪ್ಪ ಅಮ್ಮ ಜೊತೆಗೆ ಬೇಡ, ಅವರು ಮುದಿ ಗೂಬೆಗಳು, ಮಹಾ ಉಪದ್ರ, ಹೇಗೆ ಮಾಡಿದರೂ ಸರಿ ಬರುವುದಿಲ್ಲ, ಹೊಂದಾಣಿಕೆ ಇಲ್ಲ, ನಾವು ನಮ್ಮಷ್ಟಕ್ಕೆ, ಅವರು ಅವರಷ್ಟಕ್ಕೇ ಇರಲಿ ಎಂಬುದು. ಹೌದು, ಅವರು ಬದುಕಿನ ದಾರಿಯನ್ನು ಕಂಡವರು, ಉಂಡವರು, ಕಷ್ಟದಲ್ಲೇ ಬಂದವರು, ನೋವುಗಳನ್ನು ನುಂಗಿ ಮೇಲ್ನೋಟಕ್ಕೆ ಚೆನ್ನಾಗಿದ್ದೇವೆ ಎಂಬಹಾಗೆ ಮುಖವಾಡ ಹಾಕುವವರು, ಇತ್ತೀಚಿನ ಯಾವುದೇ ಆಧುನಿಕತೆಯನ್ನು ಬಯಸದವರು, ಅದು ನಮಗೆ ಬೇಡ, ನಾವು ಹೀಗೆಯೇ ಎಂಬ ಮನೋಸ್ಥಿತಿಯಿಂದ ಹೊರಬರಲಾರದವರು.ಇಲ್ಲಿ ಸಂಘರ್ಷ ತನ್ನಿಂತಾನೇ ಹುಟ್ಟಿಕೊಳ್ಳುತ್ತದೆ.

ಹಣ್ಣೆಲೆಯನ್ನು ನೋಡಿ ಚಿಗುರೆಲೆ ನಕ್ಕು ಹೇಳ್ತದಂತೆ, ನಿನ್ನ ಆಯುಷ್ಯ ಇನ್ನು ಕೆಲವೇ ದಿನ, ಬಿದ್ದು ಹೋಗ್ತೀಯಾ ಅಂತ.ಆಗ ಹಣ್ಣೆಲೆ ಮೌನ ವಹಿಸುತ್ತದೆಯಂತೆ. ಯಾಕೆ? ಇದು ಸತ್ಯ, ವಾಸ್ತವ ಸಹ,ಮತ್ತೆ ಕೈಲಾಗದವ ಮೈ ಪರಚಿಕೊಂಡ ಅಂತ ಆಗಬಾರದಲ್ಲ.

ಇಲ್ಲಿ ಹೊಂದಾಣಿಕೆ ಈರ್ವರಲ್ಲೂ ಇದ್ದಾಗ ಬದುಕು ಸುಂದರ. ಎಲ್ಲಾ ನಮ್ಮ ನಮ್ಮಲ್ಲೇ ಇದೆ ಎಂಬುದನ್ನು ಅರ್ಥೈಸಿದಾಗ ಸಂಘರ್ಷಕ್ಕೆ ದಾರಿಯೇ ಇಲ್ಲ. ಕರ್ತವ್ಯ ಪ್ರಜ್ಞೆ ಇದ್ದರೆ ಯಾವುದೂ ಲೋಪವಾಗಲಾರದು.

ಹಿರಿಯರಿಗೆ ಹೊಟ್ಟೆಗೆ ಒಂದು ತುತ್ತು ಅನ್ನ,ಕಾಳಜಿ,ಬೊಗಸೆಯಷ್ಟಾದರೂ ಪ್ರೀತಿ, ಆದರಗಳು ಬಹು ಮುಖ್ಯವಾಗಿ ಬೇಕಾದ್ದು. ನಾನೂ ಇವರಂತೆಯೇ ಮುಂದೆ ಆಗುತ್ತೇನೆ ಎನ್ನುವ ಪ್ರಜ್ಞೆ ಇದ್ದಲ್ಲಿ ಎಲ್ಲವೂ ಸುಸೂತ್ರವಾಗಿ ಇರಬಲ್ಲುದು. ಕಿರಿಯರ ಸುಂದರ ಒಡನಾಟ, ಸ್ನೇಹ, ಮಾತುಗಳೇ ಬದುಕಿಗೆ ಸಂಜೀವಿನಿ.

ಹಿರಿಯರು ಕಿರಿಯರು ಒಗ್ಗಟ್ಟಾಗಿ ಹೊಂದಾಣಿಕೆಯ ಅಡಿಗಲ್ಲ ಮೇಲೆ ಒಂದು ಮನೆಯಲ್ಲಿ ಇದ್ದಾಗ, ಬಾಳಿನಲ್ಲಿ ಯಾವತ್ತೂ ಬಿರುಗಾಳಿ ಏಳದು, ಬದುಕು ನಿತ್ಯ ನೂತನವಾಗಿರುವುದು,ಆ ಮನೆ ನಂದಗೋಕುಲವಾಗುವುದು.

ಕರ್ತವ್ಯಗಳೂ ಎಲ್ಲಾ ಕ್ಷೇತ್ರದಲ್ಲೂ ಇದೆ. ಕರ್ತವ್ಯದ ಕದಂಬ ಬಾಹು ಎಂಟೂ ದಿಕ್ಕಿಗೂ ಚಾಚಿದೆ. ಒಂದು ಬಾಹುವಿನ ಬಗ್ಗೆ ಸೂಕ್ಷ್ಮವಾಗಿ ಅವಲೋಕನ ಮಾಡಲಾಗಿದೆ. ಹಣ್ಣೆಲೆ-ಚಿಗುರೆಲೆ ಸಹಜ, ಒಬ್ಬರಿಗೊಬ್ಬರು ಸಹಕರಿಸುತ್ತಾ, ಸುಂದರ ಬದುಕಿನ ದೋಣಿಯಲ್ಲಿ ವಿಹರಿಸೋಣ.

-ರತ್ನಾ ಭಟ್ ತಲಂಜೇರಿ

ಅಂತರ್ಜಾಲದ ಚಿತ್ರ ಕೃಪೆ