ಒಂದು ಒಳ್ಳೆಯ ನುಡಿ - 106
‘ಕ್ಷಮಾಯಾಚನೆ’ ಮಾಡಿದರೆ ನಾವು ಸಣ್ಣವರಾಗೆವು. ಮತ್ತೂ ತಲೆಯೆತ್ತಿ ನಿಲ್ಲಬಲ್ಲೆವು. ಆತ್ಮವಿಶ್ವಾಸ ಬೆಳೆಯಬಲ್ಲುದು. ತಪ್ಪು ನಡೆದಾಗ ಕ್ಷಮಾಯಾಚನೆ ಮಾಡದವರು ಉದ್ಧಟತನದವರು, ಅಹಂಕಾರಿಗಳು. ತಾವು ಎಸಗಿದ್ದು ಮಹಾ ಅಪರಾಧ ಎಂದು ಗೊತ್ತಿದ್ದರೂ, ಏನು ಮಾಡದ ಪಾಪದವರಂತೆ ಇದ್ದು, ವಾದ ಮಾಡುವವರು ನಮ್ಮ ಎದುರೇ ಇದ್ದಾರೆ. ಅವರು ಎಂದೂ ಗುಣವಂತರ ಸಾಲಿನಲ್ಲಿ ನಿಲ್ಲಲು ಅರ್ಹರಲ್ಲ. ಕ್ಷಮೆ ಕೇಳಿದ್ದರಿಂದ ಅವರ ಸ್ವಾಭಿಮಾನಕ್ಕೆ ಪೆಟ್ಟಾಗಬಹುದೆಂಬ ಅಭಿಪ್ರಾಯ ಇರಬಹುದು. ಆ ಪ್ರಜ್ಞೆ ತಪ್ಪೆಸಗುವ ಮೊದಲೇ ಇರಬೇಕಿತ್ತು. ತಪ್ಪು ನಡೆಯದಿದ್ದರೆ ಕ್ಷಮೆ ಬೇಡ. ತಪ್ಪಾದರೆ ಕ್ಷಮೆ ಕೇಳುವುದು ಹೃದಯವಂತಿಕೆ ಸಹ. ಹಿರಿಯರಾಗಲಿ ಕಿರಿಯರಾಗಲಿ ಕ್ಷಮೆ ಕೇಳಲು ವಯಸ್ಸಿನ ನಿರ್ಬಂಧವಿಲ್ಲ ಅಲ್ಲವೇ?
ನನ್ನ ಗೆಳತಿಯ ಪರಿಚಯದವರೊಬ್ಬರು ಒಳ್ಳೆಯ ಉದ್ಯೋಗದಲ್ಲಿದ್ದರು. ಆತ ತನ್ನ ಕಛೇರಿಯ ಮಹಿಳಾ ಉದ್ಯೋಗಿಗಳಿಗೆ ಫೋನ್ ಮಾಡುವುದು, ಮೆಲ್ಲಗೆ ಸಂದೇಶಗಳನ್ನು ರವಾನಿಸುವುದು ಮಾಡುತ್ತಿದ್ದನಂತೆ. ಮೊದಮೊದಲು ಇವರಿಗೆ ಅವನ ಬಗ್ಗೆ ಗೊತ್ತಿರಲಿಲ್ಲವಂತೆ. ನಿಧಾನವಾಗಿ ಅವನ ಒಳಮರ್ಮ ಅರಿತಾಗ ಹೌಹಾರಿದರು. ಅವರಲ್ಲಿ ಓರ್ವರು ಬಹಳ ವರ್ಷ ಅದೇ ಕಛೇರಿಯಲ್ಲಿ ಕೆಲಸ ಮಾಡಿದ ಮಹಿಳೆಯಿದ್ದು, ಎಲ್ಲರೂ ಒಟ್ಟಾಗಿ ಸೇರಿ, ಇವನಿಗೆ ಬುದ್ಧಿ ಕಲಿಸಬೇಕೆಂದು ತೀರ್ಮಾನಿಸಿ, ಅದೇ ಊರಿನ ಆರಕ್ಷಕ ಠಾಣೆಗೆ ತಿಳಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ಮನವಿ ಸಲ್ಲಿಸಿ, ಒಂದು ದಿನ ವಿಚಾರಣೆಗೆ ಎಲ್ಲರನ್ನೂ ಬರಹೇಳಿದರಂತೆ. ಅಂತೂ ಈ ಮಹಾಶಯ ಸಹ ಬಂದಿದ್ದ. ಬರಲೇ ಬೇಕಲ್ಲ. ಹೆಣ್ಣು ಮಕ್ಕಳಿಗೆ ಮಾನಸಿಕ ಹಿಂಸೆ, ಕಿರಿಕಿರಿ ಕೊಟ್ಟ ಮೇಲೆ ಅನುಭವಿಸಬೇಕಲ್ಲ. ಕೌನ್ಸೆಲಿಂಗ್ ಮಾಡಿದಾಗ ಆರಂಭದಲ್ಲಿ ಒಪ್ಪದೇ ಇದ್ದಾಗ, ಆರಕ್ಷಕರ ಪ್ರವೇಶವಾಯಿತು. ದಾಖಲೆಗಳು ಇತ್ತಲ್ಲ? ತಪ್ಪೊಪ್ಪಿಗೆ ಪತ್ರ ಬರೆಯಿಸಿ, ಕ್ಷಮೆ ಕೇಳಿಸಿ ಕಳುಹಿಸಿದರಂತೆ. ಈ ಮಹಿಳೆಯರಿಗೆಲ್ಲ ಆತನನ್ನು ಚಚ್ಚಿ ಹಾಕುವಷ್ಟು ಸಿಟ್ಟು ಬಂದಿತ್ತಂತೆ. ಆತ ಬೇರೆ ಊರಿಗೆ ವರ್ಗಾವಣೆಯಾಗಿ ಹೋದಮೇಲೆ ನೆಮ್ಮದಿಯಾಯಿತು ಹೇಳಿದಳು.
ಇಂಥ ನರಿಬುದ್ಧಿಯವರಿಗೆ ಇದೇ ಸರಿ. ಎಲ್ಲರೂ ಒಗ್ಗಟ್ಟಾಗುವುದು ಬಹುಮುಖ್ಯ. ತಪ್ಪು ಮಾಡದೆ ಇರೋಣ. ಆಗ ಕ್ಷಮೆಯ ಮಾತೇ ಇಲ್ಲ. ಆಕಸ್ಮಿಕವಾಗಿ ತಪ್ಪಾಯಿತು. ಕ್ಷಮೆ ಕೇಳೋಣ. ಒಟ್ಟಿನಲ್ಲಿ ಇರುವ ಮೂರು ದಿನದ ಬಾಳ್ವೆಯಲ್ಲಿ ಮಾನ, ಮರ್ಯಾದೆಯಲ್ಲಿ, ನಾಲ್ಕು ಜನರಿಗೆ ಬೇಕಾದವರಾಗಿ ಬಾಳಿ ಬದುಕೋಣ. ನಮ್ಮ ನಮ್ಮ ಸ್ಥಾನ, ವಯಸ್ಸಿನ ಅರಿವು ನಮಗಿರಬೇಕು ಅಲ್ಲವೇ? ರಾತ್ರಿ ಕಂಡ ಬಾವಿಗೆ ಹಗಲು ಹೋಗಿ ಬೀಳುವುದು ಬೇಡ. ಮನಸ್ಸು ಸದಾ ಎಚ್ಚರಿಕೆಯಲಿರಲಿ.
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ