ಒಂದು ಒಳ್ಳೆಯ ನುಡಿ (12) - ಸೇವಾಧರ್ಮ

ಒಂದು ಒಳ್ಳೆಯ ನುಡಿ (12) - ಸೇವಾಧರ್ಮ

ಮಾನವ ಸಂಘ ಜೀವಿ ಮತ್ತು ಸ್ನೇಹ ಜೀವಿ. ಒಂಟಿಯಾಗಿ ಬದುಕುವುದು ಬಹಳ ಕಷ್ಟ. *ಹುಟ್ಟು ಆಕಸ್ಮಿಕ ಸಾವು ನಿಶ್ಚಿತ*. ತಾನು ಹೇಗಿರಬೇಕು, ಹೇಗಿದ್ದೆ, ಎಲ್ಲರೊಂದಿಗೆ ಹೇಗೆ ಬೆರೆಯಬೇಕು, ತನ್ನ ಬದುಕಿನ ದಾರಿ ಹೇಗೆ ಸಾಗಿ ಬಂದಿದೆ ಇವೆಲ್ಲವೂ ಆತನಿಗೆ ಗೊತ್ತಿರಬೇಕು ಮತ್ತು ಸ್ವ-ವಿಮರ್ಶೆಗೆ ತನ್ನನ್ನು ತಾನೇ ಒಡ್ಡಿಕೊಳ್ಳಬೇಕು. ಆಗ ಮಾತ್ರ ಬದುಕು ಸುಂದರ.

ಯಾರ ಹತ್ತಿರ ಪ್ರೇಮ, ಜ್ಞಾನ, ಬಲ ಈ ಮೂರರ ಸಂಗಮವಿದೆಯೋ ಅವನ ಬದುಕು ಸಾರ್ಥಕ. ಕೋಪ, ತಾಪ, ನೋವು ನಲಿವು, ರಾಗ, ದ್ವೇಷಗಳೂ ಬೆನ್ನಿಗಂಟಿಯೇ ಬರುವ ಬಿಡಿಸಲಾರದ ಬಂಧುಗಳು ನಮ್ಮ ಬಾಳಲಿ. ಯೌವನ, ಸಂಪತ್ತು, ಅವಿವೇಕತನ, ಅಧಿಕಾರ ಎಲ್ಲಾ ಬಂದವನ ಜೀವನ ನೋಡಲು ಚಂದ. ಆದರೆ ಅಧೋಗತಿಯೇ ಸರಿ. *ದೂರದ ಬೆಟ್ಟ ನುಣ್ಣಗೆ* ಹಾಗೆ.

*ತನ್ನಂತೆ ಪರರ ಬಗೆದೊಡೆ ಕೈಲಾಸವಕ್ಕು ಸರ್ವಜ್ಞ* ಎಂಬ ಮಾತಿನಂತೆ, ನಮ್ಮ ವ್ಯಕ್ತಿತ್ವ ವಿಕಸನವಾಗಬೇಕಾದರೆ, ವಿಶಾಲ ಮನೋಭಾವನೆ ಬೇಕೇ ಬೇಕು.

ಸೇವಾಧರ್ಮದ ಮನಸ್ಸು ,ಮಾನವತೆಯಪ್ರತೀಕ. ಉಳ್ಳವರು ಇಲ್ಲದವರಿಗೆ ನೀಡಲು ಮನಸ್ಸು ಮುಖ್ಯವಾಗಿ ಬೇಕು. ಸೇವೆ ಅಂದರೆ ಬರಿಯ ದಾನವೇ ಅಲ್ಲ, ಪ್ರೀತಿಯ ಮಾತುಗಳ ಸೇವೆ, ಕೆಲಸದಲ್ಲಿ ‌ಸಹಾಯ ಹಸ್ತ, ನೊಂದವಗೆ ಸಾಂತ್ವನ, ಕೈಸೋತವನ ಕೈಹಿಡಿದು ಮೇಲಕ್ಕೆತ್ತಿ ಬದುಕಿನ ದಾರಿ ತೋರುವುದು ಇವೆಲ್ಲವೂ ಸೇವಾಧರ್ಮದ ಅಂಗಗಳು ಅಥವಾ ಶಾಖೆಗಳು.

ಓರ್ವ ವ್ಯಕ್ತಿ ಸಮಾಜದಲ್ಲಿ ಒಳ್ಳೆಯವನಾಗಿರುತ್ತಾನೆ, ನಾಲ್ಕು ಜನ ಅವನನ್ನು ಮೆಚ್ಚುತ್ತಾರೆ ಎಂದರೆ, ಅವನ ಬೆನ್ನ ಹಿಂದೆ ಕೈಹಾಕಿ ಜಗ್ಗಲು ನೋಡುವವರೇ ಜಾಸ್ತಿ. ಸಾಮಾಜಿಕ ಕೆಲಸಗಳಲ್ಲಿ ಸೇವಾಮನೋಭಾವದಿಂದ ತೊಡಗಿಸಿಕೊಂಡಾಗ, ಅವಹೇಳನ, ನಿಂದನೆ, ಟೀಕೆ, ಸಂಶಯ, ಅಸೂಯೆ, ಇವನಿಗೇನೋ ಲಾಭವಿದೆ ಎಂದು ಆಡಿಕೊಳ್ಳುವವರೂ ಇರುತ್ತಾರೆ. ಅಜ್ಞಾನವೋ, ಅಲ್ಪತನವೋ, ಬುದ್ಧಿವಂತಿಕೆ ಹೆಚ್ಚಾದ್ದೋ ಅದರಿಂದಲೂ ಇರಬಹುದು. ಪ್ರವಾಹದಲ್ಲಿ ಕಸಕಡ್ಡಿಗಳು ಸಾಮಾನ್ಯ. ಪ್ರವಾಹ ನಿಂತಾಗ ನೀರು ತಿಳಿಯಾಗುವುದು ಸಹಜ. ನೀರಿನ ತಳದಲ್ಲಿ ಕೊಳಚೆ ಸಂಗ್ರಹವಾಗುತ್ತದೆ. ಹಾಗೆಯೇ ಯಾರು ಏನೇ ಹೇಳಲಿ, ನಾವು ನಮ್ಮ ಮನಸ್ಸಿನಂತೆ ಕೆಲಸ ನಿರ್ವಹಿಸಬೇಕು. ಸಹನೆ, ತಾಳ್ಮೆಯಿಂದ ಎಲ್ಲವನ್ನು ನಿಭಾಯಿಸೋಣ. ಕೈಲಾಗದವರಿಗೆ ಕೈಲಾದಷ್ಟು ಸಹಾಯ ಮಾಡೋಣ. *ಸೇವೆ* ನಮ್ಮ ಬದುಕಿನ ಒಂದು ಭಾಗವಾಗಲಿ.

-ರತ್ನಾಭಟ್ ತಲಂಜೇರಿ

ಚಿತ್ರ: ಇಂಟರ್ನೆಟ್ ಕೃಪೆ