ಒಂದು ಒಳ್ಳೆಯ ನುಡಿ - 132
ಶಾಂತಿ ನೆಮ್ಮದಿಯನ್ನು ಸಂತೆಯಲ್ಲಿ ಕೊಳ್ಳಲಾದೀತೇ? ಸಾಧ್ಯವಿಲ್ಲ. ಹಣವೊಂದಿದ್ದರೆ ನಾನು ಏನು ಬೇಕಾದರೂ ಮಾಡಬಲ್ಲೆ ಎಂಬ ಆತ್ಮವಿಶ್ವಾಸ, ಅಹಂಕಾರ ಮಾನವನ ಸರ್ವನಾಶಕ್ಕೆ ಕಾರಣವಾಗುತ್ತಿದೆ ಎಂಬ ಅರಿವೇ ಇಲ್ಲ. ಹಣದೊಂದಿಗೆ ಗುಣ, ಮಾನವೀಯತೆ ಸಹ ಇರಬೇಕಲ್ಲ? ಅದೇ ಇಲ್ಲದೆ ಹೋದರೆ ಏನಿದ್ದು ಏನು ಪ್ರಯೋಜನ?.
ನಮ್ಮ ಕಂದಮ್ಮಗಳನ್ನು ಸರಿಯಾದ ದಾರಿಯಲ್ಲಿ ಕರೆದೊಯ್ಯುವ ಮಹತ್ತರ ಹೊಣೆಗಾರಿಕೆ ನಮ್ಮ ಮೇಲಿದೆ. ಆದರೆ ನಾವೇನು ಮಾಡುತ್ತಿದ್ದೇವೆ? ಸಮಾಜದಲ್ಲಿ ‘ಶಾಂತಿ ನೆಮ್ಮದಿ’ ಕದಡಿಸುವ ವಾತಾವರಣದತ್ತ ದೂಡುತ್ತಿದ್ದೇವೆಯೇ? ಪ್ರತಿಯೊಬ್ಬ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಕಾಳಜಿ ತೆಗೆದುಕೊಂಡಿದ್ದಾರೆ ಎಂದಾದರೆ ಈ ಹಾದಿರಂಪ ಬೀದಿ ರಂಪ ಆಗಲು ಅವಕಾಶವಿತ್ತೇ ಅನ್ನಿಸ್ತಾ ಇದೆ. ನಮಗೆ ನಾವೇ ಪ್ರಶ್ನೆ ಹಾಕಿಕೊಂಡಾಗ ಉತ್ತರ ಸಿಗಬಹುದು. ಯಾರೋ ಎಣ್ಣೆ ಸುರಿಯುವುದು, ಇನ್ಯಾರೋ ಕಡ್ಡಿ ಗೀರುವುದು, ಮತ್ಯಾರೋ ಚಳಿ ಕಾಯಿಸಿಕೊಳ್ಳುವುದು, ನಾಲ್ಕನೆಯವ ಚಂದ ನೋಡಿ ಬೇಳೆ ಬೇಯಿಸಿಕೊಳ್ಳುವುದು. ಇದರಲ್ಲಿ ನಷ್ಟ ಯಾರಿಗೆ? ನಮ್ಮ ಮಕ್ಕಳಿಗೆ. ನಲುಗುವುದು ಮಕ್ಕಳು. ಒಂದು ದಿನದ ಪಾಠಪ್ರವಚನಗಳಿಲ್ಲದಿದ್ದರೂ ನಷ್ಟ ಮಕ್ಕಳಿಗೆ. ಮೊದಲೇ ಕೊರೊನಾ ಎಲ್ಲವನ್ನೂ ಬುಡ ಮೇಲು ಮಾಡಿ ಕಷ್ಟ- ನಷ್ಟ ಬೇಕಾದಷ್ಟು ಆಗಿದೆ. ಇರುವ ಅಲ್ಪ ಕಾಲದಲ್ಲಿ ಚೆನ್ನಾಗಿ ಓದಿ ಬರೆದು ಗುರಿ ಸಾಧಿಸಿದರೆ ಹೆತ್ತವರಿಗೂ, ಮಕ್ಕಳಿಗೂ, ನಾಡಿನ ವ್ಯವಸ್ಥೆಗೂ ನೆಮ್ಮದಿಯಲ್ಲವೇ? ಹಾಗಾದರೆ ಶಾಂತಿ ಕದಡುವ ವಾತಾವರಣ ಬೇಕೇ? ಇದರಲ್ಲಿ ಹೆತ್ತವರು ಅಸಹಾಯಕರಾದರೇ? ಎಲ್ಲವೂ ನಿಗೂಢ.
ನಮ್ಮ ಬಾಲ್ಯದ ಕಾಲಕ್ಕೆ ಹೋದರೆ ಒಂದೊಂದು ಮನೆಯಲ್ಲಿ ಎಂಟರಿಂದ ಹತ್ತು ಮಕ್ಕಳು. ಮಗು ತಪ್ಪು ಮಾಡಿದರೆ ಶಿಕ್ಷಿಸುವ ಹೆತ್ತವರು. ಶಾಲೆಗೂ ಬಂದು ಶಿಕ್ಷಕರ ಹತ್ತಿರ ಮಾತನಾಡಿ ನಾಲ್ಕು ಒದೆ ಬೀಳಿಸುತ್ತಿದ್ದರು. ಬೆಂಚು ಮೇಲೆ ನಿಲ್ಲುವುದು, ಮೊಣಕಾಲು ಹಾಕಿ ಕೂರುವುದು, ತರಗತಿಯಿಂದ ಹೊರಗೆ ಹಾಕುವುದು, ನಾಗರಬೆತ್ತದ ಏಟು ಇತ್ಯಾದಿ ಶಾಲೆಗಳಲ್ಲಿ. ಮನೆಯಲ್ಲಿ ಊಟಕೊಡದೆ ಇರುವುದು ಉಪವಾಸವಿರಲಿ ಬುದ್ಧಿ ಬರಲಿ ಹೇಳುವುದಿತ್ತು. ಪೆಟ್ಟು ಸಹ ಕೊಡುತ್ತಿದ್ದರು. ಆವಾಗಿನ ಮಕ್ಕಳೇ ಈಗಿನ ನಾವುಗಳು. ಏನಾಗಿದೆ ನಮಗೆ, ಮೂರು ಹೊತ್ತು ಮರ್ಯಾದೆಯಲ್ಲಿ ಊಟಮಾಡುವುದಿಲ್ಲವೇ? ನಮ್ಮ ಮಕ್ಕಳನ್ನು ಸರಿಯಾದ ಹಾದಿಯಲ್ಲಿ ಬೆಳೆಸಲಿಲ್ಲವೇ? ಹಾಗಾದರೆ ಈಗ ಹತ್ತಿಪ್ಪತ್ತು ವರುಷದಿಂದ ಯಾಕೆ ಹೀಗೆ ಎಂಬ ಪ್ರಶ್ನೆ. ಹೌದು, ನಮಗೆ ನಾವೇ ಕೇಳಿಕೊಂಡಾಗ, ಶಿಕ್ಷೆ ಎಂಬ ಪದಕ್ಕೆ ಅರ್ಥವೇ ಇಲ್ಲ. ಶಾಲೆ ಮನೆ ಎರಡೂ ಕಡೆ ಶಿಕ್ಷೆಯೇ ಇಲ್ಲ. ದಂಡಿಸಿದ ಶಿಕ್ಷಕ ಜೈಲಿಗೆ ಹೋಗಲು ತಯಾರಿರಬೇಕೆಂಬಲ್ಲಿವರೆಗೂ ವ್ಯವಸ್ಥೆ ಹದಗೆಟ್ಟಿತು. ‘ಮೂಲೆಯಲ್ಲಿದ್ದ ಹರಿತವಾದ ಕುಡುಗೋಲನ್ನು ನಡುದಾರಿಯಲ್ಲಿಟ್ಟು ಅದರ ಬಾಯಿಯ ಮೇಲೆ ಕಾಲಿಡಲು ಯಾರು ಮನಸ್ಸು ಮಾಡಿಯಾರು?’ ಇದು ತೂಕಡಿಸುವವನಿಗೆ ಹಾಸಿಗೆ ಹಾಸಿದಂತಾಯಿತು. ನಮ್ಮ ಮಕ್ಕಳಿಗೆ ಸಧ್ಯ ಶಾಲೆಯಲ್ಲಿ ಹೊಡೆದು ಬಡಿದು, ಗದರಿಸುವುದು ಯಾವುದೂ ಇಲ್ಲ ಎಂದು ಸಂತೋಷಪಟ್ಟರು ಹೆತ್ತವರು. ಇರುವ ಒಂದಿಬ್ಬರು ಮಕ್ಕಳನ್ನು ತಲೆಯ ಮೇಲಿಟ್ಟು ನೋಡಿಕೊಂಡರು. ಅಲ್ಲಿಗೆ ಎಲ್ಲಾ ಬಣ್ಣ ಮಸಿ ನುಂಗಿತು ಎಂಬಂತಾಯಿತು. ಸಂಸ್ಕಾರ ಕಲಿಯುವವರು ಕಲಿತರು. ಉಂಡಾಡಿಗಳು ಮತ್ತಷ್ಟೂ ಉಂಡಾಡಿಗಳಾದರು. ಇದಕ್ಕೆಲ್ಲ ನಾವೇ ಹೊಣೆಗಾರರು. ಶಾಂತಿ ನೆಮ್ಮದಿ ನಮ್ಮಲ್ಲೇ ಮೊದಲು ಕಂಡುಕೊಂಡು ಇತರರಲ್ಲಿಯೂ ಮೂಡಲೆಂದು ಆಶಿಸೋಣ.
-ರತ್ನಾ ಕೆ ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ