ಒಂದು ಒಳ್ಳೆಯ ನುಡಿ - 134
ನಾವು ಹೆಚ್ಚು ಭರವಸೆಯಿಡುವುದು ಇಂದಿನ ಯುವಮನಗಳ ಮೇಲೆ. ಅವರು ಹೇಗೆ ಸಮಾಜದರಲ್ಲಿ, ಮನೆಯಲ್ಲಿ ಇರುವರೋ, ಅವರುಗಳ ವ್ಯವಹಾರ, ವರ್ತನೆಗಳು, ರೀತಿ ನೀತಿಗಳು ನಮ್ಮ ಸಮಾಜದ ಏಳಿಗೆಗೆ, ಬದುಕಿನ ದಿಕ್ಕನ್ನು ರೂಪಿಸುವಲ್ಲಿ ಗಟ್ಟಿತನ ನೀಡಿದೆ. ವಯಸ್ಸಾದವರು, ವೃದ್ಧರು ಜೀವನದ ಹಾದಿಯ ಕಂಡಾಗಿರುತ್ತದೆ. ಅವರ ಆದರ್ಶಗಳ, ಬಾಳಿನ ದಾರಿಯಲ್ಲಿ ಊರಿದ ಹೆಜ್ಜೆಗಳ ನೆರಳಡಿಯಲ್ಲಿಯೇ ಸಾಗಿ ಬರುತ್ತಾ, ತಮ್ಮದೇ ಛಾಪನ್ನು ಮೂಡಿಸಿ ನೆಮ್ಮದಿ ನೀಡಿ ಆದರ್ಶರಾಗಿರಬೇಕಾದವರು ಯುವಜನಾಂಗ. ಅವರ ತೋಳು ಮತ್ತು ಬುದ್ಧಿಯನ್ನು ಗಟ್ಟಿಗೊಳಿಸುವುದಷ್ಟೇ ಹಿರಿಯರ ಕೆಲಸ. ‘ನಾಳಿನ ಭರವಸೆಯ ಆಸೆಯ ಕುಡಿಗಳು’ ಯುವಜನಾಂಗ. ಅಕ್ಷರ ಕಲಿಕೆ, ಕಾಲೇಜು ಜೀವನ ಇದೆಲ್ಲ ಮುಂದಿನ ಬದುಕು ತೋರಿಸಿಕೊಡುತ್ತದೆ. ಸರಿಯಾಗಿ ಉಪಯೋಗಿಸಿದವರು ಅನ್ನ ತಿಂದಾರು, ತನ್ನ ಸುತ್ತಲಿನವರಿಗೆ ಕ್ಷೇಮ ಕೊಟ್ಟಾರು. ದುರ್ನಡತೆ ಎಂಬುದು ಅಹಿತಕರ ವಾತಾವರಣವನ್ನು ಸೃಷ್ಟಿ ಮಾಡಿ ಅವನೂ ಬದುಕಲಾರ ಉಳಿದವರನ್ನೂ ಬದುಕಬಿಡ. ಎಲ್ಲಾ ಅವರವರ ಕೈಯಲ್ಲಿದೆ. ನಿರ್ಭಯವೆಂಬ ಬೀಜಮಂತ್ರವನ್ನು,ಬಡವರ, ದೀನರ ಕಷ್ಟಗಳನ್ನು, ಕೈಲಾಗದವರ ಅಸಹಾಯಕತೆಯನ್ನು ಮಹಿಳೆಯರಿಗೆ ಸಲ್ಲಬೇಕಾದ ಗೌರವವನ್ನು ಮನದಲಿಟ್ಟು ಯುವಜನಾಂಗ ಮುಂದೆ ಬರಬೇಕಾಗಿದೆ. ಎಲ್ಲಿ ತಪ್ಪುಗಳಿವೆಯೋ ಅಲ್ಲಿ ಖಂಡಿಸುವ ಪ್ರವೃತ್ತಿ ಇರಲಿ, ಎಲ್ಲವೂ ಧನಾತ್ಮಕವಾಗಿರಲಿ. ಋಣಾತ್ಮಕಗಳ ಬದಿಗೆ ಸರಿಸೋಣ. ಸತ್ಯವೆನ್ನುವುದು ಇಡೀ ಜೀವನದ ಕೀಲಿಕೈ ಇದ್ದ ಹಾಗೆ. ಎಲ್ಲೆಂದರಲ್ಲಿ ಬೇಕಾಬಿಟ್ಟಿ ಬಳಸಲಾಗದು. ಕ್ಷೇಮ ಸತ್ಯದ ತಳಹದಿಯಾಗುವಂತಿರಬೇಕು. ಸಂಸ್ಕೃತಿ ಅಡಿಪಾಯ ಮರೆಯಬಾರದು. ಸಂಸ್ಕಾರ ಸದಾ ಉರಿಯುವ ಜ್ಯೋತಿ. ಸತ್ಯ, ನ್ಯಾಯ, ಧರ್ಮ, ಉತ್ತಮ ನೈತಿಕ ಮೌಲ್ಯಗಳೆಂಬ ತೈಲವನೆರೆದು ಆ ಜ್ಯೋತಿ ಸದಾ ಉರಿದು ಬೆಳಕು ನೀಡುತಿರಲಿ. ಗುರು ಹಿರಿಯರನು, ಅತಿಥಿ ಅಭ್ಯಾಗತರನ್ನು ನೋಡಿಕೊಳ್ಳುವ ರೀತಿನೀತಿ ಅರಿತಿರಬೇಕು. ನಮ್ಮ ವೈಯಕ್ತಿಕ ನಡತೆಯೇ ಸಾರ್ವಜನಿಕದಲ್ಲೂ ಬಿಂಬಿತವಾಗುವಂತಿರಬೇಕು. ಬಟ್ಟೆ ತೊಡುವುದರಿಂದ ಹಿಡಿದು ಪ್ರತಿಯೊಂದರಲ್ಲೂ ಸಂಸ್ಕಾರವಿರಲಿ. ದಾರಿ ಗುರಿ ಎರಡೂ ನೇರವಾಗಿರಲಿ, ಅದನ್ನು ಬೇರೆಯಾಗಿ ನೋಡಿದರೆ ಗುರಿತಪ್ಪಿ ನಾವಿಕನಿಲ್ಲದ ನಾವೆಯಂತಾಗಬಹುದು. ’ನಾವು ಶಿಕ್ಷಣ ಪಡೆಯುವುದು ಕೇವಲ ಅಕ್ಷರ ಜ್ಞಾನಕ್ಕಲ್ಲ, ವಸ್ತು ಜ್ಞಾನಕ್ಕಲ್ಲ, ಕರ್ತವ್ಯ ಪ್ರಜ್ಞೆ, ಶೀಲ ಸಂವರ್ಧನೆಯ ಅರಿವೂ ಅಡಗಿದೆ. ಕಠಿಣತೆ ಮತ್ತು ಉಕ್ಕಿನಷ್ಟು ಗಟ್ಟಿತನ, ದೃಢತೆಯಿರಬೇಕು. ಶೀಲವಿಲ್ಲದ ಜ್ಞಾನ ಬೇಡವೇ ಬೇಡ. ಶೀಲ ಎಂಬುದು ವಜ್ರಕ್ಕಿಂತಲೂ ಮಿಗಿಲು. ಆತ್ಮ ಸಂಯಮದ ಕಲಿಕೆ ಎಲ್ಲವನ್ನೂ ನೀಡಬಹುದು. ಆತ್ಮ ಮನಸ್ಸು ಹರಿಯಗೊಟ್ಟರೆ ಕಲಿಕೆ ಶೂನ್ಯ. ಸತ್ಯ ಪ್ರೀತಿ ಎಂಬ ಆದರ್ಶಗಳನ್ನು ರೂಢಿಸಿಕೊಂಡು, ಸ್ನೇಹಪರರಾಗಿ ಸಮಾಜದಲ್ಲಿ ಉನ್ನತ ವ್ಯಕ್ತಿಗಳಾಗಿ, ಎಲ್ಲರಿಗೂ ಬೇಕಾದವರಾಗಿ ಬದುಕನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯುವ ಮಹತ್ತರ ಹೊಣೆಗಾರಿಕೆ ಯುವಕರ ಮೇಲಿದೆ.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ