ಒಂದು ಒಳ್ಳೆಯ ನುಡಿ - 135
ಪ್ರೀತಿ ಸಂತೆಯಲ್ಲಿ ಸಿಗಲಾರದು. ಪ್ರೀತಿಸುವವರು ಸಿಗುವುದು ಬಹಳ ಕಷ್ಟ. ಅದು ಒಂದು ರೀತಿಯ ಕಠಿಣ ತಪಸ್ಸು. ಪ್ರೀತಿಸುವವರು ಸಿಕ್ಕಿದರೂ ಕೆಡದಂತೆ ಕಾಯುವುದು ಬಹಳ ಕಷ್ಟ. ನಮ್ಮ ಜೀವನವನ್ನೇ ಪ್ರೀತಿ, ಆರಾಧನೆಗೆ ಮೀಸಲಿಟ್ಟರೆ ಬೇರೆ ದೇವರೇಕೆ ಬೇಕು? ಈ ಜಗವೇ ದೇಗುಲ, ಜನರ ಜೀವವೇ ದೇವರು. ಪ್ರೀತಿ ಎಂದೊಡನೆ ಕಾಮದ ದೃಷ್ಟಿ ಬೇಡ. ಧನಾತ್ಮಕ ಚಿಂತನೆಗಳ ಒರೆಗೆ ಹಚ್ಚುವ ಪ್ರೀತಿ ಶ್ರೇಷ್ಠ. ಯಾವುದೋ ಗುಡಿಗೆ ಹೋಗಿ ದೇವರೆಂದು ನೋಡುವ ನಾವುಗಳು, ತಾಯಿಯಲ್ಲಿ ಯಾಕೆ ಭಗವಂತನನ್ನು ನೋಡುವುದಿಲ್ಲ? ಅವಳ ಪ್ರೀತಿ ಕುರುಡೇ?
ಕವಿ ಸಾಹಿತಿ ಸಿದ್ದಯ್ಯ ಪುರಾಣಿಕರು ಒಂದು ಚರಣದಲ್ಲಿ ಬರೆದದ್ದು ನೆನಪಾಯಿತು.
*ಕಾಣದ ದೇವರ ಕಂಡವರಾರೊ*
*ಕಾಣುವ ದೇವರು ತಾಯಿಯೇ*
*ಕಲ್ಲು ದೇವರು ಕೊಡುವುದು ಏನೋ*
*ಎಲ್ಲ ಕೊಡುವವಳು ತಾಯಿಯೇ*
ಎಷ್ಟೊಂದು ಅರ್ಥವತ್ತಾಗಿದೆಯಲ್ಲವೇ? ಇದು ಬರವಣಿಗೆ ಮತ್ತು ಬಾಯಿಮಾತಾಗಬಾರದು. ಕೃತಿಯಲ್ಲಿ ಮನೆಮನೆಯಲ್ಲೂ ಬರಲೆಂಬ ಆಶಯ. ಹೆತ್ತ ತಾಯಿಯ ಪ್ರೀತಿ ಅಳತೆಗೆ ನಿಲುಕದ್ದು. ವಾತ್ಸಲ್ಯದ ಆಗರ ಮತ್ತು ಸಾಗರ ಆಕೆ.
ಎಲ್ಲೋ ಓದಿದ ನೆನಪು'ತಾಯಿ ಕೂಲಿ ಕೆಲಸ ಮಾಡಿ ಇದ್ದೊಬ್ಬ ಮಗನನ್ನು ಚೆನ್ನಾಗಿ ಓದಿಸಿದಳಂತೆ. ಆತ ಒಳ್ಳೆಯ ಉದ್ಯೋಗ ಹಿಡಿದು, ಮದುವೆ ಮಾತುಕತೆಗೆ ಬಂದವರ ಹತ್ತಿರ ಆಕೆ ಮನೆ ಕೆಲಸದಾಕೆ' ಹೇಳಿದನಂತೆ. ಅವನ ಗತ್ತು ಗಾಂಭೀರ್ಯಕ್ಕೆ ಆಕೆ ಸಣ್ಣವಳಾಗಿ ಬಿಟ್ಟಳು, ಬಡವಳಾದಳು. ಹೀಗಿದ್ದ ಮಕ್ಕಳಿದ್ದರೆ ಎಲ್ಲಾ ಅಮ್ಮಂದಿರೂ ಕೆಲಸದವರೇ. ಭಗವಂತ ಕಣ್ಣಿಗೆ ಕಾಣದ ಅದ್ಭುತ ಶಕ್ತಿ, ಅದಮ್ಯ ಚೇತನ. ಆದರೆ ಕಣ್ಣೆದುರೇ ಇರುವ ತಾಯಿ ಎರಡನೇ ಭಗವಂತ. ಮಕ್ಕಳ ಶಕ್ತಿ ಆಕೆ.
ಹೆತ್ತೊಡಲ ನೋವು, ಸಂಕಟ ಆಕೆಗೆ ಮಾತ್ರ ಗೊತ್ತಿರಬಹುದಷ್ಟೆ. ಹೊತ್ತು ಹೆತ್ತ ತಾಯಿಯನ್ನು ಪ್ರೀತಿಸೋಣ, ಗೌರವಿಸೋಣ, ಆಕೆಗೂ ಒಂದು ಹೃದಯವಿದೆ, ಮನಸ್ಸಿದೆ, ಭಾವನೆಗಳಿವೆ ಅರ್ಥಮಾಡಿಕೊಳ್ಳೋಣ.
-ರತ್ನಾ ಕೆ.ಭಟ್ ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ